
TN CM Vijay| ಸಿಎಂ ವಿಜಯ್ ಮೊದಲ ಮಾಸ್ ನಿರ್ಧಾರ: ತಮಿಳುನಾಡಿನ 717 ಮದ್ಯದಂಗಡಿಗಳ ಬಂದ್‌ಗೆ ಆದೇಶ!
ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೂಡಲೇ ನಟ ವಿಜಯ್ ಭರ್ಜರಿ ಆ್ಯಕ್ಷನ್! ಶಾಲೆ, ದೇವಸ್ಥಾನಗಳ ಸಮೀಪವಿರುವ 717 ಟಾಸ್ಮಾಕ್ ಮದ್ಯದಂಗಡಿಗಳನ್ನು ಮುಚ್ಚಲು ಆದೇಶ ಹೊರಡಿಸಿದ್ದಾರೆ.
ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಮಂಗಳವಾರ ಪ್ರಮಾಣವಚನ ಸ್ವೀಕರಿಸಿದ ಜೋಸೆಫ್ ವಿಜಯ್, ಅಧಿಕಾರ ವಹಿಸಿಕೊಂಡ ಕೂಡಲೇ ಮೊದಲ ಪ್ರಮುಖ ಆಡಳಿತಾತ್ಮಕ ಆದೇಶಕ್ಕೆ ಸಹಿ ಹಾಕಿದ್ದಾರೆ. ರಾಜ್ಯದ ಧಾರ್ಮಿಕ ಕೇಂದ್ರಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳ ಸಮೀಪ ಕಾರ್ಯಾಚರಿಸುತ್ತಿದ್ದ 717 ಸರ್ಕಾರಿ ಸ್ವಾಮ್ಯದ ಮದ್ಯದ ಮಾರಾಟ ಮಳಿಗೆಗಳನ್ನು ತಕ್ಷಣವೇ ಮುಚ್ಚುವಂತೆ ಅವರು ಆದೇಶಿಸಿದ್ದಾರೆ.
500 ಮೀಟರ್ ವ್ಯಾಪ್ತಿಯಲ್ಲಿರುವ ಮಳಿಗೆಗಳು ಬಂದ್
ಸಿಎಂ ವಿಜಯ್ ಅವರ ಆದೇಶದಂತೆ, ದೇವಸ್ಥಾನ, ಮಸೀದಿ, ಚರ್ಚ್‌ಗಳು, ಶಾಲೆ-ಕಾಲೇಜುಗಳು ಮತ್ತು ಬಸ್ ನಿಲ್ದಾಣಗಳ 500 ಮೀಟರ್ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಎಲ್ಲಾ ಟಾಸ್ಮಾಕ್ ಮದ್ಯದಂಗಡಿಗಳನ್ನು ಮುಂದಿನ ಎರಡು ವಾರಗಳಲ್ಲಿ ಮುಚ್ಚಬೇಕಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಮದ್ಯದ ಸುಲಭ ಲಭ್ಯತೆಯನ್ನು ನಿಯಂತ್ರಿಸುವ ಮತ್ತು ಸಾಮಾಜಿಕ ಸುಧಾರಣೆ ತರುವ ನಿಟ್ಟಿನಲ್ಲಿ ಈ ಮಹತ್ವದ ಕ್ರಮ ಕೈಗೊಳ್ಳಲಾಗಿದೆ.
ಮುಚ್ಚಲಿರುವ ಅಂಗಡಿಗಳ ವಿವರ
ತಮಿಳುನಾಡು ಸರ್ಕಾರದ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ ಒಟ್ಟು 4,765 ಟಾಸ್ಮಾಕ್ ಮದ್ಯದ ಅಂಗಡಿಗಳಿದ್ದು, ಮುಖ್ಯಮಂತ್ರಿ ವಿಜಯ್ ಅವರ ನೂತನ ಆದೇಶದ ಅನ್ವಯ 717 ಮಳಿಗೆಗಳು ಬಂದ್ ಆಗಲಿವೆ; ಇವುಗಳಲ್ಲಿ ಧಾರ್ಮಿಕ ಕೇಂದ್ರಗಳ ಸಮೀಪವಿರುವ 276, ಶಾಲಾ-ಕಾಲೇಜುಗಳ ಹತ್ತಿರವಿರುವ 186 ಹಾಗೂ ಬಸ್ ನಿಲ್ದಾಣಗಳ ವ್ಯಾಪ್ತಿಯಲ್ಲಿರುವ 255 ಅಂಗಡಿಗಳು ಒಳಗೊಂಡಿವೆ.
ಚುನಾವಣಾ ಭರವಸೆ ಈಡೇರಿಕೆಯತ್ತ ಮೊದಲ ಹೆಜ್ಜೆ?
ಮುಖ್ಯಮಂತ್ರಿಯಾಗಿ ಪಟ್ಟಕ್ಕೇರಿದ ಕೆಲವೇ ಗಂಟೆಗಳಲ್ಲಿ ಕೈಗೊಂಡ ಈ ನಿರ್ಧಾರವು ವಿಜಯ್ ಅವರ ಆಡಳಿತದ ದಿಕ್ಕನ್ನು ಸೂಚಿಸುತ್ತಿದೆ. ಸಾರ್ವಜನಿಕವಾಗಿ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದ ಸೂಕ್ಷ್ಮ ಪ್ರದೇಶಗಳಲ್ಲಿನ ಮದ್ಯದಂಗಡಿಗಳನ್ನು ಹಟಾಯಿಸುವ ಮೂಲಕ, ವಿಜಯ್ ಸರ್ಕಾರವು ತನ್ನನ್ನು 'ಸಮಾಜ ಸುಧಾರಣಾ ಪ್ರಿಯ' ಸರ್ಕಾರ ಎಂದು ಬಿಂಬಿಸಿಕೊಳ್ಳಲು ಮುಂದಾಗಿದೆ. ಈ ನಿರ್ಧಾರಕ್ಕೆ ತಮಿಳುನಾಡಿನಾದ್ಯಂತ ಸಾರ್ವಜನಿಕರು, ಅದರಲ್ಲೂ ವಿಶೇಷವಾಗಿ ಮಹಿಳೆಯರು ಮತ್ತು ವಿದ್ಯಾರ್ಥಿ ಸಂಘಟನೆಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

