Bus Fire Accident | ರಾಜ್ಯದಲ್ಲಿ ಹೊತ್ತಿ ಉರಿದ ಮತ್ತೊಂದು ಸ್ಲೀಪರ್‌ ಬಸ್, ಚಾಲಕನ ಸಮಯಪ್ರಜ್ಞೆಯಿಂದ 36 ಪ್ರಯಾಣಿಕರು ಪಾರು!
x

Bus Fire Accident | ರಾಜ್ಯದಲ್ಲಿ ಹೊತ್ತಿ ಉರಿದ ಮತ್ತೊಂದು ಸ್ಲೀಪರ್‌ ಬಸ್, ಚಾಲಕನ ಸಮಯಪ್ರಜ್ಞೆಯಿಂದ 36 ಪ್ರಯಾಣಿಕರು ಪಾರು!

ಮಂಗಳೂರಿನಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಸ್ಲೀಪರ್ ಕೋಚ್ ಬಸ್ ಹಾಸನದ ಶಾಂತಿಗ್ರಾಮದ ಬಳಿ ಹೊತ್ತಿ ಉರಿದಿದೆ. ಚಾಲಕನ ಸಮಯಪ್ರಜ್ಞೆಯಿಂದ 36 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.


Click the Play button to hear this message in audio format

ರಾಜ್ಯದಲ್ಲಿ ಮತ್ತೊಂದು ಭೀಕರ ಖಾಸಗಿ ಬಸ್ ದುರಂತ ಸಂಭವಿಸಿದೆ. ಮಂಗಳೂರಿನಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಸ್ಲೀಪರ್ ಕೋಚ್ ಬಸ್‌ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು, ಇಡೀ ಬಸ್ ಬೆಂಕಿಯ ಕೆನ್ನಾಲಿಗೆಗೆ ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ಹಾಸನ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ನಡೆದಿದೆ. ಹಾಸನ ತಾಲೂಕಿನ ಶಾಂತಿಗ್ರಾಮದ ಬಳಿ ಈ ಘಟನೆ ನಡೆದಿದ್ದು, ಬಸ್ ಧಗಧಗನೆ ಹೊತ್ತಿ ಉರಿದ ದೃಶ್ಯ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಅದೃಷ್ಟವಶಾತ್, ಬಸ್ ಚಾಲಕನ ಸಮಯ ಪ್ರಜ್ಞೆಯಿಂದಾಗಿ ಬಸ್‌ನಲ್ಲಿದ್ದ ಎಲ್ಲಾ 36 ಪ್ರಯಾಣಿಕರು ಯಾವುದೇ ಪ್ರಾಣಾಪಾಯವಿಲ್ಲದೆ ಪವಾಡಸದೃಶವಾಗಿ ಪಾರಾಗಿದ್ದಾರೆ.

ಮಧ್ಯರಾತ್ರಿ ನಡೆದಿದ್ದೇನು?

ಭರತ್ ಕಂಪನಿಗೆ ಸೇರಿದ ಖಾಸಗಿ ಸ್ಲೀಪರ್ ಕೋಚ್ ಬಸ್ ರಾತ್ರಿ ವೇಳೆ ಮಂಗಳೂರಿನಿಂದ ಬೆಂಗಳೂರಿನತ್ತ ಬರುತ್ತಿತ್ತು. ಹಾಸನ ತಾಲೂಕಿನ ಶಾಂತಿಗ್ರಾಮದ ಬಳಿ ಹೆದ್ದಾರಿಯಲ್ಲಿ ಚಲಿಸುತ್ತಿದ್ದಾಗ, ಬಸ್‌ನ ಹಿಂಬದಿಯ ಟೈರ್ ಭಾಗದಲ್ಲಿ ಅಚಾನಕ್ ಆಗಿ ಬೆಂಕಿ ಹೊತ್ತಿಕೊಂಡಿದೆ.

ಬಸ್ ಚಲಿಸುತ್ತಿರುವಾಗಲೇ ಟೈರ್ ಭಾಗದಿಂದ ಅಸಹಜವಾದ ಶಬ್ದ ಮತ್ತು ದಟ್ಟವಾದ ಹೊಗೆ ಬರುತ್ತಿರುವುದನ್ನು ಚಾಲಕ ಗಮನಿಸಿದ್ದಾನೆ. ತಕ್ಷಣವೇ ಕಾರ್ಯಪ್ರವೃತ್ತನಾದ ಆತ ಬಸ್‌ನ ವೇಗವನ್ನು ಕಡಿಮೆ ಮಾಡಿ, ರಸ್ತೆಯ ಪಕ್ಕದ ಸುರಕ್ಷಿತ ಸ್ಥಳದಲ್ಲಿ ಬಸ್ ನಿಲ್ಲಿಸಿದ್ದಾನೆ.

36 ಜನರ ಜೀವ ಉಳಿಸಿದ ಚಾಲಕ

ಬಸ್ ನಿಲ್ಲಿಸಿ ಕೆಳಗೆ ಇಳಿದು ನೋಡಿದಾಗ ಟೈರ್ ಭಾಗದಲ್ಲಿ ಬೆಂಕಿ ದೊಡ್ಡದಾಗಿ ಹರಡುತ್ತಿರುವುದು ಚಾಲಕನಿಗೆ ಮನವರಿಕೆಯಾಗಿದೆ. ಆ ಸಮಯದಲ್ಲಿ ಬಸ್ ಒಳಗಿದ್ದ ಬಹುತೇಕ ಪ್ರಯಾಣಿಕರು ಗಾಢ ನಿದ್ದೆಯಲ್ಲಿದ್ದರು. ಒಂದು ಕ್ಷಣ ತಡವಾದರೂ ಭೀಕರ ದುರಂತ ಸಂಭವಿಸುವ ಆತಂಕ ಎದುರಾಗಿತ್ತು.

ಕೂಡಲೇ ಚಾಲಕ ಬಸ್ ಒಳಗೆ ಓಡಿ ಬಂದು, ಪ್ರಯಾಣಿಕರನ್ನು ಜೋರಾಗಿ ಕೂಗಿ ಎಬ್ಬಿಸಿದ್ದಾನೆ. "ತಕ್ಷಣ ಎಲ್ಲರೂ ಬಸ್‌ನಿಂದ ಕೆಳಗಿಳಿಯಿರಿ" ಎಂದು ಆತಂಕದಿಂದಲೇ ಎಚ್ಚರಿಸಿದ್ದಾನೆ. ಚಾಲಕನ ಕೂಗಿನಿಂದ ಎಚ್ಚರಗೊಂಡ 36 ಮಂದಿ ಪ್ರಯಾಣಿಕರು ಲಗೇಜ್‌ಗಳನ್ನೂ ಯೋಚಿಸದೆ ಒಬ್ಬೊಬ್ಬರಾಗಿ ಪಟಪಟನೆ ಬಸ್‌ನಿಂದ ಕೆಳಗಿಳಿದು ಓಡಿದ್ದಾರೆ.

ಕಣ್ಣೆದುರೇ ಸುಟ್ಟು ಕರಕಲಾದ ಬಸ್

ಪ್ರಯಾಣಿಕರೆಲ್ಲರೂ ಬಸ್‌ನಿಂದ ಕೆಳಗಿಳಿದು ದೂರ ಸರಿದ ಕೆಲವೇ ನಿಮಿಷಗಳಲ್ಲಿ ಬೆಂಕಿ ಇಡೀ ಬಸ್‌ಗೆ ಆವರಿಸಿಕೊಂಡಿದೆ. ನೋಡನೋಡುತ್ತಿದ್ದಂತೆಯೇ ಇಡೀ ಸ್ಲೀಪರ್ ಕೋಚ್ ಬಸ್ ಅಗ್ನಿ ಕುಂಡದಂತಾಯಿತು. ಸ್ಥಳೀಯರು ತಕ್ಷಣವೇ ಅಗ್ನಿಶಾಮಕ ದಳ ಮತ್ತು ಶಾಂತಿಗ್ರಾಮ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು.

ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟರಾದರೂ, ಅಷ್ಟರಲ್ಲಾಗಲೇ ಬೆಂಕಿಯ ರಭಸಕ್ಕೆ ಬಸ್ ಸಂಪೂರ್ಣವಾಗಿ ಸುಟ್ಟು ಬೂದಿಯಾಗಿತ್ತು. ಬಸ್‌ನೊಳಗಿದ್ದ ಸೀಟುಗಳು, ಪ್ರಯಾಣಿಕರ ಬೆಲೆಬಾಳುವ ಸಾಮಾನು ಸರಂಜಾಮುಗಳು ಬೆಂಕಿಗಾಹುತಿಯಾಗಿವೆ. ಸಾಮಗ್ರಿ ಕಳೆದುಕೊಂಡರೂ, ಚಾಲಕನ ಸಮಯಪ್ರಜ್ಞೆಯಿಂದ ತಮ್ಮ ಜೀವ ಉಳಿದಿದ್ದಕ್ಕೆ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಶಾಂತಿಗ್ರಾಮ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More
Next Story