Is Annamalais resignation BJPs Plan-B?
x

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಕೆ. ಅಣ್ಣಾಮಲೈ

ಅಣ್ಣಾಮಲೈ ರಾಜೀನಾಮೆ ಬಿಜೆಪಿ ಪ್ಲಾನ್-Bಯಾ?

1967ರಿಂದ ಡಿಎಂಕೆ ಮತ್ತು ಎಐಎಡಿಎಂಕೆಯಂತಹ ಪ್ರಾದೇಶಿಕ ಅಸ್ಮಿತೆಗಳೇ ಆಳುತ್ತಿರುವ ತಮಿಳುನಾಡಿನಲ್ಲಿ ಹಿಂದೂತ್ವಕ್ಕಿಂತ ಹೆಚ್ಚಾಗಿ ಅಣ್ಣಾಮಲೈ ಎಂಬ ವೈಯಕ್ತಿಕ ನಾಯಕತ್ವವೇ ಯುವಕರನ್ನು ಸೆಳೆದಿತ್ತು.


Click the Play button to hear this message in audio format

ತಮಿಳುನಾಡು ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅಂತಿಮವಾಗಿ ಬಿಜೆಪಿಗೆ ಗುಡ್‌ಬೈ ಹೇಳಿದ್ದಾರೆ. ನಾಲ್ಕು ವರ್ಷಗಳ ಕಾಲ ರಾಜ್ಯದ ಮೂಲೆ ಮೂಲೆಗಳನ್ನು ಸುತ್ತಿರುವ ಅವರು, ತಮಿಳುನಾಡಿನಲ್ಲಿ ಬಿಜೆಪಿಯ ಮತ ಪ್ರಮಾಣವನ್ನು ಶೇ. 3.6ರಿಂದ ಶೇ. 11.2ಕ್ಕೆ ಹೆಚ್ಚಿಸುವ ಮೂಲಕ ಪಕ್ಷದ ಇತಿಹಾಸದಲ್ಲೇ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಆದರೆ, 2026ರ ವಿಧಾನಸಭಾ ಚುನಾವಣೆಯಲ್ಲಿ ಅವರ ಆಕ್ರಮಣಕಾರಿ ಶೈಲಿಯನ್ನು ಬದಿಗೊತ್ತಿ, ಎಐಎಡಿಎಂಕೆ ಮೈತ್ರಿಯೊಂದಿಗೆ ಹಳೇ ತಂತ್ರಕ್ಕೆ ಶರಣಾದ ಹೈಕಮಾಂಡ್ ಲೆಕ್ಕಾಚಾರ ಉಲ್ಟಾ ಹೊಡೆದಿದೆ. ಕೇವಲ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ಬಿಜೆಪಿ ಮತ ಪ್ರಮಾಣ ಶೇ. 3ಕ್ಕಿಂತಲೂ ಕೆಳಗೆ ಕುಸಿದ ಬೆನ್ನಲ್ಲೇ ಈ "ಸೌಹಾರ್ದಯುತ ಬೇರ್ಪಡೆ" ನಡೆದಿದೆ.

ದ್ರಾವಿಡ ದೈತ್ಯರ ನಡುವೆ ಮೂಡಿದ ಭಿನ್ನಾಭಿಪ್ರಾಯ

1967ರಿಂದ ಡಿಎಂಕೆ ಮತ್ತು ಎಐಎಡಿಎಂಕೆಯಂತಹ ಪ್ರಾದೇಶಿಕ ಅಸ್ಮಿತೆಗಳೇ ಆಳುತ್ತಿರುವ ತಮಿಳುನಾಡಿನಲ್ಲಿ ಹಿಂದೂತ್ವಕ್ಕಿಂತ ಹೆಚ್ಚಾಗಿ ಅಣ್ಣಾಮಲೈ ಎಂಬ ವೈಯಕ್ತಿಕ ನಾಯಕತ್ವವೇ ಯುವಕರನ್ನು ಸೆಳೆದಿತ್ತು. ಆದರೆ ದೆಹಲಿ ನಾಯಕರು ಮೈತ್ರಿಗಾಗಿ ಅಣ್ಣಾಮಲೈ ಅವರ ಆಕ್ರಮಣಕಾರಿ ಶೈಲಿಯನ್ನು ನಿಯಂತ್ರಿಸಲು ಮುಂದಾದಾಗ ಬಿರುಕು ಆರಂಭವಾಯಿತು. ಇದರ ನಡುವೆ ಸಿಬಿಎಸ್ಇ ತ್ರಿಭಾಷಾ ನೀತಿಯ "ಹಿಂದಿ ಹೇರಿಕೆ" ವಿವಾದ ಬಂದಾಗ, ಸ್ವಂತ ಪಕ್ಷದ ಕೇಂದ್ರ ಸರ್ಕಾರದ ವಿರುದ್ಧವೇ ಅಣ್ಣಾಮಲೈ ಅಸಮಾಧಾನ ಹೊರಹಾಕಿದ ದಿನವೇ ಅವರ ನಿರ್ಗಮನದ ಮುನ್ಸೂಚನೆ ಸಿಕ್ಕಿತ್ತು.

ಕರ್ನಾಟಕ ಕನೆಕ್ಷನ್ ಮತ್ತು ಮುಂದಿನ ಸವಾಲು

ಉಡುಪಿ, ಚಿಕ್ಕಮಗಳೂರು ಮತ್ತು ಬೆಂಗಳೂರಿನಲ್ಲಿ ಕಠಿಣ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ನಿರರ್ಗಳವಾಗಿ ಕನ್ನಡ ಮಾತನಾಡುವ ಅಣ್ಣಾಮಲೈಗೆ ಕರ್ನಾಟಕದಲ್ಲೂ, ವಿಶೇಷವಾಗಿ ಕರಾವಳಿ ಭಾಗದಲ್ಲಿ ದೊಡ್ಡ ಅಭಿಮಾನಿ ಬಳಗವಿದೆ. ಕಲ್ಲಡ್ಕ ಪ್ರಭಾಕರ್ ಭಟ್ ಸೇರಿದಂತೆ ಸಂಘ ಪರಿವಾರದ ನಾಯಕರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಅವರು ಸದಾ ಕುತೂಹಲದ ಕೇಂದ್ರಬಿಂದು. ಪ್ರಸ್ತುತ ನಟ ವಿಜಯ್ ಅವರ ‘ಟಿವಿಕೆ’ ಪಕ್ಷದ ಯಶಸ್ಸನ್ನು ನೋಡಿದ ವಿಪಕ್ಷಗಳು, ಇದು ಬಿಜೆಪಿಯ "ಪ್ಲಾನ್ ಬಿ" ಇರಬಹುದು, ಅಣ್ಣಾಮಲೈ ಹೊಸ ಪ್ರಾದೇಶಿಕ ಶಕ್ತಿಯಾಗಿ ಮೂಡಿಬರಲಿದ್ದಾರೆ ಎಂದು ಆರೋಪಿಸುತ್ತಿವೆ. ಪಕ್ಷ ಕಟ್ಟುವುದು ಸುಲಭವಲ್ಲದಿದ್ದರೂ, ಕ್ಲೀನ್ ಇಮೇಜ್ ಹೊಂದಿರುವ ಅಣ್ಣಾಮಲೈ ಅವರ ಮುಂದಿನ ಹೆಜ್ಜೆ ತಮಿಳುನಾಡು ರಾಜಕೀಯದ ಅತ್ಯಂತ ರೋಚಕ ಅಧ್ಯಾಯವಾಗುವುದರಲ್ಲಿ ಸಂಶಯವಿಲ್ಲ.

Read More
Next Story