ಅಯೋಧ್ಯೆ ರಾಮಮಂದಿರ ದೇಣಿಗೆ ಹಣ ದುರುಪಯೋಗ: 133 ಸಾಕ್ಷಿಗಳು, 8 ಮಂದಿ ವಿರುದ್ಧ ಚಾರ್ಜ್‌ಶೀಟ್
x

ಅಯೋಧ್ಯೆ ರಾಮಮಂದಿರ ದೇಣಿಗೆ ಹಣ ದುರುಪಯೋಗ: 133 ಸಾಕ್ಷಿಗಳು, 8 ಮಂದಿ ವಿರುದ್ಧ ಚಾರ್ಜ್‌ಶೀಟ್

ಅಯೋಧ್ಯೆ ರಾಮಮಂದಿರ ದೇಣಿಗೆ ಹಣ ಅಕ್ರಮ ಪ್ರಕರಣದಲ್ಲಿ ಮಾಜಿ ಟ್ರಸ್ಟ್ ಪದಾಧಿಕಾರಿಗಳಾದ ಅನಿಲ್ ಕುಮಾರ್ ಮಿಶ್ರಾ ಮತ್ತು ಚಂಪತ್ ರಾಯ್‌ ಅವರನ್ನೂ ಸಾಕ್ಷಿಗಳಾಗಿ ಹೆಸರಿಸಲಾಗಿದೆ.


Click the Play button to hear this message in audio format

ಅಯೋಧ್ಯೆ ರಾಮಮಂದಿರದ ಹುಂಡಿ ಹಣ ಎಣಿಕೆ ವೇಳೆ ಅಕ್ರಮ ನಡೆದಿದೆ ಎಂಬ ಆರೋಪದ ಪ್ರಕರಣ ಇದೀಗ ಮತ್ತೊಂದು ಮಹತ್ವದ ತಿರುವು ಪಡೆದುಕೊಂಡಿದೆ. ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮಾಜಿ ಪ್ರಮುಖ ಪದಾಧಿಕಾರಿಗಳಾದ ಅನಿಲ್ ಕುಮಾರ್ ಮಿಶ್ರಾ ಮತ್ತು ಚಂಪತ್ ರಾಯ್ ಅವರನ್ನು ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಸಾಕ್ಷಿಗಳಾಗಿ ಹೆಸರಿಸಲಾಗಿದೆ. ಸೆಪ್ಟೆಂಬರ್ 23ರಂದು ಸಲ್ಲಿಸಲಾದ ಆರೋಪಪಟ್ಟಿಯಲ್ಲಿ ಒಟ್ಟು 133 ಸಾಕ್ಷಿಗಳಿದ್ದು, ಕಾಣಿಕೆ ಹಣವನ್ನು ಅಕ್ರಮವಾಗಿ ತೆಗೆದುಹಾಕಿದ ಆರೋಪದಡಿ ಎಂಟು ಮಂದಿಯನ್ನು ಆರೋಪಿಗಳಾಗಿ ಹೆಸರಿಸಲಾಗಿದೆ.

ರಾಮಮಂದಿರ ಆವರಣದಲ್ಲಿ ಭಕ್ತರಿಂದ ಸಂಗ್ರಹವಾಗುವ ನಗದು ಕಾಣಿಕೆಗಳನ್ನು ಬ್ಯಾಂಕ್‌ಗೆ ಜಮೆ ಮಾಡುವ ಮೊದಲು ಎಣಿಕೆ ಪ್ರಕ್ರಿಯೆಯಲ್ಲಿ ಹಣವನ್ನು ದುರುಪಯೋಗ ಮಾಡಲಾಗಿದೆ ಎಂಬುದು ಪ್ರಕರಣದ ಪ್ರಮುಖ ಆರೋಪವಾಗಿದೆ. ತನಿಖೆಯ ವೇಳೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿರುವ ಎಸ್‌ಐಟಿ, ಕಾಣಿಕೆ ಹಣವನ್ನು ದುರುಪಯೋಗಪಡಿಸಿಕೊಂಡಿರುವ 105 ಘಟನೆಗಳು ದಾಖಲಾಗಿವೆ ಎಂದು ತಿಳಿಸಿದೆ.

ಅನಿಲ್ ಕುಮಾರ್ ಮಿಶ್ರಾ ಮತ್ತು ಚಂಪತ್ ರಾಯ್ ಹೊರತುಪಡಿಸಿ, ಟ್ರಸ್ಟ್‌ನ ಅಂದಿನ ಹಂಗಾಮಿ ಪ್ರಧಾನ ಕಾರ್ಯದರ್ಶಿ ಹಾಗೂ ಪ್ರಕರಣದ ದೂರುದಾರ ಕೃಷ್ಣ ಮೋಹನ್ ಮತ್ತು ಟ್ರಸ್ಟ್‌ನ ಮಾಜಿ ವಿಶೇಷ ಆಹ್ವಾನಿತ ಸದಸ್ಯ ಹಾಗೂ ವಿಶ್ವ ಹಿಂದೂ ಪರಿಷತ್‌ನ ಪದಾಧಿಕಾರಿ ಗೋಪಾಲ್ ಎಂ. ನಾಗ್ಕಟ್ಟೆ ಅಲಿಯಾಸ್ ಗೋಪಾಲ್ ರಾವ್ ಅವರನ್ನೂ ಪ್ರಾಸಿಕ್ಯೂಷನ್ ಸಾಕ್ಷಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.

ಚಾರ್ಜ್‌ಶೀಟ್‌ನಲ್ಲಿ 8 ಮಂದಿ ಹೆಸರು

ಆರೋಪಪಟ್ಟಿಯಲ್ಲಿ ಅವಿನಾಶ್ ಶುಕ್ಲಾ ಅಲಿಯಾಸ್ ಶನಿ, ಅನುಕಲ್ಪ್ ಮಿಶ್ರಾ, ಲವಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ, ರಾಮಶಂಕರ್ ಮಿಶ್ರಾ, ಸುಭಾಷ್ ಶ್ರೀವಾಸ್ತವ ಮತ್ತು ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು ಎಂಬ ಎಂಟು ಮಂದಿಯನ್ನು ಆರೋಪಿಗಳಾಗಿ ಹೆಸರಿಸಲಾಗಿದೆ. ಕೃಷ್ಣ ಮೋಹನ್ ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಾದ ಒಂದು ದಿನದ ಬಳಿಕ, ಜೂನ್ 26ರಂದು ಇವರನ್ನು ಬಂಧಿಸಲಾಗಿತ್ತು.

ತನಿಖಾ ಸಂಸ್ಥೆಯ ಪ್ರಕಾರ, ಕಾಣಿಕೆ ಹಣ ಎಣಿಸುವ ಕಾರ್ಯದಲ್ಲಿ ತೊಡಗಿದ್ದ ಆರೋಪಿಗಳು ನಗದು ಹಣಕ್ಕೆ ಹೊಂದಿದ್ದ ಪ್ರವೇಶವನ್ನು ದುರುಪಯೋಗಪಡಿಸಿಕೊಂಡು, ಇತರ ಆರೋಪಿಗಳೊಂದಿಗೆ ಸೇರಿ ಕಾಣಿಕೆ ಹಣದ ಒಂದು ಭಾಗವನ್ನು ಬೇರೆಡೆಗೆ ವರ್ಗಾಯಿಸಿದ್ದಾರೆ ಎಂಬ ಆರೋಪವಿದೆ.

ಆರೋಪಿತ ಹಣಕಾಸು ವ್ಯವಹಾರಗಳ ಜಾಡು ಪತ್ತೆಹಚ್ಚಲು ಎಸ್‌ಐಟಿ ಸಿಸಿಟಿವಿ ದೃಶ್ಯಗಳು, ಬ್ಯಾಂಕ್ ಖಾತೆಗಳು, ಆಸ್ತಿ ವಹಿವಾಟುಗಳು, ಮೊಬೈಲ್‌ಫೋನ್ ಮಾಹಿತಿ ಸೇರಿದಂತೆ ವಿವಿಧ ವಿದ್ಯುನ್ಮಾನ ಸಾಕ್ಷ್ಯಗಳನ್ನು ಪರಿಶೀಲಿಸಿದೆ. ತನಿಖೆ ನಡೆಯುತ್ತಿದ್ದ ಅವಧಿಯಲ್ಲಿ ಅನಿಲ್ ಕುಮಾರ್ ಮಿಶ್ರಾ ಮತ್ತು ಚಂಪತ್ ರಾಯ್ ಟ್ರಸ್ಟ್‌ನಲ್ಲಿ ಪ್ರಮುಖ ಜವಾಬ್ದಾರಿಗಳನ್ನು ಹೊಂದಿದ್ದರು. ಭಕ್ತರಿಂದ ಬರುವ ಕಾಣಿಕೆ ಹಣವನ್ನು ನಿರ್ವಹಿಸುವ ವ್ಯವಸ್ಥೆಗೆ ಸಂಬಂಧಿಸಿದಂತೆ ಎಸ್‌ಐಟಿ ಅವರನ್ನೂ ವಿಚಾರಣೆ ನಡೆಸಿತ್ತು. ಕಾಣಿಕೆ ಹಣ ಎಣಿಕೆ ಪ್ರಕ್ರಿಯೆಯಲ್ಲಿನ ಅಕ್ರಮಗಳ ತನಿಖೆಯಲ್ಲೂ ಅವರ ಹೆಸರು ಈ ಹಿಂದೆ ಪ್ರಸ್ತಾಪವಾಗಿತ್ತು. ಜೂನ್ 27ರಂದು ಇಬ್ಬರೂ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿರುವುದಾಗಿ ಟ್ರಸ್ಟ್ ಘೋಷಿಸಿತ್ತು.

ರಾಮಮಂದಿರದ ಕಾಣಿಕೆ ಹಣ ನಿರ್ವಹಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಎಸ್‌ಐಟಿ ತನಿಖೆ ನಡೆಸಿತ್ತು. ಭಕ್ತರು ನೀಡಿದ ಅಮೂಲ್ಯ ಕಾಣಿಕೆಗಳ ಬಗ್ಗೆಯೂ ತನಿಖೆ ನಡೆದಿದೆ. ಟ್ರಸ್ಟ್‌ನ ತಂತ್ರಾಂಶದಲ್ಲಿ ದಾಖಲಾಗಿದ್ದ 803 ಅಮೂಲ್ಯ ಕಾಣಿಕೆಗಳನ್ನು ಪರಿಶೀಲಿಸಲಾಗಿದ್ದು, ಅವುಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ ಎಂದು ಎಸ್‌ಐಟಿ ತಿಳಿಸಿದೆ.

Read More
Next Story