
ಎಐ ಆಧಾರಿತ ಚಿತ್ರ
ಕೇರಳ: ಅಂಗಾಂಗ ದಾನದ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸುತ್ತಿದ್ದ ಜಾಲ ಭೇದಿಸಿದ ಪೊಲೀಸರು, 5 ಮಂದಿ ಅರೆಸ್ಟ್
ಕೇರಳದ ಎರ್ನಾಕುಲಂ ಮತ್ತು ಕೊಲ್ಲಂ ಜಿಲ್ಲೆಗಳಲ್ಲಿ ಅಂಗಾಂಗ ದಾನ ಮತ್ತು ಕಸಿ ಪ್ರಕ್ರಿಯೆಗಾಗಿ ಶಾಸಕರು, ಸಂಸದರು ಹಾಗೂ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದ ಭಾರಿ ಜಾಲವನ್ನು ಪೊಲೀಸರು ಭೇದಿಸಿದ್ದಾರೆ.
ಅಂಗಾಂಗ ದಾನ ಮತ್ತು ಕಸಿ ಪ್ರಕ್ರಿಯೆಗಳಿಗೆ ಅಗತ್ಯವಿರುವ ಪ್ರಮುಖ ದಾಖಲೆಗಳನ್ನು ನಕಲಿಯಾಗಿ ಸೃಷ್ಟಿಸುತ್ತಿದ್ದ ಬೃಹತ್ ಜಾಲವೊಂದನ್ನು ಕೇರಳ ಪೊಲೀಸರು ಭೇದಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಎರ್ನಾಕುಲಂನ ಪಲ್ಲಿಕ್ಕರ ಮತ್ತು ಕೊಲ್ಲಂನ ಕಿಳಿಕೊಲ್ಲೂರ್ ಸೇರಿದಂತೆ ಹಲವೆಡೆ ಏಕಕಾಲದಲ್ಲಿ ದಾಳಿ ನಡೆಸಿದ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಿದ್ದಾರೆ.
ಕನ್ನತುನಾಡು ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಜಾಲದ ಬಗ್ಗೆ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಎರ್ನಾಕುಲಂನ ಕನ್ನತುನಾಡು ನಿವಾಸಿಗಳಾದ ಸನ್ನಿ ವರ್ಗೀಸ್ (56), ಆತನ ಪತ್ನಿ ಸಿನಿ ವರ್ಗೀಸ್ (50) ಹಾಗೂ ಪಟ್ಟಿಮಟ್ಟಂನ ಸನೋಜ್ (32) ಎಂಬುವವರನ್ನು ಬಂಧಿಸಲಾಗಿದೆ. ಇದೇ ಜಾಲದೊಂದಿಗೆ ನಂಟು ಹೊಂದಿದ್ದ ಆರೋಪದ ಮೇಲೆ ಕೊಲ್ಲಂನ ಕಿಳಿಕೊಲ್ಲೂರ್ ಪೊಲೀಸರು ಶ್ರೀಜಾ ಮತ್ತು ಸುಧೀರ್ ಎಂಬಿಬ್ಬರನ್ನು ಬಂಧಿಸಿದ್ದಾರೆ. ಈ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ನಜೀಬ್ ಮತ್ತು ಆಸಿಫ್ ಎಂಬುವವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಂಪಿ, ಶಾಸಕರು ಹಾಗೂ ಪೊಲೀಸರ ಹೆಸರಲ್ಲೇ ನಕಲಿ ಪತ್ರ!
ಅಂಗಾಂಗ ದಾನದ ಪ್ರಕ್ರಿಯೆಯು ಅತ್ಯಂತ ಸಂಕೀರ್ಣವಾಗಿದ್ದು, ಇದಕ್ಕಾಗಿ ಪೊಲೀಸರು, ಸ್ಥಳೀಯ ಸಂಸ್ಥೆಗಳು, ವೈದ್ಯರು ಹಾಗೂ ಜನಪ್ರತಿನಿಧಿಗಳ (ಶಾಸಕರು, ಸಂಸದರು) ದೃಢೀಕರಣ ಪತ್ರಗಳು ಕಡ್ಡಾಯವಾಗಿರುತ್ತದೆ. ಇದನ್ನೇ ಬಂಡವಾಳವಾಗಿಸಿಕೊಂಡಿದ್ದ ಈ ಜಾಲ, ಪ್ರಭಾವಿ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ಪ್ರಮಾಣಪತ್ರಗಳನ್ನು ಸೃಷ್ಟಿಸುತ್ತಿತ್ತು.
ಎಫ್‌ಐಆರ್‌ನಲ್ಲಿರುವ ಮಾಹಿತಿಯ ಪ್ರಕಾರ, 2023ರ ಆಗಸ್ಟ್‌ನಿಂದಲೇ ಈ ಜಾಲ ಸಕ್ರಿಯವಾಗಿತ್ತು. ಕೊಚ್ಚಿಯ ಎರಡು ಖಾಸಗಿ ಆಸ್ಪತ್ರೆಗಳ ಲೆಟರ್‌ಹೆಡ್, ನಕಲಿ ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರಗಳು ಹಾಗೂ ಎರ್ನಾಕುಲಂ ಸಂಸದ ಹಿಬಿ ಈಡನ್, ಆಲತ್ತೂರು ಸಂಸದ ಕೆ.ಆರ್. ರಾಧಾಕೃಷ್ಣನ್, ಮಾಜಿ ಶಾಸಕರಾದ ಸಿ.ಎಚ್. ಕುನ್ಹಾಂಬು, ಕೆ.ಪಿ. ಮೋಹನನ್ ಸೇರಿದಂತೆ ಹಲವು ಜನಪ್ರತಿನಿಧಿಗಳ ಹೆಸರಿನ ಲೆಟರ್‌ಹೆಡ್‌ಗಳನ್ನು ನಕಲಿಯಾಗಿ ಸೃಷ್ಟಿಸಿರುವುದು ಬೆಳಕಿಗೆ ಬಂದಿದೆ. ಕೇವಲ ರಾಜಕಾರಣಿಗಳಷ್ಟೇ ಅಲ್ಲದೆ, ಅಂಬಲಪುಳ ಡಿವೈಎಸ್‌ಪಿ ಹಾಗೂ ಕುನ್ನಂಕುಲಂ ಎಸಿಪಿ ಅವರ ಲೆಟರ್‌ಹೆಡ್‌ಗಳನ್ನೂ ಈ ಖದೀಮರು ನಕಲಿ ಮಾಡಿದ್ದರು. ಹಲವು ಪ್ರಸಿದ್ಧ ವೈದ್ಯರ ಶಿಫಾರಸು ಪತ್ರಗಳನ್ನೂ ಫೋರ್ಜರಿ ಮಾಡಲಾಗಿದೆ.
ಭಾರಿ ಕಾರ್ಯಾಚರಣೆ
ಎರ್ನಾಕುಲಂ ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುದರ್ಶನ್ ಅವರ ನೇತೃತ್ವದಲ್ಲಿ ಆರು ಪೊಲೀಸ್ ತಂಡಗಳು ಪೆರುಂಬಾವೂರ್, ಆಲುವಾ, ಪುತೇನ್‌ಕ್ರೂಜ್ ಮತ್ತು ಮುನಂಬಂ ಉಪ-ವಿಭಾಗಗಳಾದ್ಯಂತ ಈ ಭಾರಿ ಶೋಧ ಕಾರ್ಯಾಚರಣೆ ನಡೆಸಿವೆ. ದಾಳಿಯ ವೇಳೆ ಕಂಪ್ಯೂಟರ್‌ಗಳು, ಮೊಬೈಲ್ ಫೋನ್‌ಗಳು ಮತ್ತು ಡಿವಿಆರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ನಕಲಿ ದಾಖಲೆಗಳ ಜಾಲದಿಂದ ಸಹಾಯ ಪಡೆದು ಅಂಗಾಂಗ ಕಸಿ ಮಾಡಿಸಿಕೊಂಡಿರುವ ವ್ಯಕ್ತಿಗಳ ಬಗ್ಗೆಯೂ ಸಮಗ್ರ ತನಿಖೆ ಆರಂಭಿಸಲಾಗಿದೆ. ಜೊತೆಗೆ ಬೇರೆ ರಾಜ್ಯಗಳ ವ್ಯಕ್ತಿಗಳೊಂದಿಗೂ ಈ ಜಾಲ ನಂಟು ಹೊಂದಿರುವ ಸಾಧ್ಯತೆಗಳಿದ್ದು, ಆ ನಿಟ್ಟಿನಲ್ಲೂ ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ 'ಭಾರತೀಯ ನ್ಯಾಯ ಸಂಹಿತೆ'ಯ (BNS) ನಕಲಿ ದಾಖಲೆ ಸೃಷ್ಟಿ ಮತ್ತು ಬಳಕೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

