
ನಾನೊಬ್ಬ ಸಾಮಾನ್ಯ ಸೇವಕ, ತಪ್ಪು ಮಾಡಲಾರೆ: ಸಿನಿಮಾ ಸ್ಟೈಲ್‌ನಲ್ಲೇ ವಿಜಯ್ ಪ್ರಮಾಣ ವಚನ
ತಮಿಳುನಾಡು ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ವಿಜಯ್ ಅವರ ಚೊಚ್ಚಲ ಭಾಷಣದ ಹೈಲೈಟ್ಸ್ ಇಲ್ಲಿದೆ. ಮಹಿಳಾ ಸುರಕ್ಷತೆ, ಡ್ರಗ್ಸ್ ಮುಕ್ತ ತಮಿಳುನಾಡು ಹಾಗೂ ಪಾರದರ್ಶಕ ಆಡಳಿತದ ಬಗ್ಗೆ ವಿಜಯ್ ನೀಡಿದ ಭರವಸೆಗಳೇನು?
ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಬೆನ್ನಲ್ಲೇ 'ದಳಪತಿ' ವಿಜಯ್ ಅವರು ರಾಜ್ಯದ ಜನತೆಯನ್ನು ಉದ್ದೇಶಿಸಿ ಭಾಷಣ ಮಾಡಿದರು. "ನನ್ನ ಮೇಲೆ ಭಾರಿ ಜವಾಬ್ದಾರಿ ಹೊರಿಸಿದ್ದೀರಿ, ನಾನು ಎಂದಿಗೂ ತಪ್ಪು ಮಾಡಲಾರೆ ಮತ್ತು ನಿಮ್ಮ ನಂಬಿಕೆಯನ್ನು ಹುಸಿಗೊಳಿಸುವುದಿಲ್ಲ" ಎಂದು ಅವರು ಭರವಸೆ ನೀಡಿದರು.
ಪಾರದರ್ಶಕ ಆಡಳಿತದ ವಾಗ್ದಾನ
ತಮ್ಮ ಚೊಚ್ಚಲ ಭಾಷಣದಲ್ಲಿ ವಿಜಯ್ ಪಾರದರ್ಶಕತೆ ಮತ್ತು ಜವಾಬ್ದಾರಿಯುತ ಆಡಳಿತಕ್ಕೆ ಹೆಚ್ಚಿನ ಒತ್ತು ನೀಡಿದರು."ನಮ್ಮದು ಮುಕ್ತ ಮತ್ತು ಪ್ರಾಮಾಣಿಕ ಸರ್ಕಾರವಾಗಿರಲಿದೆ. ನಾನು ಯಾವುದನ್ನೂ ಜನರಿಂದ ಮುಚ್ಚಿಡುವುದಿಲ್ಲ ಅಥವಾ ಯಾವುದಕ್ಕೂ ಹಿಂಜರಿಯುವುದಿಲ್ಲ. ರಹಸ್ಯ ಆಡಳಿತಕ್ಕಿಂತ ಜನರೊಂದಿಗೆ ನೇರ ಸಂವಾದ ನಡೆಸುವ ಸರ್ಕಾರ ನಮ್ಮದಾಗಲಿದೆ” ಎಂಬ ಆಶಯ ವ್ಯಕ್ತಪಡಿಸಿದರು.
ಮಹಿಳಾ ಸುರಕ್ಷತೆ ಮತ್ತು ಮಾದಕದ್ರವ್ಯ ಮುಕ್ತ ತಮಿಳುನಾಡು
ತಮ್ಮ ಸರ್ಕಾರದ ಆದ್ಯತೆಗಳನ್ನು ಪಟ್ಟಿ ಮಾಡಿದ ಸಿಎಂ ವಿಜಯ್, ಎರಡು ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿದರು. “ರಾಜ್ಯದಲ್ಲಿ ಮಹಿಳೆಯರ ರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗುವುದು, ಮಾದಕ ದ್ರವ್ಯ ಮಾರಾಟವನ್ನು ತಡೆಗಟ್ಟಲು ನಾನು ಇಂದಿನಿಂದಲೇ ಕ್ರಮ ಕೈಗೊಳ್ಳಲಿದ್ದೇನೆ," ಎಂದು ಹೇಳಿದಾಗ ಅಭಿಮಾನಿಗಳಿಂದ ಭಾರಿ ಹರ್ಷೋದ್ಗಾರ ಕೇಳಿಬಂದಿತು.
"8 ಕೋಟಿ ಜನರೂ ನನ್ನವರೇ"
ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮರೆತು ಎಲ್ಲರನ್ನೂ ಒಳಗೊಳ್ಳುವ ಮಾತುಗಳನ್ನು ವಿಜಯ್ ಆಡಿದರು. "ನೀವು ನನ್ನ ಸ್ನೇಹಿತರಾಗಿರಲಿ ಅಥವಾ ಶತ್ರುಗಳಾಗಿರಲಿ, ತಮಿಳುನಾಡಿನ ಎಲ್ಲಾ 8 ಕೋಟಿ ಜನರೂ ನನ್ನವರೇ. ರೈತರು, ಮೀನುಗಾರರು ಮತ್ತು ಎಲ್ಲಾ ಸಮುದಾಯಗಳ ಹಿತಾಸಕ್ತಿಯನ್ನು ನಮ್ಮ ಟಿವಿಕೆ (TVK) ಸರ್ಕಾರ ರಕ್ಷಿಸಲಿದೆ," ಎಂದರು.
ಅಪಮಾನ ಮತ್ತು ಸವಾಲುಗಳ ನೆನಪು
ತಮ್ಮ ರಾಜಕೀಯ ಪಯಣದಲ್ಲಿ ಎದುರಿಸಿದ ಕಷ್ಟಗಳನ್ನು ನೆನಪಿಸಿಕೊಂಡ ವಿಜಯ್ ಭಾವುಕರಾದರು. "ನನ್ನ ಹಾದಿಯಲ್ಲಿ ಸಾಕಷ್ಟು ಸಮಸ್ಯೆಗಳು ಮತ್ತು ಅಪಮಾನಗಳನ್ನು ಎದುರಿಸಿದ್ದೇನೆ. ಆದರೆ ನೀವು ಆ ಅಪಮಾನಗಳನ್ನು ನಿಮ್ಮದೇ ಎಂದು ಭಾವಿಸಿ ನನಗಾಗಿ ಹೋರಾಡಿದ್ದೀರಿ. ನೀವಿಲ್ಲದೆ ನಾನು ಇಲ್ಲಿರಲು ಸಾಧ್ಯವಿರಲಿಲ್ಲ," ಎಂದು ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿದರು.
ಅದ್ದೂರಿ ಪ್ರಮಾಣವಚನ ಸಮಾರಂಭ
ಚೆನ್ನೈನ ನೆಹರು ಕ್ರೀಡಾಂಗಣದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅವರು ವಿಜಯ್ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಈ ಸಮಾರಂಭ ನಡೆಯಿತು. ವಿಜಯ್ ಅವರೊಂದಿಗೆ ಆದವ್ ಅರ್ಜುನ, ಎನ್. ಆನಂದ್ ಮತ್ತು ಕೆ.ಎ. ಸೆಂಗೊಟ್ಟಯ್ಯನ್ ಸೇರಿದಂತೆ ಹಲವು ನಾಯಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

