
ದಾಖಲೆಗಳಿಲ್ಲದೆ ದೀರ್ಘಕಾಲ ಅನಧಿಕೃತವಾಗಿ ಗೈರುಹಾಜರಾಗುವ ಉದ್ಯೋಗಿಗಳನ್ನು ವಜಾಗೊಳಿಸುವ ಕಂಪನಿಗಳ ಕ್ರಮ ಕಾನೂನುಬಾಹಿರವಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ
ಅನಧಿಕೃತ ಗೈರುಹಾಜರಿಯಾದ ಉದ್ಯೋಗಿ ಮಾಡಬಹುದು: ಸುಪ್ರೀಂ ಕೋರ್ಟ್
ದಾಖಲೆಗಳಿಲ್ಲದೆ ದೀರ್ಘಕಾಲ ಗೈರಾಗುವ ಉದ್ಯೋಗಿಗಳನ್ನು ವಜಾಗೊಳಿಸುವ ಕಂಪನಿಗಳ ಕ್ರಮ ನಿಯಮಬಾಹಿರವಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಯಾವುದೇ ಸೂಕ್ತ ದಾಖಲೆಗಳನ್ನು ಒದಗಿಸದೆ ಕೆಲಸಕ್ಕೆ ಅನಧಿಕೃತವಾಗಿ ದೀರ್ಘಕಾಲ ಗೈರುಹಾಜರಾಗುವ ಉದ್ಯೋಗಿಗಳನ್ನು ಸೇವೆಯಿಂದ ವಜಾಗೊಳಿಸುವ ಕಂಪನಿಗಳ ಕ್ರಮವು ನಿಯಮಬಾಹಿರವಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ಪ್ರಕಟಿಸಿದೆ.
ವಜಾಗೊಂಡ ಉದ್ಯೋಗಿಯೊಬ್ಬರು ಆ ಕ್ರಮವನ್ನು ಕಾನೂನುಬಾಹಿರ ಎಂದು ಸಾಬೀತುಪಡಿಸಲು ಅಗತ್ಯ ಸಾಕ್ಷ್ಯಾಧಾರ ಹಾಗೂ ದಾಖಲೆಗಳನ್ನು ಒದಗಿಸುವಲ್ಲಿ ವಿಫಲರಾದರೆ, ಆ ವಜಾ ಕ್ರಮವನ್ನು ಅಕ್ರಮ ಅಥವಾ ನಿಯಮಬಾಹಿರ ಎಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಹಾಗೂ ಸಂದೀಪ್ ಮೆಹ್ತಾ ಅವರಿದ್ದ ದ್ವಿಸದಸ್ಯ ಪೀಠವು ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ ಹಾಗೂ ಹೈಕೋರ್ಟ್ ಆದೇಶ
ರಿಫಿಲಿಸ್ ಎಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆ ಈ ಮಹತ್ವದ ತೀರ್ಪು ಹೊರಬಿದ್ದಿದೆ. ಕಂಪನಿಯ ಉದ್ಯೋಗಿ ಅರ್ಜುನ್ ಗುಪ್ತ ಅವರನ್ನು ಕೆಲಸದಿಂದ ವಜಾಗೊಳಿಸಿದ ಪ್ರಕರಣದಲ್ಲಿ, ಶೇಕಡಾ ಐವತ್ತರಷ್ಟು ಬಾಕಿ ವೇತನ ಪಾವತಿಯೊಂದಿಗೆ ಅವರನ್ನು ಮರುಸೇವೆಗೆ ತೆಗೆದುಕೊಳ್ಳುವಂತೆ ಕಾರ್ಮಿಕ ನ್ಯಾಯಾಲಯ ಆದೇಶಿಸಿತ್ತು. ಬಳಿಕ, 2024ರಲ್ಲಿ ಅಲಹಾಬಾದ್ ಹೈಕೋರ್ಟ್ ಕೂಡ ಕಾರ್ಮಿಕ ನ್ಯಾಯಾಲಯದ ಆದೇಶವನ್ನೇ ಎತ್ತಿಹಿಡಿದಿತ್ತು. ಈ ಆದೇಶಗಳನ್ನು ರದ್ದುಗೊಳಿಸುವಂತೆ ಕೋರಿ ಕಂಪನಿಯು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ನ್ಯಾಯಾಲಯದಲ್ಲಿ ನಡೆದ ವಾದ-ಪ್ರತಿವಾದಗಳು
ವಿಚಾರಣೆ ವೇಳೆ ತಮ್ಮ ವಾದ ಮಂಡಿಸಿದ ಉದ್ಯೋಗಿ ಅರ್ಜುನ್ ಗುಪ್ತ, ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯ ಆರೈಕೆಗಾಗಿ ತಮ್ಮ ಮೇಲಧಿಕಾರಿಗೆ ಕೇವಲ ಮೌಖಿಕವಾಗಿ ಮಾಹಿತಿ ನೀಡಿ ರಜೆ ಪಡೆದಿದ್ದಾಗಿ ತಿಳಿಸಿದರು. ರಜೆ ಮುಗಿಸಿ ಹಿಂದಿರುಗಿದಾಗ ಕಂಪನಿಯು ತಮ್ಮನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಲಿಲ್ಲ ಎಂದು ದೂರಿದರು. ಈ ವಾದವನ್ನು ಆಕ್ಷೇಪಿಸಿದ ಕಂಪನಿಯು, ಉದ್ಯೋಗಿಯು 2012ರ ಮೇ 14ರಿಂದ ಯಾವುದೇ ಲಿಖಿತ ಅನುಮತಿಯಿಲ್ಲದೆ ಕರ್ತವ್ಯಕ್ಕೆ ಗೈರಾಗಿದ್ದರು ಎಂದು ನ್ಯಾಯಾಲಯದ ಗಮನಕ್ಕೆ ತಂದಿತು. ಜೊತೆಗೆ, ಈ ಅನಧಿಕೃತ ಗೈರುಹಾಜರಿಯ ಕುರಿತು ವಿವರಣೆ ಕೇಳಿ ಉದ್ಯೋಗಿಯ ನಿವಾಸಕ್ಕೆ ನೋಟಿಸ್ ಕಳುಹಿಸಲಾಗಿತ್ತು. ಆದರೆ, ಅವರು ನೀಡಿದ್ದ ವಿಳಾಸದಲ್ಲಿ ಲಭ್ಯವಿರಲಿಲ್ಲ ಎಂಬ ಮಾಹಿತಿಯನ್ನು ಕಂಪನಿ ಒದಗಿಸಿತು.
ಸುಪ್ರೀಂ ಕೋರ್ಟ್ ಪೀಠದ ಅಂತಿಮ ತೀರ್ಮಾನ
ಉಭಯ ಕಡೆಯ ವಾದಗಳನ್ನು ಆಲಿಸಿದ ಸುಪ್ರೀಂ ಕೋರ್ಟ್, ಉದ್ಯೋಗಿಯು ಯಾವುದೇ ಮುನ್ಸೂಚನೆ ಹಾಗೂ ಲಿಖಿತ ಅನುಮತಿಯಿಲ್ಲದೆ ಕರ್ತವ್ಯಕ್ಕೆ ಗೈರಾಗಿದ್ದನ್ನು ಗಂಭೀರವಾಗಿ ಪರಿಗಣಿಸಿತು. ಗೈರುಹಾಜರಿಯ ಬಳಿಕ ಮರಳಿ ಕರ್ತವ್ಯಕ್ಕೆ ಹಾಜರಾಗುವಾಗ ಅಥವಾ ಮರುನಿಯುಕ್ತಿಗಾಗಿ ಆಗ್ರಹಿಸುವಾಗ ತಮ್ಮ ಗೈರುಹಾಜರಿಯನ್ನು ಸಮರ್ಥಿಸಿಕೊಳ್ಳುವಂತಹ ಯಾವುದೇ ಅಧಿಕೃತ ದಾಖಲೆಗಳನ್ನು ಒದಗಿಸುವಲ್ಲಿ ಅರ್ಜುನ್ ಗುಪ್ತ ವಿಫಲರಾಗಿದ್ದಾರೆ ಎಂಬುದನ್ನು ಪೀಠವು ಬೊಟ್ಟು ಮಾಡಿತು. ಕೇವಲ ಮೌಖಿಕ ಹೇಳಿಕೆಯ ಆಧಾರದ ಮೇಲೆ ದೀರ್ಘಕಾಲದ ಗೈರುಹಾಜರಿಯನ್ನು ಸಮರ್ಥಿಸಿಕೊಳ್ಳಲಾಗದು ಎಂದ ನ್ಯಾಯಾಲಯ, ಕಾರ್ಮಿಕ ನ್ಯಾಯಾಲಯ ಹಾಗೂ ಅಲಹಾಬಾದ್ ಹೈಕೋರ್ಟ್‌ಗಳು ಪ್ರಕರಣದ ವಾಸ್ತವಾಂಶವನ್ನು ತಪ್ಪಾಗಿ ಗ್ರಹಿಸಿ ಆದೇಶ ನೀಡಿವೆ ಎಂದು ಅಭಿಪ್ರಾಯಪಟ್ಟಿದೆ. ಈ ಮೂಲಕ ಹೈಕೋರ್ಟ್ ಆದೇಶವನ್ನು ಬದಿಗೆ ಸರಿಸಿದ ಸುಪ್ರೀಂ ಕೋರ್ಟ್, ಉದ್ಯೋಗಿಯನ್ನು ವಜಾಗೊಳಿಸಿದ ಕಂಪನಿಯ ಕ್ರಮವನ್ನು ಎತ್ತಿಹಿಡಿದಿದೆ.

