ರೆಪೋ ದರ ಏರಿಕೆ: ನಿಮ್ಮ EMI ಎಷ್ಟು ಹೆಚ್ಚಾಗಲಿದೆ? ಇಲ್ಲಿದೆ ಲೆಕ್ಕಾಚಾರ
ಆರ್ಬಿಐ ರೆಪೋ ದರವನ್ನು ಹೆಚ್ಚಿಸಿದಾಗ ಬ್ಯಾಂಕ್ಗಳಿಗೆ ಹಣ ಪಡೆಯುವುದು ದುಬಾರಿಯಾಗುತ್ತದೆ. ಪರಿಣಾಮವಾಗಿ ಬ್ಯಾಂಕ್ಗಳು ಗೃಹ ಸಾಲ, ವಾಹನ ಸಾಲ ಸೇರಿದಂತೆ ಗ್ರಾಹಕರಿಗೆ ನೀಡುವ ಸಾಲಗಳ ಬಡ್ಡಿದರವನ್ನು ಹೆಚ್ಚಿಸುವ ಸಾಧ್ಯತೆ ಇರುತ್ತದೆ.
ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್ಸ್ ಅಂದರೆ ಶೇಕಡ 0.25ರಷ್ಟು ಹೆಚ್ಚಿಸಿದರೆ, ಅದರ ಪರಿಣಾಮ ನೇರವಾಗಿ ಬ್ಯಾಂಕ್ ಸಾಲಗಳ ಮೇಲೂ ಬೀಳುತ್ತದೆ. ವಿಶೇಷವಾಗಿ ಫ್ಲೋಟಿಂಗ್ ಬಡ್ಡಿದರದಲ್ಲಿ ಗೃಹ ಸಾಲ, ವಾಹನ ಸಾಲ ಸೇರಿದಂತೆ ವಿವಿಧ ಸಾಲಗಳನ್ನು ಪಡೆದಿರುವ ಗ್ರಾಹಕರಿಗೆ EMI ಹೊರೆ ಹೆಚ್ಚಾಗುವ ಸಾಧ್ಯತೆ ಇದೆ.
ರೆಪೋ ದರ ಎಂದರೇನು?
ಸಾಮಾನ್ಯವಾಗಿ ಹಣದ ಅಗತ್ಯವಿದ್ದಾಗ ನಾವು ಬ್ಯಾಂಕ್ಗಳಿಂದ ಸಾಲ ಪಡೆಯುತ್ತೇವೆ. ಅದೇ ರೀತಿ ಬ್ಯಾಂಕ್ಗಳಿಗೆ ಹಣದ ಕೊರತೆಯಾದಾಗ ಅಥವಾ ದೈನಂದಿನ ವಹಿವಾಟು ನಿರ್ವಹಿಸಲು ಹೆಚ್ಚುವರಿ ಹಣ ಬೇಕಾದಾಗ, ಅವು ಆರ್ಬಿಐನಿಂದ ಅಲ್ಪಾವಧಿಗೆ ಹಣವನ್ನು ಸಾಲವಾಗಿ ಪಡೆಯುತ್ತವೆ. ಈ ಸಾಲಕ್ಕೆ ಆರ್ಬಿಐ ವಿಧಿಸುವ ಬಡ್ಡಿದರವನ್ನೇ ರೆಪೋ ದರ ಎಂದು ಕರೆಯಲಾಗುತ್ತದೆ.
ಆರ್ಬಿಐ ರೆಪೋ ದರವನ್ನು ಹೆಚ್ಚಿಸಿದಾಗ ಬ್ಯಾಂಕ್ಗಳಿಗೆ ಹಣ ಪಡೆಯುವುದು ದುಬಾರಿಯಾಗುತ್ತದೆ. ಪರಿಣಾಮವಾಗಿ ಬ್ಯಾಂಕ್ಗಳು ಗೃಹ ಸಾಲ, ವಾಹನ ಸಾಲ ಸೇರಿದಂತೆ ಗ್ರಾಹಕರಿಗೆ ನೀಡುವ ಸಾಲಗಳ ಬಡ್ಡಿದರವನ್ನು ಹೆಚ್ಚಿಸುವ ಸಾಧ್ಯತೆ ಇರುತ್ತದೆ.
ಹಣದುಬ್ಬರ ನಿಯಂತ್ರಣಕ್ಕೆ ರೆಪೋ ದರ ಏರಿಕೆ
ರೆಪೋ ದರವನ್ನು ಹೆಚ್ಚಿಸುವ ಪ್ರಮುಖ ಉದ್ದೇಶಗಳಲ್ಲಿ ಹಣದುಬ್ಬರ ನಿಯಂತ್ರಣವೂ ಒಂದು. ಸಾಲ ಅಗ್ಗವಾಗಿದ್ದರೆ ಜನರು ಹೆಚ್ಚು ಮನೆ, ಕಾರು ಸೇರಿದಂತೆ ದುಬಾರಿ ವಸ್ತುಗಳನ್ನು ಖರೀದಿಸಲು ಮುಂದಾಗುತ್ತಾರೆ. ಇದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತದೆ. ಬೇಡಿಕೆ ಹೆಚ್ಚಾದಾಗ ವಸ್ತುಗಳ ಬೆಲೆಯ ಮೇಲೂ ಒತ್ತಡ ಉಂಟಾಗಬಹುದು.
ಹೀಗಾಗಿ ಸಾಲದ ಬಡ್ಡಿದರವನ್ನು ಹೆಚ್ಚಿಸುವ ಮೂಲಕ ಜನರ ಖರ್ಚಿಗೆ ಸ್ವಲ್ಪ ಕಡಿವಾಣ ಹಾಕುವುದು ಆರ್ಬಿಐನ ಪ್ರಮುಖ ಉದ್ದೇಶವಾಗಿರುತ್ತದೆ. ಇದರ ಮೂಲಕ ಮಾರುಕಟ್ಟೆಯಲ್ಲಿ ಹಣದ ಹರಿವು ಮತ್ತು ಬೇಡಿಕೆಯನ್ನು ನಿಯಂತ್ರಿಸಿ ಹಣದುಬ್ಬರವನ್ನು ತಗ್ಗಿಸಲು ಪ್ರಯತ್ನಿಸಲಾಗುತ್ತದೆ.
ಗೃಹ ಸಾಲ ಪಡೆದವರಿಗೆ ಎಷ್ಟು ಹೊರೆ?
ಉದಾಹರಣೆಗೆ, 20 ವರ್ಷಗಳ ಅವಧಿಗೆ 50 ಲಕ್ಷ ರೂ. ಗೃಹ ಸಾಲ ಪಡೆದಿದ್ದಾರೆ ಎಂದುಕೊಳ್ಳಿ. 8.50 ಶೇಕಡ ಬಡ್ಡಿದರದಲ್ಲಿ ನಿಮ್ಮ EMI ಸುಮಾರು 43,391 ರೂ. ಇರಬಹುದು. ಬಡ್ಡಿದರ 8.75 ಶೇಕಡಕ್ಕೆ ಏರಿಕೆಯಾದರೆ EMI ಸುಮಾರು 44,186 ರೂ.ಗೆ ಹೆಚ್ಚಾಗಬಹುದು.
ಅಂದರೆ ತಿಂಗಳಿಗೆ ಸುಮಾರು 795 ರೂ. ಹೆಚ್ಚುವರಿ ಹೊರೆ ಬೀಳಬಹುದು. ಒಂದು ವರ್ಷದ ಲೆಕ್ಕದಲ್ಲಿ ಇದು ಸುಮಾರು 9,500 ರೂ. ಹೆಚ್ಚುವರಿ ಪಾವತಿಯಾಗುತ್ತದೆ. ಇದೇ ರೀತಿಯಲ್ಲಿ ಕಾರು, ಬೈಕ್ ಸೇರಿದಂತೆ ಫ್ಲೋಟಿಂಗ್ ಬಡ್ಡಿದರ ಹೊಂದಿರುವ ಇತರ ಸಾಲಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಆದರೆ ಬಡ್ಡಿದರ ಏರಿಕೆಯಾದಾಗ ಬ್ಯಾಂಕ್ಗಳು ಯಾವಾಗಲೂ EMI ಮೊತ್ತವನ್ನೇ ಹೆಚ್ಚಿಸುತ್ತವೆ ಎನ್ನುವುದಿಲ್ಲ. ಕೆಲ ಸಂದರ್ಭಗಳಲ್ಲಿ EMI ಮೊತ್ತವನ್ನು ಬಹುತೇಕ ಒಂದೇ ಮಟ್ಟದಲ್ಲಿ ಇರಿಸಿ ಸಾಲದ ಮರುಪಾವತಿ ಅವಧಿಯನ್ನು ಹೆಚ್ಚಿಸಬಹುದು. ಉದಾಹರಣೆಗೆ 20 ವರ್ಷಗಳ ಸಾಲ 22 ವರ್ಷಗಳವರೆಗೆ ವಿಸ್ತರಿಸಬಹುದು. ಹೀಗಾದರೆ ತಿಂಗಳ ಹೊರೆ ತಕ್ಷಣ ಹೆಚ್ಚಾಗದಿದ್ದರೂ, ದೀರ್ಘಾವಧಿಯಲ್ಲಿ ಪಾವತಿಸುವ ಒಟ್ಟು ಬಡ್ಡಿ ಹೆಚ್ಚಾಗುತ್ತದೆ.
ಶಿಕ್ಷಣ ಸಾಲಕ್ಕೂ ಬಡ್ಡಿದರದ ಹೊಡೆತ
ರೆಪೋ ದರದ ಪರಿಣಾಮ ಗೃಹ ಮತ್ತು ವಾಹನ ಸಾಲಕ್ಕೆ ಮಾತ್ರ ಸೀಮಿತವಾಗುವುದಿಲ್ಲ. ಶಿಕ್ಷಣ ಸಾಲ ಪಡೆಯುವ ವಿದ್ಯಾರ್ಥಿಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಶಿಕ್ಷಣ ಸಾಲದಲ್ಲಿ ಕೋರ್ಸ್ ಮುಗಿಯುವವರೆಗೆ ಅಥವಾ ನಿರ್ದಿಷ್ಟ ಅವಧಿಯವರೆಗೆ EMI ಪಾವತಿಗೆ ವಿರಾಮವಿರಬಹುದು. ಆದರೆ ಆ ಅವಧಿಯಲ್ಲಿ ಬಡ್ಡಿ ಸಂಗ್ರಹವಾಗುತ್ತಲೇ ಇರುತ್ತದೆ. ಹೀಗಾಗಿ ಹೆಚ್ಚಿನ ಬಡ್ಡಿದರದಲ್ಲಿ ಸಾಲ ಪಡೆದಿದ್ದರೆ, ವಿದ್ಯಾಭ್ಯಾಸ ಮುಗಿಸಿ ಉದ್ಯೋಗಕ್ಕೆ ಸೇರಿದ ಬಳಿಕ ಮರುಪಾವತಿ ಆರಂಭಿಸುವ ಹೊತ್ತಿಗೆ ಸಾಲದ ಒಟ್ಟು ಹೊರೆ ಹೆಚ್ಚಾಗಬಹುದು.
ಸಾಲ ಇಲ್ಲದವರಿಗೂ ಪರಿಣಾಮ
ನಿಮ್ಮ ಹೆಸರಿನಲ್ಲಿ ಯಾವುದೇ ಸಾಲವಿಲ್ಲ ಎಂದ ಮಾತ್ರಕ್ಕೆ ರೆಪೋ ದರ ಏರಿಕೆಯ ಪರಿಣಾಮ ಇರುವುದಿಲ್ಲ ಎಂದುಕೊಳ್ಳುವುದು ಸರಿಯಲ್ಲ. ಸಾಲ ದುಬಾರಿಯಾದಾಗ ಜನರು ಮನೆ, ಕಾರು, ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಯನ್ನು ಮುಂದೂಡಬಹುದು. ಉದ್ಯಮಿಗಳು ಕೂಡ ಹೊಸ ಹೂಡಿಕೆ ಅಥವಾ ವ್ಯವಹಾರ ವಿಸ್ತರಣೆಯನ್ನು ನಿಧಾನಗೊಳಿಸಬಹುದು.
ಇದರಿಂದ ಮಾರುಕಟ್ಟೆಯಲ್ಲಿ ಖರೀದಿ ಪ್ರಮಾಣ, ಹಣದ ಹರಿವು ಮತ್ತು ಒಟ್ಟಾರೆ ಆರ್ಥಿಕ ಚಟುವಟಿಕೆಯ ವೇಗದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಉಳಿತಾಯ ಮಾಡುವವರಿಗೆ ಸಿಹಿ ಸುದ್ದಿ
ರೆಪೋ ದರ ಏರಿಕೆಯಲ್ಲಿ ಉಳಿತಾಯ ಮಾಡುವವರಿಗೆ ಒಂದು ಧನಾತ್ಮಕ ಅಂಶವೂ ಇದೆ. ಬ್ಯಾಂಕ್ಗಳು ಸಾಲದ ಬಡ್ಡಿದರವನ್ನು ಹೆಚ್ಚಿಸುವ ಸಂದರ್ಭದಲ್ಲಿ ಠೇವಣಿಗಳ ಬಡ್ಡಿದರವನ್ನೂ ಹೆಚ್ಚಿಸುವ ಸಾಧ್ಯತೆ ಇರುತ್ತದೆ. ಇದರಿಂದ ಫಿಕ್ಸ್ಡ್ ಡೆಪಾಸಿಟ್ ಮತ್ತು ಕೆಲವು ಉಳಿತಾಯ ಉತ್ಪನ್ನಗಳಲ್ಲಿ ಹಣ ಇಟ್ಟಿರುವವರಿಗೆ ಹೆಚ್ಚಿನ ಬಡ್ಡಿ ಆದಾಯ ಸಿಗುವ ಸಾಧ್ಯತೆ ಇದೆ.
EMI ಹೊರೆ ಕಡಿಮೆ ಮಾಡುವುದು ಹೇಗೆ?
ಸಾಲದ ಮೇಲಿನ ಬಡ್ಡಿ ಹೆಚ್ಚಾದಾಗ ಹೆಚ್ಚುವರಿ ಹಣ ಲಭ್ಯವಿದ್ದರೆ ಅಸಲಿಗೆ ಭಾಗಶಃ ಪಾವತಿ ಮಾಡುವುದರಿಂದ ಒಟ್ಟಾರೆ ಬಡ್ಡಿ ಹೊರೆ ಕಡಿಮೆ ಮಾಡಬಹುದು. ಮತ್ತೊಂದು ಬ್ಯಾಂಕ್ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತಿದ್ದರೆ, ಸಾಲ ವರ್ಗಾವಣೆ ಮಾಡುವ ಆಯ್ಕೆಯನ್ನೂ ಪರಿಶೀಲಿಸಬಹುದು.
ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವ ಗ್ರಾಹಕರು ತಮ್ಮ ಬ್ಯಾಂಕ್ನೊಂದಿಗೆ ಮಾತನಾಡಿ ಬಡ್ಡಿದರ ಕಡಿತಕ್ಕೆ ಮನವಿ ಮಾಡಬಹುದು. ಆದರೆ ಸಾಲ ವರ್ಗಾವಣೆ ಅಥವಾ ಮುಂಗಡ ಪಾವತಿ ಮಾಡುವ ಮುನ್ನ ಸಂಬಂಧಿತ ಶುಲ್ಕಗಳು, ಹೊಸ ಬಡ್ಡಿದರ ಮತ್ತು ಒಟ್ಟು ಉಳಿತಾಯವನ್ನು ಲೆಕ್ಕ ಹಾಕುವುದು ಮುಖ್ಯ.

