
ರೂ. 370 ಬಿರಿಯಾನಿ ಜೋಕ್: ಕಾಮಿಡಿಯನ್ ಪ್ರಣೀತ್ ಮೋರೆ ವಿರುದ್ಧ ಕೇಸ್
ರೂ. 370 ಬಿರಿಯಾನಿ ಜೋಕ್ ವಿವಾದಕ್ಕೆ ಸಂಬಂಧಿಸಿದಂತೆ ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಪ್ರಣೀತ್ ಮೋರೆ ಮತ್ತು ಹಿಮಾಂಶು ಜಾಂಗ್ರಾ ವಿರುದ್ಧ ಮಹಾರಾಷ್ಟ್ರ ಸೈಬರ್ ಪೊಲೀಸರು ಕೇಸ್ ದಾಖಲಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ಸಮ್ಮತಿ ಮತ್ತು ಮೃತರ ಘನತೆಗೆ ಕುಂದು ತರುವಂತಹ ಅಶ್ಲೀಲ ಹಾಗೂ ಆಕ್ಷೇಪಾರ್ಹ ವಿಡಿಯೋ ತುಣುಕುಗಳನ್ನು ಹಂಚಿಕೊಂಡ ಆರೋಪದ ಮೇಲೆ ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಪ್ರಣೀತ್ ಮೋರ್, ವೆಬ್ ಡೆವಲಪರ್ ಹಿಮಾಂಶು ಜಾಂಗ್ರಾ ಮತ್ತು ಇತರರ ವಿರುದ್ಧ ಮಹಾರಾಷ್ಟ್ರ ಸೈಬರ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಗುರುಗ್ರಾಮದಲ್ಲಿ ನಡೆದ ಕಾಮಿಡಿ ಶೋ ಒಂದರಲ್ಲಿ ಇವರು ಮಾಡಿದ್ದ ಕಾಮೆಂಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದು, ರಾಷ್ಟ್ರೀಯ ಮಹಿಳಾ ಆಯೋಗ ಕೂಡ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಹಿಮಾಂಶು ಜಾಂಗ್ರಾ ತಾನು ಡೇಟಿಂಗ್‌ಗೆ ಹೋದಾಗ ಚಿಕನ್ ಬಿರಿಯಾನಿಗಾಗಿ 370 ರೂಪಾಯಿ ಖರ್ಚು ಮಾಡಿದ್ದಾಗಿ ಹೇಳಿಕೊಂಡಿದ್ದಾನೆ. ಬಳಿಕ ಆ ಮಹಿಳೆ ತನ್ನನ್ನು ಮನೆಗೆ ಬಿಡುವಂತೆ ಕೇಳಿದಾಗ, ತಾನು ಬಿರಿಯಾನಿಗೆ ಖರ್ಚು ಮಾಡಿದ ಹಣಕ್ಕೆ ಪ್ರತಿಯಾಗಿ ದೈಹಿಕ ಸಂಪರ್ಕ ಬೆಳೆಸಲು ಕೇಳಿದ್ದಾಗಿ ಹಾಸ್ಯದ ರೂಪದಲ್ಲಿ ವಿವರಿಸಿದ್ದಾನೆ.
ಈ ವೇಳೆ ಶೋ ನಡೆಸಿಕೊಡುತ್ತಿದ್ದ ಪ್ರಣೀತ್ ಮೋರೆ ಜೋರಾಗಿ ನಗುತ್ತಿರುವುದು ವಿಡಿಯೋದಲ್ಲಿದೆ. ಈ ಮಾತುಗಳು ಮಹಿಳೆಯರನ್ನು ಅತ್ಯಂತ ಕೀಳಾಗಿ ಬಿಂಬಿಸುತ್ತವೆ ಮತ್ತು ದೈಹಿಕ ಸಂಪರ್ಕಕ್ಕೆ ಮಹಿಳೆಯರ ಸಮ್ಮತಿಯನ್ನು ತಮಾಷೆಯಾಗಿ ಪರಿಗಣಿಸುತ್ತವೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಇದೇ ಶೋನ ಮತ್ತೊಂದು ವಿಡಿಯೋದಲ್ಲಿ ಡಾ. ಸೇಜಲ್ ಪವಾರ್ ಎಂಬುವವರು ವೈದ್ಯಕೀಯ ಶಿಕ್ಷಣಕ್ಕಾಗಿ ಬಳಸುವ ಮೃತದೇಹಗಳ ಬಗ್ಗೆ ಅತ್ಯಂತ ಆಕ್ಷೇಪಾರ್ಹವಾಗಿ ಮಾತನಾಡಿದ್ದು, ಇದು ಮೃತರ ಘನತೆಗೆ ಧಕ್ಕೆ ತರುವಂತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೇವಲ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಈ ವಿಡಿಯೋಗಳನ್ನು ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್‌ಗಳಲ್ಲಿ ಹಂಚಿಕೊಳ್ಳಲಾಗಿದ್ದು, ಸಾರ್ವಜನಿಕ ಸಭ್ಯತೆಯನ್ನು ಉಲ್ಲಂಘಿಸಲಾಗಿದೆ ಎಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಪತ್ತೆ ಹಚ್ಚಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಣೀತ್ ಮೋರೆ, ಹಿಮಾಂಶು ಜಾಂಗ್ರಾ, ಸೇಜಲ್ ಪವಾರ್ ಮತ್ತು ಇತರರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸುವಂತೆ ಆರೋಪಿಗಳಿಗೆ ಮಹಾರಾಷ್ಟ್ರ ಸೈಬರ್ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ. ತೀವ್ರ ಹಿನ್ನಡೆ ಮತ್ತು ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಪ್ರಣೀತ್ ಮೋರ್ ಮತ್ತು ಹಿಮಾಂಶು ಜಾಂಗ್ರಾ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಮೆಯಾಚಿಸಿದ್ದು, ಹಿಮಾಂಶು ತನ್ನ ಇನ್‌ಸ್ಟಾಗ್ರಾಮ್ ಖಾತೆಯನ್ನು ಡಿಲೀಟ್ ಮಾಡಿದ್ದಾನೆ.
ಈ ನಡುವೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ವಿಜಯಾ ರಹಾಟ್ಕರ್ ಅವರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ಆರೋಪಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಂಡು ಏಳು ದಿನಗಳ ಒಳಗಾಗಿ ವರದಿ ಸಲ್ಲಿಸುವಂತೆ ಹರಿಯಾಣ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ಇತ್ತ ಮಹಾರಾಷ್ಟ್ರ ಸೈಬರ್ ಪೊಲೀಸರು ಕೂಡ ಮಾರ್ಗಸೂಚಿಯೊಂದನ್ನು ಹೊರಡಿಸಿದ್ದು, ಕಂಟೆಂಟ್ ಕ್ರಿಯೇಟರ್‌ಗಳು ಮತ್ತು ಇನ್‌ಫ್ಲುಯೆನ್ಸರ್‌ಗಳು ಕಾನೂನಿನ ಚೌಕಟ್ಟಿನೊಳಗೆ ಕೆಲಸ ಮಾಡಬೇಕು ಎಂದು ಎಚ್ಚರಿಸಿದ್ದಾರೆ. ಇಂತಹ ಆಕ್ಷೇಪಾರ್ಹ ಮತ್ತು ಅಶ್ಲೀಲ ವಿಡಿಯೋಗಳನ್ನು ಡೌನ್‌ಲೋಡ್ ಮಾಡುವುದು ಅಥವಾ ಇತರರಿಗೆ ಶೇರ್ ಮಾಡುವುದು ಕೂಡ ಕಾನೂನುಬಾಹಿರವಾಗಿದ್ದು, ಅವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ.

