ತಮಿಳುನಾಡು ರಾಜಕಾರಣದಲ್ಲಿ ಸಂಚಲನ: ಸಿಎಂ ವಿಜಯ್ ಸರ್ಕಾರಕ್ಕೆ ಎಐಎಡಿಎಂಕೆ ಷಣ್ಮುಗಂ ಬಣ ಬೆಂಬಲ!
x

ತಮಿಳುನಾಡು ರಾಜಕಾರಣದಲ್ಲಿ ಸಂಚಲನ: ಸಿಎಂ ವಿಜಯ್ ಸರ್ಕಾರಕ್ಕೆ ಎಐಎಡಿಎಂಕೆ ಷಣ್ಮುಗಂ ಬಣ ಬೆಂಬಲ!

ತಮಿಳುನಾಡು ಸಿಎಂ ವಿಜಯ್ ಸರ್ಕಾರಕ್ಕೆ ಎಐಎಡಿಎಂಕೆ ನಾಯಕ ಸಿ.ವಿ. ಷಣ್ಮುಗಂ ಬಣ ಬೆಂಬಲ ಘೋಷಿಸಿದೆ. ಡಿಎಂಕೆ ವಿರೋಧಿಸಲು ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.


Click the Play button to hear this message in audio format

ತಮಿಳುನಾಡಿನಲ್ಲಿ ಅಧಿಕಾರ ಹಂಚಿಕೆಯ ಕಸರತ್ತು ಮುಗಿದು ವಿಜಯ್ ಮುಖ್ಯಮಂತ್ರಿಯಾದ ಬೆನ್ನಲ್ಲೇ, ಎಐಎಡಿಎಂಕೆಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಹಿರಿಯ ನಾಯಕ ಸಿ.ವಿ. ಷಣ್ಮುಗಂ ನೇತೃತ್ವದ ಶಾಸಕರ ತಂಡವು ಆಡಳಿತಾರೂಢ ಟಿವಿ ಕೆ (TVK) ಮೈತ್ರಿಕೂಟಕ್ಕೆ ಬೆಂಬಲ ನೀಡಲು ನಿರ್ಧರಿಸಿದೆ.

ಬೆಂಬಲಕ್ಕೆ ಕಾರಣವೇನು?

ಕಳೆದ ಒಂದು ದಶಕದಿಂದ ಎಐಎಡಿಎಂಕೆ ಸತತ ನಾಲ್ಕು ಚುನಾವಣೆಗಳಲ್ಲಿ ಸೋಲು ಅನುಭವಿಸಿದೆ. ಈ ಪೈಕಿ ಮೂರು ಬಾರಿ ಡಿಎಂಕೆ ವಿರುದ್ಧ ಸೋತಿದ್ದರೆ, ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ ನಟ ವಿಜಯ್ ಅವರ ಟಿವಿಕೆ ವಿರುದ್ಧ ಸೋಲೊಪ್ಪಿಕೊಂಡಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ಮತ್ತು ಡಿಎಂಕೆ ವಿರೋಧಿ ರಾಜಕಾರಣ ಮುಂದುವರಿಸಲು ವಿಜಯ್ ಅವರ ಮೈತ್ರಿಕೂಟ ಸೇರುವುದು ಅನಿವಾರ್ಯ ಎಂದು ಷಣ್ಮುಗಂ ತಿಳಿಸಿದ್ದಾರೆ.

ಡಿಎಂಕೆ ಜೊತೆ ಮೈತ್ರಿಗೆ ನಕಾರ

"ನಮ್ಮ ಪಕ್ಷದ ಅಡಿಪಾಯವೇ ಡಿಎಂಕೆ ವಿರೋಧದ ಮೇಲೆ ನಿಂತಿದೆ. ಕಳೆದ 53 ವರ್ಷಗಳಿಂದ ನಾವು ಡಿಎಂಕೆ ವಿರುದ್ಧವೇ ಹೋರಾಡಿದ್ದೇವೆ. ಒಂದು ವೇಳೆ ಡಿಎಂಕೆ ಬೆಂಬಲದೊಂದಿಗೆ ಸರ್ಕಾರ ರಚಿಸುವ ಪ್ರಸ್ತಾಪ ಬಂದರೆ ಅದನ್ನು ನಮ್ಮ ಸದಸ್ಯರು ಒಪ್ಪುವುದಿಲ್ಲ. ಅಂತಹ ಮೈತ್ರಿ ಮಾಡಿಕೊಂಡರೆ ಎಐಎಡಿಎಂಕೆ ಅಸ್ತಿತ್ವವೇ ಇಲ್ಲದಂತಾಗುತ್ತದೆ. ಹೀಗಾಗಿ, ಚುನಾವಣೆಯಲ್ಲಿ ಗೆದ್ದು ಬಂದಿರುವ ವಿಜಯ್ ಅವರ ಪಕ್ಷಕ್ಕೆ ಬೆಂಬಲ ನೀಡಲು ನಿರ್ಧರಿಸಿದ್ದೇವೆ," ಎಂದು ಸಿ.ವಿ. ಷಣ್ಮುಗಂ ಸ್ಪಷ್ಟಪಡಿಸಿದ್ದಾರೆ.

ಇಪಿಎಸ್ ವಿರುದ್ಧ ಬಂಡಾಯ?

ಈ ನಿರ್ಧಾರವು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ (EPS) ಅವರಿಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ. ಕಳೆದ ವಾರ ಸರ್ಕಾರ ರಚನೆಯ ಮಾತುಕತೆ ವೇಳೆ ವಿಜಯ್ ಅವರೊಂದಿಗೆ ಮೈತ್ರಿ ಮಾಡಿಕೊಳ್ಳಲು ಇಪಿಎಸ್ ನಿರಾಕರಿಸಿದ್ದರು. ಆದರೆ, ಷಣ್ಮುಗಂ ನೇತೃತ್ವದ ತಂಡವು ಪುದುಚೇರಿಯ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿ ವಿಜಯ್ ಸರ್ಕಾರಕ್ಕೆ ಬೆಂಬಲ ನೀಡುವಂತೆ ಒತ್ತಡ ಹೇರಿತ್ತು. ಈಗ ಅಧಿಕೃತವಾಗಿ ಬೆಂಬಲ ಘೋಷಿಸುವ ಮೂಲಕ ಇಪಿಎಸ್ ನಾಯಕತ್ವಕ್ಕೆ ಸವಾಲು ಎಸೆದಿದ್ದಾರೆ.

ಮ್ಯಾಜಿಕ್ ನಂಬರ್ ತಲುಪಿದ ವಿಜಯ್ ಸರ್ಕಾರ

ತಮಿಳುನಾಡು ವಿಧಾನಸಭೆಯ 234 ಸ್ಥಾನಗಳ ಪೈಕಿ ವಿಜಯ್ ಅವರ ಟಿವಿಕೆ 108 ಸ್ಥಾನಗಳನ್ನು ಗೆದ್ದಿತ್ತು. ಬಹುಮತಕ್ಕೆ (118) 10 ಸ್ಥಾನಗಳ ಕೊರತೆಯಿತ್ತು. ಕಾಂಗ್ರೆಸ್‌ನ 5 ಶಾಸಕರು ಈಗಾಗಲೇ ಬೆಂಬಲ ನೀಡಿದ್ದರು. ಈಗ ಷಣ್ಮುಗಂ ನೇತೃತ್ವದ ಎಐಎಡಿಎಂಕೆ ಬಣ ಬೆಂಬಲಕ್ಕೆ ನಿಂತಿರುವುದರಿಂದ ವಿಜಯ್ ಸರ್ಕಾರ ಸುಭದ್ರವಾಗಿದೆ.

Read More
Next Story