ಕೇರಳದಲ್ಲಿ ಯುಡಿಎಫ್‌ ಯುಗಾರಂಭ; ನೂತನ ಮುಖ್ಯಮಂತ್ರಿಯಾಗಿ ವಿ. ಡಿ. ಸತೀಶನ್ ಪ್ರಮಾಣವಚನ ಸ್ವೀಕಾರ
x

ಕೇರಳದಲ್ಲಿ ಯುಡಿಎಫ್‌ ಯುಗಾರಂಭ; ನೂತನ ಮುಖ್ಯಮಂತ್ರಿಯಾಗಿ ವಿ. ಡಿ. ಸತೀಶನ್ ಪ್ರಮಾಣವಚನ ಸ್ವೀಕಾರ

ಮುಖ್ಯಮಂತ್ರಿ ಸತೀಶನ್ ಅವರ ನೂತನ ಸಚಿವ ಸಂಪುಟದಲ್ಲಿ ಒಟ್ಟು 20 ಮಂದಿಗೆ ಸಚಿವ ಸ್ಥಾನ ನೀಡಲಾಗಿದ್ದು, ಮೈತ್ರಿಕೂಟದ ಪಾಲುದಾರ ಪಕ್ಷಗಳಿಗೆ ಅರ್ಹ ಪ್ರಾತಿನಿಧ್ಯ ಕಲ್ಪಿಸಲಾಗಿದೆ.


Click the Play button to hear this message in audio format

ಕೇರಳ ರಾಜಕಾರಣದಲ್ಲಿ ಹತ್ತು ವರ್ಷಗಳ ಎಲ್‌ಡಿಎಫ್ ಆಡಳಿತಕ್ಕೆ ತೆರೆ ಬಿದ್ದಿದ್ದು, ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್‌) ಅಧಿಕಾರದ ಚುಕ್ಕಾಣಿ ಹಿಡಿದಿದೆ. ಮೈತ್ರಿಕೂಟದ ನಾಯಕ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ವಿ. ಡಿ. ಸತೀಶನ್ ಕೇರಳದ ನೂತನ ಮುಖ್ಯಮಂತ್ರಿಯಾಗಿ ಇಂದು (ಮೇ 18) ಅಧಿಕೃತವಾಗಿ ಪ್ರಮಾಣವಚನ ಸ್ವೀಕರಿಸಿದರು.

ನಗರದ ಸೆಂಟ್ರಲ್ ಸ್ಟೇಡಿಯಂನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಕೇರಳ ರಾಜ್ಯಪಾಲರಾದ ಆರ್. ವಿ. ಅರ್ಲೇಕರ್ ಅವರು ನೂತನ ಮುಖ್ಯಮಂತ್ರಿ ಹಾಗೂ ಅವರ ಸಚಿವ ಸಂಪುಟದ 20 ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು.

ಭರ್ಜರಿ ಬಹುಮತದೊಂದಿಗೆ ಮರಳಿದ ಯುಡಿಎಫ್ ಇತ್ತೀಚೆಗೆ ನಡೆದ 140 ಕ್ಷೇತ್ರಗಳ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ 102 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಬಹುಮತ ಸಾಧಿಸಿದೆ. ಇದರಲ್ಲಿ ಕಾಂಗ್ರೆಸ್ ಪಕ್ಷವೊಂದೇ 63 ಸ್ಥಾನಗಳನ್ನು ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಮೈತ್ರಿಕೂಟ ಕೇವಲ 35 ಸ್ಥಾನಗಳಿಗೆ ಕುಸಿದು ಮುಖಭಂಗ ಅನುಭವಿಸಿತ್ತು.

ಪ್ರಾದೇಶಿಕ, ಸಾಮಾಜಿಕ ಸಮತೋಲನದ ಸಚಿವ ಸಂಪುಟ

ಮುಖ್ಯಮಂತ್ರಿ ಸತೀಶನ್ ಅವರ ನೂತನ ಸಚಿವ ಸಂಪುಟದಲ್ಲಿ ಒಟ್ಟು 20 ಮಂದಿಗೆ ಸಚಿವ ಸ್ಥಾನ ನೀಡಲಾಗಿದ್ದು, ಮೈತ್ರಿಕೂಟದ ಪಾಲುದಾರ ಪಕ್ಷಗಳಿಗೆ ಅರ್ಹ ಪ್ರಾತಿನಿಧ್ಯ ಕಲ್ಪಿಸಲಾಗಿದೆ. ಜಾತಿ ಮತ್ತು ಪ್ರಾದೇಶಿಕ ಸಮೀಕರಣಗಳನ್ನು ಗಮನದಲ್ಲಿಟ್ಟುಕೊಂಡು ಸಂಪುಟವನ್ನು ರಚಿಸಲಾಗಿದೆ. ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಸೇರಿ 11 ಸ್ಥಾನಗಳು, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) 5 ಸ್ಥಾನಗಳು ಹಾಗೂ ಇತರ ಮೈತ್ರಿ ಪಕ್ಷಗಳಿಗೆ ತಲಾ 1 ಸ್ಥಾನ ನೀಡಲಾಗಿದೆ.

ನೂತನ ಸಚಿವರು

ಸಿಎಂ ರೇಸ್‌ನಲ್ಲಿದ್ದ ಕಾಂಗ್ರೆಸ್‌ ಹಿರಿಯ ನಾಯಕ ರಮೇಶ್ ಚೆನ್ನಿತ್ತಲ, ಸನ್ನಿ ಜೋಸೆಫ್, ಕೆ. ಮುರಳೀಧರನ್, ಎ. ಪಿ. ಅನಿಲ್ ಕುಮಾರ್, ಪಿ. ಸಿ. ವಿಷ್ಣುನಾಥ್, ರೋಜಿ ಎಂ. ಜಾನ್, ಬಿಂದು ಕೃಷ್ಣ, ಎಂ. ಲಿಜು, ಟಿ. ಸಿದ್ದಿಕ್, ಕೆ. ಎ. ತುಳಸಿ, ಒ. ಜೆ. ಜನೀಶ್, ಮುಸ್ಲಿಂ ಲೀಗ್‌ನ ಪಿ. ಕೆ. ಕುಂಞಾಲಿಕುಟ್ಟಿ, ಎನ್. ಶಂಸುದ್ದೀನ್, ಕೆ. ಎಮ್. ಶಾಜಿ, ಪಿ. ಕೆ. ಬಶೀರ್, ವಿ. ಇ. ಅಬ್ದುಲ್ ಗಫೂರ್, ಕೇರಳ ಕಾಂಗ್ರೆಸ್ (ಜೋಸೆಫ್) ಪಕ್ಷದ ಮಾನ್ಸ್ ಜೋಸೆಫ್, ಕ್ರಾಂತಿಕಾರಿ ಸಮಾಜವಾದಿ ಪಕ್ಷದ ಶಿಬು ಬೇಬಿ ಜಾನ್, ಕೇರಳ ಕಾಂಗ್ರೆಸ್ (ಜಾಕೋಬ್) ಪಕ್ಷದ ಅನೂಪ್ ಜಾಕೋಬ್ ಹಾಗೂ ಕಮ್ಯುನಿಸ್ಟ್ ಮಾರ್ಕ್ಸ್ವಾದಿ ಪಕ್ಷದ ಸಿ. ಪಿ. ಜಾನ್ ಪ್ರಮಾಣವಚನ ಸ್ವೀಕರಿಸಿದರು.

ಗಣ್ಯರ ಉಪಸ್ಥಿತಿ

ಈ ಐತಿಹಾಸಿಕ ಸಮಾರಂಭದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಪ್ರತಿಪಕ್ಷದ ಶಾಸಕ ರಾಹುಲ್ ಗಾಂಧಿ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ ಸೇರಿದಂತೆ ನೆರೆರಾಜ್ಯಗಳ ಪ್ರಮುಖ ರಾಜಕೀಯ ಮುಖಂಡರು ಭಾಗವಹಿಸಿದ್ದರು.

ಪಾರದರ್ಶಕ ಆಡಳಿತಕ್ಕೆ ಮೊದಲ ಆದ್ಯತೆ

"ಕೇರಳದ ಜನತೆ ನಮಗೆ ಬದಲಾವಣೆಯ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಜನರ ನಿರೀಕ್ಷೆಗೆ ತಕ್ಕಂತೆ ಪಾರದರ್ಶಕ ಮತ್ತು ಅಭಿವೃದ್ಧಿಪರ ಆಡಳಿತ ನೀಡುವುದು ನಮ್ಮ ಮೊದಲ ಆದ್ಯತೆ" ಎಂದು ಪ್ರಮಾಣವಚನ ಸ್ವೀಕರಿಸಿದ ಬಳಿಕ ಮುಖ್ಯಮಂತ್ರಿ ವಿ. ಡಿ. ಸತೀಶನ್ ತಿಳಿಸಿದ್ದಾರೆ.

Read More
Next Story