ಸೈಫ್‌ಗೆ ಚಾಕು ಇರಿತ ಪ್ರಕರಣ| ತಪ್ಪೊಪ್ಪಿಕೊಳ್ಳಲು ಕೋರ್ಟ್ ಮೆಟ್ಟಿಲೇರಿದ ಆರೋಪಿ
x

ಸೈಫ್ ಅಲಿ ಖಾನ್ ಮೇಲಿನ ದಾಳಿ ಪ್ರಕರಣದ ವಿಚಾರಣೆಗೂ ಮುನ್ನವೇ ಆರೋಪಿ ತಪ್ಪೊಪ್ಪಿಕೊಳ್ಳಲು ಮುಂದಾಗಿದ್ದಾರೆ.

ಸೈಫ್‌ಗೆ ಚಾಕು ಇರಿತ ಪ್ರಕರಣ| ತಪ್ಪೊಪ್ಪಿಕೊಳ್ಳಲು ಕೋರ್ಟ್ ಮೆಟ್ಟಿಲೇರಿದ ಆರೋಪಿ

2025ರ ಜನವರಿಯಲ್ಲಿ ಸೈಫ್ ಅಲಿ ಖಾನ್ ಮೇಲೆ ಚಾಕುವಿನಿಂದ ದಾಳಿ ಮಾಡಿದ ಆರೋಪ ಎದುರಿಸುತ್ತಿರುವ ಶರಿಫುಲ್ ಇಸ್ಲಾಂ, ತಪ್ಪೊಪ್ಪಿಕೊಂಡು ಶಿಕ್ಷೆ ಕಡಿಮೆ ಮಾಡುವಂತೆ ಕೋರಿದ್ದಾನೆ.


Click the Play button to hear this message in audio format

ಸೈಫ್ ಅಲಿ ಖಾನ್ ಮೇಲಿನ ಚಾಕು ಇರಿತ ಪ್ರಕರಣದ ಆರೋಪಿ ಮೊಹಮ್ಮದ್ ಶರಿಫುಲ್ ಇಸ್ಲಾಂ ಶೇಖ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ತಪ್ಪೊಪ್ಪಿಕೊಳ್ಳಲು ಸಿದ್ಧನಿರುವುದಾಗಿ ತಿಳಿಸಿದ್ದಾರೆ. ತನ್ನ ಕೃತ್ಯಕ್ಕೆ ಪಶ್ಚಾತ್ತಾಪವಿದೆ ಎಂದು ಹೇಳಿರುವ ಆರೋಪಿ, ಶಿಕ್ಷೆಯಲ್ಲಿ ರಿಯಾಯಿತಿ ನೀಡುವಂತೆ ನ್ಯಾಯಾಲಯವನ್ನು ಕೋರಿದ್ದಾರೆ. ಈ ಅರ್ಜಿಯನ್ನು ಅವರ ಪರ ವಕೀಲ ವಿಪುಲ್ ದುಶಿಂಗ್ ಸಲ್ಲಿಸಿದ್ದಾರೆ.

2025ರ ಜನವರಿ 16ರಂದು ಮುಂಬೈನ ಬಾಂದ್ರಾದಲ್ಲಿರುವ ಸೈಫ್ ಅಲಿ ಖಾನ್ ಅವರ 12ನೇ ಮಹಡಿಯ ನಿವಾಸಕ್ಕೆ ಆರೋಪಿ ಅಕ್ರಮವಾಗಿ ಪ್ರವೇಶಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ವೇಳೆ ಸೈಫ್ ಅಲಿ ಖಾನ್ ಅವರ ಮೇಲೆ ಹಲವು ಬಾರಿ ಚಾಕುವಿನಿಂದ ಇರಿತ ನಡೆಸಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಸೈಫ್ ಅವರನ್ನು ತಕ್ಷಣ ಲೀಲಾವತಿ ಆಸ್ಪತ್ರೆಗೆ ದಾಖಲಿಸಿ ತುರ್ತು ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಐದು ದಿನಗಳ ಬಳಿಕ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.

ಆರೋಪಿಯ ವಿರುದ್ಧ ಗಂಭೀರ ಪ್ರಕರಣ

ಆರೋಪಿ ಶರಿಫುಲ್ ವಿರುದ್ಧ ಮಾರಕ ಆಯುಧ ಬಳಸಿ ದರೋಡೆ, ಗಂಭೀರ ಗಾಯ ಉಂಟುಮಾಡುವುದು ಮತ್ತು ಮನೆಗೆ ಅಕ್ರಮ ಪ್ರವೇಶ ಸೇರಿದಂತೆ ಭಾರತೀಯ ನ್ಯಾಯ ಸಂಹಿತೆಯಡಿ ಆರೋಪ ಹೊರಿಸಲಾಗಿದೆ. ವಿದೇಶಿಯರ ಕಾಯ್ದೆ ಹಾಗೂ ಭಾರತ ಪ್ರವೇಶಕ್ಕೆ ಸಂಬಂಧಿಸಿದ ಪಾಸ್‌ಪೋರ್ಟ್ ನಿಯಮಗಳ ಅಡಿಯಲ್ಲಿಯೂ ಪ್ರಕರಣ ದಾಖಲಿಸಲಾಗಿದೆ.

ವಿಚಾರಣೆಗೆ ದಾರಿ ಮಾಡಿಕೊಟ್ಟ ಕೋರ್ಟ್

ಈ ತಿಂಗಳ ಆರಂಭದಲ್ಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಜಿ.ಪಿ. ದೇಶಮುಖ್ ಅವರು ಆರೋಪಿಯ ವಿರುದ್ಧ ಆರೋಪಗಳನ್ನು ರೂಪಿಸಿದ್ದರು. ಇದರಿಂದ ಪ್ರಕರಣದ ವಿಚಾರಣೆ ಆರಂಭಿಸಲು ಕಾನೂನುಬದ್ಧವಾಗಿ ದಾರಿ ತೆರೆಯಲಾಗಿತ್ತು. ಇದೀಗ ಆರೋಪಿ ವಿಚಾರಣೆಯನ್ನು ಎದುರಿಸುವ ಮುನ್ನವೇ ತಪ್ಪೊಪ್ಪಿಕೊಳ್ಳಲು ಮುಂದಾಗಿರುವುದು ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ.

Read More
Next Story