
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಬಹುನಿರೀಕ್ಷಿತ ಆತ್ಮಕಥೆ Belonging: A Journey of Love ಕೃತಿಯನ್ನು ಹಾರ್ಪರ್‌ಕಾಲಿನ್ಸ್ ಇಂಡಿಯಾ ಪ್ರಕಟಿಸಲಿದೆ.
ಪೆಂಗ್ವಿನ್ ಬದಲು ಹಾರ್ಪರ್‌ಕಾಲಿನ್ಸ್‌ನಲ್ಲಿ ಸೋನಿಯಾ ಆತ್ಮಕಥೆ – ನ.10ಕ್ಕೆ ‘ಬಿಲಾಂಗಿಂಗ್’ ಬಿಡುಗಡೆ
ಯುದ್ಧಾನಂತರದ ಇಟಲಿಯಲ್ಲಿನ ಸೋನಿಯಾ ಗಾಂಧಿ ಅವರ ಬಾಲ್ಯ, ರಾಜೀವ್ ಗಾಂಧಿ ಅವರೊಂದಿಗಿನ ಪ್ರೇಮಕಥೆ, ವೈಯಕ್ತಿಕ ಬದುಕಿನಲ್ಲಿ ಎದುರಿಸಿದ ದುರಂತಗಳು ಹಾಗೂ ಅವುಗಳು ಅವರನ್ನು ಭಾರತೀಯ ರಾಜಕೀಯದತ್ತ ಹೇಗೆ ಕರೆದೊಯ್ದವು ಎಂಬುದನ್ನು ಆತ್ಮಕಥೆ ಒಳಗೊಂಡಿದೆ.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಬಹುನಿರೀಕ್ಷಿತ ಆತ್ಮಕಥೆ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ ಕೃತಿಯನ್ನು ಹಾರ್ಪರ್‌ಕಾಲಿನ್ಸ್ ಇಂಡಿಯಾ ಪ್ರಕಟಿಸಲಿದೆ. ಪೆಂಗ್ವಿನ್ ರ‍್ಯಾಂಡಮ್ ಹೌಸ್ ಇಂಡಿಯಾ ಜೊತೆ ಸಂಪಾದಕೀಯ ವಿಚಾರದಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಒಪ್ಪಂದದಿಂದ ಹಿಂದೆ ಸರಿದ ಕೆಲವೇ ದಿನಗಳಲ್ಲಿ ಹೊಸ ಪ್ರಕಾಶಕರಾಗಿ ಹಾರ್ಪರ್‌ಕಾಲಿನ್ಸ್ ಮುಂದೆ ಬಂದಿದೆ. ಸೆಪ್ಟೆಂಬರ್ 4ರಂದು ಪ್ರಕಟಣೆ ಹೊರಡಿಸಿರುವ ಸಂಸ್ಥೆ, ನವೆಂಬರ್ 10, 2026ರಂದು ಪುಸ್ತಕ ಬಿಡುಗಡೆಯಾಗಲಿದೆ ಎಂದು ತಿಳಿಸಿದೆ.
ಈ ಕೃತಿಯನ್ನು ಆರಂಭದಲ್ಲಿ ಅಮೆರಿಕದ ಪ್ರಕಾಶನ ಸಂಸ್ಥೆ ಆಲ್ಫ್ರೆಡ್ ಎ. ನಾಫ್ ಜಾಗತಿಕವಾಗಿ ಪ್ರಕಟಿಸುವುದಾಗಿ ಘೋಷಿಸಿತ್ತು. ಭಾರತದಲ್ಲಿ ಪ್ರಕಟಣೆಯ ಹೊಣೆಯನ್ನು ಪೆಂಗ್ವಿನ್ ರ‍್ಯಾಂಡಮ್ ಹೌಸ್ ಇಂಡಿಯಾ ವಹಿಸಿಕೊಂಡಿತ್ತು. ಒಂದು ಲಕ್ಷ ಪ್ರತಿಗಳ ಮುದ್ರಣಕ್ಕೂ ಯೋಜನೆ ರೂಪಿಸಲಾಗಿತ್ತು. ಆದರೆ ಸಂಪಾದನಾ ಪ್ರಕ್ರಿಯೆಯ ವೇಳೆ ಅಂತಿಮವಾಗಿ ಒಂದು ಪ್ರಮುಖ ವಿಚಾರದಲ್ಲಿ ಒಮ್ಮತ ಮೂಡದೆ ಒಪ್ಪಂದ ಮುಂದುವರಿಯಲಿಲ್ಲ.
ವರದಿಗಳ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಅಧಿಕೃತ ಭೇಟಿಗಳ ಕುರಿತ ಸೋನಿಯಾ ಗಾಂಧಿ ಅವರ ಅಭಿಪ್ರಾಯಗಳು, ಚುನಾವಣಾ ಪ್ರಚಾರದ ವೇಳೆ ತಮ್ಮ ವಿರುದ್ಧ ಬಳಸಲಾದ ಅವಹೇಳನಕಾರಿ ಪದಗಳ ಕುರಿತ ಅವರ ನಿಲುವು, ಭಾರತ-ಚೀನಾ ಸಂಬಂಧಗಳು ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುರಿತ ಅಭಿಪ್ರಾಯಗಳು ಸೇರಿದಂತೆ ರಾಜಕೀಯ ವಿಚಾರಗಳ ಬಗ್ಗೆ ಸಂಪಾದಕೀಯ ಭಿನ್ನಾಭಿಪ್ರಾಯ ಉಂಟಾಗಿತ್ತು ಎನ್ನಲಾಗಿದೆ.
ಸರ್ಕಾರದ ಒತ್ತಡದ ಆರೋಪ ತಳ್ಳಿಹಾಕಿದ ಪೆಂಗ್ವಿನ್
ಪುಸ್ತಕದ ಸೂಕ್ಷ್ಮ ಭಾಗಗಳನ್ನು ಬದಲಾಯಿಸಲು ಸರ್ಕಾರದ ಒತ್ತಡಕ್ಕೆ ಪೆಂಗ್ವಿನ್ ಮಣಿದಿದೆ ಎಂದು ಕಾಂಗ್ರೆಸ್ ನಾಯಕರಾದ ಅಶೋಕ್ ಗೆಹ್ಲೋಟ್ ಮತ್ತು ಕಮಲ್ ನಾಥ್ ಆರೋಪಿಸಿದ್ದರು. ಆದರೆ ಪೆಂಗ್ವಿನ್ ರ‍್ಯಾಂಡಮ್ ಹೌಸ್ ಇಂಡಿಯಾದ ವಕ್ತಾರೆ ಪಲ್ಲವಿ ನಾರಾಯಣ್ ಈ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಗೌಪ್ಯತೆಯ ನಿಯಮಗಳಡಿ ಹಸ್ತಪ್ರತಿಯನ್ನು ನಿರ್ವಹಿಸಲಾಗಿದ್ದರಿಂದ ಯಾವುದೇ ಬಾಹ್ಯ ಒತ್ತಡ ಇರಲಿಲ್ಲ ಎಂದು ಅವರು ಹೇಳಿದ್ದಾರೆ.
ಹಲವು ಅಂಶಗಳಲ್ಲಿ ಬದಲಾವಣೆಗಳಿಗೆ ಒಪ್ಪಿಗೆ ಮೂಡಿದ್ದರೂ, ಒಂದು ಅಂತಿಮ ವಿಚಾರದಲ್ಲಿ ಒಮ್ಮತ ಸಾಧ್ಯವಾಗದ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಅವರ ತಂಡ ಒಪ್ಪಂದದಿಂದ ಹಿಂದೆ ಸರಿಯಿತು ಎಂದು ಪೆಂಗ್ವಿನ್ ತಿಳಿಸಿತ್ತು.
ಬದಲಾವಣೆ ಕೇಳದೆ ಕೃತಿ ಪ್ರಕಟಿಸಲಿರುವ ಹಾರ್ಪರ್‌ಕಾಲಿನ್ಸ್
ಇದೀಗ ಹಾರ್ಪರ್‌ಕಾಲಿನ್ಸ್ ಇಂಡಿಯಾ ಕೃತಿಯ ಪ್ರಕಟಣಾ ಹಕ್ಕುಗಳನ್ನು ಪಡೆದುಕೊಂಡಿದ್ದು, ಯಾವುದೇ ವಿಷಯ ಬದಲಾವಣೆಗಳನ್ನು ಕೇಳದೆ ಪುಸ್ತಕ ಪ್ರಕಟಿಸಲು ಮುಂದಾಗಿದೆ. ವೈಯಕ್ತಿಕ ಬದುಕು ಮತ್ತು ರಾಜಕೀಯವನ್ನು ಸೊಗಸಾಗಿ ಬೆಸೆದಿರುವ ಆತ್ಮಕಥೆ ಎಂದು ಪ್ರಕಾಶನ ಸಂಸ್ಥೆ ಕೃತಿಯನ್ನು ಬಣ್ಣಿಸಿದೆ.
ಯುದ್ಧಾನಂತರದ ಇಟಲಿಯಲ್ಲಿನ ಸೋನಿಯಾ ಗಾಂಧಿ ಅವರ ಬಾಲ್ಯ, ರಾಜೀವ್ ಗಾಂಧಿ ಅವರೊಂದಿಗಿನ ಪ್ರೇಮಕಥೆ, ವೈಯಕ್ತಿಕ ಬದುಕಿನಲ್ಲಿ ಎದುರಿಸಿದ ದುರಂತಗಳು ಹಾಗೂ ಅವುಗಳು ಅವರನ್ನು ಭಾರತೀಯ ರಾಜಕೀಯದತ್ತ ಹೇಗೆ ಕರೆದೊಯ್ದವು ಎಂಬುದನ್ನು ಆತ್ಮಕಥೆ ಒಳಗೊಂಡಿದೆ. ಆಧುನಿಕ ಭಾರತದ ರಾಜಕೀಯ ಇತಿಹಾಸದ ಕುರಿತು ಸೋನಿಯಾ ಗಾಂಧಿ ಅವರ ದೃಷ್ಟಿಕೋನವನ್ನು ತಿಳಿಯಲು ಈ ಕೃತಿ ಪ್ರಮುಖ ದಾಖಲೆ ಆಗುವ ನಿರೀಕ್ಷೆಯಿದೆ.

