ಸೋನಮ್‌ ವಾಂಗ್ಚುಕ್‌ ಮನವಿ- 33 ದಿನಗಳ ಉಪವಾಸ ಸತ್ಯಾಗ್ರಹ ಕೈಬಿಟ್ಟ ವಿದ್ಯಾರ್ಥಿ ನಾಯಕ
x

ಸೋನಮ್‌ ವಾಂಗ್ಚುಕ್‌ ಮನವಿ- 33 ದಿನಗಳ ಉಪವಾಸ ಸತ್ಯಾಗ್ರಹ ಕೈಬಿಟ್ಟ ವಿದ್ಯಾರ್ಥಿ ನಾಯಕ

JPSC ಮತ್ತು JSSC ಪರೀಕ್ಷಾ ಅಕ್ರಮಗಳ ವಿರುದ್ಧ ಅನಿರ್ದಿಷ್ಟ ಉಪವಾಸ ನಡೆಸುತ್ತಿರುವ ಜಾರ್ಖಂಡ್ ವಿದ್ಯಾರ್ಥಿ ನಾಯಕ ದೇವೇಂದ್ರನಾಥ್ ಮಹತೋ, ಸೋನಮ್‌ ವಾಂಗ್ಚುಕ್ ಮನವಿಯ ಮೇರೆಗೆ ನೀರು ಸೇವಿಸಿದ್ದಾರೆ.


Click the Play button to hear this message in audio format

ಜಾರ್ಖಂಡ್ ಲೋಕಸೇವಾ ಆಯೋಗ (JPSC), ಜಾರ್ಖಂಡ್ ಸಿಬ್ಬಂದಿ ನೇಮಕಾತಿ ಆಯೋಗ (JSSC CGL) ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅಕ್ರಮಗಳ ವಿರುದ್ಧ ಜುಲೈ 3ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ವಿದ್ಯಾರ್ಥಿ ನಾಯಕ ದೇವೇಂದ್ರನಾಥ್ ಮಹತೋ ಅವರು ಬುಧವಾರ ಸಾಮಾಜಿಕ ಹೋರಾಟಗಾರ ಸೋನಮ್‌ ವಾಂಗ್ಚುಕ್ ಅವರ ಮನವಿಯ ಮೇರೆಗೆ ನೀರು ಸೇವಿಸಿ ಉಪವಾಸ ಸತ್ಯಾಗ್ರಹ ಕೈಬಿಟ್ಟಿದ್ದಾರೆ.

ಸುಮಾರು 10 ನಿಮಿಷಗಳ ಕಾಲ ನಡೆದ ವಿಡಿಯೊ ಕರೆ ವೇಳೆ ಸೋನಮ್‌ ವಾಂಗ್ಚುಕ್, ಮಹತೋ ಅವರ ಆರೋಗ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ಅಲ್ಲದೆ, ವಿದ್ಯಾರ್ಥಿಗಳ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದ ಅವರು, ಹೋರಾಟ ಮುಂದುವರಿಸುವುದರ ಜೊತೆಗೆ ಕನಿಷ್ಠ ನೀರಾದರೂ ಸೇವಿಸುವಂತೆ ಮನವಿ ಮಾಡಿದರು.

ವಾಂಗ್ಚುಕ್ ಅವರ ಮನವಿಯನ್ನು ಸ್ವೀಕರಿಸಿದ ದೇವೇಂದ್ರನಾಥ್ ಮಹತೋ, ತಮ್ಮ ಆರೋಗ್ಯ ಹದಗೆಟ್ಟಿರುವುದನ್ನು ಒಪ್ಪಿಕೊಂಡು ನೀರು ಸೇವಿಸಿದ್ದಾಗಿ ತಿಳಿಸಿದ್ದಾರೆ. "ನನ್ನ ಆರೋಗ್ಯ ಸರಿಯಿರಲಿಲ್ಲ. ಸೋನಮ್‌ ವಾಂಗ್ಚುಕ್ ಅವರ ಮನವಿಯ ಮೇರೆಗೆ ನಾನು ನೀರು ಸೇವಿಸಿದ್ದೇನೆ. ಜಂತರ್ ಮಂತರ್‌ನಲ್ಲಿ ನಡೆದ ರಾಷ್ಟ್ರವ್ಯಾಪಿ ವಿದ್ಯಾರ್ಥಿ ಹೋರಾಟದ ವೇಳೆ ನೀವು ನಮಗೆ ನೀಡಿದ ಬೆಂಬಲದಂತೆಯೇ, ಈಗ ಜಾರ್ಖಂಡ್‌ನಲ್ಲೂ ನಿಮ್ಮ ಬೆಂಬಲ ಮತ್ತು ಹಾಜರಾತಿ ಬೇಕಾಗಿದೆ" ಎಂದು ಮಹತೋ ಹೇಳಿದ್ದಾರೆ.

ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿಲ್ಲ

ನೀರು ಸೇವಿಸಿದರೂ ತಮ್ಮ ಅನಿರ್ದಿಷ್ಟ ಉಪವಾಸ ಮುಗಿದಿಲ್ಲ ಎಂದು ಮಹತೋ ಸ್ಪಷ್ಟಪಡಿಸಿದ್ದಾರೆ. "ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ನಾನು ಯಾವುದೇ ಆಹಾರ ಸೇವಿಸುವುದಿಲ್ಲ. ನಾನು ಕೇವಲ ನೀರು ಮಾತ್ರ ಸೇವಿಸಿದ್ದೇನೆ. ನನ್ನ ಉಪವಾಸ ಮುಂದುವರಿಯಲಿದೆ" ಎಂದು ಅವರು ಹೇಳಿದ್ದಾರೆ.

ರಾಂಚಿಗೆ ಬರುವಂತೆ ವಾಂಗ್ಚುಕ್‌ಗೆ ಮನವಿ

ಸೋನಮ್‌ ವಾಂಗ್ಚುಕ್ ಅವರನ್ನು ರಾಂಚಿಗೆ ಭೇಟಿ ನೀಡುವಂತೆ ದೇವೇಂದ್ರನಾಥ್ ಮಹತೋ ಮನವಿ ಮಾಡಿದ್ದಾರೆ. "ನೀವು ನಮ್ಮನ್ನು ಭೇಟಿ ಮಾಡಲು ರಾಂಚಿಗೆ ಬಂದಾಗ ಮಾತ್ರ ನಾನು ನನ್ನ ಉಪವಾಸವನ್ನು ಅಂತ್ಯಗೊಳಿಸುತ್ತೇನೆ. ದಯವಿಟ್ಟು ಇಲ್ಲಿಗೆ ಬನ್ನಿ. ನಮಗೆ ನಿಮ್ಮ ಮೇಲೆ ಅಪಾರ ಗೌರವವಿದೆ" ಎಂದು ವಿಡಿಯೊ ಕರೆ ವೇಳೆ ಮಹತೋ ಮನವಿ ಮಾಡಿದ್ದಾರೆ.

ಜಾರ್ಖಂಡ್‌ನಲ್ಲಿ JPSC, JSSC-CGL ಸೇರಿದಂತೆ ವಿವಿಧ ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಪಾರದರ್ಶಕ ತನಿಖೆ ನಡೆಸಬೇಕು ಹಾಗೂ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂಬ ಬೇಡಿಕೆಗಳೊಂದಿಗೆ ದೇವೇಂದ್ರನಾಥ್ ಮಹತೋ ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

Read More
Next Story