ಗುರುವಾಯೂರು ದೇಗುಲದಲ್ಲಿ ಕೇರಳದ ಮಹಿಳೆಯನ್ನು ವರಿಸಿದ ಸ್ಕಾಟ್‌ಲ್ಯಾಂಡ್ ಸಂಸದ
x

ಗುರುವಾಯೂರು ದೇಗುಲದಲ್ಲಿ ಕೇರಳದ ಮಹಿಳೆಯನ್ನು ವರಿಸಿದ ಸ್ಕಾಟ್‌ಲ್ಯಾಂಡ್ ಸಂಸದ

ಸ್ಕಾಟಿಷ್ ಸಂಸತ್‌ನ ಶಾಸಕ ಮಾರ್ಟಿನ್ ಡೇ ಕೇರಳದ ಪಿರವಂ ಮೂಲದ ನಿಧಿನ್ ಚಂದ್ ಅವರನ್ನು ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ. 9 ವರ್ಷಗಳ ನಂತರ ಈಡೇರಿದ ಈ ಅಪರೂಪದ ಪ್ರೇಮಕಥೆಯ ಸಂಪೂರ್ಣ ಮಾಹಿತಿ ಇಲ್ಲಿದೆ.


ಸ್ಕಾಟಿಷ್ ಸಂಸತ್‌ನ ಸದಸ್ಯರೊಬ್ಬರು ಕೇರಳದ ತ್ರಿಶೂರ್‌ನಲ್ಲಿರುವ ಪ್ರಸಿದ್ಧ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದಲ್ಲಿ ಮಲಯಾಳಿ ಮಹಿಳೆಯನ್ನು ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ಇಂಗ್ಲೆಂಡ್‌ ಸಂಸತ್‌ನ ಮಾಜಿ ಸದಸ್ಯ ಹಾಗೂ ಪ್ರಸ್ತುತ ಸ್ಕಾಟಿಷ್ ಸಂಸತ್‌ ಶಾಸಕರಾಗಿರುವ ಮಾರ್ಟಿನ್ ಡೇ, ಪಿರವಂ ಮೂಲದ ನಿಧಿನ್ ಚಂದ್ ಎಂಬುವವರನ್ನು ಮಂಗಳವಾರ ಬಂಧುಮಿತ್ರರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಈ ವಿವಾಹದ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಗುರುವಾಯೂರು ದೇವಸ್ಥಾನದಲ್ಲಿ ವಿವಾಹ ನೆರವೇರಿದ ನಂತರ ‘ಪುಷ್ಪಾಂಜಲಿ ಆಡಿಟೋರಿಯಂ’ನಲ್ಲಿ ಶುಭ ಸಮಾರಂಭ ನಡೆಯಿತು. ಈ ಕಾರ್ಯಕ್ರಮದಲ್ಲಿ ದಂಪತಿಯ ಆತ್ಮೀಯ ಸಂಬಂಧಿಕರು ಹಾಗೂ ನಿಧಿನ್ ಅವರ 22 ವರ್ಷದ ಮಗ ವೇದಿಕ್ ಶಂಕರ್ ಭಾಗವಹಿಸಿದ್ದರು.

2008ರಲ್ಲಿ ಆರಂಭವಾದ ಪ್ರೇಮ ಕಥೆ

ನಿಧಿನ್ ಚಂದ್ ಅವರು ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಮುಗಿಸಿದ ನಂತರ, ಐಟಿ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿಗಾಗಿ 2008ರಲ್ಲಿ ಯುಕೆಗೆ ತೆರಳಿದ್ದರು. ಪ್ರಸ್ತುತ ಪಿಎಚ್‌ಡಿ ಪೂರೈಸಿರುವ ಅವರು, ನಿವೃತ್ತ ಪಶುವೈದ್ಯಕೀಯ ಕ್ಷೇತ್ರಾಧಿಕಾರಿ ಕೆ.ಎನ್. ಚಾಂಡಿ ಮತ್ತು ಪಂಬಕ್ಕುಡ ಗ್ರಾಮ ಪಂಚಾಯತಿಯ ಮಾಜಿ ಸದಸ್ಯೆ ರಾಜಿ ಅವರ ಏಕೈಕ ಪುತ್ರಿಯಾಗಿದ್ದಾರೆ.

ನಿಧಿನ್ ಯುಕೆಯಲ್ಲಿದ್ದಾಗ ಅಲ್ಲಿನ ವೀಸಾ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳಾಗಿ, ವಿದೇಶಿ ವಿದ್ಯಾರ್ಥಿಗಳ ವೀಸಾ ರದ್ದಾಗಿತ್ತು. ಈ ಸಂದರ್ಭದಲ್ಲಿ ನಿಧಿನ್ ಅವರು ಸಂಸದೀಯ ಸಮಿತಿಗಳ ಮುಂದೆ ವಿದ್ಯಾರ್ಥಿಗಳ ಪರವಾಗಿ ಸಕ್ರಿಯವಾಗಿ ಧ್ವನಿ ಎತ್ತಿದ್ದರು.

ಈ ಹೋರಾಟದ ಸಮಯದಲ್ಲಿ, ಆಗ ಯುಕೆ ಸಂಸತ್ತಿನಲ್ಲಿ ಲಿನ್‌ಲಿತ್‌ಗೋ ಮತ್ತು ಈಸ್ಟ್ ಫಾಲ್ಕರ್ಕ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಸ್ಕಾಟಿಷ್ ನ್ಯಾಷನಲ್ ಪಾರ್ಟಿ (SNP) ನಾಯಕ ಮಾರ್ಟಿನ್ ಡೇ ಅವರ ಪರಿಚಯವಾಯಿತು. ಫೆಬ್ರವರಿ 2016ರಲ್ಲಿ ಭೇಟಿಯಾದ ಇಬ್ಬರ ನಡುವೆ ಸ್ನೇಹ ಬೆಳೆದು, ಎರಡು ತಿಂಗಳ ನಂತರ ಮಾರ್ಟಿನ್ ತಮ್ಮ ಪ್ರೀತಿಯನ್ನು ನಿಧಿನ್‌ಗೆ ವ್ಯಕ್ತಪಡಿಸಿದರು.

ಸವಾಲುಗಳನ್ನು ಮೆಟ್ಟಿ ನಿಂತ ಪ್ರೀತಿ

ಆ ಸಮಯದಲ್ಲಿ ನಿಧಿನ್ ವಿಚ್ಛೇದಿತರಾಗಿದ್ದು, 12 ವರ್ಷದ ಮಗನ ತಾಯಿಯಾಗಿದ್ದರು. ಜೊತೆಗೆ ಕೆಲಸ ಮತ್ತು ವೀಸಾ ಇಲ್ಲದ ಕಠಿಣ ಪರಿಸ್ಥಿತಿಯಲ್ಲಿದ್ದರು. ಆದರೆ ಮಾರ್ಟಿನ್ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ನಿಧಿನ್‌ರನ್ನು ತಮ್ಮ ಪೋಷಕರಾದ ಮಾರ್ಗರೇಟ್ ಡೇ ಮತ್ತು ರಾನ್ ಡೇ ಅವರಿಗೆ ಪರಿಚಯಿಸಿದರು. ಅವರ ಕುಟುಂಬವೂ ನಿಧಿನ್‌ರನ್ನು ಪ್ರೀತಿಯಿಂದ ಸ್ವೀಕರಿಸಿತು.

ನಿಧಿನ್ ಅವರ ಮಗ ವೇದಿಕ್ ಈಗ ಶಿಕ್ಷಣ ಮುಗಿಸಿ ಎಡಿನ್‌ಬರ್ಗ್‌ನ ಕಂಪ್ಯೂಟರ್‌ಶೇರ್ ಸಂಸ್ಥೆಯಲ್ಲಿ ಹಿರಿಯ ಡೇಟಾಬೇಸ್ ಅಡ್ಮಿನಿಸ್ಟ್ರೇಟರ್ ಆಗಿ ಉದ್ಯೋಗದಲ್ಲಿದ್ದಾರೆ. ನಿಧಿನ್ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದು, ಸ್ಕಾಟಿಷ್ ನ್ಯಾಷನಲ್ ಪಾರ್ಟಿಯ ಪ್ರಚಾರ ಕಾರ್ಯಗಳಲ್ಲೂ ಸಕ್ರಿಯರಾಗಿದ್ದಾರೆ.

9 ವರ್ಷಗಳ ನಂತರ ಈಡೇರಿದ ಕನಸು

ಗುರುವಾಯೂರು ದೇವಸ್ಥಾನದಲ್ಲಿ ಮದುವೆಯಾಗಬೇಕು ಎಂಬುದು ನಿಧಿನ್ ಅವರ ಸುದೀರ್ಘ ಕನಸಾಗಿತ್ತು. ಆದರೆ ವೀಸಾ ಮತ್ತು ಕುಟುಂಬದ ಕಾರಣಗಳಿಂದಾಗಿ ಇಬ್ಬರೂ 9 ವರ್ಷಗಳ ಹಿಂದೆಯೇ ಯುಕೆಯಲ್ಲಿ ಕಾನೂನುಬದ್ಧವಾಗಿ ವಿವಾಹ ನೋಂದಣಿ ಮಾಡಿಕೊಂಡಿದ್ದರು.

ಬೆಳವಣಿಗೆಗಳ ನಂತರ ಮಾರ್ಟಿನ್ 2018, 2019 ಮತ್ತು 2023ರಲ್ಲಿ ಕೇರಳಕ್ಕೆ ಭೇಟಿ ನೀಡಿದ್ದರೂ, ಪ್ರವಾಹ, ಕೋವಿಡ್‌ ಸಾಂಕ್ರಾಮಿಕ ಹಾಗೂ ಕುಟುಂಬದ ಆರೋಗ್ಯ ಸಮಸ್ಯೆಗಳಿಂದಾಗಿ ಗುರುವಾಂಯೂರು ದೇವಸ್ಥಾನಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಇದೀಗ ನಾಲ್ಕನೇ ಭೇಟಿಯಲ್ಲಿ ದಂಪತಿ ಗುರುವಾಂಯೂರು ಅಪ್ಪನ ಸನ್ನಿಧಿಯಲ್ಲಿ ಶಾಸ್ತ್ರೋಕ್ತವಾಗಿ ಮದುವೆಯಾಗುವ ಮೂಲಕ ತಮ್ಮ ಕನಸನ್ನು ಈಡೇರಿಸಿಕೊಂಡಿದ್ದಾರೆ. 1999ರಿಂದ ಸಾರ್ವಜನಿಕ ಸೇವೆಯಲ್ಲಿರುವ ಮಾರ್ಟಿನ್ ಡೇ, ಮೂರು ಬಾರಿ ಯುಕೆ ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಅವರು ಸ್ಕಾಟಿಷ್ ಸಂಸತ್ತಿನಲ್ಲಿ 'ಆಲ್-ಪಾರ್ಟಿ ಪಾರ್ಲಿಮೆಂಟರಿ ಗ್ರೂಪ್ ಫಾರ್ ಇಂಡಿಯಾ'ದ ಅಧ್ಯಕ್ಷರಾಗಿದ್ದಾರೆ.

Read More
Next Story