CM Vijay Astrologer | ಸಿಎಂ ವಿಜಯ್ ಆಪ್ತ ಜ್ಯೋತಿಷಿಗೆ ಸರ್ಕಾರದ ಉನ್ನತ ಹುದ್ದೆ
x

CM Vijay Astrologer | ಸಿಎಂ ವಿಜಯ್ ಆಪ್ತ ಜ್ಯೋತಿಷಿಗೆ ಸರ್ಕಾರದ ಉನ್ನತ ಹುದ್ದೆ

ತಮಿಳುನಾಡು ಮುಖ್ಯಮಂತ್ರಿ ವಿಜಯ್ ತಮ್ಮ ವೈಯಕ್ತಿಕ ಜ್ಯೋತಿಷಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ಸರ್ಕಾರದ 'ವಿಶೇಷ ಕರ್ತವ್ಯಾಧಿಕಾರಿ' (OSD-Political) ಆಗಿ ನೇಮಿಸಿದ್ದಾರೆ.


ತಮಿಳುನಾಡು ರಾಜ್ಯಪಾಲರಿಂದ ಹಸಿರು ನಿಶಾನೆ ಪಡೆದು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ನಟ ವಿಜಯ್, ಈಗ ತಮ್ಮ ಆಡಳಿತ ಮಂಡಳಿಯಲ್ಲಿ ಅಚ್ಚರಿಯ ನೇಮಕಾತಿಯೊಂದನ್ನು ಮಾಡಿದ್ದಾರೆ. ವಿಜಯ್ ಅವರ ಪ್ರತಿಯೊಂದು ಹಂತದಲ್ಲೂ ಮಾರ್ಗದರ್ಶನ ನೀಡುತ್ತಿರುವ ಅವರ ವೈಯಕ್ತಿಕ ಜ್ಯೋತಿಷಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ಮುಖ್ಯಮಂತ್ರಿಯವರ 'ವಿಶೇಷ ಕರ್ತವ್ಯಾಧಿಕಾರಿ' (OSD) ಆಗಿ ಮಂಗಳವಾರ ನೇಮಕ ಮಾಡಲಾಗಿದೆ.

ಮುಹೂರ್ತ ಬದಲಿಸಿದ್ದ ಜ್ಯೋತಿಷಿ!

ವಿಜಯ್ ಅವರು ಮೇ 10 ರಂದು ಮಧ್ಯಾಹ್ನ 3:45 ಕ್ಕೆ ಪ್ರಮಾಣವಚನ ಸ್ವೀಕರಿಸಲು ಮೊದಲು ನಿರ್ಧರಿಸಿದ್ದರು. ಆದರೆ, ಜ್ಯೋತಿಷಿ ವೆಟ್ರಿವೇಲ್ ಅವರ ಸಲಹೆಯಂತೆ, ಶುಭ 'ಮುಹೂರ್ತ'ಕ್ಕಾಗಿ ಸಮಾರಂಭವನ್ನು ಬೆಳಿಗ್ಗೆ 10 ಗಂಟೆಗೆ ಮುಂದೂಡಲಾಗತ್ತು. ಚುನಾವಣೆಗೂ ಮುನ್ನವೇ ವಿಜಯ್ ಗೆಲುವನ್ನು ಭವಿಷ್ಯ ನುಡಿದಿದ್ದ ವೆಟ್ರಿವೇಲ್, ವಿಜಯ್ ಸಿಎಂ ಆದ ಬೆನ್ನಲ್ಲೇ ತಾವೂ ಸರ್ಕಾರಿ ಹುದ್ದೆ ಅಲಂಕರಿಸುವ ಮೂಲಕ ಸುದ್ದಿಯಲ್ಲಿದ್ದಾರೆ.

ಜಯಲಲಿತಾ ಅವರಿಗೂ ಇವರೇ ಗುರು!

ಕಳೆದ ನಾಲ್ಕು ದಶಕಗಳಿಂದ ಜ್ಯೋತಿಷ್ಯ ಶಾಸ್ತ್ರದಲ್ಲಿರುವ ವೆಟ್ರಿವೇಲ್ ಅವರು ಕೇವಲ ವಿಜಯ್ ಮಾತ್ರವಲ್ಲದೆ, ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಸೇರಿದಂತೆ ಅನೇಕ ಪ್ರಭಾವಿ ರಾಜಕಾರಣಿಗಳಿಗೆ ಮಾರ್ಗದರ್ಶಕರಾಗಿದ್ದರು. ಜಯಲಲಿತಾ ಅವರು ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ವೆಟ್ರಿವೇಲ್ ಅವರ ಸಲಹೆ ಪಡೆಯುತ್ತಿದ್ದರು ಎಂದು ರಾಜಕೀಯ ವಿಶ್ಲೇಷಕರು ಸ್ಮರಿಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿಯೂ ಇವರು ಸಾಕಷ್ಟು ಪ್ರಸಿದ್ಧರಾಗಿದ್ದಾರೆ.

ಟಿವಿಕೆ ಸರ್ಕಾರದ ಸಂಖ್ಯಾಬಲ

ತಮಿಳುನಾಡು ವಿಧಾನಸಭೆಯ 234 ಸ್ಥಾನಗಳ ಪೈಕಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) 108 ಸ್ಥಾನಗಳನ್ನು ಗೆದ್ದಿತ್ತು. ಬಹುಮತಕ್ಕೆ ಸ್ವಲ್ಪ ಕೊರತೆಯಿದ್ದರೂ, ಕಾಂಗ್ರೆಸ್ ಮತ್ತು ವಿಸಿಕೆ (VCK) ಸೇರಿದಂತೆ ಹಲವು ಪಕ್ಷಗಳ ಬೆಂಬಲದೊಂದಿಗೆ ವಿಜಯ್ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಶಕಗಳ ಕಾಲ ಇತರರ ಭವಿಷ್ಯ ನುಡಿದಿದ್ದ ವೆಟ್ರಿವೇಲ್, ಈಗ ತಾವೇ ನೇರವಾಗಿ ಸರ್ಕಾರದ ಭಾಗವಾಗಿರುವುದು ತಮಿಳುನಾಡು ರಾಜಕಾರಣದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.

Read More
Next Story