
ಕೆ. ಅಣ್ಣಾಮಲೈ
ತಮಿಳುನಾಡು ರಾಜಕೀಯದಲ್ಲಿ ಸಂಚಲನ; 'ವಿ ದಿ ಲೀಡರ್ಸ್' ಅಭಿಯಾನಕ್ಕೆ ಸಿಕ್ಕಿತು ಅಭೂತಪೂರ್ವ ಜನಬೆಂಬಲ!
'ವಿ ದಿ ಲೀಡರ್ಸ್' ಅಭಿಯಾನಕ್ಕೆ ಚಾಲನೆ ಸಿಕ್ಕ ಕೇವಲ 10 ಗಂಟೆಗಳ ಅವಧಿಯಲ್ಲಿ 10 ಲಕ್ಷಕ್ಕೂ ಹೆಚ್ಚು ಸದಸ್ಯರು ನೋಂದಾಯಿಸಿಕೊಂಡಿದ್ದಾರೆ. ಈ ಅಭೂತಪೂರ್ವ ಯಶಸ್ಸು ಸದ್ಯ ಇಡೀ ತಮಿಳುನಾಡು ರಾಜಕೀಯ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.
ದ್ರಾವಿಡ ನಾಡಿನ ರಾಜಕಾರಣದಲ್ಲಿ ಸದಾ ಸಂಚಲನ ಸೃಷ್ಟಿಸುವ ಐಪಿಎಸ್ ಮಾಜಿ ಅಧಿಕಾರಿ ಹಾಗೂ ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಪ್ರಾಥಮಿಕ ಸದಸ್ಯತ್ವಕ್ಕೆ ದಿಢೀರ್ ರಾಜೀನಾಮೆ ನೀಡುವ ಮೂಲಕ ಹೈಕಮಾಂಡ್‌ಗೆ ಶಾಕ್ ನೀಡಿದ್ದಾರೆ. ಆ ಮೂಲಕ 'ವಿ ದಿ ಲೀಡರ್ಸ್' ಎಂಬ ಹೊಸ ರಾಜಕೀಯ ಚಳವಳಿಯನ್ನು ಅಧಿಕೃತವಾಗಿ ಆರಂಭಿಸಿದ್ದು, ತಮಿಳುನಾಡು ರಾಜಕೀಯದಲ್ಲಿ ಹೊಸ ಪರ್ವವೊಂದು ಆರಂಭವಾದಂತಾಗಿದೆ.
10 ಗಂಟೆಗಳಲ್ಲಿ 10 ಲಕ್ಷ ಸದಸ್ಯರು ಸೇರ್ಪಡೆ!
ಅಣ್ಣಾಮಲೈ ಅವರ ಜನಪ್ರಿಯತೆ ಎಷ್ಟಿದೆ ಎಂಬುದಕ್ಕೆ ಅವರು ಆರಂಭಿಸಿರುವ ಈ ಹೊಸ ಚಳವಳಿಗೆ ಸಿಕ್ಕ ಜನಬೆಂಬಲವೇ ಸಾಕ್ಷಿಯಾಗಿದೆ. 'ವಿ ದಿ ಲೀಡರ್ಸ್' ಅಭಿಯಾನಕ್ಕೆ ಚಾಲನೆ ಸಿಕ್ಕ ಕೇವಲ 10 ಗಂಟೆಗಳ ಅವಧಿಯಲ್ಲಿ 10 ಲಕ್ಷಕ್ಕೂ ಹೆಚ್ಚು ಸದಸ್ಯರು ತಾವಾಗಿಯೇ ಬಂದು ನೋಂದಾಯಿಸಿಕೊಂಡಿದ್ದಾರೆ. ಈ ಅಭೂತಪೂರ್ವ ಯಶಸ್ಸು ಸದ್ಯ ಇಡೀ ತಮಿಳುನಾಡು ರಾಜಕೀಯ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.
ಖುಷಿ ಹಂಚಿಕೊಂಡ ಅಣ್ಣಾಮಲೈ
"ನಮ್ಮ ರಾಜಕೀಯ ಚಳವಳಿಯು ಕೇವಲ 10 ಗಂಟೆಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಸ್ವಯಂಸೇವಕರು ನೋಂದಾಯಿಸಿಕೊಳ್ಳುವ ಮೂಲಕ ಮೈಲಿಗಲ್ಲು ಸಾಧಿಸಿದೆ. ಈ ಅಸಾಧಾರಣ ಪ್ರತಿಕ್ರಿಯೆಯು ನಮ್ಮ ದೃಷ್ಟಿಕೋನ ಮತ್ತು ಸಾಮೂಹಿಕ ಕಾರ್ಯಾಚರಣೆಯ ಮೇಲಿನ ಹೆಚ್ಚುತ್ತಿರುವ ನಂಬಿಕೆಯ ಪ್ರತಿಬಿಂಬವಾಗಿದೆ. ಈ ಹೊಸ ಪಥದ ಮೇಲೆ ನಂಬಿಕೆ ಇಟ್ಟು ಮುನ್ನಡೆದ ಪ್ರತಿಯೊಬ್ಬರಿಗೂ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.
ಕಾಮಾಕ್ಷಿ ದೇವಸ್ಥಾನದಲ್ಲಿ ವಿಶೇಷ ಪೂಜೆ
ಕೆ. ಅಣ್ಣಾಮಲೈ ಅವರು ಬಿಜೆಪಿಯಿಂದ ಹೊರಬಂದರೂ, ತಳಮಟ್ಟದಲ್ಲಿ ಅವರ ಮೇಲಿರುವ ಅಭಿಮಾನ ಕಿಂಚಿತ್ತೂ ಕಡಿಮೆಯಾಗಿಲ್ಲ. ಅವರ 'ವಿ ದಿ ಲೀಡರ್ಸ್' ಚಳವಳಿಯ ಯಶಸ್ಸು, ಬಲವರ್ಧನೆ ಹಾಗೂ ಅಣ್ಣಾಮಲೈ ಅವರ ಮುಂದಿನ ರಾಜಕೀಯ ಭವಿಷ್ಯ ಉಜ್ವಲವಾಗಿರಲಿ ಎಂದು ಆಶಿಸಿ ಕಾಂಚಿಪುರಂನ ಪ್ರಸಿದ್ಧ ಕಾಮಾಕ್ಷಿ ದೇವಸ್ಥಾನದಲ್ಲಿ ನೂರಾರು ಬೆಂಬಲಿಗರು ಮತ್ತು ಸ್ವಯಂಸೇವಕರು ವಿಶೇಷ ಪೂಜೆ ಹಾಗೂ ಪ್ರಾರ್ಥನೆಗಳನ್ನು ಸಲ್ಲಿಸಿದ್ದಾರೆ.
ರಾಜಕೀಯ ದಿಕ್ಸೂಚಿ ಬದಲಿಸುತ್ತಾ ಅಣ್ಣಾಮಲೈ ನಡೆ?
ತಮಿಳುನಾಡಿನಲ್ಲಿ ಬಿಜೆಪಿಯನ್ನು ತಳಮಟ್ಟದಿಂದ ಕಟ್ಟಿ, ಡಿಎಂಕೆ ಮತ್ತು ಎಐಎಡಿಎಂಕೆಗೆ ಪ್ರಬಲ ಪೈಪೋಟಿ ನೀಡಿದ್ದ ಅಣ್ಣಾಮಲೈ ಅವರ ನಿರ್ಗಮನವು ತಮಿಳುನಾಡು ಬಿಜೆಪಿಗೆ ದೊಡ್ಡ ಹಿನ್ನಡೆ ತಂದಿದೆ. ಸದ್ಯಕ್ಕೆ ಇದನ್ನು 'ರಾಜಕೀಯ ಚಳವಳಿ' ಎಂದು ಕರೆಯಲಾಗುತ್ತಿದ್ದರೂ, ಹರಿದುಬರುತ್ತಿರುವ ಬೆಂಬಲ ನೋಡಿದರೆ ಅಣ್ಣಾಮಲೈ ಶೀಘ್ರದಲ್ಲೇ ಸ್ವತಂತ್ರ ರಾಜಕೀಯ ಪಕ್ಷ ಘೋಷಿಸಿ, ಮುಂಬರುವ ಚುನಾವಣೆಗಳಲ್ಲಿ ಮೂರನೇ ಪ್ರಬಲ ಶಕ್ತಿಯಾಗಿ ಹೊರಹೊಮ್ಮುವ ಸಾಧ್ಯತೆ ದಟ್ಟವಾಗಿದೆ. ಭ್ರಷ್ಟಾಚಾರ ಮುಕ್ತ ಮತ್ತು ಪಾರದರ್ಶಕ 'ಸಾಮಾನ್ಯ ಜನರ ರಾಜಕಾರಣ'ದ ಆಶಯ ಹೊತ್ತಿರುವ ಅಣ್ಣಾಮಲೈ ಅವರ ಈ ನಡೆಗೆ ತಮಿಳುನಾಡಿನ ಯುವ ವಲಯ ಹಾಗೂ ಐಟಿ ಉದ್ಯೋಗಿಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.

