
ಉದಯನಿಧಿ ಸ್ಟಾಲಿನ್ ರಿಲೀಸ್‌ಗೆ ಹೈಕೋರ್ಟ್ ಆದೇಶ- ವಿಜಯ್ ಸರ್ಕಾರಕ್ಕೆ ಹಿನ್ನಡೆ
ಉದಯನಿಧಿ ಸ್ಟಾಲಿನ್ ಅವರು ನಟಿ ತ್ರಿಷಾ ಮತ್ತು ಸಿಎಂ ವಿಜಯ್ ನಡುವಿನ ಸ್ನೇಹವನ್ನು ಪರೋಕ್ಷವಾಗಿ ಉಲ್ಲೇಖಿಸಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು.
ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಸರ್ಕಾರಕ್ಕೆ ಹಿನ್ನಡೆಯಾಗಿದ್ದು, ನಟಿ ತ್ರಿಷಾ ಅವರನ್ನು ಪರೋಕ್ಷವಾಗಿ ಗುರಿಯಾಗಿಸಿ ದ್ವಂದ್ವಾರ್ಥ ಹೇಳಿಕೆ ನೀಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಅವರಿಗೆ ತಕ್ಷಣವೇ 'ಸ್ಟೇಷನ್ ಬೇಲ್' ನೀಡುವಂತೆ ಮದ್ರಾಸ್ ಹೈಕೋರ್ಟ್ ತಮಿಳುನಾಡು ಪೊಲೀಸರಿಗೆ ಆದೇಶಿಸಿದೆ.
ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಸಮಾವೇಶದಲ್ಲಿ ಮುಖ್ಯಮಂತ್ರಿ ವಿಜಯ್ ವಿರುದ್ಧ ವಾಗ್ದಾಳಿ ನಡೆಸುವಾಗ ಉದಯನಿಧಿಯವರು ನಟಿ ತ್ರಿಷಾ ಮತ್ತು ಸಿಎಂ ವಿಜಯ್ ನಡುವಿನ ಸ್ನೇಹವನ್ನು ಪರೋಕ್ಷವಾಗಿ ಉಲ್ಲೇಖಿಸಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ತಮಿಳುನಾಡಿನಾದ್ಯಂತ ವಿವಿಧ ರಾಜಕೀಯ ಪಕ್ಷಗಳಿಂದ ತೀವ್ರ ಖಂಡನೆ ವ್ಯಕ್ತವಾಗಿತ್ತು.
ಪೊಲೀಸರಿಗೆ ವಿಚಾರಣೆಗಷ್ಟೇ ಅನುಮತಿ
ಪ್ರಕರಣದ ವಿಚಾರಣೆ ವೇಳೆ ಮದ್ರಾಸ್ ಹೈಕೋರ್ಟ್‌ಗೆ ಮಾಹಿತಿ ನೀಡಿದ ತಮಿಳುನಾಡು ಅಡ್ವೊಕೇಟ್ ಜನರಲ್ ವಿಜಯ್ ನಾರಾಯಣ್, "ತಂಜಾವೂರು ಪೊಲೀಸರು ಉದಯನಿಧಿ ಅವರನ್ನು ಬಂಧಿಸಿ ತಂಜಾವೂರಿಗೆ ಕರೆದೊಯ್ದಿದ್ದಾರೆ. ಆದರೆ, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸುವ ಉದ್ದೇಶ ಪೊಲೀಸರಿಗಿಲ್ಲ. ಕೇವಲ ವಿಚಾರಣೆ ನಡೆಸಲು ಬಯಸಿದ್ದು, ವಿಚಾರಣೆ ಮುಗಿದ ತಕ್ಷಣವೇ ಸ್ಟೇಷನ್ ಜಾಮೀನು ನೀಡಲಾಗುವುದು" ಎಂದು ಸ್ಪಷ್ಟಪಡಿಸಿದರು.
"ಪೊಲೀಸರು ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲು ಬಯಸುತ್ತಿಲ್ಲ, ಕೇವಲ ವಿಚಾರಣೆ ನಡೆಸಿ ಅದೇ ದಿನ ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಲಿದ್ದಾರೆ" ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿತು. ಈ ಹೇಳಿಕೆಯನ್ನು ಪರಿಗಣಿಸಿದ ಮದ್ರಾಸ್ ಹೈಕೋರ್ಟ್, ಉದಯನಿಧಿ ಸ್ಟಾಲಿನ್ ಅವರನ್ನು ಅದೇ ದಿನವೇ ಸ್ಟೇಷನ್ ಬೇಲ್‌ನಲ್ಲಿ ಬಿಡುಗಡೆ ಮಾಡುವಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ.

