Satheeshan Shake begins in Kerala: High commands favor is a test for CM Siddaramaiah!
x

ಕೇರಳ ಸಿಎಂ ವಿ.ಡಿ. ಸತೀಶನ್‌ ಹಾಗೂ ಕರ್ನಾಟಕ ಸಿಎಂ ಸಿದ್ದರಾಮಯ್ಯ

ಕೇರಳದಲ್ಲಿ 'ಸತೀಶನ್ ಶಕೆ' ಆರಂಭ: ಹೈಕಮಾಂಡ್ ಒಲವು ಸಿಎಂ ಸಿದ್ದರಾಮಯ್ಯಗೆ ಅಗ್ನಿಪರೀಕ್ಷೆ!

102 ಸ್ಥಾನಗಳನ್ನು ಗೆದ್ದರೂ ಮುಖ್ಯಮಂತ್ರಿ ಕುರ್ಚಿ ಸತೀಶನ್ ಅವರಿಗೆ ಸುಲಭವಾಗಿ ಒಲಿಯಲಿಲ್ಲ. ದೆಹಲಿ ಹೈಕಮಾಂಡ್ ಮಟ್ಟದಲ್ಲಿ ಪ್ರಭಾವ ಹೊಂದಿದ್ದ ಕೆ.ಸಿ. ವೇಣುಗೋಪಾಲ್, ರಮೇಶ್ ಚೆನ್ನಿತ್ತಲ ಅವರಿಂದ ತೀವ್ರ ಪೈಪೋಟಿ ಎದುರಾಗಿತ್ತು.


Click the Play button to hear this message in audio format

ಕೇರಳದ ರಾಜಧಾನಿ ತಿರುವನಂತಪುರದ ಹೃದಯಭಾಗದಲ್ಲಿರುವ 'ಕ್ಯಾಂಟನ್ಮೆಂಟ್ ಹೌಸ್' (ವಿರೋಧ ಪಕ್ಷದ ನಾಯಕರ ಅಧಿಕೃತ ನಿವಾಸ) ಹಾಗೂ 'ಕ್ಲಿಫ್ ಹೌಸ್' (ಮುಖ್ಯಮಂತ್ರಿಗಳ ಅಧಿಕೃತ ನಿವಾಸ) ನಡುವಿನ ಭೌಗೋಳಿಕ ಅಂತರ ಕೇವಲ 3 ಕಿಲೋಮೀಟರ್. ಗೂಗಲ್ ಮ್ಯಾಪ್‌ನಲ್ಲಿ ಈ ದೂರ ಅತ್ಯಲ್ಪವೆನಿಸಿದರೂ, ರಾಜಕೀಯ ಚದುರಂಗದಾಟದಲ್ಲಿ ಈ ಮೂರು ಕಿಲೋಮೀಟರ್ ದೂರವನ್ನು ಕ್ರಮಿಸಲು ಕೆಲವರಿಗೆ ಇಡೀ ಜೀವಮಾನವೇ ಸಾಲುವುದಿಲ್ಲ. ಆದರೆ, ಇಂದು ವಿ.ಡಿ. ಸತೀಶನ್ ಅವರು ಈ ಅಂತರವನ್ನು ಯಶಸ್ವಿಯಾಗಿ ಕ್ರಮಿಸಿ, ಕೇರಳದ 13ನೇ ಮುಖ್ಯಮಂತ್ರಿಯಾಗಿ ಇಡೀ ದೇಶದ ಗಮನ ಸೆಳೆದಿದ್ದಾರೆ.

ಇದು ಇತ್ತೀಚಿನ ಭಾರತೀಯ ರಾಜಕಾರಣದ ಅತಿದೊಡ್ಡ 'ಕಮ್‌ಬ್ಯಾಕ್' ಕಥೆಗಳಲ್ಲೊಂದು. 2021ರ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ ಹೀನಾಯವಾಗಿ ಸೋತಾಗ, ನಾಯಕತ್ವದ ಚುಕ್ಕಾಣಿ ಹಿಡಿದವರು ಇದೇ ವಿ.ಡಿ. ಸತೀಶನ್. ಕೇವಲ ಐದು ವರ್ಷಗಳ ಅಂತರದಲ್ಲಿ, ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿ ಭರ್ಜರಿ 102 ಸ್ಥಾನಗಳನ್ನು ಗೆಲ್ಲಿಸುವ ಮೂಲಕ ಅವರು ಇಂದು ಮುಖ್ಯಮಂತ್ರಿ ಗಾದಿಗೇರಿದ್ದಾರೆ.

ರೋಚಕ ರಾಜಕೀಯ ಹಾಗೂ ಐತಿಹಾಸಿಕ ಪ್ರಮಾಣ ವಚನ

102 ಸ್ಥಾನಗಳನ್ನು ಗೆದ್ದರೂ ಮುಖ್ಯಮಂತ್ರಿ ಕುರ್ಚಿ ಸತೀಶನ್ ಅವರಿಗೆ ಸುಲಭವಾಗಿ ಒಲಿಯಲಿಲ್ಲ. ದೆಹಲಿ ಹೈಕಮಾಂಡ್ ಮಟ್ಟದಲ್ಲಿ ಪ್ರಭಾವ ಹೊಂದಿದ್ದ ಕೆ.ಸಿ. ವೇಣುಗೋಪಾಲ್ ಹಾಗೂ ಹಿರಿಯ ನಾಯಕ ರಮೇಶ್ ಚೆನ್ನಿತ್ತಲ ಅವರಿಂದ ತೀವ್ರ ಪೈಪೋಟಿ ಎದುರಾಗಿತ್ತು. ಫಲಿತಾಂಶದ ಬಳಿಕ ಸತತ 11 ದಿನಗಳ ಕಾಲ ಹೈಡ್ರಾಮಾ ನಡೆಯಿತು. ಹೈಕಮಾಂಡ್ ವೇಣುಗೋಪಾಲ್ ಬೆಂಬಲಕ್ಕೆ ನಿಂತರೆ, ಕೇರಳದ ಶಾಸಕರು ಮತ್ತು ಪ್ರಮುಖ ಮಿತ್ರಪಕ್ಷ ಐಯುಎಂಎಲ್ (IUML) ಸತೀಶನ್ ಬೆನ್ನಿಗೆ ಬಂಡೆಯಂತೆ ನಿಂತವು. ಅಂತಿಮವಾಗಿ ಸತೀಶನ್ ಅವರ ಹೋರಾಟಕ್ಕೆ ಜಯ ಒಲಿಯಿತು.

ತಿರುವನಂತಪುರದಲ್ಲಿ ನಡೆದ ಐತಿಹಾಸಿಕ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಹಬ್ಬದ ವಾತಾವರಣವನ್ನು ಸೃಷ್ಟಿಸಿತ್ತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಕರ್ನಾಟಕದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಸೇರಿದಂತೆ ಹಲವು ನಾಯಕರು ಸಾಕ್ಷಿಯಾದರು. ಚುನಾವಣೆಯಲ್ಲಿ ಕಡುವೈರಿಗಳಾಗಿದ್ದ ನಿರ್ಗಮಿತ ಸಿಎಂ ಪಿಣರಾಯಿ ವಿಜಯನ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರೂ ವೇದಿಕೆ ಹಂಚಿಕೊಂಡಿದ್ದು, ಕೇರಳದ ಪ್ರಬುದ್ಧ ಪ್ರಜಾಪ್ರಭುತ್ವಕ್ಕೆ ಕನ್ನಡಿ ಹಿಡಿಯಿತು.

ಹೊಸ ಸರ್ಕಾರದ ಸವಾಲುಗಳು ಹಾಗೂ ವಿಐಪಿ ಸಂಸ್ಕೃತಿಗೆ ಬ್ರೇಕ್

ಮುಖ್ಯಮಂತ್ರಿ ಸೇರಿದಂತೆ 21 ಸದಸ್ಯರ ನೂತನ ಸಚಿವ ಸಂಪುಟದಲ್ಲಿ ಬರೋಬ್ಬರಿ 14 ಮಂದಿ ಹೊಸ ಮುಖಗಳಿದ್ದಾರೆ. ಮೈತ್ರಿಕೂಟದ ಪ್ರಬಲ ಶಕ್ತಿ ಐಯುಎಂಎಲ್ 5 ಸಚಿವ ಸ್ಥಾನಗಳನ್ನು ಪಡೆದುಕೊಂಡಿದೆ. ಅಧಿಕಾರ ವಹಿಸಿಕೊಂಡ ತಕ್ಷಣವೇ ಸತೀಶನ್ ಅವರು 'ವಿಐಪಿ ಸಂಸ್ಕೃತಿ'ಗೆ ಬ್ರೇಕ್ ಹಾಕಿದ್ದು, ಸಚಿವರಿಗೆ ಹೊಸ ಐಷಾರಾಮಿ ಕಾರುಗಳನ್ನು ಖರೀದಿಸದಿರಲು ನಿರ್ಧರಿಸುವ ಮೂಲಕ ಸಾರ್ವಜನಿಕ ಹಣ ಉಳಿಸುವ ಮೊದಲ ಹೆಜ್ಜೆ ಇಟ್ಟಿದ್ದಾರೆ.

ಕರ್ನಾಟಕದ ಪಾಲಿಗೆ ಹೊಸ ಅವಕಾಶ ಮತ್ತು ಸವಾಲು

ಅನೇಕ ವರ್ಷಗಳ ನಂತರ ಕರ್ನಾಟಕ ಮತ್ತು ಕೇರಳ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ಅಧಿಕಾರದಲ್ಲಿವೆ. ಇದು ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿರುವ ಗಡಿ ಮತ್ತು ಪರಿಸರ ವಿವಾದಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಒಂದು ಸುವರ್ಣಾವಕಾಶವಾಗಿದೆ. ಆದರೆ, ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅವರ ಪಾಲಿಗೆ ಇದು ಬಹುದೊಡ್ಡ ಸವಾಲು. ಹೈಕಮಾಂಡ್ ಇಚ್ಛೆಯನ್ನು ಗೌರವಿಸುವ ಜೊತೆಗೆ, ಕರ್ನಾಟಕದ ಪರಿಸರ, ಭಾಷೆ ಮತ್ತು ಭೌಗೋಳಿಕ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವ ಅನಿವಾರ್ಯತೆ ಅವರ ಮೇಲಿದೆ.

ಸದ್ಯ ಮುನ್ನೆಲೆಯಲ್ಲಿರುವ 4 ಪ್ರಮುಖ ವಿವಾದಗಳು

ರಾಷ್ಟ್ರೀಯ ಹೆದ್ದಾರಿ 766 (NH 766) ರಾತ್ರಿ ಸಂಚಾರ ನಿಷೇಧ ವಿವಾದ

ಮೈಸೂರಿನಿಂದ ವಯನಾಡಿಗೆ ಸಂಪರ್ಕ ಕಲ್ಪಿಸುವ ಎನ್‌ಹೆಚ್ 766 ಹೆದ್ದಾರಿಯಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ರಾತ್ರಿ 9 ರಿಂದ ಬೆಳಗ್ಗೆ 6 ರವರೆಗೆ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ವನ್ಯಜೀವಿಗಳ ರಕ್ಷಣೆಗಾಗಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಆದೇಶದಂತೆ ಈ ನಿಯಮ ಜಾರಿಯಲ್ಲಿದೆ. ಆದರೆ, ಆರ್ಥಿಕತೆ ಮತ್ತು ಪ್ರವಾಸೋದ್ಯಮದ ಹಿತದೃಷ್ಟಿಯಿಂದ ಈ ನಿಷೇಧ ತೆರವುಗೊಳಿಸಲು ಕೇರಳ ನಿರಂತರ ಯತ್ನ ನಡೆಸುತ್ತಿದೆ. ವಯನಾಡು ಉಪಚುನಾವಣೆ ವೇಳೆ ಪ್ರಿಯಾಂಕಾ ಗಾಂಧಿ ಈ ಭರವಸೆ ನೀಡಿದ್ದರು. ಕೇಂದ್ರ ಸಚಿವ ನಿತಿನ್ ಗಡ್ಕರಿ ಈ ಬಗ್ಗೆ ತಜ್ಞರ ಸಮಿತಿ ರಚಿಸಿದ್ದು, ಸುರಂಗ ಮಾರ್ಗದ ಚರ್ಚೆಗಳೂ ನಡೆಯುತ್ತಿವೆ. ಆದರೆ, ರಾಜ್ಯದ ಪರಿಸರವಾದಿಗಳು ಮತ್ತು ರೈತರು ಇದನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಹೀಗಾಗಿ ಬಂಡೀಪುರ ವಿಚಾರದಲ್ಲಿ ಕೇರಳದ ಬೇಡಿಕೆಗೆ ಮಣಿಯುವುದು ಸಿದ್ದರಾಮಯ್ಯನವರಿಗೆ ಕಷ್ಟಸಾಧ್ಯ.

ಅಂತರಾಜ್ಯ ರೈಲ್ವೆ ಯೋಜನೆಗಳು ಮತ್ತು ಪರಿಸರ ಆತಂಕ

ಕರ್ನಾಟಕದೊಂದಿಗೆ ಸಂಪರ್ಕ ಸಾಧಿಸಲು ಕೇರಳ ಮುಖ್ಯವಾಗಿ 'ನಿಲಂಬೂರು - ನಂಜನಗೂಡು' (236 ಕಿ.ಮೀ, 4,266 ಕೋಟಿ ರೂಪಾಯಿ ವೆಚ್ಚ ಮತ್ತು 'ತಲಶ್ಶೇರಿ - ಮೈಸೂರು' ರೈಲ್ವೆ ಯೋಜನೆಗಳನ್ನು ಪ್ರಸ್ತಾಪಿಸಿದೆ. ನಿಲಂಬೂರು ಯೋಜನೆಯಿಂದ ಬೆಂಗಳೂರು-ಕೊಚ್ಚಿ ಪ್ರಯಾಣದ ಅವಧಿ 7 ಗಂಟೆಗಳಷ್ಟು ಕಡಿತಗೊಳ್ಳಲಿದೆ. ಆದರೆ, ಈ ಎರಡೂ ಮಾರ್ಗಗಳು ಕರ್ನಾಟಕದ ಕೊಡಗು, ಬಂಡೀಪುರ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಗಳ 'ಪರಿಸರ ಸೂಕ್ಷ್ಮ ವಲಯ'ಗಳ ಮೂಲಕ ಹಾದುಹೋಗಬೇಕಿದೆ. ಪಶ್ಚಿಮ ಘಟ್ಟಗಳ ಜೀವವೈವಿಧ್ಯತೆಗೆ ಮಾರಕವಾಗುವ ಈ ಯೋಜನೆಗಳಿಗೆ ಕರ್ನಾಟಕ ಸುಲಭವಾಗಿ ಒಪ್ಪಿಗೆ ನೀಡುವುದು ಅನುಮಾನ.

ಕಾಸರಗೋಡು ಕನ್ನಡಿಗರ ಭಾಷಾ ಹಕ್ಕುಗಳು

ಕೇರಳದ ಗಡಿ ಜಿಲ್ಲೆ ಕಾಸರಗೋಡಿನಲ್ಲಿ ಅಪಾರ ಸಂಖ್ಯೆಯ ಕನ್ನಡ ಭಾಷಿಕರಿದ್ದಾರೆ. ಈ ಹಿಂದೆ ಕೇರಳ ಸರ್ಕಾರ 10ನೇ ತರಗತಿಯವರೆಗೆ ಮಲಯಾಳಂ ಕಡ್ಡಾಯಗೊಳಿಸಿದಾಗ ಸಿಎಂ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಕೇರಳದಲ್ಲಿ ಎಲ್‌ಡಿಎಫ್ ಬದಲು ಕಾಂಗ್ರೆಸ್ ನೇತೃತ್ವದ ಸರ್ಕಾರ ಬಂದಿರುವುದರಿಂದ, ಕಾಸರಗೋಡು ಕನ್ನಡಿಗರ ಸಾಂವಿಧಾನಿಕ ಹಕ್ಕುಗಳ ರಕ್ಷಣೆಗಾಗಿ ಸಿದ್ದರಾಮಯ್ಯನವರು ಸಿಎಂ ಸತೀಶನ್ ಅವರೊಂದಿಗೆ ನೇರ ಮಾತುಕತೆ ನಡೆಸಿ ಕನ್ನಡ ಶಾಲೆಗಳಿಗೆ ವಿನಾಯಿತಿ ಕೇಳುವ ಸಾಧ್ಯತೆ ದಟ್ಟವಾಗಿದೆ.

ಬಾರಾಪೊಳೆ ನದಿ ಹಾಗೂ ಗಡಿ ವಿವಾದ

ಕೊಡಗು ಜಿಲ್ಲೆಯ ಬ್ರಹ್ಮಗಿರಿ ಮೀಸಲು ಅರಣ್ಯದಲ್ಲಿ ಹುಟ್ಟುವ ಬಾರಾಪೊಳೆ (ವಳಪಟ್ಟಣಂ) ನದಿಯು ಕೇರಳದ ಕಣ್ಣೂರು ಮತ್ತು ವಯನಾಡು ಕಡೆಗೆ ಹರಿಯುತ್ತದೆ. ಈ ನದಿಯ ನೀರನ್ನು ಬಳಸಿ ಜಲವಿದ್ಯುತ್ ಯೋಜನೆ ರೂಪಿಸಲು ಕೇರಳ ಮುಂದಾದಾಗ, ಕರ್ನಾಟಕದ ಅರಣ್ಯ ಪ್ರದೇಶ ಮುಳುಗಡೆಯಾಗುವ ಭೀತಿಯಿಂದ ವಿರೋಧ ವ್ಯಕ್ತವಾಗಿತ್ತು. ಇದರ ಜೊತೆಗೆ, ಕೊಡಗಿನ ವಿರಾಜಪೇಟೆ ತಾಲೂಕು ಮತ್ತು ಕಣ್ಣೂರಿನ ಅಯ್ಯನ್‌ಕುನ್ನು ಪಂಚಾಯತ್ ಗಡಿಯಲ್ಲಿರುವ 'ಪಾಲತುಂಕಡವು' ಎಂಬ 15 ಎಕರೆ ವಸತಿ ಪ್ರದೇಶದ ಮಾಲೀಕತ್ವದ ವಿವಾದವೂ ಇದೆ. ಇದು ಬ್ರಹ್ಮಗಿರಿ ವನ್ಯಜೀವಿ ಧಾಮದ ಮೀಸಲು ಅರಣ್ಯ ಎಂದು ಕರ್ನಾಟಕ ಹೇಳಿದರೆ, ಕೇರಳ ಇದನ್ನು ಐತಿಹಾಸಿಕ ವಸತಿ ಭೂಮಿ ಎನ್ನುತ್ತಿದೆ. ಈ ಆಡಳಿತಾತ್ಮಕ ಗೊಂದಲಗಳಿಂದ ಸ್ಥಳೀಯರು ಪರದಾಡುತ್ತಿದ್ದು, ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಜಂಟಿ ಸರ್ವೆ ಸಮಿತಿ ರಚಿಸುವ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ.

ಮುಂದಿದೆ ಅಗ್ನಿಪರೀಕ್ಷೆ

ಒಟ್ಟಾರೆಯಾಗಿ, ಕ್ಯಾಂಟನ್ಮೆಂಟ್ ಹೌಸ್‌ನಿಂದ ಕ್ಲಿಫ್ ಹೌಸ್‌ವರೆಗಿನ ಪಯಣವನ್ನು ಗೆದ್ದಿರುವ ಕೇರಳದ ನೂತನ ಸಿಎಂ ವಿ.ಡಿ. ಸತೀಶನ್ ಅವರಿಗೆ ಮುಂದಿನ 5 ವರ್ಷಗಳ ಆಡಳಿತ ದೊಡ್ಡ ಅಗ್ನಿಪರೀಕ್ಷೆಯಾಗಿದೆ. ಇತ್ತ, ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅವರಿಗೂ ಇದು ಅತ್ಯಂತ ಸವಾಲಿನ ಸಮಯ. ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರಂತಹ ಕೇಂದ್ರ ನಾಯಕರ ಇಚ್ಛೆಯನ್ನು ಗೌರವಿಸುವ ಜೊತೆಗೆ, ಪಶ್ಚಿಮ ಘಟ್ಟಗಳು, ಬಂಡೀಪುರ ಅರಣ್ಯ ಹಾಗೂ ಕಾಸರಗೋಡು ಕನ್ನಡಿಗರ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಹಗ್ಗದ ಮೇಲಿನ ನಡಿಗೆ ಮಾಡಬೇಕಿದೆ. ರಾಜಕೀಯ ಮೈತ್ರಿ ಹಾಗೂ ಪ್ರಾದೇಶಿಕ ಹಿತಾಸಕ್ತಿಗಳ ಈ ಹಗ್ಗಜಗ್ಗಾಟದಲ್ಲಿ ಉಭಯ ರಾಜ್ಯಗಳು ಸೌಹಾರ್ದತೆಯ ಹೊಸ ಹಾದಿ ಕಂಡುಕೊಳ್ಳಲಿವೆಯೇ ಕಾದುನೋಡಬೇಕಿದೆ.

Read More
Next Story