
ಬಿಜೆಪಿ ರಾಷ್ಟ್ರೀಯ ವಕ್ತಾರ ಸ್ಥಾನಕ್ಕೆ ಶೆಹಜಾದ್ ಪೂನಾವಾಲಾ ರಾಜೀನಾಮೆ
ತಮ್ಮ ರಾಜೀನಾಮೆಯ ಕಾರಣವನ್ನು ವಿವರಿಸಿರುವ ಅವರು, ತುರ್ತು ಆರ್ಥಿಕ ಮತ್ತು ವೈಯಕ್ತಿಕ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಖಾಸಗಿ ವಲಯಕ್ಕೆ ತೆರಳುವ ನಿರ್ಧಾರ ಕೈಗೊಂಡಿರುವುದಾಗಿ ಶೆಹಜಾದ್ ಪೂನಾವಾಲಾ ಹೇಳಿದ್ದಾರೆ.
ಬಿಜೆಪಿಯ ರಾಷ್ಟ್ರೀಯ ವಕ್ತಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಶೆಹಜಾದ್ ಪೂನಾವಾಲಾ ಇದೀಗ ಮತ್ತೊಮ್ಮೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ತಮ್ಮ ರಾಜೀನಾಮೆಯನ್ನು ಅಂಗೀಕರಿಸಿ, ಪಕ್ಷದ ಸಂಘಟನಾ ಜವಾಬ್ದಾರಿಗಳಿಂದ ತಮ್ಮನ್ನು ಮುಕ್ತಗೊಳಿಸುವಂತೆ ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್ ಅವರಿಗೆ ಮನವಿ ಮಾಡಿದ್ದಾರೆ.
ನಿತಿನ್ ನಬಿನ್ ಅವರಿಗೆ ಬರೆದಿರುವ ಪತ್ರವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಶೆಹಜಾದ್ ಪೂನಾವಾಲಾ, ತಾವು ಈ ಹಿಂದೆ ನೀಡಿದ್ದ ರಾಜೀನಾಮೆಯನ್ನು ಬಿಜೆಪಿ ನಾಯಕತ್ವ ತಕ್ಷಣ ಅಂಗೀಕರಿಸದೆ, ನಿರ್ಧಾರವನ್ನು ಮರುಪರಿಶೀಲಿಸುವಂತೆ ಸೂಚಿಸಿದ್ದಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಆದರೆ, ಸುದೀರ್ಘ ಚಿಂತನೆಯ ಬಳಿಕ ಪಕ್ಷದ ಸಂಘಟನಾ ಹುದ್ದೆ ಹಾಗೂ ಸಕ್ರಿಯ ಸದಸ್ಯತ್ವದಿಂದ ಹೊರಬರುವ ತಮ್ಮ ನಿರ್ಧಾರ ಅಂತಿಮವಾಗಿದೆ ಎಂದು ತಿಳಿಸಿದ್ದಾರೆ.
“ಕಳೆದ ಕೆಲವು ದಿನಗಳ ಘಟನೆಗಳು, ನಾನು ಈ ಹಿಂದೆ ವಿವರವಾಗಿ ತಿಳಿಸಿದ್ದ ಕೆಲವು ವ್ಯಕ್ತಿಗಳ ಕಾರಣದಿಂದಾಗಿ, ನನ್ನ ಹಿಂದಿನ ನಿರ್ಧಾರಕ್ಕೆ ಮತ್ತಷ್ಟು ಬದ್ಧವಾಗುವಂತೆ ಮಾಡಿವೆ” ಎಂದು ಪೂನಾವಾಲಾ ಪತ್ರದಲ್ಲಿ ತಿಳಿಸಿದ್ದಾರೆ. ಆದರೆ, ಅವರು ಆ ವ್ಯಕ್ತಿಗಳ ಹೆಸರನ್ನು ಬಹಿರಂಗಪಡಿಸಿಲ್ಲ.
ಖಾಸಗಿ ವಲಯಕ್ಕೆ ತೆರಳುವ ನಿರ್ಧಾರ
2021ರ ಕೊನೆಯಲ್ಲಿ ಬಿಜೆಪಿಗೆ ಸೇರ್ಪಡೆಯಾದ ಶೆಹಜಾದ್ ಪೂನಾವಾಲಾ, ಪಕ್ಷದ ಪ್ರಮುಖರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ಬಿಜೆಪಿಯ ಪ್ರಮುಖ ಮುಸ್ಲಿಂ ವಕ್ತಾರರಲ್ಲೂ ಅವರು ಒಬ್ಬರಾಗಿದ್ದರು. ತಮ್ಮ ರಾಜೀನಾಮೆಯ ಕಾರಣವನ್ನು ವಿವರಿಸಿರುವ ಅವರು, ತುರ್ತು ಆರ್ಥಿಕ ಮತ್ತು ವೈಯಕ್ತಿಕ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಖಾಸಗಿ ವಲಯಕ್ಕೆ ತೆರಳುವ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದ್ದಾರೆ.
ಆದರೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ದೃಷ್ಟಿಕೋನ ಮತ್ತು ಕಾರ್ಯಗಳಿಗೆ ಸಾಧ್ಯವಾದ ಎಲ್ಲ ರೀತಿಯಲ್ಲಿ ಮುಂದೆಯೂ ಬೆಂಬಲ ನೀಡುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
“ನಾನು ವ್ಯವಸ್ಥೆಯಿಂದ ಮಾತ್ರ ಹೊರಬರುತ್ತಿದ್ದೇನೆ, ವ್ಯಕ್ತಿ ಅಥವಾ ವಿಚಾರದಿಂದಲ್ಲ” ಎಂದು ಶೆಹಜಾದ್ ಪೂನಾವಾಲಾ ಹೇಳಿದ್ದಾರೆ. ತಮ್ಮ ರಾಜೀನಾಮೆ ಪ್ರಧಾನಿ ಮೋದಿ ಅಥವಾ ಬಿಜೆಪಿಯ ಸೈದ್ಧಾಂತಿಕ ನಿಲುವಿನಿಂದ ದೂರವಾಗುವ ನಿರ್ಧಾರವಲ್ಲ ಎಂಬುದನ್ನು ಅವರು ಈ ಮೂಲಕ ಸ್ಪಷ್ಟಪಡಿಸಿದ್ದಾರೆ.
ಮೋದಿ, ಶಾ ಸೇರಿದಂತೆ ಹಿರಿಯ ನಾಯಕರಿಗೆ ಧನ್ಯವಾದ
ತಮ್ಮ ನಿರ್ಧಾರ ಯಾವುದೇ ಅಸಮಾಧಾನದಿಂದ ಪ್ರೇರಿತವಾಗಿಲ್ಲ ಎಂದು ಪೂನಾವಾಲಾ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸೇರಿದಂತೆ ಪಕ್ಷದ ಹಿರಿಯ ನಾಯಕರಿಗೆ ಕೃತಜ್ಞತೆ, ಪ್ರೀತಿ ಮತ್ತು ಗೌರವವನ್ನು ವ್ಯಕ್ತಪಡಿಸಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಬಿಜೆಪಿ ನೀಡಿದ ವೇದಿಕೆ ಮತ್ತು ಅವಕಾಶಗಳಿಗಾಗಿ ಪಕ್ಷಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ಎಕ್ಸ್‌ನಲ್ಲಿ ರಾಜೀನಾಮೆ ಪತ್ರವನ್ನು ಹಂಚಿಕೊಂಡಿರುವ ಅವರು, “ಬೇರೆ ಯಾವುದೇ ದೇಶದಲ್ಲಿ ಮತ್ತು ಬೇರೆ ಯಾವುದೇ ಪಕ್ಷದಲ್ಲಿ, ನನ್ನಂತಹ ಯುವ ಮುಸ್ಲಿಂ, ರಾಜಕೀಯ ಕುಟುಂಬದ ಹಿನ್ನೆಲೆಯಿಲ್ಲದ ವ್ಯಕ್ತಿ ಛಾಪು ಮೂಡಿಸಲು ಸಾಧ್ಯವಾಗುತ್ತಿರಲಿಲ್ಲ” ಎಂದು ಹೇಳಿದ್ದಾರೆ.
ಕಾಂಗ್ರೆಸ್‌ನಿಂದ ರಾಜಕೀಯ ಜೀವನ ಆರಂಭ
38 ವರ್ಷದ ವಕೀಲರಾಗಿದ್ದ ಪೂನಾವಾಲಾ ಕಾಂಗ್ರೆಸ್‌ನೊಂದಿಗೆ ತಮ್ಮ ರಾಜಕೀಯ ಜೀವನ ಆರಂಭಿಸಿದ್ದರು. ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಆಯ್ಕೆಯಾಗುವುದನ್ನು ವಿರೋಧಿಸಿ ಪಕ್ಷದ ವಿರುದ್ಧ ಬಂಡಾಯ ಎದ್ದ ಬಳಿಕ ಅವರು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದರು.
ನಂತರ ಬಿಜೆಪಿಗೆ ಸೇರ್ಪಡೆಯಾದ ಅವರು ಪಕ್ಷದ ಪ್ರಮುಖ ರಾಷ್ಟ್ರೀಯ ವಕ್ತಾರರಾಗಿ ಗುರುತಿಸಿಕೊಂಡರು. ದೂರದರ್ಶನದ ರಾಜಕೀಯ ಚರ್ಚೆಗಳು, ಪತ್ರಿಕಾಗೋಷ್ಠಿಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಪರವಾಗಿ ಪಕ್ಷದ ನಿಲುವುಗಳನ್ನು ಸಮರ್ಥಿಸುವ ಪ್ರಮುಖ ಮುಖವಾಗಿದ್ದರು. 2021ರಲ್ಲಿ ಬಿಜೆಪಿಯ ದೆಹಲಿ ಐಟಿ ಮತ್ತು ಸಾಮಾಜಿಕ ಮಾಧ್ಯಮ ವಿಭಾಗದ ಜವಾಬ್ದಾರಿಯನ್ನೂ ಅವರಿಗೆ ನೀಡಲಾಗಿತ್ತು.

