
ತಮಿಳುನಾಡು ಸಿಎಂ ವಿಜಯ್
ತಮಿಳುನಾಡು ಸಿಎಂ ವಿಜಯ್ ಸಂಪುಟ ರಚನೆ: ಗೃಹ- ಪೊಲೀಸ್ ಇಲಾಖೆ ಸಿಎಂ ತೆಕ್ಕೆಗೆ
ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಗೃಹ ಮತ್ತು ಪೊಲೀಸ್ ಇಲಾಖೆಯನ್ನು ಸಿಎಂ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ.
ತಮಿಳುನಾಡಿನ ನೂತನ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ತಮ್ಮ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಸರ್ಕಾರದ ಸಚಿವ ಸಂಪುಟದ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. ಕಳೆದ ಶನಿವಾರ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರು ಮುಖ್ಯಮಂತ್ರಿಗಳ ಶಿಫಾರಸ್ಸಿಗೆ ಅನುಮೋದನೆ ನೀಡಿದ್ದು, ಸಂಪುಟದಲ್ಲಿ ಹಿರಿಯ ಅನುಭವ ಹಾಗೂ ಯುವ ನಾಯಕರ ಉತ್ಸಾಹದ ಸಮತೋಲನವನ್ನು ಕಾಯ್ದುಕೊಳ್ಳಲಾಗಿದೆ.
ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಆರು ದಿನಗಳ ನಂತರ ವಿಜಯ್ ಈ ಖಾತೆ ಹಂಚಿಕೆ ಮಾಡಿದ್ದಾರೆ. ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಗೃಹ ಮತ್ತು ಪೊಲೀಸ್ ಇಲಾಖೆಯನ್ನು ಸಿಎಂ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಇದರೊಂದಿಗೆ ಸಾರ್ವಜನಿಕ ಆಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಯುವಜನ ಕಲ್ಯಾಣ, ಪೌರಾಡಳಿತ ಹಾಗೂ ಜಲಸಂಪನ್ಮೂಲ ಇಲಾಖೆಗಳ ಜವಾಬ್ದಾರಿಯನ್ನೂ ವಿಜಯ್ ನಿರ್ವಹಿಸಲಿದ್ದಾರೆ.
ಸಚಿವ ಸಂಪುಟದ ಪ್ರಮುಖ ಹಂಚಿಕೆಗಳು
ಕೆ.ಎ. ಸೆಂಗೋಟ್ಟೈಯನ್ (ಹಣಕಾಸು): ಎಐಎಡಿಎಂಕೆಯಿಂದ ಟಿವಿಕೆ ಸೇರಿದ್ದ ಹತ್ತು ಬಾರಿ ಶಾಸಕರಾಗಿರುವ ಹಿರಿಯ ನಾಯಕ ಕೆ.ಎ. ಸೆಂಗೋಟ್ಟೈಯನ್ ಅವರಿಗೆ ಹಣಕಾಸು ಮತ್ತು ಪಿಂಚಣಿ ಇಲಾಖೆಯ ಹೊಣೆಗಾರಿಕೆ ನೀಡಲಾಗಿದೆ.
ಸೆಲ್ವಿ ಕೀರ್ತನಾ (ಕೈಗಾರಿಕೆ): ಕೇವಲ 29 ವರ್ಷದ ಸೆಲ್ವಿ ಕೀರ್ತನಾ ಅವರು ರಾಜ್ಯದ ಅತ್ಯಂತ ಕಿರಿಯ ಸಚಿವೆಯಾಗಿ ಗುರುತಿಸಿಕೊಂಡಿದ್ದು, ಅವರಿಗೆ ಕೈಗಾರಿಕೆ ಮತ್ತು ಹೂಡಿಕೆ ಉತ್ತೇಜನ ಇಲಾಖೆಯನ್ನು ನೀಡಲಾಗಿದೆ.
ಎನ್. ಆನಂದ್ (ಗ್ರಾಮೀಣಾಭಿವೃದ್ಧಿ): ಸಿಎಂ ವಿಜಯ್ ಅವರ ಆಪ್ತ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ 'ಬುಸ್ಸಿ' ಆನಂದ್ ಅವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ.
ಕೆ.ಜಿ. ಅರುಣ್‌ರಾಜ್ (ಆರೋಗ್ಯ): ಮಾಜಿ ಐಆರ್‌ಎಸ್ ಅಧಿಕಾರಿ ಮತ್ತು ಪಕ್ಷದ ನೀತಿ ನಿರೂಪಕ ಅರುಣ್‌ರಾಜ್ ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯನ್ನು ನೀಡಲಾಗಿದೆ.
ಇತರ ಸಚಿವರು ಮತ್ತು ಖಾತೆಗಳ ವಿವರ
ವರದಿಯ ಪ್ರಕಾರ, ಆರ್. ನಿರ್ಮಲ್ ಕುಮಾರ್ ಅವರಿಗೆ ಇಂಧನ ಮತ್ತು ಕಾನೂನು ಇಲಾಖೆ, ರಾಜಮೋಹನ್ ಅವರಿಗೆ ಶಾಲಾ ಶಿಕ್ಷಣ ಮತ್ತು ತಮಿಳು ಅಭಿವೃದ್ಧಿ ಇಲಾಖೆ, ಆದವ್ ಅರ್ಜುನ ಅವರಿಗೆ ಲೋಕೋಪಯೋಗಿ ಮತ್ತು ಕ್ರೀಡಾ ಇಲಾಖೆ, ಪಿ. ವೆಂಕಟರಮಣನ್ ಅವರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಟಿ.ಕೆ. ಪ್ರಭು ಅವರಿಗೆ ನೈಸರ್ಗಿಕ ಸಂಪನ್ಮೂಲಗಳ ಖಾತೆಯನ್ನು ನೀಡಲಾಗಿದೆ.
ವಿಜಯ್ ಅವರು ಪೆರಂಬೂರ್ ಕ್ಷೇತ್ರವನ್ನು ಉಳಿಸಿಕೊಂಡು, ಎರಡು ಕಡೆ ಗೆದ್ದಿದ್ದ ಕಾರಣಕ್ಕೆ ತಿರುಚಿ ಈಸ್ಟ್ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದಾರೆ. "ಬದಲಾವಣೆ ಬರುತ್ತಿದೆ" ಎಂಬ ಘೋಷವಾಕ್ಯದೊಂದಿಗೆ ಅಧಿಕಾರಕ್ಕೆ ಬಂದಿರುವ ವಿಜಯ್ ಸರ್ಕಾರವು ಮೊದಲ ಹಂತದಲ್ಲೇ ವಿಐಪಿ ಸಂಸ್ಕೃತಿಯನ್ನು ದೂರವಿಡುವ ಪ್ರಯತ್ನಗಳನ್ನು ಮಾಡುತ್ತಿರುವುದು ಗಮನಾರ್ಹವಾಗಿದೆ.

