
ಟಿವಿಕೆ ಸರ್ಕಾರದ ಮೊದಲ ಅಧಿವೇಶನ: ರಾಜ್ಯಪಾಲರ ಭಾಷಣದೊಂದಿಗೆ ಹೊಸ ಅಧ್ಯಾಯ
ಡಿಎಂಕೆ ಸರ್ಕಾರದಲ್ಲಿ ವಂದೇ ಮಾತರಂ ಗೀತೆ ಮತ್ತು ಸರ್ಕಾರಿ ಪಠ್ಯದ ವಿಚಾರದಲ್ಲಿ ಭಿನ್ನಾಭಿಪ್ರಾಯ ತಲೆದೋರಿ, ರಾಜ್ಯಪಾಲರು ಸದನದಿಂದ ಹೊರನಡೆದಿದ್ದರು. ಈ ಬಾರಿ ಟಿವಿಕೆ ಸರ್ಕಾರದ ಮೊದಲ ಅಧಿವೇಶನದಲ್ಲಿ ಸಂಪೂರ್ಣವಾಗಿ ಓದಿದರು.
ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ತಮಿಳುನಾಡು ವೆಟ್ರಿ ಕಳಗಂ (ಟಿವಿಕೆ) ಪಕ್ಷವು ಅಧಿಕಾರಕ್ಕೆ ಬಂದ ಬಳಿಕ ನಡೆದ ಮೊದಲ ಅಧಿವೇಶನವು ಅತ್ಯಂತ ಮಹತ್ವದ ಮತ್ತು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಯಿತು. ಸರ್ಕಾರ ಸಿದ್ಧಪಡಿಸಿದ ಭಾಷಣದ ಪಠ್ಯವನ್ನು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್, ಸಂಪೂರ್ಣವಾಗಿ ಓದುವ ಮೂಲಕ ಕಳೆದ ಕೆಲವು ವರ್ಷಗಳಿಂದ ರಾಜ್ಯದಲ್ಲಿ ಮನೆಮಾಡಿದ್ದ ರಾಜಭವನ ಮತ್ತು ಸರ್ಕಾರದ ನಡುವಿನ ಬಿಕ್ಕಟ್ಟಿಗೆ ತೆರೆ ಎಳೆದಿದ್ದಾರೆ.
ಕಳೆದ ಡಿಎಂಕೆ ಸರ್ಕಾರದ ಅವಧಿಯಲ್ಲಿ ನಡೆದ ಅಧಿವೇಶನದಲ್ಲಿ ವಂದೇ ಮಾತರಂ ಗೀತೆ ಮತ್ತು ಸರ್ಕಾರಿ ಪಠ್ಯದ ವಿಚಾರದಲ್ಲಿ ಭಿನ್ನಾಭಿಪ್ರಾಯ ತಲೆದೋರಿ, ರಾಜ್ಯಪಾಲರು ಸದನದಿಂದ ಹೊರನಡೆದಿದ್ದರು. ಆದರೆ, ಈ ಬಾರಿ ಟಿವಿಕೆ ಸರ್ಕಾರದ ಮೊದಲ ಅಧಿವೇಶನದಲ್ಲಿ ರಾಜ್ಯಪಾಲ ಅರ್ಲೇಕರ್ ಅವರು ಅತ್ಯಂತ ಸಹಮತದಿಂದ ವರ್ತಿಸಿದರು. ತಮ್ಮ ಭಾಷಣದಲ್ಲಿ, ಟಿವಿಕೆ ಅಧಿಕಾರಕ್ಕೆ ಬಂದಿರುವುದು ರಾಜ್ಯದ ರಾಜಕೀಯ ಇತಿಹಾಸದಲ್ಲಿ ಒಂದು ಐತಿಹಾಸಿಕ ಪರಿವರ್ತನೆ ಎಂದು ಬಣ್ಣಿಸಿದರು. ಸಮಾಜ ಸುಧಾರಕ ಪೆರಿಯಾರ್ ಇ.ವಿ. ರಾಮಸಾಮಿ, ಮಾಜಿ ಮುಖ್ಯಮಂತ್ರಿ ಕೆ. ಕಾಮರಾಜ್, ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ವೇಲು ನಾಚಿಯಾರ್ ಮತ್ತು ಅಂಜಲೈ ಅಮ್ಮಾಳ್ ಅವರ ಆದರ್ಶಗಳೇ ತಮ್ಮ ಸರ್ಕಾರದ ದಿಕ್ಸೂಚಿ ಎಂದು ರಾಜ್ಯಪಾಲರು ಘೋಷಿಸಿದರು. ಟಿವಿಕೆ ಪಕ್ಷವು ಅಸ್ತಿತ್ವಕ್ಕೆ ಬಂದ ಕೇವಲ ಎರಡು ವರ್ಷಗಳ ಅಲ್ಪಾವಧಿಯಲ್ಲಿಯೇ ಅಧಿಕಾರ ಹಿಡಿದಿರುವುದು ಜನರ ಅಪಾರ ನಂಬಿಕೆಗೆ ಸಾಕ್ಷಿಯಾಗಿದೆ ಎಂದು ಅವರು ಶ್ಲಾಘಿಸಿದರು.
ಕೇಂದ್ರದ ವಿರುದ್ಧ ಸಮರ ಸಾರಿದ ಟಿವಿಕೆ ಸರ್ಕಾರ
ರಾಜ್ಯಪಾಲರ ಭಾಷಣದ ಪ್ರಮುಖಾಂಶವು ಕೇಂದ್ರ ಸರ್ಕಾರ ಮತ್ತು ತಮಿಳುನಾಡಿನ ಆರ್ಥಿಕ ಹಿತಾಸಕ್ತಿಯ ನಡುವಿನ ಸಂಘರ್ಷದ ಮೇಲೆ ಕೇಂದ್ರೀಕೃತವಾಗಿತ್ತು. ಕೇಂದ್ರ ಸರ್ಕಾರವು ರಾಜ್ಯಗಳಿಗೆ ಹಣ ಹಂಚಿಕೆ ಮಾಡುವಲ್ಲಿ ತಾರತಮ್ಯ ಎಸಗುತ್ತಿದೆ ಎಂದು ನೇರವಾಗಿ ಆರೋಪಿಸಿದ ಸರ್ಕಾರ, ಈ ಕುರಿತು ಶೀಘ್ರವೇ ಸವಿವರವಾದ ವರದಿಯನ್ನು ಪ್ರಕಟಿಸುವುದಾಗಿ ಘೋಷಿಸಿತು. ಕೇಂದ್ರ ಸರ್ಕಾರಕ್ಕೆ ನಾವು ನೀಡುವ ತೆರಿಗೆಯಲ್ಲಿ ತಮಿಳುನಾಡಿಗೆ ಸಿಗಬೇಕಾದ ನ್ಯಾಯಯುತ ಪಾಲನ್ನು ವಾಪಸ್ ಪಡೆಯಲು ಸರ್ಕಾರ ಬದ್ಧವಾಗಿದೆ ಎಂದು ರಾಜ್ಯಪಾಲರು ಸ್ಪಷ್ಟಪಡಿಸಿದರು. ಇದಕ್ಕಾಗಿ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗುವುದು ಮತ್ತು ಆರ್ಥಿಕ ವಿಕೇಂದ್ರೀಕರಣದಲ್ಲಿ ಆಗುತ್ತಿರುವ ಅನ್ಯಾಯವನ್ನು ಪ್ರಶ್ನಿಸಲು ಸುಪ್ರೀಂ ಕೋರ್ಟ್‌ನಲ್ಲಿ ಹೋರಾಟ ನಡೆಸಲು ವಿಶೇಷ ಕಾನೂನು ಸಮಿತಿಯನ್ನು ರಚಿಸಲಾಗುವುದು ಎಂದು ಅವರು ತಿಳಿಸಿದರು. ರಾಜ್ಯದ ಹಕ್ಕುಗಳ ರಕ್ಷಣೆಗಾಗಿ ಕೇಂದ್ರದ ಮೇಲೆ ನಿರಂತರ ಒತ್ತಡ ಹೇರಲು ಟಿವಿಕೆ ಸರ್ಕಾರ ಬದ್ಧವಾಗಿದೆ ಎಂಬ ಸಂದೇಶವನ್ನು ಭಾಷಣವು ರವಾನಿಸಿತು.
ಹಣಕಾಸಿನ ದುರಾಡಳಿತ
ಕಳೆದ ಸರ್ಕಾರದ ಆಡಳಿತಾವಧಿಯಲ್ಲಿ ರಾಜ್ಯದ ಆರ್ಥಿಕ ಸ್ಥಿತಿಗತಿಗಳು ಹದಗೆಟ್ಟಿರುವುದನ್ನು ಟಿವಿಕೆ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕಳೆದ ಸರ್ಕಾರದ ಹಣಕಾಸಿನ ದುರಾಡಳಿತದ ಕುರಿತು ಶ್ವೇತಪತ್ರವನ್ನು ಬಿಡುಗಡೆ ಮಾಡಿರುವ ಸರ್ಕಾರ, ರಾಜ್ಯದ ಸಾಲದ ಹೊರೆಯ ಬಗ್ಗೆ ಆಘಾತಕಾರಿ ಮಾಹಿತಿಯನ್ನು ಹಂಚಿಕೊಂಡಿದೆ. ರಾಜ್ಯದ ಪ್ರತಿಯೊಬ್ಬ ನಾಗರಿಕನ ತಲೆಯ ಮೇಲೂ ಇಂದು ಸುಮಾರು 1 ಲಕ್ಷ ರೂಪಾಯಿ ಸಾಲದ ಹೊರೆ ಇದೆ ಎಂದು ರಾಜ್ಯಪಾಲರು ಸದನದಲ್ಲಿ ಉಲ್ಲೇಖಿಸಿದರು. ಈ ಆರ್ಥಿಕ ಕುಸಿತದಿಂದ ರಾಜ್ಯವನ್ನು ಪಾರು ಮಾಡುವುದು ಹೊಸ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ ಎಂದು ಅವರು ಎಚ್ಚರಿಸಿದರು.
ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಸದನದ ಕಲಾಪಗಳಲ್ಲಿ ಉತ್ಸಾಹದಿಂದ ಭಾಗವಹಿಸಿದ್ದು, ತಮ್ಮ ಸರ್ಕಾರದ ಮೊದಲ ಅಧಿವೇಶನವನ್ನು ಅತ್ಯಂತ ಶಾಂತಿಯುತವಾಗಿ ಮುನ್ನಡೆಸಿದರು. ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರು ಉಪಸ್ಥಿತರಿದ್ದು, ಸರ್ಕಾರದ ಧೋರಣೆಗಳನ್ನು ಸೂಕ್ಷ್ಮವಾಗಿ ಗಮನಿಸಿದರು. ಹಿಂದಿನ ಅವಧಿಯಲ್ಲಿ ಆರ್.ಎನ್. ರವಿ ಅವರು ಸರ್ಕಾರಿ ಭಾಷಣವನ್ನು ಮೊಟಕುಗೊಳಿಸಿ ನಿರ್ಗಮಿಸುವ ಮೂಲಕ ಉದ್ವಿಗ್ನತೆಯನ್ನು ಸೃಷ್ಟಿಸಿದ್ದರು. ಆದರೆ, ಈ ಬಾರಿ ರಾಜ್ಯಪಾಲರು ಭಾಷಣವನ್ನು ಪೂರ್ತಿಯಾಗಿ ಓದಿ ಮುಗಿಸಿದ್ದು, ಆಡಳಿತ ಪಕ್ಷದ ಸದಸ್ಯರು ಮೇಜು ತಟ್ಟುವ ಮೂಲಕ ಹರ್ಷ ವ್ಯಕ್ತಪಡಿಸಿದರು.
ಟಿವಿಕೆ ಸರ್ಕಾರದ ಮುಂದೆ ಈಗ ಆರ್ಥಿಕ ಸ್ಥಿರತೆಯನ್ನು ಮರಳಿ ತರುವುದು ಮತ್ತು ಕೇಂದ್ರ ಸರ್ಕಾರದೊಂದಿಗೆ ಆರೋಗ್ಯಕರವಾದ ಫೆಡರಲ್ ಸಂಬಂಧವನ್ನು ಉಳಿಸಿಕೊಳ್ಳುತ್ತಲೇ ರಾಜ್ಯದ ಹಕ್ಕುಗಳಿಗಾಗಿ ಹೋರಾಡುವುದು ದೊಡ್ಡ ಸವಾಲಾಗಿದೆ. ಜನತೆಯ ಅಪಾರ ನಿರೀಕ್ಷೆಯೊಂದಿಗೆ ಅಧಿಕಾರಕ್ಕೆ ಬಂದಿರುವ ವಿಜಯ್ ನೇತೃತ್ವದ ಸರ್ಕಾರವು, ಘೋಷಿಸಿರುವಂತೆ ಆರ್ಥಿಕ ಸಮಿತಿ ರಚನೆ ಮತ್ತು ಕೇಂದ್ರದ ವಿರುದ್ಧದ ಕಾನೂನು ಸಮರವನ್ನು ಯಾವ ರೀತಿ ನಿರ್ವಹಿಸುತ್ತದೆ ಎಂಬುದು ಈಗ ಕುತೂಹಲ ಮೂಡಿಸಿದೆ.

