
ಬದುಕಿರುವಾಗಲೇ ತನಗೇ ತಾನು ಅಂತ್ಯಕ್ರಿಯೆ ಮಾಡಿಕೊಂಡ ಮನ್ ಕಿ ಬಾತ್ ಖ್ಯಾತಿಯ ರೈತ
ಪ್ರಧಾನಿ ಮೋದಿಯಿಂದ ಶ್ಲಾಘನೆಗೆ ಒಳಗಾಗಿದ್ದ ಮಧ್ಯಪ್ರದೇಶದ ರೈತ ರಾಮ್‌ಲೋಟನ್ ಕುಶ್ವಾಹ, ದೇಹದಾನದ ಬಗ್ಗೆ ಜಾಗೃತಿ ಮೂಡಿಸಲು ತಾವು ಬದುಕಿರುವಾಗಲೇ ತಮಗೆ ತಾವೇ ಅಂತ್ಯಕ್ರಿಯೆ ಮತ್ತು 13ನೇ ದಿನದ ವಿಧಿಗಳನ್ನು ಪೂರೈಸಿಕೊಂಡಿದ್ದಾರೆ.
ಮನುಷ್ಯ ಮರಣ ಹೊಂದಿದ ನಂತರ ಕುಟುಂಬಸ್ಥರು ಅಂತ್ಯಕ್ರಿಯೆ ಮತ್ತು 13ನೇ ದಿನದ ಪುಣ್ಯತಿಥಿ ವಿಧಿವಿಧಾನಗಳನ್ನು ಮಾಡುತ್ತಾರೆ. ಆದರೆ ಮಧ್ಯಪ್ರದೇಶದ ಅತರ್ವೇದಿಯ ಗ್ರಾಮದ ರಾಮ್‌ಲೋಟನ್ ಕುಶ್ವಾಹ ಎಂಬ ರೈತ ತಾವು ಬದುಕಿರುವಾಗಲೇ ತಮ್ಮದೇ ಪಿಂಡದಾನ ಮಾಡಿ, ಅಂತ್ಯಕ್ರಿಯೆ ಕಾರ್ಯಗಳನ್ನು ಪೂರೈಸಿಕೊಂಡಿದ್ದಾರೆ.
ಯಾರು ಈ ರಾಮ್‌ಲೋಟನ್ ಕುಶ್ವಾಹ?
ಔಷಧೀಯ ಸಸ್ಯಗಳ ಬಗ್ಗೆ ಅಪಾರ ಜ್ಞಾನ ಹೊಂದಿರುವ ರಾಮ್‌ಲೋಟನ್ ಕುಶ್ವಾಹ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಶ್ಲಾಘಿಸಿದ್ದರು. ನೂರಾರು ಅಪರೂಪದ ಗಿಡಮೂಲಿಕೆಗಳನ್ನು ಸಂರಕ್ಷಿಸಿರುವ ಇವರು ಸ್ಥಳೀಯವಾಗಿ ಪ್ರಸಿದ್ಧ ನಾಟಿ ವೈದ್ಯರೂ ಹೌದು.
ದೇಹದಾನದ ಬಗ್ಗೆ ಜಾಗೃತಿ ಮೂಡಿಸಲು ಈ ಹೆಜ್ಜೆ
ತಮ್ಮ ಸಾವಿನ ನಂತರ ದೇಹವನ್ನು ವೈದ್ಯಕೀಯ ಸಂಶೋಧನೆಗಾಗಿ ದಾನ ಮಾಡುವುದಾಗಿ ರಾಮ್‌ಲೋಟನ್ ಈಗಾಗಲೇ ಪ್ರತಿಜ್ಞೆ ಮಾಡಿದ್ದಾರೆ. ದೇಹದಾನದ ಬಗ್ಗೆ ಸಮಾಜದಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಅವರು ಈ ವಿಶಿಷ್ಟ ನಿರ್ಧಾರ ತೆಗೆದುಕೊಂಡಿದ್ದಾರೆ.
"ಅನೇಕರು ಅಂತ್ಯಕ್ರಿಯೆಯ ವೆಚ್ಚವನ್ನು ಉಳಿಸಲು ದೇಹದಾನ ಮಾಡುತ್ತಾರೆ ಎಂದು ಭಾವಿಸುತ್ತಾರೆ. ಆದರೆ, ನನ್ನ ದೇಹವು ಮುಂದಿನ ದಿನಗಳಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ಅಭ್ಯಾಸಕ್ಕೆ ಮತ್ತು ಸಂಶೋಧನೆಗೆ ಬಳಕೆಯಾಗಬೇಕು ಎಂಬುದು ನನ್ನ ಆಸೆ. ನಾನು ಇಂದು ವೈದ್ಯನಾಗಲು ಯಾರೋ ಒಬ್ಬರ ಮಾರ್ಗದರ್ಶನ ಕಾರಣ. ಹಾಗೆಯೇ ನನ್ನ ಸಾವಿನ ನಂತರವೂ ನನ್ನ ಅಂಗಾಂಗಗಳು ವಿದ್ಯಾರ್ಥಿಗಳ ಕಲಿಕೆಗೆ ನೆರವಾಗಲಿ ಎಂಬ ಉದ್ದೇಶದಿಂದ ಈ ನಿರ್ಧಾರ ಮಾಡಿದ್ದೇನೆ" ಎಂದು ಕುಶ್ವಾಹ ತಿಳಿಸಿದ್ದಾರೆ.
ಪ್ರಯಾಗ್‌ರಾಜ್‌ನಲ್ಲಿ ಪಿಂಡದಾನ
ತಮ್ಮ ನಿರ್ಧಾರದಂತೆ ರಾಮ್‌ಲೋಟನ್ ಇತ್ತೀಚೆಗೆ ಪ್ರಯಾಗ್‌ರಾಜ್‌ಗೆ ತೆರಳಿ ತಮಗೆ ತಾವೇ ಪಿಂಡದಾನ ವಿಧಿಗಳನ್ನು ಪೂರೈಸಿದ್ದಾರೆ. ನಂತರ ಗ್ರಾಮಕ್ಕೆ ಮರಳಿ 13ನೇ ದಿನದ ವಿಧಿವಿಧಾನದ ಅಂಗವಾಗಿ ಸಂಬಂಧಿಕರಿಗೆ ಮತ್ತು ಸ್ನೇಹಿತರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ಸಾಂಪ್ರದಾಯಿಕವಾಗಿ ಬ್ರಾಹ್ಮಣರಿಗೆ ಭೋಜನ ಹಾಕಿಸುವ ಬದಲಿಗೆ, ತಮ್ಮ ಆತ್ಮೀಯರ ಜೊತೆ ಈ ಸಂದೇಶವನ್ನು ಹಂಚಿಕೊಂಡಿದ್ದಾರೆ.
ಕುಟುಂಬದ ಬೆಂಬಲ
ರಾಮ್‌ಲೋಟನ್ ಅವರ ಈ ಕ್ರಾಂತಿಕಾರಿ ನಿರ್ಧಾರಕ್ಕೆ ಅವರ ಕುಟುಂಬಸ್ಥರು ಪೂರ್ಣ ಬೆಂಬಲ ನೀಡಿದ್ದಾರೆ. "ಸಮಾಜದಲ್ಲಿ ಹೊಸ ಆಲೋಚನೆಯನ್ನು ಮೂಡಿಸಲು ಮತ್ತು ದೇಹದಾನದ ಮಹತ್ವವನ್ನು ಸಾರಲು ಅವರು ಈ ಕಾರ್ಯ ಮಾಡಿದ್ದಾರೆ" ಎಂದು ಅವರ ಸಂಬಂಧಿಕರು ಹೆಮ್ಮೆಯಿಂದ ಹೇಳುತ್ತಾರೆ.

