LIVE ತಮಿಳುನಾಡು ರಾಜಕೀಯದಲ್ಲಿ ಹೊಸ ಮೈತ್ರಿ: ವಿಜಯ್ ನೇತೃತ್ವದ TVK ಸರ್ಕಾರಕ್ಕೆ ಕಾಂಗ್ರೆಸ್ ಬೆಂಬಲ?
x

ತಮಿಳುನಾಡು ರಾಜಕೀಯದಲ್ಲಿ ಹೊಸ ಮೈತ್ರಿ: ವಿಜಯ್ ನೇತೃತ್ವದ TVK ಸರ್ಕಾರಕ್ಕೆ ಕಾಂಗ್ರೆಸ್ ಬೆಂಬಲ?

ತಮಿಳುನಾಡು ವಿಧಾನಸಭಾ ಚುನಾವಣೆ 2026ರಲ್ಲಿ 108 ಸ್ಥಾನ ಗೆದ್ದಿರುವ ನಟ ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಕಾಂಗ್ರೆಸ್ ಬೆಂಬಲ ಘೋಷಿಸಿದೆ. ಈ ಮೈತ್ರಿಯೊಂದಿಗೆ ಬಹುಮತಕ್ಕೆ ಬೇಕಾದ ಬಲ ಪಡೆದಿರುವ ವಿಜಯ್ ಶೀಘ್ರದಲ್ಲೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.


Click the Play button to hear this message in audio format

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿರುವ ನಟ ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷಕ್ಕೆ ಬೆಂಬಲ ನೀಡಲು ಕಾಂಗ್ರೆಸ್ ನಿರ್ಧರಿಸಿದೆ. ದಶಕಗಳ ಕಾಲ ತಮಿಳುನಾಡು ರಾಜಕೀಯವನ್ನು ಆಳಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ಪ್ರಾಬಲ್ಯವನ್ನು ಮುರಿದು ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಟಿವಿಕೆಗೆ ಕಾಂಗ್ರೆಸ್ ಸಾಥ್ ನೀಡಿರುವುದು ದಕ್ಷಿಣ ಭಾರತದ ರಾಜಕೀಯದಲ್ಲಿ ಹೊಸ ಬದಲಾವಣೆಗೆ ನಾಂದಿ ಹಾಡಿದೆ.

ಸರ್ಕಾರದಲ್ಲಿ ಎರಡು ಸಚಿವ ಸ್ಥಾನ?

ಮೂಲಗಳ ಪ್ರಕಾರ, ವಿಜಯ್ ನೇತೃತ್ವದ ನೂತನ ಸರ್ಕಾರದಲ್ಲಿ ಕಾಂಗ್ರೆಸ್ ಎರಡು ಸಚಿವ ಸ್ಥಾನಗಳನ್ನು ನಿರೀಕ್ಷಿಸುತ್ತಿದೆ. ಕಾಂಗ್ರೆಸ್ ನಾಯಕರಾದ ಗಿರೀಶ್ ಚೋಡಂಕರ್ ಮತ್ತು ಪ್ರವೀಣ್ ಚಕ್ರವರ್ತಿ ಅವರು ಈಗಾಗಲೇ ಟಿವಿಕೆ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ತಿಳಿದುಬಂದಿದೆ.

ರಾಹುಲ್ ಗಾಂಧಿ ಒಪ್ಪಿಗೆ; ಖರ್ಗೆಯವರಿಂದ ರಾಜ್ಯ ಸಮಿತಿಗೆ ಜವಾಬ್ದಾರಿ

ಟಿವಿಕೆ ಪಕ್ಷಕ್ಕೆ ಬೆಂಬಲ ನೀಡುವ ವಿಚಾರದಲ್ಲಿ ರಾಹುಲ್ ಗಾಂಧಿ ಅವರು ಮೊದಲಿನಿಂದಲೂ ಒಲವು ಹೊಂದಿದ್ದರು. ಆದರೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ನಿರ್ಧಾರವನ್ನು ದೆಹಲಿ ನಾಯಕರಿಗಿಂತ ಹೆಚ್ಚಾಗಿ ತಮಿಳುನಾಡು ಕಾಂಗ್ರೆಸ್ ಸಮಿತಿಯೇ (TNCC) ತೆಗೆದುಕೊಳ್ಳಬೇಕು ಎಂದು ಬಯಸಿದ್ದರು. ಸುದೀರ್ಘ ಚರ್ಚೆಗಳ ನಂತರ ನಡೆದ ಹಿರಿಯ ನಾಯಕರ ಆನ್‌ಲೈನ್ ಸಭೆಯಲ್ಲಿ ವಿಜಯ್ ಅವರಿಗೆ ಬೆಂಬಲ ನೀಡುವ ನಿರ್ಧಾರವನ್ನು ಅಧಿಕೃತಗೊಳಿಸಲಾಯಿತು.

ಬಹುಮತದ ಹತ್ತಿರ ವಿಜಯ್ ಪಡೆ

234 ಸದಸ್ಯರ ತಮಿಳುನಾಡು ವಿಧಾನಸಭೆಯಲ್ಲಿ ವಿಜಯ್ ಅವರ ಟಿವಿಕೆ 108 ಸ್ಥಾನಗಳನ್ನು ಗೆದ್ದುಕೊಂಡಿದೆ. ಬಹುಮತಕ್ಕೆ ಕೇವಲ 10 ಸ್ಥಾನಗಳ ಕೊರತೆಯಿತ್ತು. ಈಗ ಕಾಂಗ್ರೆಸ್‌ನ ಬೆಂಬಲದೊಂದಿಗೆ ಟಿವಿಕೆ ಬಲ 113ಕ್ಕೆ ಏರಿದ್ದು, ಬಹುಮತದ ಸಮೀಪಕ್ಕೆ ಬಂದಿದೆ. ಇದರೊಂದಿಗೆ ಸಿಪಿಐ (2 ಸ್ಥಾನ), ಸಿಪಿಎಂ (2 ಸ್ಥಾನ) ಮತ್ತು ವಿಸಿಕೆ (2 ಸ್ಥಾನ) ಗಳಂತಹ ಇತರ ಮಿತ್ರಪಕ್ಷಗಳ ಬೆಂಬಲವನ್ನು ಪಡೆಯಲು ವಿಜಯ್ ಮಾತುಕತೆ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ವಿಜಯ್ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚಿಸಲು ಹಕ್ಕು ಮಂಡಿಸಲಿದ್ದಾರೆ.

ಗೆಲುವಿನ ನಂತರ ವಿಜಯ್ ಮೊದಲ ಪ್ರತಿಕ್ರಿಯೆ

ಚುನಾವಣಾ ಗೆಲುವಿನ ನಂತರ ಎಕ್ಸ್ (X) ನಲ್ಲಿ ದೀರ್ಘ ಸಂದೇಶ ಹಂಚಿಕೊಂಡಿರುವ ವಿಜಯ್, ತಮಿಳುನಾಡಿನ ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. "ನಾವು ಪಕ್ಷವನ್ನು ಪ್ರಾರಂಭಿಸಿದಾಗ ಅನೇಕರು ನಮ್ಮ ವಿರುದ್ಧ ಮಾತನಾಡಿದರು. ನಟನೆಯಿಂದ ಬಂದ ನಮಗೆ ರಾಜಕೀಯ ತಿಳಿಯದು ಎಂದರು. ಆದರೆ ನಾವು ಯಾರ ಹಂಗಿಲ್ಲದೆ ಜನರನ್ನೇ ನಂಬಿ ಒಂಟಿಯಾಗಿ ಹೋರಾಡಿದೆವು. ಟೀಕೆ ಮತ್ತು ಅವಮಾನಗಳನ್ನೆಲ್ಲಾ ಮೆಟ್ಟಿ ನಿಂತು ಇಂದು ಈ ಮಟ್ಟಕ್ಕೆ ತಲುಪಿದ್ದೇವೆ. ಇದು ಕೇವಲ ನಮ್ಮ ಪಕ್ಷದ ಗೆಲುವಲ್ಲ, ಪ್ರಜಾಪ್ರಭುತ್ವದ ಗೆಲುವು," ಎಂದು ವಿಜಯ್ ಭಾವುಕರಾಗಿ ಬರೆದುಕೊಂಡಿದ್ದಾರೆ.

ತಮಿಳುನಾಡಿನ ಜನರು ತಮ್ಮನ್ನು 'ತಾಯಿಯಂತೆ' ಬೆಂಬಲಿಸಿದ್ದಾರೆ ಮತ್ತು ಎಂದೂ ನಿರೀಕ್ಷಿಸದ ರಾಜಕೀಯ ಬದಲಾವಣೆಯನ್ನು ತಂದಿದ್ದಾರೆ ಎಂದು ಅವರು ಹೇಳಿದ್ದಾರೆ.

Live Updates

  • 6 May 2026 1:13 PM IST

    ಮೇ 8ರಂದು 'ದಳಪತಿ' ಪಟ್ಟಾಭಿಷೇಕ? ಪ್ರಮಾಣ ವಚನ ಮುಂದೂಡಲು ವಿಜಯ್ ಚಿಂತನೆ!

    ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಟಿವಿಕೆ (TVK) ಅಧ್ಯಕ್ಷ ವಿಜಯ್ ಅವರು ಇಂದು ಸಂಜೆ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚಿಸಲು ಹಕ್ಕು ಮಂಡಿಸಲಿದ್ದಾರೆ. ಮೂಲಗಳ ಪ್ರಕಾರ, ಮೇ 8 ಮಂಗಳಕರ ದಿನವಾದ್ದರಿಂದ ವಿಜಯ್ ಅವರು ಅಂದೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಒಂದು ದಿನ ಮುಂದೂಡುವ ಸಾಧ್ಯತೆಯಿದೆ ಎನ್ನಲಾಗಿದೆ. ಈಗಾಗಲೇ ಕಾಂಗ್ರೆಸ್ ಮತ್ತು ಇತರ ಸಮಾನಮನಸ್ಕ ಪಕ್ಷಗಳ ಬೆಂಬಲದೊಂದಿಗೆ ಬಹುಮತ ಸಾಬೀತುಪಡಿಸುವ ವಿಶ್ವಾಸದಲ್ಲಿರುವ ವಿಜಯ್, ರಾಜಭವನದ ಅನುಮತಿ ಸಿಕ್ಕ ಬೆನ್ನಲ್ಲೇ ಅಧಿಕೃತವಾಗಿ ದಿನಾಂಕ ಘೋಷಿಸುವ ನಿರೀಕ್ಷೆಯಿದೆ.

  • 6 May 2026 12:57 PM IST

    ಇಂದು ಸಂಜೆ ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ ವಿಜಯ್

    ಮೂಲಗಳ ಪ್ರಕಾರ, ನಟ ಮತ್ತು ಟಿವಿಕೆ (TVK) ಅಧ್ಯಕ್ಷ ವಿಜಯ್ ಅವರು ಇಂದು ಸಂಜೆ ತಮಿಳುನಾಡು ರಾಜ್ಯಪಾಲರನ್ನು ಭೇಟಿ ಮಾಡಲಿದ್ದಾರೆ. ತಮ್ಮ ಪಕ್ಷವು ಸರ್ಕಾರ ರಚಿಸಲು ಅಗತ್ಯವಿರುವ ಸಂಖ್ಯಾಬಲವನ್ನು ಹೊಂದಿದೆ ಎಂದು ವಿಜಯ್ ಅವರು ರಾಜ್ಯಪಾಲರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

  • 6 May 2026 12:55 PM IST

    ಎಐಎಡಿಎಂಕೆಯಲ್ಲಿ ಬಿರುಕು: ವಿಜಯ್ ಬೆಂಬಲಿಸಲು ಸಿ.ವಿ. ಷಣ್ಮುಗಂ ಕಚೇರಿಯಲ್ಲಿ 35 ಶಾಸಕರ ಸಭೆ!

    ತಮಿಳುನಾಡು ಚುನಾವಣಾ ಫಲಿತಾಂಶದ ಬೆನ್ನಲ್ಲೇ ಎಐಎಡಿಎಂಕೆಯಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಪಕ್ಷದ ಮೂರನೇ ಎರಡರಷ್ಟು ಶಾಸಕರು ನಟ ವಿಜಯ್ ನೇತೃತ್ವದ ಟಿವಿಕೆಗೆ ಬೆಂಬಲ ಸೂಚಿಸಲು ಮುಂದಾಗಿದ್ದಾರೆ. ಚೆನ್ನೈನಲ್ಲಿರುವ ರಾಜ್ಯಸಭಾ ನಾಯಕ ಸಿ.ವಿ. ಷಣ್ಮುಗಂ ಅವರ ಕಚೇರಿಯಲ್ಲಿ ಸುಮಾರು 35 ಶಾಸಕರು ಸಭೆ ಸೇರಿದ್ದು, ಬಹುಮತಕ್ಕೆ 10 ಸ್ಥಾನಗಳ ಕೊರತೆ ಎದುರಿಸುತ್ತಿರುವ ವಿಜಯ್ ಅವರೊಂದಿಗೆ ಮೈತ್ರಿ ಮಾಡಿಕೊಳ್ಳುವಂತೆ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರ ಮೇಲೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.

  • 6 May 2026 9:50 AM IST

    ವಿಜಯ್‌ಗೆ ಕಾಂಗ್ರೆಸ್ ಬೆಂಬಲ: ಟಿವಿಕೆಗೆ ವಿಧಿಸಿದ ಆ ಒಂದು ಷರತ್ತು ಏನು?

    ತಮಿಳುನಾಡು ಕಾಂಗ್ರೆಸ್ ರಾಜಕೀಯ ವ್ಯವಹಾರಗಳ ಸಮಿತಿಯು ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಬೆಂಬಲ ನೀಡಲು ಮಹತ್ವದ ಷರತ್ತನ್ನು ವಿಧಿಸಿದೆ; ಅದರಂತೆ, ಬಹುಮತಕ್ಕೆ ಅಗತ್ಯವಿರುವ ಹೆಚ್ಚುವರಿ ಬೆಂಬಲವನ್ನು ಸಿಪಿಎಂ, ಸಿಪಿಐ, ವಿಸಿಕೆ, ಐಯುಎಂಎಲ್ ಅಥವಾ ಡಿಎಂಡಿಕೆ ಅಂತಹ ಸಮಾನ ಮನಸ್ಕ ಪಕ್ಷಗಳಿಂದಲೇ ಪಡೆಯಬೇಕು ಮತ್ತು ಯಾವುದೇ ಕಾರಣಕ್ಕೂ ಬಿಜೆಪಿ ಮಿತ್ರಪಕ್ಷಗಳ ಬೆಂಬಲ ಪಡೆಯಬಾರದು ಎಂಬ ಷರತ್ತಿನ ಮೇಲೆ ಮೈತ್ರಿಗೆ ಸಮ್ಮತಿಸಿದೆ. ಈ ನಿರ್ಧಾರವನ್ನು ಶೀಘ್ರದಲ್ಲೇ ವಿಜಯ್ ಅವರಿಗೆ ತಿಳಿಸಲಾಗುವುದು ಹಾಗೂ ಎಡಪಕ್ಷಗಳು ಮತ್ತು ವಿಸಿಕೆ ಬೆಂಬಲ ಖಚಿತವಾದ ಬೆನ್ನಲ್ಲೇ ಇಂದು ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆಯಿದೆ.

Read More
Next Story