ಆರ್‌ಜಿ ಕರ್‌ ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ: TMC ಮಾಜಿ ಶಾಸಕನ ಬಂಧನ
x

ಆರ್‌ಜಿ ಕರ್‌ ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ: TMC ಮಾಜಿ ಶಾಸಕನ ಬಂಧನ

ಮೃತದೇಹವನ್ನು ಕುಟುಂಬದ ಒಪ್ಪಿಗೆಯಿಲ್ಲದೆ ಅತ್ಯಂತ ಆತುರದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದ್ದು, ಎರಡನೇ ಮರಣೋತ್ತರ ಪರೀಕ್ಷೆ ನಡೆಯದಂತೆ ತಡೆಯುವುದು ಮತ್ತು ಸಾಕ್ಷ್ಯಗಳನ್ನು ಮುಚ್ಚಿಹಾಕುವುದು ಇದರ ಉದ್ದೇಶವಾಗಿತ್ತುಎಂಬ ಆರೋಪ ಕೇಳಿ ಬಂದಿದೆ.


ಕೋಲ್ಕತ್ತಾದ ಆರ್‌ಜಿ ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 2024ರ ಆಗಸ್ಟ್‌ನಲ್ಲಿ ಅತ್ಯಾಚಾರಕ್ಕೊಳಗಾಗಿ ಮತ್ತು ಕೊಲೆಯಾಗಿದ್ದ ವೈದ್ಯೆಯ ಮೃತದೇಹವನ್ನು ಆತುರಾತುರವಾಗಿ ಅಂತ್ಯಕ್ರಿಯೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ (TMC) ಮಾಜಿ ಶಾಸಕ ನಿರ್ಮಲ್ ಘೋಷ್ ಅವರನ್ನು ಗುರುವಾರ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಘೋಷ್ ಅವರೊಂದಿಗೆ ಪಾನಿಹಟಿ ಮುನ್ಸಿಪಾಲಿಟಿ ಕೌನ್ಸಿಲರ್ ಸೋಮನಾಥ್ ದೇ ಮತ್ತು ಮೃತ ವೈದ್ಯೆಯ ಕುಟುಂಬದ ನೆರೆಹೊರೆಯವರಾದ ಸಂಜೀವ್ ಮುಖರ್ಜಿ ಅವರ ಹೆಸರನ್ನೂ ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ.

ಮೃತ ವೈದ್ಯೆಯ ತಂದೆಯಿಂದ ದೂರು

ಬರಾಕ್‌ಪುರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಖರ್ಡಹ್ ಪೊಲೀಸ್ ಠಾಣೆಯಲ್ಲಿ ಮೃತ ವೈದ್ಯೆಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಾಗಿದೆ. ಮೃತದೇಹವನ್ನು ಕುಟುಂಬದ ಒಪ್ಪಿಗೆಯಿಲ್ಲದೆ ಅತ್ಯಂತ ಆತುರದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದ್ದು, ಎರಡನೇ ಮರಣೋತ್ತರ ಪರೀಕ್ಷೆ ನಡೆಯದಂತೆ ತಡೆಯುವುದು ಮತ್ತು ಸಾಕ್ಷ್ಯಗಳನ್ನು ಮುಚ್ಚಿಹಾಕುವುದು ಇದರ ಉದ್ದೇಶವಾಗಿತ್ತು ಎಂದು ತಂದೆ ಆರೋಪಿಸಿದ್ದಾರೆ. ಈ ಆರೋಪಗಳ ಹಿನ್ನೆಲೆಯಲ್ಲಿ ನಿರ್ಮಲ್ ಘೋಷ್, ಸೋಮನಾಥ್ ದೇ ಮತ್ತು ಸಂಜೀವ್ ಮುಖರ್ಜಿ ಅವರ ಪಾತ್ರದ ಕುರಿತು ತನಿಖೆ ನಡೆಯುತ್ತಿದೆ.

ಅಂತ್ಯಕ್ರಿಯೆ ಪ್ರಕರಣ CBI ತನಿಖೆಯಿಂದ ಪ್ರತ್ಯೇಕ

ಬರಾಕ್‌ಪುರ ಪೊಲೀಸ್ ಕಮಿಷನರೇಟ್‌ನ ಹಿರಿಯ ಅಧಿಕಾರಿಯೊಬ್ಬರು, ಮೃತದೇಹದ ಅಂತ್ಯಕ್ರಿಯೆಗೆ ಸಂಬಂಧಿಸಿದ ಪ್ರಕರಣವು ಆರ್‌ಜಿ ಕರ್ ಆಸ್ಪತ್ರೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ CBI ತನಿಖೆಯಿಂದ ಪ್ರತ್ಯೇಕವಾಗಿದೆ ಎಂದು ತಿಳಿಸಿದ್ದಾರೆ. ಆರ್‌ಜಿ ಕರ್ ಆಸ್ಪತ್ರೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಕೋಲ್ಕತ್ತಾ ಪೊಲೀಸರಿಂದ ವರ್ಗಾವಣೆಯಾದ ಬಳಿಕ CBI ತನಿಖೆ ನಡೆಸುತ್ತಿದೆ. ಆದರೆ ಮೃತ ಯುವತಿಯ ಕುಟುಂಬದ ದೂರಿನ ಆಧಾರದ ಮೇಲೆ ಖರ್ಡಹ್ ಪೊಲೀಸ್ ಠಾಣೆಯಲ್ಲಿ ಹೊಸ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಕುಟುಂಬದ ಅನುಮತಿಯಿಲ್ಲದೆ ಮೃತದೇಹವನ್ನು ಆತುರದಲ್ಲಿ ಅಂತ್ಯಕ್ರಿಯೆ ನಡೆಸಿ ಸಾಕ್ಷ್ಯಗಳನ್ನು ಮುಚ್ಚಿಹಾಕಲು ಪ್ರಯತ್ನಿಸಲಾಗಿದೆ ಎಂಬ ಆರೋಪದ ಕುರಿತು ಈ ಹೊಸ ಪ್ರಕರಣದಲ್ಲಿ ತನಿಖೆ ನಡೆಯುತ್ತಿದೆ.

ಮುಖ್ಯಮಂತ್ರಿ ಸೂಚನೆ ನೀಡಿದ ಎರಡು ದಿನಗಳ ಬಳಿಕ ಬಂಧನ

ಅಂತ್ಯಕ್ರಿಯೆಯ ಸಂದರ್ಭಗಳ ಕುರಿತು ಪ್ರತ್ಯೇಕ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಸೂಚನೆ ನೀಡಿದ ಎರಡು ದಿನಗಳ ಬಳಿಕ ನಿರ್ಮಲ್ ಘೋಷ್ ಬಂಧನವಾಗಿದೆ.

ಅವಸರದಲ್ಲಿ ಮೃತದೇಹದ ಅಂತ್ಯಕ್ರಿಯೆ

31 ವರ್ಷದ ಸ್ನಾತಕೋತ್ತರ ವೈದ್ಯಕೀಯ ತರಬೇತಿ ಪಡೆಯುತ್ತಿದ್ದ ವೈದ್ಯೆಯನ್ನು 2024ರ ಆಗಸ್ಟ್ 9ರಂದು ಆರ್‌ಜಿ ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಕೊಠಡಿಯಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿತ್ತು. ನಂತರದ ತನಿಖೆಯಲ್ಲಿ ಹಿಂದಿನ ರಾತ್ರಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂಬುದು ಬೆಳಕಿಗೆ ಬಂದಿತ್ತು.

ಪೊಲೀಸರ ಪ್ರಕಾರ, ಮೃತದೇಹವನ್ನು ಪಾನಿಹಟಿಯಲ್ಲಿರುವ ಚಿತಾಗಾರಕ್ಕೆ ಕೊಂಡೊಯ್ಯಲಾಗಿತ್ತು. ಅಲ್ಲಿ ಅಂತ್ಯಕ್ರಿಯೆಗಾಗಿ ಕಾಯುತ್ತಿದ್ದ ಇನ್ನೂ ಎರಡು ಮೃತದೇಹಗಳಿಗಿಂತ ಮೊದಲು ವೈದ್ಯೆಯ ಮೃತದೇಹವನ್ನು ಅಂತ್ಯಕ್ರಿಯೆ ಮಾಡಲಾಗಿದೆ ಎಂಬ ಆರೋಪವಿದೆ.

ಅಂತ್ಯಕ್ರಿಯೆಗೆ ಸಂಬಂಧಿಸಿದ ದಾಖಲೆಗಳಲ್ಲಿರುವ ಸಹಿಗಳ ಬಗ್ಗೆಯೂ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಆ ಸಹಿಗಳು ಮೃತ ಯುವತಿಯ ಪೋಷಕರು ಅಥವಾ ಕುಟುಂಬ ಸದಸ್ಯರದ್ದಲ್ಲ, ಬದಲಿಗೆ ನೆರೆಹೊರೆಯವರ ಸಹಿಗಳಾಗಿರಬಹುದು ಎಂದು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಅತ್ಯಾಚಾರ-ಕೊಲೆ ಪ್ರಕರಣದ CBI ತನಿಖೆ ಮುಂದುವರಿಕೆ

ಇದೇ ವೇಳೆ, ಆರ್‌ಜಿ ಕರ್ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಕುರಿತು CBI ಪ್ರತ್ಯೇಕ ತನಿಖೆಯನ್ನು ಮುಂದುವರಿಸಿದೆ. ಈ ಪ್ರಕರಣವನ್ನು ಕೋಲ್ಕತ್ತಾ ಪೊಲೀಸರಿಂದ CBIಗೆ ವರ್ಗಾಯಿಸಲಾಗಿತ್ತು. ಪ್ರಕರಣದಲ್ಲಿ ಈಗಾಗಲೇ ಒಬ್ಬ ವ್ಯಕ್ತಿ ಅಪರಾಧಿ ಎಂದು ಕೋರ್ಟ್‌ ತೀರ್ಪು ನೀಡಿದ್ದು, ಪ್ರಕರಣ ಸದ್ಯ ಕಲ್ಕತ್ತಾ ಹೈಕೋರ್ಟ್‌ನಲ್ಲಿ ಬಾಕಿ ಇದೆ.

Read More
Next Story