
ಪೊಲೀಸರ ಸಮ್ಮುಖದಲ್ಲಿ ಬಲಭಾಗದಲ್ಲಿರುವ ವ್ಯಕ್ತಿ ಎಡ ಭಾಗದಲ್ಲಿರುವ ಯುವಕನನ್ನು "ಪಾಕಿಸ್ತಾನಿ" ಎಂದು ಕರೆದಿದ್ದಾನೆ ಎಂದು ಆರೋಪಿಸಲಾಗಿದೆ.
'ಪಾಕಿಸ್ತಾನಿ' ನಿಂದನೆ ವಿವಾದ: ತಪ್ಪು ಒಪ್ಪಿ ಕ್ಷಮೆಯಾಚಿಸಿದ ಹೈದರಾಬಾದ್ ಅಪಾರ್ಟ್‌ಮೆಂಟ್ ನಿವಾಸಿಗಳು
ಫ್ಲಾಟ್‌ನಲ್ಲಿ ಸಾಕಲಾಗಿದ್ದ ಸಾಕು ಬೆಕ್ಕಿನಿಂದ ಇತರ ನಿವಾಸಿಗಳಿಗೆ ತೊಂದರೆಯಾಗುತ್ತಿದೆ ಎಂಬ ದೂರು ಇತ್ತು ಎನ್ನಲಾಗಿದೆ. ಈ ಸಣ್ಣ ಗಲಾಟೆ ಅಂತಿಮವಾಗಿ ಯುವಕನ ದೇಶಪ್ರೇಮವನ್ನು ಪ್ರಶ್ನಿಸುವ ಮಟ್ಟಿಗೆ ಗಂಭೀರ ಸ್ವರೂಪ ಪಡೆದುಕೊಂಡಿದೆ.
ತೆಲಂಗಾಣದ ಹೈದರಾಬಾದ್‌ನಲ್ಲಿರುವ ಅಪಾರ್ಟ್‌ಮೆಂಟ್ ಸಂಕೀರ್ಣವೊಂದರಲ್ಲಿ ಭಾರಿ ವಿವಾದವೊಂದು ಭುಗಿಲೆದ್ದಿದೆ. ಪೊಲೀಸರ ಸಮ್ಮುಖದಲ್ಲೇ ಯುವಕನೊಬ್ಬನನ್ನು "ಪಾಕಿಸ್ತಾನಿ" ಮತ್ತು "ಅಕ್ರಮ ನಿವಾಸಿ" ಎಂದು ಕರೆದಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಜವಾಹರ್‌ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಪ್ರಾದಲ್ಲಿರುವ ಅಪಾರ್ಟ್‌ಮೆಂಟ್ ಸಂಕೀರ್ಣದಲ್ಲಿ ಜೂ. 18ರ ಗುರುವಾರ ರಾತ್ರಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಘಟನೆಯ ಹಿನ್ನೆಲೆ ಏನು?
ವರದಿಗಳ ಪ್ರಕಾರ, ಅಪಾರ್ಟ್‌ಮೆಂಟ್‌ನ ಫ್ಲಾಟ್ ಒಂದರಲ್ಲಿ ವೃದ್ಧ ಮಹಿಳೆಯೊಬ್ಬರು ತಮ್ಮ 26 ವರ್ಷದ ಯುವ ಸಂಬಂಧಿಯೊಂದಿಗೆ ವಾಸಿಸುತ್ತಿದ್ದರು. ಬಾಡಿಗೆ ಹಾಗೂ ಅಪಾರ್ಟ್‌ಮೆಂಟ್‌ನ ನಿರ್ವಹಣಾ ಶುಲ್ಕ ಪಾವತಿಸದ ವಿಚಾರವಾಗಿ ಸೊಸೈಟಿ ಸಮಿತಿಯ ಸದಸ್ಯರು ಮತ್ತು ಇತರ ನಿವಾಸಿಗಳು ಯುವಕನೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಇದರೊಂದಿಗೆ, ಫ್ಲಾಟ್‌ನಲ್ಲಿ ಸಾಕಲಾಗಿದ್ದ ಸಾಕು ಬೆಕ್ಕಿನಿಂದ ಇತರ ನಿವಾಸಿಗಳಿಗೆ ತೊಂದರೆಯಾಗುತ್ತಿದೆ ಎಂಬ ದೂರು ಸಹ ಇತ್ತು ಎನ್ನಲಾಗಿದೆ. ಈ ಸಣ್ಣ ಗಲಾಟೆ ಅಂತಿಮವಾಗಿ ಯುವಕನ ದೇಶಪ್ರೇಮ ಮತ್ತು ಗುರುತನ್ನು ಪ್ರಶ್ನಿಸುವ ಮಟ್ಟಿಗೆ ಗಂಭೀರ ಸ್ವರೂಪ ಪಡೆದುಕೊಂಡಿದೆ.
'ನನ್ನ ಅಜ್ಜ ಭಾರತೀಯ ಸೇನೆಯಲ್ಲಿದ್ದರು'
ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಅಪಾರ್ಟ್‌ಮೆಂಟ್ ಕಮಿಟಿ ಸದಸ್ಯನೊಬ್ಬ ಪೊಲೀಸರ ಎದುರೇ ಯುವಕನನ್ನು "ಪಾಕಿಸ್ತಾನಿ" ಎಂದು ಕರೆಯುತ್ತಾನೆ. ಇದಕ್ಕೆ ತೀವ್ರವಾಗಿ ಆಕ್ಷೇಪಿಸುವ ಯುವಕ, "ನೀವು ನನ್ನನ್ನು ಪಾಕಿಸ್ತಾನಿ ಎಂದು ಹೇಗೆ ಕರೆಯುತ್ತೀರಿ? ನಿಮ್ಮ ಬಳಿ ಏನು ಪುರಾವೆ ಇದೆ? ನನ್ನನ್ನು ಹಾಗೆ ಕರೆಯಬೇಡಿ, ನಾನು ಭಾರತೀಯ. ನನ್ನ ಅಜ್ಜ ಭಾರತೀಯ ಸೇನೆಯಲ್ಲಿ ಸುಬೇದಾರ್ ಆಗಿ ದೇಶ ಸೇವೆ ಸಲ್ಲಿಸಿದ್ದರು" ಎಂದು ಆಕ್ರೋಶ ವ್ಯಕ್ತಪಡಿಸುತ್ತಿರುವುದು ಕಂಡುಬಂದಿದೆ. ಆದರೆ, ಸೊಸೈಟಿ ಸದಸ್ಯ ಮಾತ್ರ ಯುವಕನ ಮಾತಿಗೆ ಕಿವಿಗೊಡದೆ, "ಇವನು ಇಲ್ಲಿ ಅಕ್ರಮವಾಗಿ ಉಳಿದುಕೊಂಡಿದ್ದಾನೆ, ಕಾನೂನುಬಾಹಿರ ಚಟುವಟಿಕೆಗಳನ್ನು ಮಾಡುತ್ತಿದ್ದಾನೆ" ಎಂದು ಆರೋಪಿಸಿದ್ದಾನೆ.
ಬಾಂಬ್ ಇಡುವ ಆರೋಪ: ಸಂತ್ರಸ್ತ ಕುಟುಂಬದ ಅಳಲು
ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಹುಡುಗನ ಕುಟುಂಬದ ಮಹಿಳೆಯೊಬ್ಬರು, "ನಾವು ಮುಸ್ಲಿಮರು ಎನ್ನುವ ಒಂದೇ ಕಾರಣಕ್ಕೆ ನಮ್ಮನ್ನು ಪಾಕಿಸ್ತಾನಿಗಳು ಎಂದು ಬ್ರಾಂಡ್ ಮಾಡಲಾಗುತ್ತಿದೆ. ನಾವು ಪಾಕಿಸ್ತಾನದಿಂದ ಬಾಂಬ್ ಇಡಲು ಬಂದಿದ್ದೇವೆ ಎಂದು ಇವರು ಪೊಲೀಸರ ಮುಂದೆಯೇ ಆರೋಪಿಸುತ್ತಿದ್ದಾರೆ. ಆದರೂ ಪೊಲೀಸರು ಮೂಕಪ್ರೇಕ್ಷಕರಾಗಿ ನಿಂತಿದ್ದಾರೆ, ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ" ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಮಧ್ಯಸ್ಥಿಕೆ, ಸುಖಾಂತ್ಯ
ಘಟನೆಗೆ ಸಂಬಂಧಿಸಿದಂತೆ ಜವಾಹರ್‌ನಗರ ಇನ್ಸ್‌ಪೆಕ್ಟರ್ ಎಸ್. ಸೈದುಲು ಅವರು ಮಾಹಿತಿ ನೀಡಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಎರಡೂ ಕಡೆಯವರನ್ನು ಸಮಾಧಾನಪಡಿಸಿದ್ದಾರೆ ಎಂದು ತಿಳಿಸಿದ್ದಾರೆ. ಕೊನೆಗೆ, ಯುವಕನ ವಿರುದ್ಧ ಆಕ್ಷೇಪಾರ್ಹ ನಿಂದನೆ ಮಾಡಿದ್ದ ಅಪಾರ್ಟ್‌ಮೆಂಟ್ ನಿವಾಸಿಗಳು ತಮ್ಮ ತಪ್ಪಿನ ಅರಿವಾಗಿ ಯುವಕ ಹಾಗೂ ಆತನ ಕುಟುಂಬದ ಕ್ಷಮೆಯಾಚಿಸಿದ್ದಾರೆ. ಇತ್ತ ಕುಟುಂಬಸ್ಥರು ಕೂಡ ಅಪಾರ್ಟ್‌ಮೆಂಟ್ ಸೊಸೈಟಿಯ ನಿಯಮಾವಳಿಗಳನ್ನು ಪಾಲಿಸಲು ಒಪ್ಪಿಕೊಂಡಿದ್ದಾರೆ. ಇಬ್ಬರ ನಡುವೆ ಸಂಧಾನ ಏರ್ಪಟ್ಟ ಹಿನ್ನೆಲೆಯಲ್ಲಿ ಯಾವುದೇ ಅಧಿಕೃತ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

