ತಮಿಳುನಾಡು ರಾಜಕೀಯ ಹೈಡ್ರಾಮಾ: ಕೇವಲ 1 ಮತದ ಅಂತರದ ಸೋಲು; ಕೋರ್ಟ್ ಮೆಟ್ಟಿಲೇರಿದ ಡಿಎಂಕೆ ನಾಯಕ!
x
ಡಿಎಂಕೆ ಮಾಜಿ ಸಚಿವ ಕೆ.ಆರ್. ಪೆರಿಯಕರುಪ್ಪನ್ ಮತ್ತು ಟಿವಿಕೆ (TVK) ಶಾಸಕ ಶ್ರೀನಿವಾಸ ಸೇತುಪತಿ

ತಮಿಳುನಾಡು ರಾಜಕೀಯ ಹೈಡ್ರಾಮಾ: ಕೇವಲ 1 ಮತದ ಅಂತರದ ಸೋಲು; ಕೋರ್ಟ್ ಮೆಟ್ಟಿಲೇರಿದ ಡಿಎಂಕೆ ನಾಯಕ!

ತಮಿಳುನಾಡಿನ ತಿರುಪ್ಪತ್ತೂರು ಕ್ಷೇತ್ರದಲ್ಲಿ ಕೇವಲ ಒಂದು ಮತದ ಸೋಲು ಈಗ ಹೈಕೋರ್ಟ್ ಮೆಟ್ಟಿಲೇರಿದೆ. ಮಸ್ಕತ್‌ನಿಂದ ಬಂದ ಮತದಾರ ವಿಜಯ್ ಪಾರ್ಟಿಗೆ ವೋಟ್ ಮಾಡಿದ್ದೇ ಸೋಲಿಗೆ ಕಾರಣವೇ? ಸಂಪೂರ್ಣ ಮಾಹಿತಿ ಇಲ್ಲಿದೆ.


ತಮಿಳುನಾಡು ವಿಧಾನಸಭಾ ಚುನಾವಣೆಯ ಇತಿಹಾಸದಲ್ಲೇ ಅತ್ಯಂತ ರೋಚಕ ಎನ್ನಲಾದ ತಿರುಪ್ಪತ್ತೂರು ಕ್ಷೇತ್ರದ ಫಲಿತಾಂಶ ಈಗ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದೆ. ಕೇವಲ ಒಂದೇ ಒಂದು ಮತದ ಅಂತರದಿಂದ ಟಿವಿಕೆ (TVK) ಅಭ್ಯರ್ಥಿ ಶ್ರೀನಿವಾಸ ಸೇತುಪತಿ ವಿರುದ್ಧ ಸೋತ ಡಿಎಂಕೆ ಮಾಜಿ ಸಚಿವ ಕೆ.ಆರ್. ಪೆರಿಯಕರುಪ್ಪನ್ ಅವರು ಚುನಾವಣಾ ಫಲಿತಾಂಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾರೆ.

ಭಾನುವಾರವೇ ವಿಶೇಷ ವಿಚಾರಣೆ

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವ ಮದ್ರಾಸ್ ಹೈಕೋರ್ಟ್, ಇಂದು (ಭಾನುವಾರ) ವಿಶೇಷ ಕಲಾಪ ನಡೆಸಿ ವಿಚಾರಣೆ ನಡೆಸಲು ಸಮ್ಮತಿಸಿದೆ. ಅರ್ಜಿಯ ಇತ್ಯರ್ಥವಾಗುವವರೆಗೆ ಟಿವಿಕೆ ಶಾಸಕರು ಪ್ರಮಾಣವಚನ ಸ್ವೀಕರಿಸದಂತೆ ಅಥವಾ ಶಾಸಕಾಂಗದ ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸದಂತೆ ತಡೆಯಾಜ್ಞೆ ನೀಡಬೇಕು ಎಂದು ಪೆರಿಯಕರುಪ್ಪನ್ ಕೋರಿದ್ದಾರೆ.

ಮಸ್ಕತ್‌ನಿಂದ ಬಂದು ಚಲಾಯಿಸಿದ ಆ ಒಂದು ಮತವೇ ನಿರ್ಣಾಯಕ?

ಈ ಸೋಲಿಗೆ ಮಸ್ಕತ್‌ನಿಂದ ಬಂದ ಮತದಾರನೊಬ್ಬನ ಕಥೆ ಈಗ ಭಾರಿ ಸದ್ದು ಮಾಡುತ್ತಿದೆ. ಶಿವಗಂಗಾ ಜಿಲ್ಲೆಯ ತಿರುಪ್ಪತ್ತೂರು ಕ್ಷೇತ್ರದ ಮತದಾರ ಮಣಿಕಂಠನ್ ಶಿವಾನಂದಂ ಎಂಬುವವರು, ವಿಜಯ್ ಅವರ 'ಟಿವಿಕೆ' ಪಕ್ಷಕ್ಕೆ ಮತ ಹಾಕಲೆಂದೇ ಮಸ್ಕತ್‌ನಿಂದ ವಿಮಾನವೇರಿ ಬಂದಿದ್ದರು. "ನನ್ನ ಒಂದು ಮತದಿಂದಲೇ ಟಿವಿಕೆ ಅಭ್ಯರ್ಥಿ ಗೆದ್ದಿದ್ದಾರೆ ಎಂಬ ಹೆಮ್ಮೆ ನನಗಿದೆ" ಎಂದು ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಚುನಾವಣಾ ಆಯೋಗದ ಅಂತಿಮ ಅಂಕಿಅಂಶದಂತೆ ಶ್ರೀನಿವಾಸ ಸೇತುಪತಿ 83,375 ಮತಗಳನ್ನು ಪಡೆದರೆ, ಪೆರಿಯಕರುಪ್ಪನ್ ಕೇವಲ ಒಂದು ಮತದ ಕೊರತೆಯಿಂದ ಸೋಲೊಪ್ಪಿದ್ದಾರೆ.

ತಮಿಳುನಾಡಿನಲ್ಲಿ ಟಿವಿಕೆ ಸುನಾಮಿ: ಸ್ಟಾಲಿನ್‌ಗೆ ಸೋಲು!

2024ರ ಫೆಬ್ರವರಿಯಲ್ಲಿ ಅಸ್ತಿತ್ವಕ್ಕೆ ಬಂದ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK), ದಶಕಗಳ ಕಾಲದ ಡಿಎಂಕೆ-ಎಐಎಡಿಎಂಕೆ ಭದ್ರಕೋಟೆಯನ್ನು ಧೂಳೀಪಟ ಮಾಡಿದೆ. ಕೊಳತ್ತೂರು ಕ್ಷೇತ್ರದಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಟಿವಿಕೆ ಅಭ್ಯರ್ಥಿ ವಿ.ಎಸ್. ಬಾಬು ವಿರುದ್ಧ ಪರಾಭವಗೊಂಡಿದ್ದಾರೆ.

ಗೀತಾ ಜೀವನ್, ಮಾ. ಸುಬ್ರಮಣಿಯನ್ ಸೇರಿದಂತೆ 10ಕ್ಕೂ ಹೆಚ್ಚು ಪ್ರಭಾವಿ ಸಚಿವರು ಈ ಅಲೆಯಲ್ಲಿ ಸೋತಿದ್ದಾರೆ. ಟಿವಿಕೆ 108 ಸ್ಥಾನ ಗೆದ್ದರೆ, ಡಿಎಂಕೆ 59 ಮತ್ತು ಎಐಎಡಿಎಂಕೆ ಮೈತ್ರಿಕೂಟ 47 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿವೆ.

ಇಂದು ವಿಜಯ್ ಪ್ರಮಾಣವಚನ

ಕೋರ್ಟ್ ಕದನ ನಡೆಯುತ್ತಿದ್ದರೂ, ವಿಜಯ್ ಅವರು ಇಂದು ಬೆಳಿಗ್ಗೆ 10 ಗಂಟೆಗೆ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಕಾಂಗ್ರೆಸ್, ಸಿಪಿಐ, ಸಿಪಿಐ(ಎಂ), ವಿಸಿಕೆ ಮತ್ತು ಐಯುಎಂಎಲ್ ಪಕ್ಷಗಳ ಬೆಂಬಲದೊಂದಿಗೆ 120 ಶಾಸಕರ ಬಲ ಹೊಂದಿರುವ ವಿಜಯ್, ಸುಮಾರು 60 ವರ್ಷಗಳ ನಂತರ ತಮಿಳುನಾಡಿನ ಮೊದಲ ದ್ರಾವಿಡೇತರ ಮುಖ್ಯಮಂತ್ರಿಯಾಗಿ ಇತಿಹಾಸ ನಿರ್ಮಿಸಲಿದ್ದಾರೆ. ಆದರೆ, ಮೈತ್ರಿ ಪಕ್ಷಗಳು ಉಪಮುಖ್ಯಮಂತ್ರಿ ಸ್ಥಾನ ಮತ್ತು ಪ್ರಮುಖ ಖಾತೆಗಳಿಗಾಗಿ ಪಟ್ಟು ಹಿಡಿದಿರುವುದು ಸಂಪುಟ ರಚನೆಯಲ್ಲಿ ಕುತೂಹಲ ಮೂಡಿಸಿದೆ.

Read More
Next Story