ಕರ್ನಾಟಕ-ಕೇರಳ ಸಹೋದರರಂತೆ: ಪುನ್ನಮಾಡ ಲೇಕ್‌ನಲ್ಲಿ ಡಿಕೆಶಿ ಸೌಹಾರ್ದತೆ ಸಂದೇಶ
x

ಕರ್ನಾಟಕ-ಕೇರಳ ಸಹೋದರರಂತೆ: ಪುನ್ನಮಾಡ ಲೇಕ್‌ನಲ್ಲಿ ಡಿಕೆಶಿ ಸೌಹಾರ್ದತೆ ಸಂದೇಶ

ಕೇರಳಂನ ಪುನ್ನಮಾಡ ಲೇಕ್‌ನಲ್ಲಿ ನಡೆದ 72ನೇ ನೆಹರೂ ಟ್ರೋಫಿ ಬೋಟ್ ಸ್ಪರ್ಧೆಯು ದೋಣಿಗಳ ಸದ್ದು, ಹುಟ್ಟುಗಳ ಲಯಬದ್ಧ ಚಲನೆ ಮತ್ತು ಸಾವಿರಾರು ಜನರ ಉತ್ಸಾಹ ಕ್ರೀಡಾಂಗಣವನ್ನು ರೋಮಾಂಚನಗೊಳಿಸಿತು.


Click the Play button to hear this message in audio format

ಕೇರಳಂ ರಾಜ್ಯದ ಸಾಂಸ್ಕೃತಿಕ ಹಿರಿಮೆಯ ಸಂಕೇತವಾದ ಆಲಪ್ಪುಳದ ಪುನ್ನಮಾಡ ಲೇಕ್‌ನಲ್ಲಿ ನಡೆದ 72ನೇ ಆವೃತ್ತಿಯ ಪ್ರತಿಷ್ಠಿತ ನೆಹರೂ ಟ್ರೋಫಿ ಬೋಟ್ ಸ್ಪರ್ಧೆಯು ಕೇವಲ ಜಲಕ್ರೀಡೆಯಾಗಿ ಮಾತ್ರವಲ್ಲದೆ, ಕರ್ನಾಟಕ ಮತ್ತು ಕೇರಳಂ ರಾಜ್ಯಗಳ ನಡುವಿನ ಭಾವನಾತ್ಮಕ ಮತ್ತು ರಾಜಕೀಯ ಮೈತ್ರಿಯ ವೇದಿಕೆಯಾಗಿ ಮಾರ್ಪಟ್ಟಿತು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿ, ಎರಡೂ ರಾಜ್ಯಗಳ ನಡುವಿನ ಅವಿನಾಭಾವ ಸಂಬಂಧವನ್ನು ಗಟ್ಟಿಗೊಳಿಸುವ ಭರವಸೆಯನ್ನು ನೀಡಿದರು.

ಕೇರಳಂ ಮುಖ್ಯಮಂತ್ರಿ ವಿ.ಡಿ. ಸತೀಶನ್, ಗೃಹ ಸಚಿವ ರಮೇಶ್ ಚೆನ್ನಿತಲ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ರಾಜ್ಯದ ಮುಖ್ಯಮಂತ್ರಿ ಸಲಹೆಗಾರ ಜಿ.ಸಿ. ಚಂದ್ರಶೇಖರ್ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು. ಇವರೆಲ್ಲರ ಸಮ್ಮುಖದಲ್ಲಿ ಪುನ್ನಮಾಡ ಲೇಕ್‌ನ ಜಲರಾಶಿಯಲ್ಲಿ ನಡೆದ ದೋಣಿ ಸ್ಪರ್ಧೆಯು ಕಣ್ಮನ ಸೆಳೆಯಿತು.

ಸಹೋದರತ್ವದ ಸಂದೇಶ ಸಾರಿದ ಡಿ.ಕೆ. ಶಿವಕುಮಾರ್

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಿ.ಕೆ. ಶಿವಕುಮಾರ್, "ಕರ್ನಾಟಕ ಮತ್ತು ಕೇರಳ ರಾಜ್ಯಗಳು ಅಣ್ಣ-ತಮ್ಮಂದಿರಂತೆ. ಭೌಗೋಳಿಕ ಗಡಿಗಳು ಬೇರೆಯಾಗಿದ್ದರೂ, ನಮ್ಮ ಸಂಸ್ಕೃತಿ, ಹವಾಮಾನ ಮತ್ತು ಜೀವನ ಪದ್ಧತಿ ಒಂದೇ. ಪರಸ್ಪರ ಸಹಕಾರದೊಂದಿಗೆ ಎರಡೂ ರಾಜ್ಯಗಳು ಅಭಿವೃದ್ಧಿಯ ಪಥದಲ್ಲಿ ಸಾಗಲಿವೆ" ಎಂದು ಕರೆ ನೀಡಿದರು. ಮಾಜಿ ಪ್ರಧಾನಿ ದಿವಂಗತ ಜವಾಹರ್ ಲಾಲ್ ನೆಹರೂ ಅವರನ್ನು ಸ್ಮರಿಸಿ, ಈ ಕ್ರೀಡೆಗೆ ರಾಷ್ಟ್ರಮಟ್ಟದ ಮನ್ನಣೆ ದೊರಕಿಸಿಕೊಟ್ಟ ಅವರ ದೂರದೃಷ್ಟಿಯನ್ನು ಶ್ಲಾಘಿಸಿದರು. "ಕರ್ನಾಟಕದಲ್ಲಿ ಮೈಸೂರು ದಸರಾವನ್ನು ಹೇಗೆ ಅದ್ದೂರಿಯಾಗಿ ಆಚರಿಸಲಾಗುತ್ತದೋ, ಕೇರಳದಲ್ಲಿ ನೆಹರೂ ಟ್ರೋಫಿ ಬೋಟ್ ರೇಸ್ ಅದೇ ರೀತಿಯ ಸಂಭ್ರಮ ಮತ್ತು ಸಂಸ್ಕೃತಿಯ ಪ್ರತೀಕವಾಗಿದೆ" ಎಂದು ಅಭಿಪ್ರಾಯಪಟ್ಟರು.

ರಾಜಕೀಯ ನಂಟು

ಮಾಜಿ ಪ್ರಧಾನಿ ದಿವಂಗತರಾದ ಇಂದಿರಾ ಗಾಂಧಿ ಮತ್ತು ಕಾಂಗ್ರೆಸ್‌ ವರಿಷ್ಠ ಸೋನಿಯಾ ಗಾಂಧಿ ಅವರು ಸಂಸತ್ತಿಗೆ ಪ್ರವೇಶಿಸಲು ಕರ್ನಾಟಕದ ನೆಲ ವೇದಿಕೆಯಾಗಿತ್ತು. ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಅವರಿಗೆ ಸಂಸತ್ತಿನ ಹಾದಿಯನ್ನು ಸುಗಮಗೊಳಿಸುವಲ್ಲಿ ಕೇರಳಂ ಜನತೆಯ ಕೊಡುಗೆ ಅಪಾರ ಎಂದು ನೆನಪಿಸಿಕೊಂಡರು. ಭಾರತ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಇದೇ ಪುನ್ನಮಾಡ ಲೇಕ್‌ನಲ್ಲಿ ದೋಣಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದನ್ನು ಅವರು ಮೆಲುಕು ಹಾಕಿದರು.

ಕಾಂಗ್ರೆಸ್‌ನ ಬದ್ಧತೆ ಮತ್ತು ಒಗ್ಗಟ್ಟಿನ ಮಂತ್ರ

ಸತೀಶನ್ ಅವರ ನೇತೃತ್ವದ ವಿರೋಧ ಪಕ್ಷದ ಕಾರ್ಯವೈಖರಿಯನ್ನು ಶ್ಲಾಘಿಸಿದ ಶಿವಕುಮಾರ್, ಕಾಂಗ್ರೆಸ್ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಪಕ್ಷ. ಯುಡಿಎಫ್ ಮೈತ್ರಿಕೂಟದ ನಾಯಕರು ರಾಜ್ಯದ ಕಲ್ಯಾಣಕ್ಕಾಗಿ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿ ಹೊರಹೊಮ್ಮುತ್ತಿದೆ ಎಂಬ ಸಂದೇಶವನ್ನು ಈ ಕಾರ್ಯಕ್ರಮ ನೀಡಿದೆ ಎಂದರು. ಪುನ್ನಮಾಡ ಲೇಕ್‌ನಲ್ಲಿ ದೋಣಿಗಳ ಸದ್ದು, ಹುಟ್ಟುಗಳ ಲಯಬದ್ಧ ಚಲನೆ ಮತ್ತು ಸಾವಿರಾರು ಜನರ ಉತ್ಸಾಹ ಕ್ರೀಡಾಂಗಣವನ್ನು ರೋಮಾಂಚನಗೊಳಿಸಿತು. ಕೇರಳದ ಈ ಸಾಂಪ್ರದಾಯಿಕ ದೋಣಿ ಸ್ಪರ್ಧೆಯು ಪ್ರವಾಸಿಗರನ್ನು ಆಕರ್ಷಿಸುವುದರ ಜೊತೆಗೆ ಸ್ಥಳೀಯರ ಸಾಂಸ್ಕೃತಿಕ ಹೆಮ್ಮೆಯನ್ನು ಎತ್ತಿ ಹಿಡಿಯಿತು.

Read More
Next Story