
ಕೇರಳದಲ್ಲಿ ಪ್ರಿಯಕರನ ಜೊತೆ ಸೇರಿ 18 ತಿಂಗಳ ಕಂದಮ್ಮನನ್ನೇ ಕೊಂದ ಹೆತ್ತ ತಾಯಿ!
ಆರಂಭದಲ್ಲಿ ಇದೊಂದು ಸಾಮಾನ್ಯ ಸಾವು ಎಂದು ಬಿಂಬಿಸಲು ಆರೋಪಿಗಳು ಯತ್ನಿಸಿದ್ದರಾದರೂ ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಇಡೀ ರಾಜ್ಯವೇ ಕಣ್ಣೀರು ಸುರಿಸುವಂತಾಗಿದೆ.
ಕಳೆದ ಎರಡು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣದಂತೆಯೇ ಕೇರಳದಲ್ಲಿ ಮಾನವೀಯತೆ ತಲೆತಗ್ಗಿಸುವಂತಹ ಘೋರ ಘಟನೆಯೊಂದು ಬೆಳಕಿಗೆ ಬಂದಿದೆ. ಕೇವಲ ಒಂದೂವರೆ ವರ್ಷದ ಹಸುಗೂಸನ್ನು ಹೆತ್ತ ತಾಯಿ ಮತ್ತು ಆಕೆಯ ಲಿವ್-ಇನ್ ಸಂಗಾತಿ ಸೇರಿ ಕ್ರೂರವಾಗಿ ಹಿಂಸಿಸಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ನೆಡುಮಂಗಾಡ್ ಬಳಿಯ ಪಣವೂರಿನಲ್ಲಿ ನಡೆದಿದೆ.
ಆರಂಭದಲ್ಲಿ ಇದೊಂದು ಸಾಮಾನ್ಯ ಸಾವು ಎಂದು ಬಿಂಬಿಸಲು ಆರೋಪಿಗಳು ಯತ್ನಿಸಿದ್ದರಾದರೂ, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಇಡೀ ರಾಜ್ಯವೇ ಕಣ್ಣೀರು ಸುರಿಸುವಂತಾಗಿದೆ.
ಸುಳ್ಳು ಕಥೆ ಸೃಷ್ಟಿಸಿದ್ದ ಪಾಪಿಗಳು!
ಮೇ 29 ರಂದು ರಾತ್ರಿ ಹರ್ಷಿತ್ ಎಂಬ 18 ತಿಂಗಳ ಗಂಡು ಮಗುವನ್ನು ತಾಯಿ ಅಖಿಲಾ (24) ಹಾಗೂ ಆಕೆಯ ಲಿವ್-ಇನ್ ಪಾರ್ಟ್‌ನರ್ ಆಗಿದ್ದ ಅಶ್ಕರ್ (31) ಆಸ್ಪತ್ರೆಗೆ ಕರೆತಂದಿದ್ದರು. "ಮಗು ಊಟ ಮಾಡುವಾಗ ಗಂಟಲಿನಲ್ಲಿ ಆಹಾರ ಸಿಲುಕಿಕೊಂಡು ಹಠಾತ್ತನೆ ಕುಸಿದು ಬಿದ್ದಿದೆ" ಎಂದು ಆರೋಪಿಗಳು ಪೊಲೀಸರು ಮತ್ತು ವೈದ್ಯರಿಗೆ ನಂಬಿಸಲು ಯತ್ನಿಸಿದ್ದರು. ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲೇ ಮಗು ಮೃತಪಟ್ಟಿತ್ತು. ಪ್ರಾಥಮಿಕವಾಗಿ ಪೊಲೀಸರು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು.
ದೇಹದ ಮೇಲೆ 51 ಗಾಯಗಳು!
ಮಗುವಿನ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ದೇಹವನ್ನು ನೋಡಿ ದಿಗ್ಭ್ರಮೆಗೊಂಡಿದ್ದಾರೆ. ಆ ಮಗುವಿನ ದೇಹದ ಮೇಲೆ ಬರೋಬ್ಬರಿ 51 ಕ್ಕೂ ಹೆಚ್ಚು ಗಾಯದ ಗುರುತುಗಳು ಪತ್ತೆಯಾಗಿವೆ. ಮಗುವಿನ ಕಾಲು ಹಾಗೂ ಜನನಾಂಗದ ಭಾಗದಲ್ಲಿ ಸಿಗರೇಟ್ ಮತ್ತು ಲೈಟರ್‌ನಿಂದ ಸುಟ್ಟ ಗಾಯಗಳಾಗಿದ್ದವು. ಮಗುವಿನ ಎರಡು ಕೈಗಳ ಮೂಳೆಗಳು ಮುರಿದಿದ್ದವು. ಮಗು ಅಳುತ್ತಿದ್ದಾಗ ಸಿಟ್ಟಿಗೆದ್ದ ನರರಾಕ್ಷಸ ಅಶ್ಕರ್, ಮಗುವಿನ ತಲೆಯನ್ನು ಗೋಡೆಗೆ ಜೋರಾಗಿ ಜಜ್ಜಿದ್ದನು. ಇದರಿಂದಾಗಿ ಮೆದುಳಿನಲ್ಲಿ ತೀವ್ರವಾದ ಆಂತರಿಕ ರಕ್ತಸ್ರಾವವಾಗಿ ಮಗು ಕೊನೆಯುಸಿರೆಳೆದಿದೆ ಎಂದು ವರದಿಗಳು ತಿಳಿಸಿವೆ.
ಸಾಕ್ಷ್ಯ ನಾಶಕ್ಕೆ ಯತ್ನ
ಮಗುವಿನ ಮೇಲಿನ ಈ ಎಲ್ಲಾ ದೌರ್ಜನ್ಯಕ್ಕೆ ಹೆತ್ತ ತಾಯಿ ಅಖಿಲಾ ಮೂಕಪ್ರೇಕ್ಷಕಳಾಗಿದ್ದಳು. ಮಗು ಮೃತಪಡುತ್ತಿದ್ದಂತೆ ಇಬ್ಬರೂ ಸೇರಿ ರಕ್ತದ ಕಲೆಗಳಿದ್ದ ಮಗುವಿನ ಬಟ್ಟೆಗಳನ್ನು ಮನೆಯ ಹಿತ್ತಲಿನಲ್ಲಿ ಸುಟ್ಟು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದರು.
ಆರೋಪಿಗಳ ಮೇಲೆ ದಾಳಿಗೆ ಯತ್ನ!
ಮರಣೋತ್ತರ ಪರೀಕ್ಷೆಯ ವರದಿ ಬರುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಹಂತಕ ಜೋಡಿಯಾದ ಅಖಿಲಾ ಮತ್ತು ಅಶ್ಕರ್‌ನನ್ನು ತಕ್ಷಣವೇ ಬಂಧಿಸಿದ್ದು, ತನಿಖೆಯ ಭಾಗವಾಗಿ ಭಾನುವಾರ ಆರೋಪಿಗಳನ್ನು ಸಾಕ್ಷ್ಯ ಸಂಗ್ರಹಕ್ಕಾಗಿ ಅವರ ನಿವಾಸಕ್ಕೆ ಕರೆತಂದಾಗ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಸ್ಥಳೀಯ ನಿವಾಸಿಗಳು ಆಕ್ರೋಶಗೊಂಡು, ಹಸುಗೂಸನ್ನು ಕೊಂದ ಪಾಪಿಗಳ ಮೇಲೆ ದಾಳಿ ಮಾಡಲು ಮುಂದಾದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಪ್ರತಿಭಟನಾಕಾರರು ಆರೋಪಿಗಳಿಗೆ ಸಂಬಂಧಿಸಿದ ವಾಹನವನ್ನು ಜಖಂಗೊಳಿಸಿದ್ದು, ಪೊಲೀಸರು ಸಾಕ್ಷ್ಯ ಸಂಗ್ರಹ ಕಾರ್ಯವನ್ನು ಆತುರದಲ್ಲೇ ಮುಗಿಸಿ ಆರೋಪಿಗಳನ್ನು ಸ್ಥಳದಿಂದ ದೂರ ಕರೆದೊಯ್ದರು.
ಕಣ್ಣೀರು ತರಿಸುವ ಮಗುವಿನ ಹಿನ್ನೆಲೆ
ಸ್ಥಳೀಯರ ಪ್ರಕಾರ, ಈ ಕುಟುಂಬ ಕೆಲವು ತಿಂಗಳುಗಳಿಂದ ಇಲ್ಲಿ ವಾಸಿಸುತ್ತಿತ್ತಾದರೂ ನೆರೆಹೊರೆಯವರೊಂದಿಗೆ ಯಾವುದೇ ಸಂಪರ್ಕ ಹೊಂದಿರಲಿಲ್ಲ. ಮಗು ಆಗಾಗ್ಗೆ ಅಳುವ ಧ್ವನಿ ಕೇಳಿಸುತ್ತಿತ್ತು ಎಂದು ನೆರೆಹೊರೆಯವರು ಕಳವಳ ವ್ಯಕ್ತಪಡಿಸಿದ್ದಾರೆ. ದುರಂತವೆಂದರೆ, ಮಗುವಿನ ತಂದೆ ಮಗು ಜನಿಸುವ ಮೊದಲೇ ಮೃತಪಟ್ಟಿದ್ದರು. ಅನಾಥವಾಗಿದ್ದ ಮಗುವನ್ನು ರಕ್ಷಿಸಬೇಕಾಗಿದ್ದ ತಾಯಿಯೇ ಹಂತಕನಿಗೆ ಸಾಥ್ ನೀಡಿದ್ದು ದುರ್ದೈವ. ಮಗುವಿನ ಸಂಬಂಧಿಕರು ಈ ಮೊದಲೇ ಮಗುವಿನ ಮೇಲಿನ ದೌರ್ಜನ್ಯದ ಬಗ್ಗೆ ಅಧಿಕಾರಿಗಳ ಬಳಿ ಕಳವಳ ವ್ಯಕ್ತಪಡಿಸಿದ್ದರು.
ಸರ್ಕಾರದ ಕಠಿಣ ಕ್ರಮದ ಭರವಸೆ
ಈ ದಾರುಣ ಘಟನೆಗೆ ಕೇರಳದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಬಿಂದು ಕೃಷ್ಣ ತೀವ್ರ ಸಂತಾಪ ಸೂಚಿಸಿದ್ದು, ಇದೊಂದು "ಹೃದಯ ವಿದ್ರಾವಕ" ಘಟನೆ ಎಂದು ತಿಳಿಸಿದ್ದು, ಹಂತಕರಿಗೆ ಯಾವುದೇ ಕಾರಣಕ್ಕೂ ವಿನಾಯಿತಿ ನೀಡುವುದಿಲ್ಲ ಮತ್ತು ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ. ಸದ್ಯ ಆರೋಪಿಗಳಿಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪೊಲೀಸರು ವಿಧಿವಿಜ್ಞಾನ ವರದಿಯ ಆಧಾರದ ಮೇಲೆ ಹೆಚ್ಚಿನ ಸೆಕ್ಷನ್‌ಗಳನ್ನು ದಾಖಲಿಸಲು ಮುಂದಾಗಿದ್ದಾರೆ.

