Kerala High Court orders protection for Indore woman of Kumbh Mela fame!
x

ಪತಿ ಮೊಹಮ್ಮದ್ ಫರ್ಮಾನ್ ಅವರೊಂದಿಗೆ ಮೊನಾಲಿಸಾ ಭೋಸ್ಲೆ

ಕುಂಭಮೇಳದ ಖ್ಯಾತಿಯ ಇಂದೋರ್ ಯುವತಿಗೆ ರಕ್ಷಣೆ ನೀಡಲು ಕೇರಳ ಹೈಕೋರ್ಟ್ ಆದೇಶ!

ತನ್ನ ಜೀವಕ್ಕೆ ಅಪಾಯವಿರುವ ಹಿನ್ನೆಲೆಯಲ್ಲಿ ತನಗೆ ರಕ್ಷಣೆ ನೀಡುವಂತೆ ನಿರ್ದೇಶನ ನೀಡಬೇಕೆಂದು ಕೋರಿ ಯುವತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಈ ಆದೇಶ ಹೊರಡಿಸಿದೆ.


Click the Play button to hear this message in audio format

ಪ್ರಯಾಗ್‌ರಾಜ್ ಕುಂಭಮೇಳದ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಸಿದ್ಧಿ ಪಡೆದಿದ್ದ ಇಂದೋರ್ ಮೂಲದ ಯುವತಿ ಮೊನಾಲಿಸಾ ಭೋಸ್ಲೆ ಜೀವ ರಕ್ಷಣೆ ನೀಡುವಂತೆ ಕೇರಳ ಹೈಕೋರ್ಟ್ ಪೊಲೀಸರಿಗೆ ಮಹತ್ವದ ನಿರ್ದೇಶನ ನೀಡಿದೆ. ಸದ್ಯ ಈಕೆಯ ಪತಿ ಅಪಹರಣ ಆರೋಪ ಎದುರಿಸುತ್ತಿದ್ದಾರೆ.

ತನ್ನ ಜೀವಕ್ಕೆ ಅಪಾಯವಿರುವ ಹಿನ್ನೆಲೆಯಲ್ಲಿ ತನಗೆ ರಕ್ಷಣೆ ನೀಡುವಂತೆ ರಾಜ್ಯ ಸರ್ಕಾರ ಮತ್ತು ಎರ್ನಾಕುಲಂ ಕೇಂದ್ರ ಪೊಲೀಸ್ ಠಾಣೆಯ ಎಸ್‌ಎಚ್‌ಒ (SHO) ಗೆ ನಿರ್ದೇಶನ ನೀಡಬೇಕೆಂದು ಕೋರಿ ಯುವತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಈ ಆದೇಶ ಹೊರಡಿಸಿದೆ.

"ಅರ್ಜಿದಾರರು ಮತ್ತು ಸರ್ಕಾರಿ ವಕೀಲರ ವಾದವನ್ನು ಆಲಿಸಿದ ನಂತರ, ಅರ್ಜಿದಾರರ ಜೀವಕ್ಕೆ ರಕ್ಷಣೆ ನೀಡುವ ಅಗತ್ಯವಿದೆ ಎಂಬುದು ಮೇಲ್ನೋಟಕ್ಕೆ ತೃಪ್ತಿ ತಂದಿದೆ. ಅದರಂತೆ, ಈ ರಿಟ್ ಅರ್ಜಿಯ ಅಂತಿಮ ಇತ್ಯರ್ಥವಾಗುವವರೆಗೆ ಅರ್ಜಿದಾರರ ಜೀವಕ್ಕೆ ಸಾಕಷ್ಟು ರಕ್ಷಣೆ ನೀಡುವಂತೆ ಎಸ್‌ಎಚ್‌ಒಗೆ ನಿರ್ದೇಶನ ನೀಡಲಾಗುತ್ತಿದೆ" ಎಂದು ನ್ಯಾಯಾಲಯ ತಿಳಿಸಿದೆ. ಈ ಕುರಿತು ರಾಜ್ಯ ಸರ್ಕಾರ ಮತ್ತು ಎಸ್‌ಎಚ್‌ಒಗೆ ನೋಟಿಸ್ ಜಾರಿ ಮಾಡಿರುವ ನ್ಯಾಯಾಲಯ, ಮುಂದಿನ ವಿಚಾರಣೆಯನ್ನು ಜು. 10 ಕ್ಕೆ ಮುಂದೂಡಿದೆ.

ಪ್ರಕರಣದ ಹಿನ್ನೆಲೆ

ಕಳೆದ ವರ್ಷ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಕುಂಭಮೇಳದಲ್ಲಿ ರುದ್ರಾಕ್ಷ ಮಾಲೆಗಳನ್ನು ಮಾರಾಟ ಮಾಡುತ್ತಿದ್ದ ಈ ಯುವತಿಯ ವೀಡಿಯೊವನ್ನು ಕಂಟೆಂಟ್ ಕ್ರಿಯೇಟರ್ ಒಬ್ಬರು ಹಂಚಿಕೊಂಡಿದ್ದರು. ಆಕೆಯ ಆಕರ್ಷಕ ನಗು ಮತ್ತು ಸುಂದರ ಕಣ್ಣುಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕೋಟ್ಯಂತರ ಜನರು ಫಿದಾ ಆಗಿದ್ದರು ಹಾಗೂ ರಾತ್ರೋರಾತ್ರಿ ಖ್ಯಾತಿ ಗಳಿಸಿದ್ದಳು. ಬಳಿಕ ಆಕೆ ತನ್ನ ಕುಟುಂಬದ ತೀವ್ರ ವಿರೋಧದ ನಡುವೆಯೂ, ಕೇರಳದಲ್ಲಿ ಹಿರಿಯ ಸಿಪಿಐ(ಎಂ) ನಾಯಕರ ಸಮ್ಮುಖದಲ್ಲಿ ಮೊಹಮ್ಮದ್ ಫರ್ಮಾನ್ ಎಂಬಾತನನ್ನು ವಿವಾಹವಾಗಿದ್ದಳು.

ಅಪಹರಣ ಪ್ರಕರಣ ದಾಖಲು

ಯುವತಿಯ ತಂದೆ ತನ್ನ ಮಗಳು ಅಪ್ರಾಪ್ತ ವಯಸ್ಕಳು ಎಂದು ಆರೋಪಿಸಿ ಮಧ್ಯಪ್ರದೇಶ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ಪೊಲೀಸರು ಪತಿ ಮೊಹಮ್ಮದ್ ಫರ್ಮಾನ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS), ಬಾಲ್ಯವಿವಾಹ ನಿಷೇಧ ಕಾಯ್ದೆ 2006 ಮತ್ತು ಎಸ್‌ಸಿ,ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಅಪಹರಣ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ಆದರೆ, ಈ ತಿಂಗಳ ಆರಂಭದಲ್ಲಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ಮತ್ತೊಂದು ಪೀಠವು, ಯುವತಿಯು ಮೇಜರ್ (ವಯಸ್ಕಳು) ಎಂದು ಪ್ರಾಥಮಿಕವಾಗಿ ಅಭಿಪ್ರಾಯಪಟ್ಟಿತ್ತು. ಅಲ್ಲದೆ, ಮಧ್ಯಪ್ರದೇಶ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಪಡೆಯಲು ಅನುಕೂಲವಾಗುವಂತೆ ಆಕೆಯ ಪತಿಗೆ ಒಂದು ತಿಂಗಳ ಕಾಲ ಟ್ರಾನ್ಸಿಟ್ ಜಾಮೀನು ಮಂಜೂರು ಮಾಡಿದೆ.

Read More
Next Story