ಸಿಎಂ ವಿಜಯ್‌ ಸಾಧನೆ ಎಂಜಿಆರ್‌, ಎನ್‌ಟಿಆರ್‌ಗಿಂತ ಮಿಗಿಲು;  ನಾನ್ಯಾಕೆ ಅಸೂಯೆ ಪಡಲಿ ಎಂದ ತಲೈವಾ!
x
ಸಿಎಂ ವಿಜಯ್‌, ರಜನಿಕಾಂತ್‌

ಸಿಎಂ ವಿಜಯ್‌ ಸಾಧನೆ ಎಂಜಿಆರ್‌, ಎನ್‌ಟಿಆರ್‌ಗಿಂತ ಮಿಗಿಲು; ನಾನ್ಯಾಕೆ ಅಸೂಯೆ ಪಡಲಿ ಎಂದ ತಲೈವಾ!

"ಚುನಾವಣಾ ಫಲಿತಾಂಶದ ನಂತರ ನಾನು ಎಂ.ಕೆ. ಸ್ಟಾಲಿನ್ ಅವರನ್ನು ಭೇಟಿಯಾಗಿದ್ದನ್ನು ಟೀಕಿಸಲಾಗುತ್ತಿದೆ. ಆದರೆ, ನಮ್ಮ ಸ್ನೇಹ ರಾಜಕೀಯಕ್ಕೂ ಮೀರಿದ್ದು" ಎಂದು ಸೂಪರ್‌ಸ್ಟಾರ್‌ ರಜನಿಕಾಂತ್‌ ಸ್ಪಷ್ಟನೆ ನೀಡಿದ್ದಾರೆ.


ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ನಟ ವಿಜಯ್‌ ನೇತೃತ್ವದ ಟಿವಿಕೆ ಹೊರಹೊಮ್ಮುತ್ತಿದ್ದಂತೆ ಎಂ.ಕೆ. ಸ್ಟಾಲಿನ್‌ ಅವರನ್ನು ಭೇಟಿ ಮಾಡಿದ ಸೂಪರ್‌ ಸ್ಟಾರ್ ನಡೆಯ ಬಗ್ಗೆ ಕೇಳಿಬಂದ ವದಂತಿಗಳಿಗೆ ಈಗ ಸ್ವತಃ ರಜನಿಕಾಂತ್ ಅವರೇ ತೆರೆ ಎಳೆದಿದ್ದಾರೆ.

ಭಾನುವಾರ (ಮೇ 17) ತಮ್ಮ ನಿವಾಸದಲ್ಲಿ ತುರ್ತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ನೂತನ ಮುಖ್ಯಮಂತ್ರಿ ದಳಪತಿ ವಿಜಯ್ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದು, ರಾಜಕೀಯ ವೈರತ್ವದ ಸುಳ್ಳು ಸುದ್ದಿಗಳಿಗೆ ಕಿವಿಗೊಡದಂತೆ ಅಭಿಮಾನಿಗಳಿಗೆ ಕರೆ ಕೊಟ್ಟಿದ್ದಾರೆ.

ಇತ್ತೀಚೆಗೆ ತಮಿಳುನಾಡು ಚುನಾವಣೆಯಲ್ಲಿ ನಟ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ದೊಡ್ಡಪಕ್ಷವಾಗಿ ಹೊರಹೊಮ್ಮಿತ್ತು. ಚುನಾವಣೆಯಲ್ಲಿ ಸೋಲುಂಡ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರನ್ನು ದಿಢೀರ್‌ ಭೇಟಿ ಮಾಡಿದ್ದ ರಜನಿಕಾಂತ್ ಅವರು ಎಐಎಡಿಎಂಕೆ ಜತೆಗೂಡಿ ಸರ್ಕಾರ ರಚಿಸುವಂತೆ ಸಲಹೆ ನೀಡಿದ್ದರು ಎಂಬ ಮಾತುಗಳು ತಮಿಳುನಾಡಿನಲ್ಲಿ ಹರಿದಾಡಿದ್ದವು. ರಜನಿಕಾಂತ್‌ ಅವರ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದ ಕೆಲವರು, ವಿಜಯ್ ಸಿಎಂ ಆಗುವುದು ತಲೈವಾಗೆ ಇಷ್ಟವಿಲ್ಲ ಎಂಬಂತೆ ಬಿಂಬಿಸಿದ್ದರು. ಈ ಎಲ್ಲಾ ಬೆಳವಣಿಗೆಗಳಿಗೆ ಈಗ ರಜನಿಕಾಂತ್‌ ಅವರೇ ಖಡಕ್‌ ತಿರುಗೇಟು ನೀಡಿದ್ದಾರೆ.

‘ಸ್ಟಾಲಿನ್ ಜೊತೆಗಿನ ಸ್ನೇಹ ರಾಜಕೀಯಕ್ಕೂ ಮೀರಿದ್ದು’

"ಚುನಾವಣೆಯ ನಂತರ ನನ್ನ ಬಗ್ಗೆ ಹಲವು ವದಂತಿಗಳು ಹರಿದಾಡುತ್ತಿವೆ. ನಾನು ಈಗ ಪ್ರತಿಕ್ರಿಯಿಸದಿದ್ದರೆ ಆ ಸುಳ್ಳುಗಳೇ ನಿಜವಾಗಿಬಿಡುತ್ತವೆ. ಚುನಾವಣಾ ಫಲಿತಾಂಶದ ನಂತರ ನಾನು ಎಂ.ಕೆ. ಸ್ಟಾಲಿನ್ ಅವರನ್ನು ಭೇಟಿಯಾಗಿದ್ದನ್ನು ಟೀಕಿಸಲಾಗುತ್ತಿದೆ. ಆದರೆ, ನಮ್ಮ ಸ್ನೇಹ ರಾಜಕೀಯಕ್ಕೂ ಮೀರಿದ್ದು. ಸ್ಟಾಲಿನ್ ಸೋತಿದ್ದಕ್ಕೆ ನನಗೆ ಬೇಸರವಾಗಿತ್ತು, ಹಾಗಾಗಿ ಒಬ್ಬ ಸ್ನೇಹಿತನಾಗಿ ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದೆ" ಎಂದು ಭೇಟಿಯ ಹಿಂದಿನ ರಹಸ್ಯ ಬಿಚ್ಚಿಟ್ಟರು.

ವಿಜಯ್ ಮೇಲೆ ನನಗೆ ಅಸೂಯೆ ಇಲ್ಲ

ವಿಜಯ್ ಸಿಎಂ ಆಗಿದ್ದಕ್ಕೆ ರಜನಿಕಾಂತ್ ಅಸೂಯೆ ಪಡುತ್ತಿದ್ದಾರೆ. ಅವರಿಗೆ ಶುಭ ಕೋರಿಲ್ಲ ಎಂಬ ಆರೋಪಗಳನ್ನು ಸೂಪರ್ಸ್ಟಾರ್ ರಜನಿಕಾಂತ್ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. "ವಿಜಯ್ ಸಿಎಂ ಆದ ಸುದ್ದಿ ಕೇಳಿ ನನಗೆ ಅಪಾರ ಸಂತೋಷವಾಯಿತು. ಅವರು ಗೆಲ್ಲುತ್ತಲೇ ನಾನು ಎಕ್ಸ್ (ಟ್ವಿಟರ್) ಖಾತೆಯ ಮೂಲಕ ಶುಭ ಹಾರೈಸಿದ್ದೆ," ಎಂದು ರಜನಿ ಹೇಳಿದ್ದಾರೆ.

"ನಾನು ರಾಜಕೀಯದಲ್ಲೇ ಇಲ್ಲದಿರುವಾಗ ನನಗೆ ವಿಜಯ್ ಮೇಲೆ ಏಕೆ ಅಸೂಯೆ ಮೂಡುತ್ತದೆ. ಒಂದು ವೇಳೆ ನನ್ನ ಸಮಕಾಲೀನರಾದ ಕಮಲ್ ಹಾಸನ್ ಸಿಎಂ ಆಗಿದ್ದರೆ ನನಗೆ ಒಂದು ಚೂರು ಅಸೂಯೆ ಆಗಬಹುದಿತ್ತೇನೋ, ಆದರೆ ವಿಜಯ್ಗೂ ನನಗೂ 25 ವರ್ಷಗಳ ತಲೆಮಾರಿನ ಅಂತರವಿದೆ. ನಮ್ಮಿಬ್ಬರ ನಡುವೆ ಸ್ಪರ್ಧೆ ಎಲ್ಲಿಂದ ಬರುತ್ತದೆ?" ಎಂದು ಪ್ರಶ್ನಿಸುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.

‘ಎಂಜಿಆರ್, ಎನ್‌ಟಿಆರ್‌ಗಿಂತಲೂ ದೊಡ್ಡ ಸಾಧನೆ’

ನಟ ವಿಜಯ್ ಅವರ ರಾಜಕೀಯ ಯಶಸ್ಸನ್ನು ಐತಿಹಾಸಿಕ ಎಂದು ಬಣ್ಣಿಸಿದ ರಜನಿಕಾಂತ್, ವಿಜಯ್ ಸಾಧನೆಯನ್ನು ದಿಗ್ಗಜ ನಾಯಕರಾದ ಎಂ.ಜಿ. ರಾಮಚಂದ್ರನ್ (MGR) ಹಾಗೂ ಎನ್.ಟಿ. ರಾಮರಾವ್ (NTR) ಅವರಿಗೆ ಹೋಲಿಸಿದ್ದಾರೆ.

"ಅನಗತ್ಯವಾಗಿ ಮಾತನಾಡಲು ರಜನಿ ಅಷ್ಟು ಕೀಳು ಮಟ್ಟದ ಅಥವಾ ಚೀಪ್ ವ್ಯಕ್ತಿಯಲ್ಲ. ವಿಜಯ್ ಅವರು 52ನೇ ವಯಸ್ಸಿನಲ್ಲಿ ಎಂಜಿಆರ್ ಮತ್ತು ಎನ್ಟಿಆರ್ ಅವರಿಗಿಂತಲೂ ದೊಡ್ಡ ಸಾಧನೆ ಮಾಡಿದ್ದಾರೆ. ಕೇಂದ್ರದಲ್ಲಿರುವ ಬಲಿಷ್ಠ ಬಿಜೆಪಿ ಹಾಗೂ ತಮಿಳುನಾಡಿನ ದಶಕಗಳ ಇತಿಹಾಸವಿರುವ ಎರಡು ಪ್ರಮುಖ ದ್ರಾವಿಡ ಪಕ್ಷಗಳನ್ನು (ಡಿಎಂಕೆ-ಎಐಎಡಿಎಂಕೆ) ಏಕಾಂಗಿಯಾಗಿ ಎದುರಿಸಿ ವಿಜಯ್ ಗೆದ್ದಿದ್ದಾರೆ. ಇದು ಸಾಮಾನ್ಯ ವಿಷಯವಲ್ಲ. ಅವರ ಮೇಲೆ ನನಗೆ ಯಾವುದೇ ಅಸೂಯೆ ಇಲ್ಲ, ಬದಲಿಗೆ ದೊಡ್ಡ ನಿರೀಕ್ಷೆಗಳಿವೆ. ನನ್ನ ಬೆಸ್ಟ್ ವಿಶಸ್ ಯಾವಾಗಲೂ ವಿಜಯ್ ಜೊತೆ ಇರುತ್ತದೆ," ಎಂದು ಮುಕ್ತವಾಗಿ ಹೊಗಳಿದ್ದಾರೆ.

ವದಂತಿಗಳಿಗೆ ಪೂರ್ಣವಿರಾಮ

ತಮಿಳುನಾಡು ರಾಜಕೀಯದಲ್ಲಿ ಹೊಸ ಇತಿಹಾಸ ಸೃಷ್ಟಿಸಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ವಿಜಯ್ ಮತ್ತು ಸೂಪರ್ಸ್ಟಾರ್ ರಜನಿಕಾಂತ್ ನಡುವೆ ‘ಕೋಲ್ಡ್ ವಾರ್’ ನಡೆಯುತ್ತಿದೆ ಎಂಬ ಊಹಾಪೋಹಗಳಿಗೆ ಮಾಧ್ಯಮಗೋಷ್ಠಿಯ ಮೂಲಕ ಸಂಪೂರ್ಣ ಬ್ರೇಕ್ ಬಿದ್ದಿದೆ. ತಲೈವಾ ನೀಡಿರುವ ಈ ರಾಜತಾಂತ್ರಿಕ ಹಾಗೂ ಪ್ರಬುದ್ಧ ಹೇಳಿಕೆಯು ಸದ್ಯ ಕಾಲಿವುಡ್ ಹಾಗೂ ತಮಿಳುನಾಡು ರಾಜಕೀಯ ವಲಯದಲ್ಲಿ ಭಾರೀ ಪ್ರಶಂಸೆಗೆ ಪಾತ್ರವಾಗಿದೆ.

Read More
Next Story