
ಕೆ.ಅಣ್ಣಾಮಲೈ
ತಮಿಳುನಾಡು ರಾಜಕಾರಣದಲ್ಲಿ ಭಾರಿ ಹೈಡ್ರಾಮಾ; ಬಿಜೆಪಿಗೆ ‘ಸಿಂಗಂ’ ಅಣ್ಣಾಮಲೈ ದಿಢೀರ್ ರಾಜೀನಾಮೆ!
ರಾಜೀನಾಮೆ ನೀಡಿದ ಬಳಿಕ ಪಕ್ಷದ ವರಿಷ್ಠರಿಗೆ ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿರುವ ಅಣ್ಣಾಮಲೈ, "ನಾನು ಇನ್ನು ಮುಂದೆ ರಾಜಕೀಯದಲ್ಲಿ ನನ್ನದೇ ಆದ ಹೊಸ ಮಾರ್ಗವನ್ನು ರೂಪಿಸಿಕೊಳ್ಳಲು ಬಯಸುತ್ತೇನೆ" ಎಂದು ತಿಳಿಸಿದ್ದಾರೆ.
ತಮಿಳುನಾಡು ರಾಜಕಾರಣದಲ್ಲಿ ಬುಧವಾರ ಅತ್ಯಂತ ದೊಡ್ಡ ರಾಜಕೀಯ ಹೈಡ್ರಾಮಾ ನಡೆದಿದೆ. ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಹಾಗೂ ಪ್ರಭಾವಿ ನಾಯಕ ಕೆ. ಅಣ್ಣಾಮಲೈ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಂಗಳವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಹಾಗೂ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರೊಂದಿಗಿನ ನಿರ್ಣಾಯಕ ಸಭೆಯ ಬಳಿಕ ಅಣ್ಣಾಮಲೈ ಅವರು ತಮ್ಮ ಐದು ಪುಟಗಳ ಸುದೀರ್ಘ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನೂ ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಅವರು ಚೆನ್ನೈಗೆ ಮರಳಿದ್ದಾರೆ.
"ನನ್ನದೇ ದಾರಿ ಕಂಡುಕೊಳ್ಳುವೆ" ಎಂದ ಸಿಂಗಂ!
ರಾಜೀನಾಮೆ ನೀಡಿದ ಬಳಿಕ ಪಕ್ಷದ ವರಿಷ್ಠರಿಗೆ ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿರುವ ಅಣ್ಣಾಮಲೈ, "ನಾನು ಇನ್ನು ಮುಂದೆ ರಾಜಕೀಯದಲ್ಲಿ ನನ್ನದೇ ಆದ ಹೊಸ ಮಾರ್ಗವನ್ನು ರೂಪಿಸಿಕೊಳ್ಳಲು ಬಯಸುತ್ತೇನೆ" ಎಂದು ತಿಳಿಸಿದ್ದಾರೆ. ಮಾಜಿ ಐಪಿಎಸ್ ಅಧಿಕಾರಿಯಾಗಿರುವ ಅಣ್ಣಾಮಲೈ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಬಿಜೆಪಿ ಹೈಕಮಾಂಡ್ ಕೊನೆಯ ಕ್ಷಣದವರೆಗೂ ತೀವ್ರ ಕಸರತ್ತು ನಡೆಸಿತಾದರೂ ಅದು ಫಲ ನೀಡಿಲ್ಲ ಎನ್ನಲಾಗಿದೆ. ಯಾವುದೇ ಮುಂದಿನ ಸೂಚನೆ ಬರುವವರೆಗೂ ದೆಹಲಿ ಬಿಟ್ಟು ಕದಲದಂತೆ ಅವರಿಗೆ ಸೂಚಿಸಲಾಗಿತ್ತು ಎನ್ನಲಾಗಿದ್ದರೂ, ಸದ್ಯ ಅವರು ಚೆನ್ನೈಗೆ ತಲುಪಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆ ಕೆ. ಅಣ್ಣಾಮಲೈ (ಸಂಗ್ರಹ ಚಿತ್ರ)
ಅಣ್ಣಾಮಲೈ ನಿರ್ಗಮನಕ್ಕೆ ಕಾರಣವೇನು?
ಕಳೆದ 2025ರಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುನ್ನ ಎಐಎಡಿಎಂಕೆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಲುವಾಗಿ ಬಿಜೆಪಿ ರಾಷ್ಟ್ರೀಯ ನಾಯಕತ್ವವು ಅಣ್ಣಾಮಲೈ ಅವರನ್ನು ರಾಜ್ಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ, ನೈನಾರ್ ನಾಗೇಂದ್ರನ್ ಅವರಿಗೆ ಜವಾಬ್ದಾರಿ ನೀಡಿತ್ತು. ಅಂದಿನಿಂದಲೇ ಅಣ್ಣಾಮಲೈ ಪಕ್ಷದಲ್ಲಿ ಮೂಲೆಗುಂಪಾಗಿದ್ದಾರೆ ಎಂಬ ವದಂತಿಗಳು ಹರಡಿದ್ದವು. ಎಂಜಿಆರ್ ಮತ್ತು ಜಯಲಲಿತಾ ಅವರ ಕುರಿತು ಅಣ್ಣಾಮಲೈ ತಳೆದಿದ್ದ ಆಕ್ರಮಣಕಾರಿ ನಿಲುವೇ ಬಿಜೆಪಿ-ಎಐಎಡಿಎಂಕೆ ಮೈತ್ರಿ ಮುರಿಯಲು ಕಾರಣವಾಗಿತ್ತು. ಆದರೆ ವರಿಷ್ಠರು ಮತ್ತೆ ಅದೇ ಪಕ್ಷದೊಂದಿಗೆ ಕೈಜೋಡಿಸಿದ್ದು ಅಣ್ಣಾಮಲೈ ಅಸಮಾಧಾನಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
ಬದಲಾದ ತಮಿಳುನಾಡು ರಾಜಕೀಯ
ನಟ ವಿಜಯ್ ಸಿನಿಮಾ ರಂಗ ತೊರೆದು ರಾಜಕೀಯಕ್ಕೆ ಧುಮುಕಿ, ತಮಿಳುನಾಡಿನ ಮುಖ್ಯಮಂತ್ರಿಯಾಗಿ ಉನ್ನತ ಸ್ಥಾನಕ್ಕೇರಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಅಣ್ಣಾಮಲೈ ಆಪ್ತ ಮೂಲಗಳ ಪ್ರಕಾರ, ವಿಜಯ್ ರಾಜಕೀಯ ಶಕ್ತಿಯಾಗಿ ಬೆಳೆದ ಮೇಲೆ ರಾಜ್ಯದ ರಾಜಕೀಯ ಸಮೀಕರಣವೇ ಬದಲಾಗಿದೆ. "ಇಂದು ತಮಿಳುನಾಡಿನಲ್ಲಿ ವಿಜಯ್‌ಗೆ ಟಕ್ಕರ್ ಕೊಡುವಂತಹ ಯಾವುದೇ ಪ್ರಬಲ ನಾಯಕನಿಲ್ಲ. ರಾಜ್ಯದಲ್ಲಿ ದ್ರಾವಿಡ ರಾಜಕಾರಣದ ಯುಗ ಮುಗಿದಿದೆ. ಕೇವಲ ಭಾಷೆಯ ಹೆಸರಿನಲ್ಲಿ ಮಾಡುವ ರಾಜಕೀಯ ಇನ್ನು ಮುಂದೆ ನಡೆಯುವುದಿಲ್ಲ" ಎಂದು ಅಣ್ಣಾಮಲೈ ಭಾವಿಸಿದ್ದಾರೆ ಎನ್ನಲಾಗಿದೆ.
ತಮಿಳುನಾಡಿನ ವಿವಿಧ ಭಾಗಗಳಲ್ಲಿ ಅಂಟಿಸಿರುವ ಕೆ.ಅಣ್ಣಾಮಲೈ ಅವರ ಪೋಸ್ಟರ್
ತಮಿಳುನಾಡು ರಕ್ಷಿಸಿ ಮಧುರೈನಲ್ಲಿ ಪೋಸ್ಟರ್‌ಗಳ ಹಾವಳಿ
ಇತ್ತ ಅಣ್ಣಾಮಲೈ ಅವರ ಹುಟ್ಟುಹಬ್ಬದ ಹೊತ್ತಿಗೇ ಈ ಬೆಳವಣಿಗೆ ನಡೆದಿರುವುದರಿಂದ ಅವರ ಬೆಂಬಲಿಗರು ಮಧುರೈ ಮತ್ತು ಕೊಯಮತ್ತೂರಿನಾದ್ಯಂತ ಬೃಹತ್ ಪೋಸ್ಟರ್‌ಗಳನ್ನು ಹಾಕಿದ್ದಾರೆ. ಅಣ್ಣಾಮಲೈ ಅವರು ತಮ್ಮ ಮುಂದಿನ ಅವತಾರ ಎತ್ತಿ ತಮಿಳುನಾಡನ್ನು ರಕ್ಷಿಸಬೇಕು ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಮುಂದಿನ ಎರಡು ದಿನಗಳಲ್ಲಿ ತಮ್ಮ ರಾಜಕೀಯ ಭವಿಷ್ಯದ ಅಧಿಕೃತ ನಿಲುವನ್ನು ಪ್ರಕಟಿಸುವುದಾಗಿ ಸ್ವತಃ ಅಣ್ಣಾಮಲೈ ಹೇಳಿರುವುದರಿಂದ ತೀವ್ರ ಕುತೂಹಲ ಮೂಡಿದೆ.

