
ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು
ಆಂಧ್ರಪ್ರದೇಶದಲ್ಲಿ 3ನೇ ಮಗುವಿಗೆ 30 ಸಾವಿರ, 4ನೇ ಮಗುವಿಗೆ 40 ಸಾವಿರ ರೂ. ಪ್ರೋತ್ಸಾಹ ಧನ ಘೋಷಣೆ
ಈ ಹಿಂದೆ ಮಾರ್ಚ್ ತಿಂಗಳಲ್ಲಿ ವಿಧಾನಸಭೆಯಲ್ಲಿ ಮಾತನಾಡಿದ್ದ ಸಿಎಂ ನಾಯ್ಡು, ಎರಡನೇ ಮಗುವಿಗೆ ಜನ್ಮ ನೀಡುವ ದಂಪತಿಗೆ 25,000 ರೂ. ಪ್ರೋತ್ಸಾಹ ಧನ ನೀಡುವ ಪ್ರಸ್ತಾವನೆ ಸರ್ಕಾರದ ಮುಂದಿದೆ ಎಂದು ಹೇಳಿದ್ದರು.
ರಾಜ್ಯದಲ್ಲಿ ಕುಸಿಯುತ್ತಿರುವ ಜನಸಂಖ್ಯೆ ಬೆಳವಣಿಗೆಯ ಪ್ರಮಾಣವನ್ನು ಸರಿದೂಗಿಸುವ ನಿಟ್ಟಿನಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಮಹತ್ವದ ಘೋಷಣೆ ಮಾಡಿದ್ದಾರೆ. ಮೂರನೇ ಹಾಗೂ ನಾಲ್ಕನೇ ಮಗುವಿಗೆ ಜನ್ಮ ನೀಡುವ ದಂಪತಿಗೆ ನಗದು ಪ್ರೋತ್ಸಾಹ ಧನ ನೀಡುವುದಾಗಿ ತಿಳಿಸಿದ್ದಾರೆ.
ಶ್ರೀಕಾಕುಳಂ ಜಿಲ್ಲೆಯ ನರಸನ್ನಪೇಟೆಯಲ್ಲಿ ನಡೆದ 'ಸ್ವರ್ಣಾಂಧ್ರ-ಸ್ವಚ್ಛಾಂಧ್ರ' ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನಸಂಖ್ಯೆ ನಿಯಂತ್ರಣದ ಬದಲು ಜನನ ಪ್ರಮಾಣ ಹೆಚ್ಚಿಸಲು ಸಮಾಜವು ಒಟ್ಟಾಗಿ ಕೆಲಸ ಮಾಡುವ ಕಾಲ ಈಗ ಒದಗಿ ಬಂದಿದೆ ಎಂದು ಹೇಳಿದ್ದಾರೆ.
ಪ್ರೋತ್ಸಾಹ ಧನದ ವಿವರ
ಮೂರನೇ ಮಗುವಿಗೆ ಜನ್ಮ ನೀಡುವ ದಂಪತಿಗೆ 30,000 ರೂಪಾಯಿ ಹಾಗೂ ನಾಲ್ಕನೇ ಮಗುವಿಗೆ 40,000 ರೂಪಾಯಿ ನಗದು ಪ್ರೋತ್ಸಾಹ ಧನ ನೀಡುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಮೂರನೇ ಮಗುವಿನ ಜನನದ ಕೂಡಲೇ 30 ಸಾವಿರ ಹಾಗೂ ನಾಲ್ಕನೇ ಮಗುವಿಗೆ 40 ಸಾವಿರ ರೂಪಾಯಿ ನೀಡುವ ಹೊಸ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದರು. ಈ ಕುರಿತಾದ ಸಂಪೂರ್ಣ ವಿವರಗಳು ಮತ್ತು ಮಾರ್ಗಸೂಚಿಗಳನ್ನು ಒಂದು ತಿಂಗಳೊಳಗೆ ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಹಿಂದಿನ ಘೋಷಣೆಯ ಮುಂದುವರಿದ ಭಾಗ
ಈ ಹಿಂದೆ ಮಾರ್ಚ್ ತಿಂಗಳಲ್ಲಿ ವಿಧಾನಸಭೆಯಲ್ಲಿ ಮಾತನಾಡಿದ್ದ ಸಿಎಂ ನಾಯ್ಡು, ಎರಡನೇ ಮಗುವಿಗೆ ಜನ್ಮ ನೀಡುವ ದಂಪತಿಗೆ 25,000 ರೂ. ಪ್ರೋತ್ಸಾಹ ಧನ ನೀಡುವ ಪ್ರಸ್ತಾವನೆ ಸರ್ಕಾರದ ಮುಂದಿದೆ ಎಂದು ಹೇಳಿದ್ದರು. ಇದರ ಮುಂದುವರಿದ ಭಾಗವಾಗಿ, ಮೂರನೇ ಹಾಗೂ ನಾಲ್ಕನೇ ಮಗುವಿಗೂ ಈ ಸೌಲಭ್ಯವನ್ನು ವಿಸ್ತರಿಸುವ ನಿರ್ಧಾರವನ್ನು ಈಗ ತೆಗೆದುಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಸತ್ಯಕುಮಾರ್ ಯಾದವ್ ಈ ಹಿಂದೆ ಸುಳಿವು ನೀಡಿದ್ದರು. ಆ ನಿಟ್ಟಿನಲ್ಲಿ ಈಗ ಮುಖ್ಯಮಂತ್ರಿಗಳೇ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಫರ್ಟಿಲಿಟಿ ದರ ಕುಸಿತದ ಆತಂಕ
ಪ್ರಸ್ತುತ ಬದಲಾಗುತ್ತಿರುವ ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿಗಳಿಂದಾಗಿ ಕುಟುಂಬದ ಗಾತ್ರ ಚಿಕ್ಕದಾಗುತ್ತಿದೆ. ಆದಾಯ ಹೆಚ್ಚಾದಂತೆ ಜನಸಾಮಾನ್ಯರು ಕೇವಲ ಒಂದು ಮಗುವಿಗೆ ಸೀಮಿತವಾಗುತ್ತಿದ್ದಾರೆ. ಇನ್ನು ಕೆಲವರು ಮೊದಲ ಮಗು ಗಂಡು ಆಗದಿದ್ದರೆ ಮಾತ್ರ ಎರಡನೇ ಮಗುವಿಗೆ ಮುಂದಾಗುತ್ತಿರುವ ಪ್ರವೃತ್ತಿ ಹೆಚ್ಚಾಗಿದೆ. ಇದರಿಂದಾಗಿ ರಾಜ್ಯದ ಜನಸಂಖ್ಯೆ ಬೆಳವಣಿಗೆ ದರ ಭಾರಿ ಪ್ರಮಾಣದಲ್ಲಿ ಕುಸಿಯುತ್ತಿದೆ. ಯಾವುದೇ ರಾಜ್ಯ ಅಥವಾ ದೇಶದ ಜನಸಂಖ್ಯೆ ಸ್ಥಿರವಾಗಿರಲು ಒಟ್ಟು ಫರ್ಟಿಲಿಟಿ ದರ (ಟಿಎಫ್‌ಆರ್) ಸರಾಸರಿ 2.1 ಇರುವುದು ಅತ್ಯಗತ್ಯ. ಈ ಪ್ರಮಾಣವನ್ನು ಕಾಯ್ದುಕೊಳ್ಳುವುದು ಸರ್ಕಾರದ ಮುಖ್ಯ ಗುರಿಯಾಗಿದೆ ಎಂದು ನಾಯ್ಡು ವಿವರಿಸಿದ್ದಾರೆ.
ಮಕ್ಕಳು ಹೊರೆಯಲ್ಲ, ಆಸ್ತಿ
ಹಲವು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಕುಸಿಯುತ್ತಿರುವ ಜನಸಂಖ್ಯೆ ಹಾಗೂ ಹೆಚ್ಚಾಗುತ್ತಿರುವ ವಯೋವೃದ್ಧರ ಸಂಖ್ಯೆಯಿಂದಾಗಿ ಆ ದೇಶದ ಆರ್ಥಿಕತೆಯ ಮೇಲೆ ಅತ್ಯಂತ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಯುವ ಸಮುದಾಯದ ಕೊರತೆ ಭವಿಷ್ಯದಲ್ಲಿ ದೇಶದ ಅಭಿವೃದ್ಧಿಗೆ ಮಾರಕವಾಗಬಹುದು. ಈ ಕಾರಣಕ್ಕಾಗಿ ಮಕ್ಕಳು ಎಂದಿಗೂ ಹೊರೆಯಲ್ಲ, ಬದಲಾಗಿ ಅವರು ಈ ದೇಶದ ಆಸ್ತಿ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು ಎಂದು ಚಂದ್ರಬಾಬು ನಾಯ್ಡು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

