ಕೇರಳದಲ್ಲಿ ಇಡಿ ವಾಹನದ ಧ್ವಂಸ- ಪಿಣರಾಯ್‌ ವಿಜಯನ್‌ ಬೆಂಬಲಿಗರಿಂದ ಉಗ್ರ ಪ್ರತಿಭಟನೆ
x

ಪಿಣರಾಯಿ ವಿಜಯನ್ ಹಾಗೂ ಅವರ ಕುಟುಂಬ ಸದಸ್ಯರ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ಶೋಧ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಕೇರಳದಲ್ಲಿ ಭಾರಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.

ಕೇರಳದಲ್ಲಿ ಇಡಿ ವಾಹನದ ಧ್ವಂಸ- ಪಿಣರಾಯ್‌ ವಿಜಯನ್‌ ಬೆಂಬಲಿಗರಿಂದ ಉಗ್ರ ಪ್ರತಿಭಟನೆ

ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸ ಹಾಗೂ ಕಣ್ಣೂರಿನ ಮನೆ ಸೇರಿ 10 ಕಡೆ ಇಡಿ ದಾಳಿ ನಡೆಸಿದೆ. ಎಕ್ಸಾಲಾಜಿಕ್ ಸೊಲ್ಯೂಷನ್ಸ್ ಮತ್ತು CMRL ಪೇ-ಆಫ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದಿರುವ ಈ ದಾಳಿ ವೇಳೆ ಸಿಪಿಐ(ಎಂ) ಕಾರ್ಯಕರ್ತರು ಇಡಿ ಅಧಿಕಾರಿಗಳ ವಾಹನ ಜಖಂಗೊಳಿಸಿದ್ದು, ಕೇರಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.


Click the Play button to hear this message in audio format

ಮಾಜಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಅವರ ಕುಟುಂಬ ಸದಸ್ಯರ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ಶೋಧ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಕೇರಳದಲ್ಲಿ ಭಾರಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಪ್ರತಿಭಟನೆ ನಡೆಸಿದ ಸಿಪಿಐ(ಎಂ) ಕಾರ್ಯಕರ್ತರು ಇಡಿ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ವಾಹನವನ್ನು ತಡೆದು ಹಾನಿಗೊಳಿಸಿರುವ ಘಟನೆ ತಿರುವನಂತಪುರಂನಲ್ಲಿ ನಡೆದಿದೆ.

ಮಾಹಿತಿಯ ಪ್ರಕಾರ, ಶೋಧ ಕಾರ್ಯ ಮುಗಿಸಿ ಅಧಿಕಾರಿಗಳು ಸ್ಥಳದಿಂದ ತೆರಳಲು ಪ್ರಯತ್ನಿಸುತ್ತಿದ್ದ ವೇಳೆ ಪ್ರತಿಭಟನಾಕಾರರು ವಾಹನವನ್ನು ತಡೆದಿದ್ದಾರೆ. ವಾಹನದಲ್ಲಿದ್ದ ಮಹಿಳಾ ಅಧಿಕಾರಿಗಳ ಸಮ್ಮುಖದಲ್ಲೇ ಕೆಲ ಪ್ರತಿಭಟನಾಕಾರರು ಕಲ್ಲು, ರಾಡ್‌ಗಳಿಂದ ವಾಹನದ ಗಾಜು ಒಡೆದಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ವಾಹನ ಚಾಲಕರೊಬ್ಬರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳದಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಮತ್ತು ಕೇಂದ್ರ ಭದ್ರತಾ ಸಿಬ್ಬಂದಿ ಸಾಕಷ್ಟು ಹರಸಾಹಸಪಟ್ಟಿದ್ದಾರೆ. ಬೆಳಗ್ಗಿನಿಂದಲೇ ರಾಜ್ಯದ ಹಲವು ಭಾಗಗಳಲ್ಲಿ ಪ್ರತಿಭಟನೆಗಳು ನಡೆದಿದ್ದು, ದೊಡ್ಡ ಸಂಖ್ಯೆಯಲ್ಲಿ ಸಿಪಿಐ(ಎಂ) ಕಾರ್ಯಕರ್ತರು ಬೀದಿಗಿಳಿದಿದ್ದರು.

ಇಡಿ ಕೇರಳದ ಒಟ್ಟು 10 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ. ಇದರಲ್ಲಿ ತಿರುವನಂತಪುರಂನಲ್ಲಿರುವ ಪಿಣರಾಯಿ ವಿಜಯನ್ ಅವರ ನಿವಾಸ, ಕಣ್ಣೂರಿನಲ್ಲಿರುವ ಅವರ ಮೂಲ ಮನೆ ಹಾಗೂ ಮಾಜಿ ಸಚಿವ ಪಿ.ಎ ಮೊಹಮ್ಮದ್‌ ಅವರ ಕೋಯಿಕೋಡ್ ನಿವಾಸವೂ ಸೇರಿದೆ.

ಶೋಧ ಕಾರ್ಯ ಆರಂಭವಾದ ಬಳಿಕ ಪಿಣರಾಯಿ ವಿಜಯನ್ ಮತ್ತು ಕುಟುಂಬ ಸದಸ್ಯರು ನಿವಾಸದಲ್ಲಿಯೇ ಇದ್ದರು. ಈ ವೇಳೆ ನೂರಾರು ಸಿಪಿಐ(ಎಂ) ಬೆಂಬಲಿಗರು ಹೊರಭಾಗದಲ್ಲಿ ಪ್ರತಿಭಟನೆ ನಡೆಸಿದರು. ಗಲಾಟೆಯ ಸಂದರ್ಭದಲ್ಲಿ ಕೆಲ ಪ್ರತಿಭಟನಾಕಾರರು ಭದ್ರತಾ ಸಿಬ್ಬಂದಿಯತ್ತ ಪ್ಲಾಸ್ಟಿಕ್ ಬಾಟಲಿಗಳು, ಹೆಲ್ಮೆಟ್‌ಗಳು ಮತ್ತು ಕಲ್ಲುಗಳನ್ನು ಎಸೆದಿದ್ದಾರೆ ಎನ್ನಲಾಗಿದೆ.

ನಂತರ ಪಕ್ಷದ ಹಿರಿಯ ನಾಯಕರು ಮಧ್ಯಪ್ರವೇಶಿಸಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪ್ರಯತ್ನಿಸಿದರು.

CMRL ಪೇ-ಆಫ್ ಪ್ರಕರಣ ಏನು?

ಈ ಹಣ ಅಕ್ರಮ ವರ್ಗಾವಣೆ ಪ್ರಕರಣವು ಎಕ್ಸಾಲಾಜಿಕ್‌ ಸೊಲ್ಯೂಶನ್ಸ್‌ ಮತ್ತು Cochin Minerals and Rutile Ltd (CMRL) ನಡುವಿನ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ್ದಾಗಿದೆ. ತನಿಖಾ ಸಂಸ್ಥೆಗಳ ಮುಖ್ಯ ಆರೋಪದ ಪ್ರಕಾರ, ಕೇರಳ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ಟಿ. ವೀಣಾ ವಿಜಯನ್ ಅವರಿಗೆ ಸೇರಿದ 'ಎಕ್ಸಾಲಾಜಿಕ್ ಸೊಲ್ಯೂಷನ್ಸ್' ಸಂಸ್ಥೆಗೆ ಹಲವು ವರ್ಷಗಳ ಅವಧಿಯಲ್ಲಿ ಸುಮಾರು 2.7 ಕೋಟಿ ರೂ. ಪಾವತಿಸಲಾಗಿದ್ದು, ಈ ಪೈಕಿ 2018-19ರ ಅವಧಿಯಲ್ಲೇ CMRL ಸಂಸ್ಥೆಯು 1.72 ಕೋಟಿ ರೂ. ಮೊತ್ತವನ್ನು ವರ್ಗಾವಣೆ ಮಾಡಿತ್ತು. ಆದರೆ, ಈ ಭಾರಿ ಮೊತ್ತಕ್ಕೆ ತಕ್ಕಂತೆ ಎಕ್ಸಾಲಾಜಿಕ್ ಸಂಸ್ಥೆಯಿಂದ ಯಾವುದೇ ಸೇವೆಗಳನ್ನು ನೀಡಲಾಗಿಲ್ಲ ಎಂಬ ಬಲವಾದ ಅನುಮಾನವನ್ನು ಜಾರಿ ನಿರ್ದೇಶನಾಲಯ (ಇಡಿ) ವ್ಯಕ್ತಪಡಿಸಿದ್ದು, ಈ ಪಾವತಿಯು ರಾಜಕೀಯ ಪ್ರಭಾವ ಅಥವಾ ಅಕ್ರಮ ಲಾಭಕ್ಕೆ ಸಂಬಂಧಿಸಿದ್ದೇ ಎಂಬುದರ ಕುರಿತು ಸದ್ಯ ತೀವ್ರ ತನಿಖೆ ನಡೆಸುತ್ತಿದೆ.

ಆದರೆ ಸಿಪಿಐ(ಎಂ) ನಾಯಕತ್ವ ಈ ದಾಳಿಗಳನ್ನು ರಾಜಕೀಯ ಪ್ರೇರಿತ ಎಂದು ಆರೋಪಿಸಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಎಂ.ಎ ಬೇಬಿ, ಇಡಿ ಕ್ರಮವನ್ನು ಗಂಭೀರ ರಾಜಕೀಯ ದಾಳಿ" ಎಂದು ಟೀಕಿಸಿದ್ದಾರೆ.

ಈ ಆರೋಪಗಳನ್ನು ಪಿಣರಾಯಿ ವಿಜಯನ್ ಈ ಹಿಂದೆಯೂ ತಳ್ಳಿಹಾಕಿದ್ದು, ತಮ್ಮ ಕುಟುಂಬದ ವಿರುದ್ಧದ ಆರೋಪಗಳು ತಮ್ಮ ರಾಜಕೀಯ ಇಮೇಜ್‌ಗೆ ಧಕ್ಕೆ ತರುವ ಪ್ರಯತ್ನ ಎಂದು ಹೇಳಿದ್ದರು.

Read More
Next Story