Shigella bacteria scare in Kerala; 7-year-old boy dies in Malappuram
x

ಸಾಂದರ್ಭಿಕ ಚಿತ್ರ

ಕೇರಳದಲ್ಲಿ ಶಿಗೆಲ್ಲಾ ಬ್ಯಾಕ್ಟೀರಿಯಾ ಆತಂಕ; ಮಲಪ್ಪುರಂನಲ್ಲಿ 7 ವರ್ಷದ ಬಾಲಕ ಬಲಿ

ಕಳೆದ ಆರು ತಿಂಗಳಲ್ಲೇ ಕೇರಳದಲ್ಲಿ ವರದಿಯಾದ ನಾಲ್ಕನೇ ಶಿಗೆಲ್ಲಾ ಸಾವು ಇದಾಗಿದ್ದು, ಕೇವಲ ಜೂನ್ ತಿಂಗಳೊಂದರಲ್ಲೇ ಮೂವರು ಈ ಬ್ಯಾಕ್ಟೀರಿಯಾ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.


Click the Play button to hear this message in audio format

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಶಿಗೆಲ್ಲಾ ಬ್ಯಾಕ್ಟೀರಿಯಾ ಸೋಂಕಿಗೆ 7 ವರ್ಷದ ಮಗು ಬಲಿಯಾಗಿದೆ. ಇದರೊಂದಿಗೆ ಕಳೆದ ಆರು ತಿಂಗಳಲ್ಲಿ ಈ ಕಾಯಿಲೆಯಿಂದ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪೂಕ್ಕೊಟ್ಟೂರು ನಿವಾಸಿ ಅರ್ಜಾವ್ (7) ಮೃತಪಟ್ಟ ಬಾಲಕ. ಜ್ವರ ಮತ್ತು ತೀವ್ರ ಭೇದಿಯಿಂದ ಬಳಲುತ್ತಿದ್ದ ಮಗುವನ್ನು ಜೂ. 12 ರಂದು ಕೋಝಿಕ್ಕೋಡ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ (ಜೂ.15) ಬಾಲಕ ಮೃತಪಟ್ಟಿದ್ದಾನೆ. ತಪಾಸಣೆಯ ವೇಳೆ ಮಗುವಿಗೆ ಶಿಗೆಲ್ಲಾ ಸೋಂಕು ತಗುಲಿರುವುದು ದೃಢಪಟ್ಟಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ತಿಂಗಳಲ್ಲೇ ಮೂರನೇ ಸಾವು!

ಆರೋಗ್ಯ ಅಧಿಕಾರಿಗಳ ಮಾಹಿತಿ ಪ್ರಕಾರ, ಕಳೆದ ಆರು ತಿಂಗಳಲ್ಲೇ ಕೇರಳದಲ್ಲಿ ವರದಿಯಾದ ನಾಲ್ಕನೇ ಶಿಗೆಲ್ಲಾ ಸಾವು ಇದಾಗಿದ್ದು, ಕೇವಲ ಜೂನ್ ತಿಂಗಳೊಂದರಲ್ಲೇ ಮೂವರು ಈ ಬ್ಯಾಕ್ಟೀರಿಯಾ ಸೋಂಕಿಗೆ ಬಲಿಯಾಗಿದ್ದಾರೆ. ಇದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಆರೋಗ್ಯ ಸೇವೆಗಳ ನಿರ್ದೇಶನಾಲಯ ಬಿಡುಗಡೆ ಮಾಡಿರುವ ಜೂ. 14 ರವರೆಗಿನ ಅಂಕಿ-ಅಂಶಗಳ ಪ್ರಕಾರ ಒಟ್ಟು 138 ಪ್ರಕರಣಗಳು ದಾಖಲಾಗಿದ್ದು, ಕೋಝಿಕ್ಕೋಡ್ ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಜೂನ್ ಒಂದೇ ತಿಂಗಳಲ್ಲಿ 62 ದೃಢಪಟ್ಟ ಮತ್ತು 17 ಶಂಕಿತ ಪ್ರಕರಣಗಳು ದಾಖಲಾಗಿವೆ. ಜೂ. 14 ರಂದು ಒಂದೇ ದಿನ ಮೂರು ಹೊಸ ಪ್ರಕರಣಗಳು ಪತ್ತೆಯಾಗಿರುವುದು ಆತಂಕ ಮೂಡಿಸಿದೆ.

ಏನಿದು ಶಿಗೆಲ್ಲಾ ಸೋಂಕು?

ಶಿಗೆಲ್ಲಾ ಎಂಬುದು ಪ್ರಮುಖವಾಗಿ ಕರುಳಿನ ಮೇಲೆ ದಾಳಿ ಮಾಡುವ ಒಂದು ಅಪಾಯಕಾರಿ ಬ್ಯಾಕ್ಟೀರಿಯಾ ಸೋಂಕಾಗಿದೆ. ತೀವ್ರ ಜ್ವರ, ಅತಿಸಾರ (ಭೇದಿ) ಮತ್ತು ಹೊಟ್ಟೆ ಸೆಳೆತ ಇದರ ಪ್ರಮುಖ ಲಕ್ಷಣಗಳಾಗಿದ್ದು, ಕಲುಷಿತಗೊಂಡ ಆಹಾರ, ಅಶುದ್ಧ ನೀರು ಸೇವನೆ ಹಾಗೂ ಸೋಂಕಿತ ವ್ಯಕ್ತಿಗಳ ನೇರ ಸಂಪರ್ಕದಿಂದ ಈ ಕಾಯಿಲೆ ಒಬ್ಬರಿಂದ ಮತ್ತೊಬ್ಬರಿಗೆ ವೇಗವಾಗಿ ಹರಡುತ್ತದೆ. ಮಳೆಗಾಲ ಆರಂಭವಾಗಿರುವುದರಿಂದ ಸಾರ್ವಜನಿಕರು ಕುದಿಸಿ ಆರಿಸಿದ ನೀರನ್ನೇ ಕುಡಿಯಬೇಕು ಮತ್ತು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಆರೋಗ್ಯ ಇಲಾಖೆ ಎಚ್ಚರಿಸಿದೆ.

Read More
Next Story