ರಾಜ್ಯಸಭಾ ಚುನಾವಣೆ: ಕರ್ನಾಟಕದಿಂದ ಖರ್ಗೆ, ಪವನ್ ಖೇರಾ, ಮನ್ಸೂರ್ ಅಲಿ ಖಾನ್‌ಗೆ ಕಾಂಗ್ರೆಸ್ ಟಿಕೆಟ್
x

ರಾಜ್ಯಸಭಾ ಚುನಾವಣೆ: ಕರ್ನಾಟಕದಿಂದ ಖರ್ಗೆ, ಪವನ್ ಖೇರಾ, ಮನ್ಸೂರ್ ಅಲಿ ಖಾನ್‌ಗೆ ಕಾಂಗ್ರೆಸ್ ಟಿಕೆಟ್

ಜೂನ್ 18ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಕರ್ನಾಟಕದಿಂದ ಮಲ್ಲಿಕಾರ್ಜುನ ಖರ್ಗೆ, ಪವನ್ ಖೇರಾ ಮತ್ತು ಮನ್ಸೂರ್ ಅಲಿ ಖಾನ್ ಅವರಿಗೆ ಟಿಕೆಟ್ ನೀಡಲಾಗಿದೆ. ಖರ್ಗೆ ನಾಳೆ ನಾಮಪತ್ರ ಸಲ್ಲಿಸಲಿದ್ದು, ರಾಹುಲ್ ಗಾಂಧಿ ಸಾಥ್ ನೀಡಲಿದ್ದಾರೆ.


Click the Play button to hear this message in audio format

ಜೂನ್ 18 ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಗುರುವಾರ ಅಧಿಕೃತವಾಗಿ ಪ್ರಕಟಿಸಿದೆ. ಒಟ್ಟು 10 ರಾಜ್ಯಗಳ 24 ರಾಜ್ಯಸಭೆ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಕರ್ನಾಟಕದಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪವನ್‌ ಖೇರಾ ಹಾಗೂ ಮನ್ಸೂರ್‌ ಅಲಿ ಖಾನ್‌ ಅವರಿಗೆ ಟಿಕೆಟ್ ನೀಡಲಾಗಿದೆ.

ಮಲ್ಲಿಕಾರ್ಜುನ ಖರ್ಗೆ ಅವರು ಶುಕ್ರವಾರ ವಿಧಾನಸೌಧದಲ್ಲಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಲಿದ್ದಾರೆ. ಈ ವೇಳೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರೊಂದಿಗೆ ಹಾಜರಿರುವ ನಿರೀಕ್ಷೆಯಿದೆ.

ಕರ್ನಾಟಕದಿಂದ ನಾಲ್ಕು ರಾಜ್ಯಸಭೆ ಸ್ಥಾನಗಳು ತೆರವಾಗುತ್ತಿದ್ದು, ವಿಧಾನಸಭೆಯಲ್ಲಿನ ಸಂಖ್ಯಾಬಲದ ಆಧಾರದ ಮೇಲೆ ಕಾಂಗ್ರೆಸ್ ಮೂರು ಸ್ಥಾನಗಳನ್ನು ಸುಲಭವಾಗಿ ಗೆಲ್ಲುವ ಸಾಧ್ಯತೆ ಇದೆ. ಬಿಜೆಪಿ ಒಂದು ಸ್ಥಾನವನ್ನು ತನ್ನ ಖಾತೆಗೆ ಸೇರಿಸಿಕೊಳ್ಳುವ ನಿರೀಕ್ಷೆಯಿದೆ.

ಕಾಂಗ್ರೆಸ್ ತನ್ನ ಉಳಿದ ಎರಡು ಸ್ಥಾನಗಳಿಗೆ ಪವನ್ ಖೇರಾ ಹಾಗೂ ಮನ್ಸೂರ್ ಅಲಿ ಖಾನ್ ಅವರನ್ನು ಕಣಕ್ಕಿಳಿಸಿದೆ. ಇದೇ ವೇಳೆ ಮಧ್ಯಪ್ರದೇಶದಿಂದ ಮೀನಾಕ್ಷಿ ನಟರಾಜನ್‌, ರಾಜಸ್ಥಾನದಿಂದ ನೀರಜ್‌ ಡಂಗಿ, ತಮಿಳುನಾಡಿನಿಂದ ಪ್ರವೀಣ್‌ ಚಕ್ರವರ್ತಿ ಹಾಗೂ ಜಾರ್ಖಂಡ್‌ನಿಂದ ಪ್ರಣವ್‌ ಝಾ ಅವರಿಗೆ ಕಾಂಗ್ರೆಸ್ ಅವಕಾಶ ನೀಡಿದೆ.

ರಾಜ್ಯಸಭೆ ಚುನಾವಣೆಗೆ ಜೂನ್ 18 ರಂದು ಮತದಾನ ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ ಜೂನ್ 8 ಕೊನೆಯ ದಿನವಾಗಿದೆ. ಇನ್ನೊಂದೆಡೆ, ಬಿಜೆಪಿ ಇನ್ನೂ ತನ್ನ ಅಭ್ಯರ್ಥಿಯನ್ನು ಅಧಿಕೃತವಾಗಿ ಘೋಷಿಸಿಲ್ಲ. ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ ಅವರಿಗೆ ರಾಜ್ಯಸಭೆ ಸ್ಥಾನ ನೀಡುವ ಕುರಿತು ಅನಿಶ್ಚಿತತೆ ಮುಂದುವರಿದಿದೆ. ರಾಜ್ಯ ಬಿಜೆಪಿ ಘಟಕವು ಡಿ.ವಿ.ಸದಾನಂದಾ ಗೌಡ ಹಾಗೂ ಮಾಜಿ ಶಾಸಕ ನಿರ್ಮಲ್‌ ಕುಮಾರ್‌ ಸುರಾಣಾ ಅವರ ಹೆಸರನ್ನು ಪಕ್ಷದ ಹೈಕಮಾಂಡ್‌ಗೆ ಶಿಫಾರಸು ಮಾಡಿದೆ ಎನ್ನಲಾಗಿದೆ. ಅಂತಿಮವಾಗಿ ಬಿಜೆಪಿ ನಾಯಕತ್ವ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

Read More
Next Story