ಕೆಂಪುಕೋಟೆ ಬಳಿ IED ಸ್ಫೋಟ ಪ್ರಕರಣ: NIA ಚಾರ್ಜ್‌ಶೀಟ್‌ನಲ್ಲಿ ಆಘಾತಕಾರಿ ಸಂಗತಿ ಬಯಲು
x

ರೆಡ್ ಫೋರ್ಟ್‌ ಸ್ಫೋಟ ಪ್ರಕರಣದ NIA ಚಾರ್ಜ್‌ಶೀಟ್‌ನಲ್ಲಿ ಮಹತ್ವದ ಮಾಹಿತಿ ಬಹಿರಂಗವಾಗಿದೆ.

ಕೆಂಪುಕೋಟೆ ಬಳಿ IED ಸ್ಫೋಟ ಪ್ರಕರಣ: NIA ಚಾರ್ಜ್‌ಶೀಟ್‌ನಲ್ಲಿ ಆಘಾತಕಾರಿ ಸಂಗತಿ ಬಯಲು

ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ ಸಂಜೆ 6.37ಕ್ಕೆ ಬಾಂಬರ್‌ ಉಮರ್ ಲಾಲ್ ಮಂದಿರದ ಬಳಿ ಕಾರು ನಿಲ್ಲಿಸಲು ಪ್ರಯತ್ನಿಸಿದ್ದ. ಆದರೆ ಪರಿಸ್ಥಿತಿ ಅನುಕೂಲಕರವಾಗದ ಹಿನ್ನೆಲೆಯಲ್ಲಿ ಯೂಟರ್ನ್ ತೆಗೆದುಕೊಂಡು ರೆಡ್ ಫೋರ್ಟ್‌ನ ಕಡೆ ತೆರಳಿದ್ದ. ಸಂಜೆ 6.50ಕ್ಕೆ ಅಲ್ಲಿ ಐಇಡಿ ಸ್ಫೋಟಗೊಂಡಿದೆ ಎಂದು NIA ಚಾರ್ಜ್‌ಶೀಟ್‌ನಲ್ಲಿ ವಿವರಿಸಿದೆ.


Click the Play button to hear this message in audio format

ಕಳೆದ ವರ್ಷ ನವೆಂಬರ್ 10ರಂದು ದೆಹಲಿಯ ಕೆಂಪುಕೋಟೆ ಬಳಿ ನಡೆದ ಸ್ಫೋಟ ಪ್ರಕರಣದ ತನಿಖೆಯಲ್ಲಿ ಮಹತ್ವದ ಸಂಗತಿಗಳು ಬಹಿರಂಗವಾಗಿವೆ. ಸ್ಫೋಟಕ ತುಂಬಿದ್ದ ಐ20 ಕಾರನ್ನು ಮೊದಲು ಚಾಂದಿನಿ ಚೌಕ್‌ನ ‘ಲಾಲ್ ಮಂದಿರ’ದ ಬಳಿ ನಿಲ್ಲಿಸಲು ಬಾಂಬರ್ ಉಮರ್-ಉನ್-ನಬಿ ಯತ್ನಿಸಿದ್ದ. ಆದರೆ ಭಾರಿ ಟ್ರಾಫಿಕ್ ಹಾಗೂ ಪೊಲೀಸರು ಇದ್ದ ಕಾರಣ ಯೋಜನೆ ಬದಲಿಸಿ ರೆಡ್ ಫೋರ್ಟ್ ಕಡೆ ತೆರಳಿದ್ದಾನೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಸಲ್ಲಿಸಿರುವ ಚಾರ್ಜ್‌ಶೀಟ್ ತಿಳಿಸಿದೆ.

ಟ್ರಾಫಿಕ್‌ನಿಂದ ಬದಲಾದ ಸ್ಫೋಟದ ಸ್ಥಳ

ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ ಸಂಜೆ 6.37ಕ್ಕೆ ಉಮರ್ ಲಾಲ್ ಮಂದಿರದ ಬಳಿ ಕಾರು ನಿಲ್ಲಿಸಲು ಪ್ರಯತ್ನಿಸಿದ್ದ. ಆದರೆ ಪರಿಸ್ಥಿತಿ ಅನುಕೂಲಕರವಾಗದ ಹಿನ್ನೆಲೆಯಲ್ಲಿ ಯೂಟರ್ನ್ ತೆಗೆದುಕೊಂಡು ರೆಡ್ ಫೋರ್ಟ್‌ನ ಗೇಟ್ ನಂ. 4ರ ಬಳಿ ತೆರಳಿದ್ದಾನೆ. ಸಂಜೆ 6.50ಕ್ಕೆ ಅಲ್ಲಿ ಐಇಡಿ ಸ್ಫೋಟ ಸಂಭವಿಸಿದೆ ಎಂದು NIA ಚಾರ್ಜ್‌ಶೀಟ್‌ನಲ್ಲಿ ವಿವರಿಸಿದೆ.

ಶೂನಲ್ಲಿತ್ತು ರಿಮೋಟ್ ವ್ಯವಸ್ಥೆ

ಉಮರ್ ಧರಿಸಿದ್ದ ಶೂವೊಂದರಲ್ಲಿ ರಿಮೋಟ್ ಮೂಲಕ ಸ್ಫೋಟಿಸುವ ‘ಕಮಾಂಡ್ ಮೆಕ್ಯಾನಿಸಂ’ ಅಳವಡಿಸಲಾಗಿತ್ತು ಎಂದು ಎನ್‌ಐಎ ತಿಳಿಸಿದೆ. ಕಾರಿನ ಬಳಿ ಪತ್ತೆಯಾದ ಶೂನ ಹಿಮ್ಮಡಿಗೆ ಜೋಡಿಸಲಾಗಿದ್ದ ಲೋಹದ ತುಂಡಿನಲ್ಲಿ ಟಿಎಟಿಪಿ, ಪೊಟ್ಯಾಸಿಯಂ ಮತ್ತು ಅಮೋನಿಯಂ ನೈಟ್ರೇಟ್ ಅಂಶಗಳು ಪತ್ತೆಯಾಗಿವೆ ಎಂದು ಚಾರ್ಜ್‌ಶೀಟ್ ಹೇಳಿದೆ.

ಕಾರಿನಲ್ಲಿ ದೊರೆತ ಇತರ ಸಾಕ್ಷ್ಯಗಳ ಪೈಕಿ ಉಮರ್‌ನ ಪೋಷಕರ ಡಿಎನ್‌ಎಗೆ ಹೊಂದಿಕೆಯಾಗುವ ಮಾದರಿಯೂ ಪತ್ತೆಯಾಗಿತ್ತು. ಇದು ಸ್ಫೋಟ ನಡೆಸಿದ ವ್ಯಕ್ತಿ ಉಮರ್ ಎಂಬುದನ್ನು ದೃಢಪಡಿಸಲು ನೆರವಾಗಿದೆ ಎಂದು ತನಿಖಾ ಸಂಸ್ಥೆ ಹೇಳಿದೆ.

ಸ್ಫೋಟದಲ್ಲಿ 11 ಮಂದಿ ಸಾವು

ರೆಡ್ ಫೋರ್ಟ್ ಸ್ಫೋಟದಲ್ಲಿ 11 ಮಂದಿ ಮೃತಪಟ್ಟಿದ್ದು, 29 ಮಂದಿ ಗಾಯಗೊಂಡಿದ್ದಾರೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಆಸ್ಪತ್ರೆಯ ಮರಣೋತ್ತರ ಪರೀಕ್ಷಾ ವರದಿಗಳ ಪ್ರಕಾರ ಹೆಚ್ಚಿನ ತೀವ್ರತೆಯ ಸ್ಫೋಟದ ಅಲೆಗಳ ಪರಿಣಾಮವೇ ಸಾವಿಗೆ ಕಾರಣವಾಗಿದೆ. ಸ್ಫೋಟದಿಂದ ಸುತ್ತಮುತ್ತಲಿನ ಕಟ್ಟಡಗಳು ಹಾಗೂ ಇತರ ರಚನೆಗಳಿಗೆ ಸುಮಾರು 17.7 ಲಕ್ಷ ರೂ. ಹಾನಿಯಾಗಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಸ್ಫೋಟಕ ತಯಾರಿ ದಾಖಲೆಗಳು ಪತ್ತೆ

ಉಮರ್ ಮತ್ತು ಆತನ ಸಹಚರರಿಂದ ವಶಪಡಿಸಿಕೊಂಡ ಪೆನ್‌ಡ್ರೈವ್‌ಗಳಲ್ಲಿದ್ದ ದಾಖಲೆಗಳಲ್ಲಿ ಸ್ಫೋಟಕ ವಸ್ತುಗಳ ತಯಾರಿ ಸೇರಿದಂತೆ ಹಲವು ವಿಷಯಗಳ ಮಾಹಿತಿ ಇತ್ತು ಎಂದು NIA ತಿಳಿಸಿದೆ. ಸಹಚರರಿಂದ ವಶಪಡಿಸಿಕೊಂಡ ಸ್ಫೋಟಕಗಳ ವಿಧಿವಿಜ್ಞಾನ ಪರೀಕ್ಷೆಯಲ್ಲಿಯೂ ಇದೇ ರೀತಿಯ ರಾಸಾಯನಿಕ ಅಂಶಗಳು ಪತ್ತೆಯಾಗಿವೆ ಎಂದು ಚಾರ್ಜ್‌ಶೀಟ್ ಹೇಳಿದೆ.

ಇದರ ಜತೆಗೆ, ಅಲ್-ಖೈದಾ ಇನ್ ದ ಅರೇಬಿಯನ್ ಪೆನಿನ್ಸುಲಾ (AQAP)ಗೆ ಸಂಬಂಧಿಸಿದ ‘ಇನ್‌ಸ್ಪೈರ್’ ನಿಯತಕಾಲಿಕದಲ್ಲಿ ಪ್ರಕಟವಾಗಿದ್ದ ‘ಲೋನ್ ಮುಜಾಹಿದ್ ಪಾಕೆಟ್ ಬುಕ್’ ಎಂಬ ಕೈಪಿಡಿಯೂ ಪತ್ತೆಯಾಗಿದೆ ಎಂದು ಎನ್‌ಐಎ ಹೇಳಿದೆ. ಅದರಲ್ಲಿ ಸ್ಫೋಟಕಗಳು, ಶಸ್ತ್ರಾಸ್ತ್ರಗಳು, ವಾಹನಗಳು ಹಾಗೂ ರಿಮೋಟ್ ಮೂಲಕ ಐಇಡಿ ಸ್ಫೋಟಿಸುವ ವಿಧಾನಗಳ ಕುರಿತು ಕಾರ್ಯಾಚರಣಾತ್ಮಕ ಮಾಹಿತಿ ಇತ್ತು ಎಂದು ತನಿಖಾ ಸಂಸ್ಥೆ ತಿಳಿಸಿದೆ.

ಪೊಲೀಸ್ ದಾಳಿಯಿಂದ ಆತಂಕಗೊಂಡಿದ್ದ ಉಮರ್

ಅಕ್ಟೋಬರ್ 30ರಂದು ಉಮರ್ ಅಲ್ ಫಲಾಹ್ ಆಸ್ಪತ್ರೆಯ ಹಿಂಭಾಗದಲ್ಲಿ ಪರಿಚಯಸ್ಥನೊಬ್ಬನನ್ನು ಭೇಟಿಯಾಗಿ ತನ್ನ ಕೊಠಡಿಯ ಕೀಲಿಯನ್ನು ನೀಡಿದ್ದ. ಅಲ್ಮೆರಾದಲ್ಲಿದ್ದ ತನ್ನ ಶೂಗಳನ್ನು ತಂದುಕೊಡುವಂತೆ ಹೇಳಿದ್ದ. ಜಮ್ಮು-ಕಾಶ್ಮೀರ ಪೊಲೀಸರು ಮಾಡ್ಯೂಲ್ ಮೇಲೆ ದಾಳಿ ನಡೆಸಿದ ಬಳಿಕ ಆತ ಆತಂಕದಲ್ಲಿದ್ದ ಎಂದು ಎನ್‌ಐಎ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.

ನವೆಂಬರ್ 7ರಂದು ನುಹ್‌ನ ಅಂಗಡಿಯೊಂದರಲ್ಲಿ ಉಮರ್ ನಗದು ನೀಡಿ ಹೊಸ ಟಿ-ಶರ್ಟ್, ವೈನ್ ಬಣ್ಣದ ಶರ್ಟ್ ಮತ್ತು ಹಸಿರು ಬಣ್ಣದ ಕಾರ್ಗೋ ಪ್ಯಾಂಟ್ ಖರೀದಿಸಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.

Read More
Next Story