ತಮಿಳುನಾಡು ವಿಧಾನಸಭೆಯಲ್ಲಿ ‘ದಳಪತಿ’ ವಿಜಯ್ ಜಯಭೇರಿ: 144 ಮತಗಳೊಂದಿಗೆ ಬಹುಮತ ಸಾಬೀತು!
x

ತಮಿಳುನಾಡು ವಿಧಾನಸಭೆಯಲ್ಲಿ ‘ದಳಪತಿ’ ವಿಜಯ್ ಜಯಭೇರಿ: 144 ಮತಗಳೊಂದಿಗೆ ಬಹುಮತ ಸಾಬೀತು!

ತಮಿಳುನಾಡು ಸಿಎಂ ದಳಪತಿ ವಿಜಯ್ ಇಂದು ವಿಧಾನಸಭೆಯಲ್ಲಿ 144 ಮತಗಳನ್ನು ಪಡೆಯುವ ಮೂಲಕ ವಿಶ್ವಾಸಮತ ಗೆದ್ದಿದ್ದಾರೆ. ಎಐಎಡಿಎಂಕೆ ಬಂಡಾಯ ಶಾಸಕರು ಮತ್ತು ಮೈತ್ರಿ ಪಕ್ಷಗಳ ಬೆಂಬಲದೊಂದಿಗೆ ಟಿವಿಕೆ ಸರ್ಕಾರ ಭದ್ರಗೊಂಡಿದೆ.


ತಮಿಳುನಾಡಿನ ನೂತನ ಮುಖ್ಯಮಂತ್ರಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಸರ್ಕಾರವು ಇಂದು ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಪರೀಕ್ಷೆಯಲ್ಲಿ (Floor Test) ಭರ್ಜರಿ ಜಯ ಸಾಧಿಸಿದೆ. ವಿಜಯ್ ಅವರು ಒಟ್ಟು 144 ಮತಗಳನ್ನು ಪಡೆಯುವ ಮೂಲಕ ತಮ್ಮ ಅಧಿಕಾರವನ್ನು ಭದ್ರಪಡಿಸಿಕೊಂಡಿದ್ದಾರೆ.

ಮತಗಳ ಲೆಕ್ಕಾಚಾರ ಹೀಗಿದೆ:

• ಪರ ಬಿದ್ದ ಮತಗಳು: 144

• ವಿರೋಧ ಬಿದ್ದ ಮತಗಳು: 22

• ತಟಸ್ಥ: 05

ಬೆಂಬಲ ನೀಡಿದವರು ಯಾರು?

ವಿಜಯ್ ಅವರು ತಿರುಚ್ಚಿರಾಪಳ್ಳಿ ಪೂರ್ವ ಕ್ಷೇತ್ರವನ್ನು ತ್ಯಜಿಸಿದ ನಂತರ, ಟಿವಿಕೆ ಪ್ರಸ್ತುತ 107 ಶಾಸಕರನ್ನು ಹೊಂದಿದೆ. ಇದರೊಂದಿಗೆ ಕಾಂಗ್ರೆಸ್, ವಿಸಿಕೆ (VCK), ಐಯುಎಂಎಲ್ (IUML), ಸಿಪಿಐ ಮತ್ತು ಸಿಪಿಎಂ ಪಕ್ಷಗಳ 13 ಶಾಸಕರು ವಿಜಯ್ ಅವರಿಗೆ ಬೆಂಬಲ ನೀಡಿದ್ದಾರೆ. ಇದರ ಜೊತೆಗೆ ಎಂಎಂಕೆ (AMMK) ಶಾಸಕ ಎಸ್. ಕಾಮರಾಜ್ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ.ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಡಿಎಂಕೆ ಜೊತೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದು ಆರೋಪಿಸಿ ಬಂಡಾಯವೆದ್ದಿದ್ದ 25 ಎಐಎಡಿಎಂಕೆ ಶಾಸಕರು ವಿಜಯ್ ಪರವಾಗಿ ಮತ ಚಲಾಯಿಸಿದ್ದು ವಿಶೇಷವಾಗಿತ್ತು.

ಡಿಎಂಕೆ ಬಹಿಷ್ಕಾರ ಮತ್ತು ಉದಯನಿಧಿ ಸ್ಟಾಲಿನ್ ವಾಗ್ದಾಳಿ:

ವಿರೋಧ ಪಕ್ಷವಾದ ಡಿಎಂಕೆ ವಿಶ್ವಾಸಮತ ಪರೀಕ್ಷೆಯನ್ನು ಬಹಿಷ್ಕರಿಸಿ ಸದನದಿಂದ ಹೊರನಡೆದಿದೆ. ಈ ವೇಳೆ ಮಾತನಾಡಿದ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್, "ಜನರು ನಿಮಗೆ ಮತ ಹಾಕಿ ದೊಡ್ಡ ತಪ್ಪು ಮಾಡಿದ್ದೇವೆ ಎಂದು ಈಗ ಭಾವಿಸುತ್ತಿದ್ದಾರೆ. ರಾಜ್ಯದ ಶೇ. 65 ರಷ್ಟು ಜನರು ವಿಜಯ್ ಅವರನ್ನು ಸಿಎಂ ಆಗಿ ತಿರಸ್ಕರಿಸಿದ್ದಾರೆ. ಈ ಸರ್ಕಾರ ಎಷ್ಟು ದಿನ ಉಳಿಯುತ್ತದೆ ಎಂದು ಕಾದು ನೋಡಬೇಕು," ಎಂದು ಲೇವಡಿ ಮಾಡಿದರು.

"ಇದು ಕುದುರೆ ವ್ಯಾಪಾರವಲ್ಲ, ಕುದುರೆ ವೇಗದ ಆಡಳಿತ" - ವಿಜಯ್ ತಿರುಗೇಟು:

ತಮಗೆ ಬೆಂಬಲ ನೀಡಿದ ಎಲ್ಲಾ ಮಿತ್ರಪಕ್ಷಗಳಿಗೆ ಧನ್ಯವಾದ ಅರ್ಪಿಸಿದ ಮುಖ್ಯಮಂತ್ರಿ ವಿಜಯ್, "ನಮ್ಮದು ಕುದುರೆ ವ್ಯಾಪಾರ ಮಾಡುವ ಸರ್ಕಾರವಲ್ಲ, ಬದಲಾಗಿ ಕುದುರೆಯ ವೇಗದಲ್ಲಿ ಕೆಲಸ ಮಾಡುವ ಸರ್ಕಾರ," ಎಂದು ವಿರೋಧ ಪಕ್ಷಗಳಿಗೆ ಟಾಂಗ್ ನೀಡಿದರು. ಹಿಂದಿನ ಸರ್ಕಾರದ ಎಲ್ಲಾ ಜನಪರ ಯೋಜನೆಗಳು ಮುಂದುವರಿಯಲಿವೆ ಎಂದು ಅವರು ಭರವಸೆ ನೀಡಿದರು.

Read More
Next Story