ಇಂಧನ ದರ ಏರಿಕೆ ಬಿಸಿ; ಸರಕು ಸಾಗಣೆ ವೆಚ್ಚ ಹೆಚ್ಚಿಸಲು ಲಾರಿ ಮಾಲೀಕರ ಸಂಘಟನೆ ನಿರ್ಧಾರ
x

ಇಂಧನ ದರ ಏರಿಕೆ ಬಿಸಿ; ಸರಕು ಸಾಗಣೆ ವೆಚ್ಚ ಹೆಚ್ಚಿಸಲು ಲಾರಿ ಮಾಲೀಕರ ಸಂಘಟನೆ ನಿರ್ಧಾರ

ಇಂಧನ ದರ ಏರಿಕೆಯಿಂದ ಕಂಗಾಲಾಗಿರುವ ದಕ್ಷಿಣ ಭಾರತ ಮೋಟಾರ್ ಟ್ರಾನ್ಸ್‌ಪೋರ್ಟರ್ಸ್‌ ಅಸೋಸಿಯೇಷನ್ ಹಾಗೂ ವಾಹನ ಮಾಲೀಕರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ತಕ್ಷಣವೇ ಮಧ್ಯಪ್ರವೇಶಿಸುವಂತೆ ಒತ್ತಾಯಿಸಿದ್ದಾರೆ.


ಪಶ್ಚಿಮ ಏಷ್ಯಾದಲ್ಲಿ ಉದ್ಭವಿಸಿರುವ ತೈಲ ಬಿಕ್ಕಟ್ಟಿನಿಂದಾಗಿ ದೇಶದಲ್ಲಿ ಇಂಧನ ದರ ಏರುಗತಿಯಲ್ಲಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಗಗನಕ್ಕೇರಿರುವ ಹಿನ್ನೆಲೆ ದೇಶದಾದ್ಯಂತ ಮೇ ತಿಂಗಳಲ್ಲಿ ಕೇವಲ ಹತ್ತೇ ದಿನಗಳಲ್ಲಿ 4 ಬಾರಿ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಹೆಚ್ಚಿಸಲಾಗಿದೆ.

ಇಂಧನ ದರ ಏರಿಕೆಯಿಂದ ಕಂಗಾಲಾಗಿರುವ ದಕ್ಷಿಣ ಭಾರತ ಮೋಟಾರ್ ಟ್ರಾನ್ಸ್‌ಪೋರ್ಟರ್ಸ್‌ ಅಸೋಸಿಯೇಷನ್ ಹಾಗೂ ವಾಹನ ಮಾಲೀಕರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ತಕ್ಷಣವೇ ಮಧ್ಯಪ್ರವೇಶಿಸುವಂತೆ ಒತ್ತಾಯಿಸಿದ್ದಾರೆ.

ಪ್ರಸ್ತುತ ಪೆಟ್ರೋಲ್ ಬೆಲೆ 7.97 ರೂ. ಹಾಗೂ ಡೀಸೆಲ್ ದರ 7.81 ರೂ. ಏರಿಕೆಯಾಗಿದೆ. ಇದರಿಂದ ಸರಕು ಸಾಗಣೆಯಲ್ಲಿ ನಿರತರಾಗಿರುವ ಲಾರಿ ಮತ್ತು ಟ್ರಕ್ ಮಾಲೀಕರು ತೀವ್ರ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ಕನಕಪುರದಿಂದ ಬೆಂಗಳೂರಿಗೆ 50 ಕೆಜಿ ತೂಕದ ಒಂದು ಚೀಲ ಸಾಗಿಸಲು ಈ ಹಿಂದೆ 50 ರೂ. ಬಾಡಿಗೆ ಇತ್ತು. ಆದರೆ, ಈಗಿನ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿ ಆ ದರವನ್ನು 70 ರೂ.ಗಳಿಗೆ ಏರಿಕೆ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಲಾರಿ ಚಾಲಕರು ಹೇಳುತ್ತಾರೆ.

ಗ್ರಾಹಕರ ಮೇಲೆ ಹೊರೆ ಆತಂಕ

ಲಾರಿ ಮಾಲೀಕರ ಸಂಘಟನೆಯು ಪ್ರಧಾನಿ ಅವರಿಗೆ ಬರೆದಿರುವ ಪತ್ರದಲ್ಲಿ, ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಇಂಧನ ಬೆಲೆ ಏರಿಕೆಗೆ ಪರ್ಯಾಯವಾಗಿ ಮುಂದಿನ ಆರು ತಿಂಗಳ ಕಾಲ ಟೋಲ್ ದರ ಮತ್ತು ವ್ಯಾಟ್ ತೆರಿಗೆಯನ್ನು ಕಡಿತಗೊಳಿಸಬೇಕು ಎಂದು ಒತ್ತಾಯಿಸಿದೆ.

ಇಲ್ಲದಿದ್ದರೆ ಸಾಗಣೆ ವೆಚ್ಚ ಹೆಚ್ಚಿಸುವುದು ಅನಿವಾರ್ಯವಾಗಲಿದೆ. ಸರಕು ಸಾಗಣೆ ದರಗಳು ಏರಿಕೆಯಾದರೆ ಅದರ ನೇರ ಪರಿಣಾಮ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಯ ಮೇಲೆ ಬೀರಲಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುವ ಭೀತಿ ಎದುರಾಗಿದೆ ಎಂದು ಹೇಳಿದೆ.

ದಕ್ಷಿಣ ಭಾರತ ಮೋಟರ್ಸ್ ಟ್ರಾನ್ಸ್ ಪೋರ್ಟರ್ಸ್ ಅಸೊಸಿಯೇಷನ್ ಸುಮಾರು 7 ಲಕ್ಷ ಸದಸ್ಯರೊಂದಿಗೆ 35 ಲಕ್ಷ ವಾಹನಗಳನ್ನು ಹೊಂದಿದೆ. 500 ಕ್ಕೂ ಹೆಚ್ಚು ಜಿಲ್ಲಾ, ತಾಲ್ಲೂಕು ಮತ್ತು ಸ್ಥಳೀಯ ಸಾರಿಗೆ ಸಂಘಗಳು SIMTA ದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ, ಕೇರಳ ಮತ್ತು ಪುದುಚೇರಿ ರಾಜ್ಯಗಳಲ್ಲಿ ಸರಕು ಸಾಗಣೆಯಲ್ಲಿ ತೊಡಗಿಸಿಕೊಂಡಿರುವ ಲಾರಿ ಮಾಲೀಕರು ಹಾಗೂ ಚಾಲಕರ ಸಂಘಟನೆಗಳು ಈ ಸಂಘದಡಿ ಕಾರ್ಯ ನಿರ್ವಹಿಸುತ್ತಿವೆ.

ಇಂಧನ ದರ ಏರಿಕೆಯ ಪ್ರಭಾವದಿಂದಾಗಿ ಸದ್ಯದಲ್ಲೇ ಎಲ್ಲಾ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರುವ ಲಕ್ಷಣಗಳು ಕಾಣಿಸುತ್ತಿದ್ದು, ಕೇಂದ್ರ ಸರ್ಕಾರ ಈ ಇಕ್ಕಟ್ಟಿನ ಪರಿಸ್ಥಿತಿಗೆ ಸೂಕ್ತ ಪರಿಹಾರ ಮಾರ್ಗ ಪ್ರಕಟಿಸುತ್ತದೆಯೇ ಎಂಬ ನಿರೀಕ್ಷೆ ಸಾರ್ವಜನಿಕರಲ್ಲಿದೆ.

Read More
Next Story