ಸ್ಟ್ಯಾಂಡ್‌ಅಪ್‌ ಕಾಮಿಡಿಯನ್‌ ಸಮಯ್‌ ರೈನಾಗೆ ಬಿಗ್‌ ರಿಲೀಫ್‌- ಎಲ್ಲಾ FIR ರದ್ದುಪಡಿಸಿದ ಸುಪ್ರೀಂ ಕೋರ್ಟ್
x

ಸ್ಟ್ಯಾಂಡ್‌ಅಪ್‌ ಕಾಮಿಡಿಯನ್‌ ಸಮಯ್‌ ರೈನಾಗೆ ಬಿಗ್‌ ರಿಲೀಫ್‌- ಎಲ್ಲಾ FIR ರದ್ದುಪಡಿಸಿದ ಸುಪ್ರೀಂ ಕೋರ್ಟ್

ವಿಶೇಷಚೇತನರನ್ನು ಅಪಮಾನ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಸಮಯ್ ರೈನಾ ಹಾಗೂ ಇತರ ಅರೋಪಿಗಳು ವಿಶೇಷಚೇತನರ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಬೇಕು ಮತ್ತು ಅವರಿಗಾಗಿ ನಿಧಿ ಸಂಗ್ರಹಿಸಬೇಕು ಎಂದು ಈ ಹಿಂದೆ ಸೂಚಿಸಿತ್ತು.


ಇಂಡಿಯಾಸ್‌ ಗಾಟ್‌ ಲೇಟೆಂಟ್‌ ಕಾರ್ಯಕ್ರಮದಲ್ಲಿ ವಿಕಲಚೇತನರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಸಮಯ್ ರೈನಾ ಮತ್ತು ಇತರ ನಾಲ್ವರ ವಿರುದ್ಧ ದಾಖಲಾಗಿದ್ದ ಎಲ್ಲಾ FIRಗಳನ್ನು ಸುಪ್ರೀಂ ಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ.

ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್‌ ಅವರಿದ್ದ ನ್ಯಾಯಪೀಠ, ಶುಕ್ರವಾರ ಈ ಮಹತ್ವದ ಆದೇಶ ಹೊರಡಿಸಿದೆ. ಸಮಯ್ ರೈನಾ ಹಾಗೂ ಇತರ ಅರೋಪಿಗಳು ವಿಶೇಷಚೇತನರ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಬೇಕು ಮತ್ತು ಅವರಿಗಾಗಿ ನಿಧಿ ಸಂಗ್ರಹಿಸಬೇಕು ಎಂದು ಈ ಹಿಂದೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಈ ನಿರ್ದೇಶನವನ್ನು ಅವರು ಪಾಲಿಸಿರುವುದನ್ನು ಗಮನಿಸಿದ ನ್ಯಾಯಪೀಠ, ಅವರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ರದ್ದುಪಡಿಸಿದೆ.

ಐವರ ವಿರುದ್ಧದ FIR ರದ್ದು

ಸಮಯ್ ರೈನಾ ಹೊರತುಪಡಿಸಿ ವಿಪುಲ್ ಗೋಯಲ್, ಬಲರಾಜ್ ಪರಮಜೀತ್ ಸಿಂಗ್ ಘೈ, ಸೋನಾಲಿ ಠಕ್ಕರ್ ಅಲಿಯಾಸ್ ಸೋನಾಲಿ ಆದಿತ್ಯ ದೇಸಾಯಿ ಹಾಗೂ ನಿಶಾಂತ್ ಜಗದೀಶ್ ತನ್ವರ್ ವಿರುದ್ಧ ದಾಖಲಾಗಿದ್ದ FIRಗಳನ್ನೂ ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಈ ಹಿಂದೆ ನಡೆದ ವಿಚಾರಣೆಯಲ್ಲಿ ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸದೇ, ನ್ಯಾಯಾಲಯಕ್ಕೆ ನೀಡಿದ್ದ ಭರವಸೆಗಳನ್ನು ಈಡೇರಿಸದ ಆರೋಪದ ಹಿನ್ನೆಲೆಯಲ್ಲಿ ಸಮಯ್ ರೈನಾ ಮತ್ತು ಇತರ ನಾಲ್ವರಿಗೆ ಒಟ್ಟು 3 ಲಕ್ಷ ರೂ. ದಂಡ ವಿಧಿಸಲಾಗಿತ್ತು.

ಏನಿದು ವಿವಾದ?

‘India’s Got Latent’ ಕಾರ್ಯಕ್ರಮದಲ್ಲಿ ಸಮಯ್ ರೈನಾ ಅವರು ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ (SMA) ಚಿಕಿತ್ಸೆಯ ದುಬಾರಿ ವೆಚ್ಚದ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಹಾಗೂ ವಿಶೇಷಚೇತನ ವ್ಯಕ್ತಿಯನ್ನು ಅಪಹಾಸ್ಯ ಮಾಡಿದ್ದಾರೆ ಎಂದು ಆರೋಪಿಸಿ SMA ಫೌಂಡೇಶನ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಕಾರ್ಯಕ್ರಮದ ನಿರೂಪಕರಾಗಿದ್ದ ಸಮಯ್ ರೈನಾ ಸೇರಿದಂತೆ ವಿಪುಲ್ ಗೋಯಲ್, ಬಲರಾಜ್ ಪರಮಜೀತ್ ಸಿಂಗ್ ಘೈ, ಸೋನಾಲಿ ಠಕ್ಕರ್ ಮತ್ತು ನಿಶಾಂತ್ ಜಗದೀಶ್ ತನ್ವರ್ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಸಮಯ್ ರೈನಾ ಹಾಗೂ ಇತರರು ವಿಶೇಷಚೇತನ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲು ಮತ್ತು ನಿಧಿ ಸಂಗ್ರಹಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ. ನ್ಯಾಯಪೀಠದ ಪ್ರಕಾರ, ಪ್ರಾಮಾಣಿಕ ಪ್ರಯತ್ನಗಳು ನಡೆದಾಗ ಸಕಾರಾತ್ಮಕ ಫಲಿತಾಂಶಗಳು ದೊರೆಯುತ್ತವೆ. ಯುವಕರು ಸಕಾರಾತ್ಮಕ ದಿಕ್ಕಿನಲ್ಲಿ ಕೆಲಸ ಮಾಡಲು ಆರಂಭಿಸಿರುವುದರಿಂದ ಉತ್ತಮ ಪರಿಣಾಮ ಉಂಟಾಗಲಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

Read More
Next Story