
ಚುನಾವಣಾ ರಾಜಕೀಯಕ್ಕೆ ಸಿದ್ದರಾಮಯ್ಯ ನಿವೃತ್ತಿ ಘೋಷಣೆ
ಸಾಮಾಜಿಕ ನ್ಯಾಯದ ಹರಿಕಾರ, ಮಾಜಿ ಸಿಎಂ ಸಿದ್ದರಾಮಯ್ಯ ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ. ಮೈಸೂರಿನ ಮಣ್ಣಿನ ದನಿಯ ಐದು ದಶಕಗಳ ರಾಜಕೀಯ ಪಯಣದ ಹಾದಿ ಇಲ್ಲಿದೆ.
ಕರ್ನಾಟಕ ರಾಜಕಾರಣದ ದಣಿವರಿಯದ ಹೋರಾಟಗಾರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಕೆ.ಆರ್. ಪೇಟೆಯಲ್ಲಿ ನಡೆದ ದಿವಂಗತ ಕೆ.ಆರ್.ಪೇಟೆ ಕೃಷ್ಣ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಂಬರುವ 2028ರ ವಿಧಾನಸಭೆ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಕಾರ್ಯಕ್ರಮದ ವೇಳೆ ನೆರೆದಿದ್ದ ಅಭಿಮಾನಿಗಳು ಮತ್ತು ಬೆಂಬಲಿಗರು "ಇನ್ನೂ ಕನಿಷ್ಠ 10 ವರ್ಷಗಳ ಕಾಲ ಚುನಾವಣಾ ರಾಜಕೀಯದಲ್ಲಿ ಸಕ್ರಿಯವಾಗಿರಿ" ಎಂದು ಮನವಿ ಮಾಡಿಕೊಂಡರು. ಆದರೆ, ಅಭಿಮಾನಿಗಳ ಮನವಿಗೆ ಭಾವುಕರಾಗಿಯೇ ಸ್ಪಂದಿಸಿದ ಸಿದ್ದರಾಮಯ್ಯ, "2028ರ ಚುನಾವಣೆಗೆ ನಾನು ಸ್ಪರ್ಧೆ ಮಾಡುವುದಿಲ್ಲ" ಎಂದು ಹೇಳುವ ಮೂಲಕ ತಮ್ಮ ರಾಜಕೀಯ ನಿವೃತ್ತಿಯ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಐದು ದಶಕಗಳ ಸುದೀರ್ಘ ರಾಜಕೀಯ ಹಾದಿಗೆ ಭಾವುಕ ತೆರೆ
ಮೇ 28 ರಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಆ ಮೂಲಕ ಐದು ದಶಕಗಳ ಕಾಲ ಸುದೀರ್ಘ ರಾಜಕೀಯ ಚರಿತ್ರೆ ಹೊಂದಿದ್ದ, ಅಹಿಂದ ವರ್ಗಗಳ ಪರ ದಣಿವರಿಯದೆ ಹೋರಾಡಿದ ನಾಯಕನ ಎರಡನೇ ಅವಧಿಯ ಮುಖ್ಯಮಂತ್ರಿ ಆಡಳಿತ ಅಂತ್ಯ ಕಂಡಿತ್ತು. ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮತ್ತು ರಾಹುಲ್ ಗಾಂಧಿಯವರ ಸಂದೇಶಕ್ಕೆ ಗೌರವ ನೀಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ, ರಾಜ್ಯ ರಾಜಕಾರಣದ ಅತ್ಯಂತ ಮಹತ್ವದ ಅಧ್ಯಾಯವೊಂದಕ್ಕೆ ಭಾವುಕ ತೆರೆ ಬಿದ್ದಿತ್ತು.
ಕೇವಲ ನಾಯಕನಲ್ಲ, ಹಿಂದುಳಿದವರ ಆತ್ಮಗೌರವದ ಧ್ವನಿ
ಮೈಸೂರು ರಾಜಕಾರಣದ ಮಣ್ಣಿನಲ್ಲಿ ಹುಟ್ಟಿ, ಜನಪರ ಹೋರಾಟಗಳಲ್ಲೇ ಬೆಳೆದು, ಅಧಿಕಾರ ತ್ಯಾಗ, ಅಧಿಕಾರ ವಂಚನೆ ಹಾಗೂ ಅಧಿಕಾರದ ವೈಭವ — ಇವೆಲ್ಲವನ್ನೂ ಕಂಡ ಅಪರೂಪದ ರಾಜಕಾರಣಿ ಎಂದರೆ ಅದು ಸಿದ್ದರಾಮಯ್ಯ. ಕರ್ನಾಟಕ ರಾಜಕಾರಣದಲ್ಲಿ ಕೆಲವರು ಹುದ್ದೆ ಹಿಡಿದು ದೊಡ್ಡವರಾಗುತ್ತಾರೆ, ಇನ್ನು ಕೆಲವರಿಗೆ ವ್ಯಕ್ತಿತ್ವ ದೊಡ್ಡದಿದ್ದಕ್ಕೆ ಹುದ್ದೆ ಹುಡುಕಿಕೊಂಡು ಬರುತ್ತದೆ. ಆದರೆ ಸಿದ್ದರಾಮಯ್ಯ ಈ ಎರಡಕ್ಕಿಂತಲೂ ವಿಭಿನ್ನವಾಗಿ ಬೆಳೆದವರು. ಸಿದ್ದರಾಮಯ್ಯ ಕೇವಲ ಒಬ್ಬ ಮುಖ್ಯಮಂತ್ರಿಯಾಗಿ ಅಥವಾ ರಾಜಕೀಯ ನಾಯಕನಾಗಿ ಉಳಿಯಲಿಲ್ಲ. ಬದಲಾಗಿ, ಅವರು ಶೋಷಿತ ವರ್ಗದ ಕೋಪದ ಧ್ವನಿಯಾಗಿ, ಸಮಾಜದ ಆತ್ಮಗೌರವವಾಗಿ, ಮೈಸೂರಿನ ಮಣ್ಣಿನ ದನಿಯಾಗಿ ಮತ್ತು ಹಿಂದುಳಿದ ವರ್ಗಗಳ ರಾಜಕೀಯ ಭಾಷೆಯಾಗಿ ರಾಜಕಾರಣ ಮಾಡಿದವರು.
ಮೈಸೂರು ಭಾಗದ ರಾಜಕೀಯವನ್ನು ದಿವಂಗತ ದೇವರಾಜ ಅರಸು ಅವರು 'ಶಕ್ತಿಯ ಸಮೀಕರಣ' ಎಂದು ಬದಲಾಯಿಸಿದ್ದರೆ, ಸಿದ್ದರಾಮಯ್ಯ ಅದನ್ನು 'ಸಾಮಾಜಿಕ ನ್ಯಾಯದ ಯುದ್ಧ'ವನ್ನಾಗಿ ಮುನ್ನಡೆಸಿದವರು. ಇದೀಗ ಅವರ ಈ ಚುನಾವಣಾ ರಾಜಕೀಯ ನಿವೃತ್ತಿಯ ನಿರ್ಧಾರದಿಂದಾಗಿ ರಾಜ್ಯಾದ್ಯಂತ ಇರುವ ಅವರ ಲಕ್ಷಾಂತರ ಅಭಿಮಾನಿಗಳು ಹಾಗೂ ಬೆಂಬಲಿಗರು ತೀವ್ರ ಬೇಸರಗೊಂಡಿದ್ದಾರೆ.

