
ಹೈದರಾಬಾದ್‌ನ ಮಲ್ಕಾಜ್‌ಗಿರಿ ಪೊಲೀಸ್ ಕಮಿಷನರ್ ಬಿ. ಸುಮತಿ ಅವರು ಖುದ್ದಾಗಿ ಫೀಲ್ಡಿಗಿಳಿರುವುದು.
ಬಸ್ ಸ್ಟ್ಯಾಂಡ್‌ನಲ್ಲಿ ಒಂಟಿ ಮಹಿಳೆಯಾಗಿ ನಿಂತ ಹೈದರಾಬಾದ್ ಪೊಲೀಸ್ ಕಮಿಷನರ್: 3 ಗಂಟೆಯಲ್ಲಿ 40 ಕಾಮುಕರಿಂದ ಕೀಟಲೆ!
2001ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಬಿ. ಸುಮತಿ ಅವರು, ಇತ್ತೀಚೆಗಷ್ಟೇ (ಮೇ 1 ರಂದು) ಮಲ್ಕಾಜ್‌ಗಿರಿ ವಿಭಾಗದ ಮೊದಲ ಮಹಿಳಾ ಪೊಲೀಸ್ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಮಹಿಳೆಯರ ಸುರಕ್ಷತೆ ಕುರಿತು ದೊಡ್ಡ ದೊಡ್ಡ ಭಾಷಣ ಮಾಡುವ ನಗರಗಳಲ್ಲಿ ರಾತ್ರಿ ಹೊತ್ತು ಮಹಿಳೆಯರ ನೈಜ ಸ್ಥಿತಿ ಹೇಗಿರುತ್ತದೆ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಹೈದರಾಬಾದ್‌ನ ಮಲ್ಕಾಜ್‌ಗಿರಿ ಪೊಲೀಸ್ ಕಮಿಷನರ್ ಬಿ. ಸುಮತಿ ಅವರು ಖುದ್ದಾಗಿ ಫೀಲ್ಡಿಗಿಳಿದಿದ್ದರು. ಯಾವುದೇ ಭದ್ರತೆ ಇಲ್ಲದೆ, ಸಾಮಾನ್ಯ ಮಹಿಳೆಯಂತೆ ಮಧ್ಯರಾತ್ರಿ ಬಸ್ ನಿಲ್ದಾಣದಲ್ಲಿ ನಿಂತಿದ್ದ ಮಹಿಳಾ ಕಮಿಷನರ್ ಅವರನ್ನು ಕಂಡು, ಕೇವಲ ಮೂರೇ ಗಂಟೆಯಲ್ಲಿ 40ಕ್ಕೂ ಹೆಚ್ಚು ಪುರುಷರು ಕಿರುಕುಳ ನೀಡಲು ಯತ್ನಿಸಿರುವ ಆಘಾತಕಾರಿ ಘಟನೆ ನಡೆದಿದೆ.
ಠಾಣೆಗೆ ಬರುವ ದೂರುಗಳಿಗಿಂತ ನಗರದ ರಸ್ತೆಗಳಲ್ಲಿ ಮಹಿಳೆಯರು ಎದುರಿಸುತ್ತಿರುವ ನೈಜ ಪರಿಸ್ಥಿತಿಯನ್ನು ಅರಿಯಲು, ಕಮಿಷನರ್ ಸುಮತಿ ಅವರು ಈ 'ಅಂಡರ್‌ಕವರ್ ಆಪರೇಷನ್' ನಡೆಸಿದ್ದಾರೆ. ಮಧ್ಯರಾತ್ರಿ 12.30 ರಿಂದ ಮುಂಜಾನೆ 3.30 ರವರೆಗೆ ನಗರದ ಬಸ್ ನಿಲ್ದಾಣವೊಂದರಲ್ಲಿ ಅವರು ಒಂಟಿಯಾಗಿ ನಿಂತಿದ್ದರು.
ನಡೆದಿದ್ದೇನು?
ಒಂಟಿ ಮಹಿಳೆಯನ್ನು ನೋಡಿದ ತಕ್ಷಣ ಹುಚ್ಚುನಾಯಿಗಳಂತೆ ವರ್ತಿಸಿದ ಕೆಲವರು, ಕಮಿಷನರ್ ಬಳಿ ಬಂದು ಅಸಭ್ಯವಾಗಿ ಮಾತನಾಡಿಸಿದ್ದಾರೆ. ಮೂರು ಗಂಟೆಗಳ ಅವಧಿಯಲ್ಲಿ ಸುಮಾರು 40 ಮಂದಿ ಪುರುಷರು ಅವರನ್ನು ಸಮೀಪಿಸಿದ್ದಾರೆ. ಇವರಲ್ಲಿ ಬಹುತೇಕರು ವಿದ್ಯಾರ್ಥಿಗಳು ಮತ್ತು ಖಾಸಗಿ ಕಂಪನಿ ಉದ್ಯೋಗಿಗಳು ಎಂಬುದು ಮತ್ತೊಂದು ಆಘಾತಕಾರಿ ವಿಚಾರ. ಇವರಲ್ಲಿ ಹಲವರು ಮದ್ಯಪಾನ ಮಾಡಿದ್ದರು ಮತ್ತು ಕೆಲವರು ಗಾಂಜಾ ನಶೆಯಲ್ಲಿದ್ದಂತೆ ಕಂಡುಬಂದಿದ್ದಾರೆ. ತಮಗೆ ಎದುರಾಗಿ ನಿಂತಿರುವ ಮಹಿಳೆ ಒಂಟಿ ಹೆಂಗಸಲ್ಲ, ಬದಲಾಗಿ ಹಿರಿಯ ಐಪಿಎಸ್ ಅಧಿಕಾರಿ ಎಂಬ ಕನಿಷ್ಠ ಅರಿವು ಕೂಡ ಆ ಯುವಕರಿಗೆ ಇರಲಿಲ್ಲ.
ಕಾಮುಕರಿಗೆ ಖಾಕಿ ಟ್ರೀಟ್‌ಮೆಂಟ್!
ಕಾರ್ಯಾಚರಣೆ ಮುಗಿದ ಬಳಿಕ, ಕಮಿಷನರ್ ಜೊತೆ ಅಸಭ್ಯವಾಗಿ ವರ್ತಿಸಿದ ಎಲ್ಲರನ್ನೂ ಪೊಲೀಸರು ಗುರುತಿಸಿದ್ದಾರೆ. ಆದರೆ, ಅವರ ಮೇಲೆ ತಕ್ಷಣವೇ ಎಫ್‌ಐಆರ್ ದಾಖಲಿಸುವ ಬದಲು, ಎಲ್ಲರನ್ನೂ ಪೊಲೀಸ್ ಠಾಣೆಗೆ ಕರೆಸಿ 'ಖಾಕಿ ಸ್ಟೈಲ್'ನಲ್ಲಿ ಕೌನ್ಸೆಲಿಂಗ್ ಮಾಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ಖಡಕ್ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ.
ಯಾರಿವರು ಬಿ. ಸುಮತಿ ಐಪಿಎಸ್?
2001ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಬಿ. ಸುಮತಿ ಅವರು, ಇತ್ತೀಚೆಗಷ್ಟೇ (ಮೇ 1 ರಂದು) ಮಲ್ಕಾಜ್‌ಗಿರಿ ವಿಭಾಗದ ಮೊದಲ ಮಹಿಳಾ ಪೊಲೀಸ್ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ರಾಜ್ಯ ಗುಪ್ತಚರ ವಿಭಾಗದ ಮುಖ್ಯಸ್ಥರಾಗಿದ್ದ ಇವರು, ಹಲವು ಉನ್ನತ ಮಾವೋವಾದಿಗಳ ಶರಣಾಗತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ವಿಶೇಷವೆಂದರೆ, 25 ವರ್ಷಗಳ ಹಿಂದೆ ಖಾಜಿಪೇಟ್ ರೈಲು ನಿಲ್ದಾಣದ ಬಳಿ ಡಿವೈಎಸ್‌ಪಿ ಆಗಿದ್ದಾಗಲೂ ಅವರು ಇದೇ ರೀತಿ ರಹಸ್ಯ ಕಾರ್ಯಾಚರಣೆ ನಡೆಸಿ ಮಹಿಳಾ ಸುರಕ್ಷತೆಯನ್ನು ಪರಿಶೀಲಿಸಿದ್ದರು.

