
ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯ್ ಹಾಗೂ ಪುತ್ರಿ ಟಿ. ವೀಣಾ
ಕೇರಳ ಮಾಜಿ ಸಿಎಂ ಪುತ್ರಿ ಟಿ. ವೀಣಾಗೆ ಇಡಿ ಬಿಗ್ ಶಾಕ್; ಜೂ. 12ಕ್ಕೆ ವಿಚಾರಣೆಗೆ ಹಾಜರಾಗಲು ಸಮನ್ಸ್
ಐಟಿ ಸಲಹಾ ಸೇವೆಗಳನ್ನು ಒದಗಿಸುವ ನೆಪದಲ್ಲಿ ಸಿಎಂಆರ್‌ಎಲ್ ಕಂಪನಿಯು ವೀಣಾ ಅವರ ಎಕ್ಸಲಾಜಿಕ್ ಸೊಲ್ಯೂಷನ್ಸ್‌ಗೆ 2.78 ಕೋಟಿ ರೂ.ಗಳಷ್ಟು ನಕಲಿ ಹಾಗೂ ಅಕ್ರಮ ಪಾವತಿಗಳನ್ನು ಮಾಡಿದೆ ಎಂದು ಇಡಿ ಆರೋಪಿಸಿದೆ.
ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ಟಿ. ವೀಣಾ ಅವರಿಗೆ ಜಾರಿ ನಿರ್ದೇಶನಾಲಯ (ED) ಬಿಗ್ ಶಾಕ್ ನೀಡಿದೆ. ಕೊಚ್ಚಿಯಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿದ್ದಾರೆ.
ಜೂ. 12 ರಂದು ಕೊಚ್ಚಿಯಲ್ಲಿರುವ ಕೇಂದ್ರ ತನಿಖಾ ಸಂಸ್ಥೆಯ ವಲಯ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದ್ದು, ಅವರು ಹಾಜರಾದ ನಂತರ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಇತರ ಕೆಲವು ಪ್ರಮುಖ ವ್ಯಕ್ತಿಗಳಿಗೂ ಸಮನ್ಸ್ ನೀಡಿದೆ ಎಂದು ತಿಳಿದುಬಂದಿದೆ.
ಏನಿದು ಸಿಎಂಆರ್‌ಎಲ್ ಹಗರಣ?
ಕೇರಳ ಮೂಲದ ಮರಳು ಗಣಿಗಾರಿಕೆ ಕಂಪನಿಯಾದ 'ಕೊಚ್ಚಿನ್ ಮಿನರಲ್ಸ್ ಅಂಡ್ ರೂಟೈಲ್ ಲಿಮಿಟೆಡ್' (CMRL) ಮತ್ತು ಟಿ. ವೀಣಾ ಒಡೆತನದ, ಸದ್ಯ ಮುಚ್ಚಲ್ಪಟ್ಟಿರುವ 'ಎಕ್ಸಲಾಜಿಕ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್' ಐಟಿ ಕಂಪನಿ ನಡುವೆ ನಡೆದಿರುವ ಅಕ್ರಮ ಹಣ ವರ್ಗಾವಣೆ ಕುರಿತು ಇಡಿ ತನಿಖೆ ನಡೆಸುತ್ತಿದೆ. ಕಳೆದ ತಿಂಗಳಷ್ಟೇ ತಿರುವನಂತಪುರಂನಲ್ಲಿರುವ ಪಿಣರಾಯಿ ವಿಜಯನ್ ಅವರ ಬಾಡಿಗೆ ನಿವಾಸದಲ್ಲಿ ವಾಸವಿದ್ದ ವೀಣಾ ಅವರ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು.
ತನಿಖಾ ಸಂಸ್ಥೆಯ ಮುಖ್ಯ ಆರೋಪಗಳು
ಐಟಿ ಸಲಹಾ ಸೇವೆಗಳನ್ನು ಒದಗಿಸುವ ನೆಪದಲ್ಲಿ ಸಿಎಂಆರ್‌ಎಲ್ ಕಂಪನಿಯು ವೀಣಾ ಅವರ ಎಕ್ಸಲಾಜಿಕ್ ಸೊಲ್ಯೂಷನ್ಸ್‌ಗೆ 2.78 ಕೋಟಿ ರೂ.ಗಳಷ್ಟು ನಕಲಿ ಹಾಗೂ ಅಕ್ರಮ ಪಾವತಿಗಳನ್ನು ಮಾಡಿದೆ ಎಂದು ಇಡಿ ಆರೋಪಿಸಿದೆ.
ಸಿಎಂಆರ್‌ಎಲ್ ವ್ಯವಸ್ಥಾಪಕ ನಿರ್ದೇಶಕ ಶಶಿಧರನ್ ಕರ್ತಾ ಅವರು ನಡೆಸುತ್ತಿರುವ 'ಎಂಪವರ್ ಇಂಡಿಯಾ ಕ್ಯಾಪಿಟಲ್ ಇನ್ವೆಸ್ಟ್‌ಮೆಂಟ್ ಪ್ರೈವೇಟ್ ಲಿಮಿಟೆಡ್' (EICPL) ಕಂಪನಿಯು, ಎಕ್ಸಲಾಜಿಕ್ ಸಂಸ್ಥೆಗೆ 50 ಲಕ್ಷ ರೂಪಾಯಿಗಳ ಸಾಲ ನೀಡಿತ್ತು. ಎಕ್ಸಲಾಜಿಕ್ ಸಂಸ್ಥೆಯು ಈ ಹಿಂದಿನ ಹಣವನ್ನು ಸಕಾಲದಲ್ಲಿ ಮರುಪಾವತಿ ಮಾಡಲು ವಿಫಲವಾಗಿದ್ದರೂ ಈ ಹೆಚ್ಚುವರಿ ಸಾಲ ನೀಡಲಾಗಿದೆ. ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ಸಿಎಂಆರ್‌ಎಲ್ ವ್ಯವಸ್ಥಾಪಕ ಮಂಡಳಿ ಮತ್ತು ವೀಣಾ ಅವರು ಶಾಮೀಲಾಗಿ ಕಾನೂನುಬಾಹಿರವಾಗಿ "ಅಪರಾಧದ ಆದಾಯ"ವನ್ನು ಸೃಷ್ಟಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯದ ಮೂಲಗಳು ತಿಳಿಸಿವೆ. ಜೂ. 12ರ ವಿಚಾರಣೆಯು ಈ ಹಗರಣದ ತನಿಖೆಯಲ್ಲಿ ಅತ್ಯಂತ ನಿರ್ಣಾಯಕ ಎನಿಸಿಕೊಂಡಿದೆ.

