ಅರಾಜಕತೆ ಸೃಷ್ಟಿಸಿ ಅಧಿಕಾರ ಹಿಡಿಯಲು ಪಿತೂರಿ: ಕಾಂಗ್ರೆಸ್ ವಿರುದ್ಧ ರಾಜನಾಥ್ ಸಿಂಗ್ ಕಿಡಿ
x

ಅರಾಜಕತೆ ಸೃಷ್ಟಿಸಿ ಅಧಿಕಾರ ಹಿಡಿಯಲು ಪಿತೂರಿ: ಕಾಂಗ್ರೆಸ್ ವಿರುದ್ಧ ರಾಜನಾಥ್ ಸಿಂಗ್ ಕಿಡಿ

ದೆಹಲಿಯಲ್ಲಿನ ಪ್ರಸ್ತುತ ಪರಿಸ್ಥಿತಿಯು ಸಾಂವಿಧಾನಿಕ ಮೌಲ್ಯಗಳನ್ನು ಗಾಳಿಗೆ ತೂರಿ, ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸುವ ಪಿತೂರಿಯಾಗಿದೆ ಎಂದು ಸಚಿವ ರಾಜನಾಥ್‌ಸಿಂಗ್ ಆರೋಪಿಸಿದ್ದಾರೆ.


Click the Play button to hear this message in audio format

ದೇಶದ ರಾಜಧಾನಿಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳು ಮತ್ತು ವಿಪಕ್ಷಗಳ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ದೆಹಲಿಯಲ್ಲಿನ ಪ್ರಸ್ತುತ ಪರಿಸ್ಥಿತಿಯು ಸಾಂವಿಧಾನಿಕ ಮೌಲ್ಯಗಳನ್ನು ಗಾಳಿಗೆ ತೂರಿ, ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸುವ ಪಿತೂರಿಯಾಗಿದೆ ಎಂದು ಆರೋಪಿಸಿದ್ದಾರೆ.

ವಿಪಕ್ಷಗಳು ದೇಶದ ಯುವಜನತೆಯನ್ನು ತಮ್ಮ ರಾಜಕೀಯ ದಾಳಗಳನ್ನಾಗಿ ಬಳಸಿಕೊಳ್ಳುತ್ತಿವೆ ಎಂದು ದೂರಿದರು. "ಯುವಶಕ್ತಿಯನ್ನು ರಾಷ್ಟ್ರ ನಿರ್ಮಾಣದ ರಚನಾತ್ಮಕ ಕೆಲಸಗಳಿಗೆ ಬಳಸುವ ಬದಲು, ದೇಶದಲ್ಲಿ ಸಂಘರ್ಷ ಮತ್ತು ಅಶಾಂತಿಯನ್ನು ಸೃಷ್ಟಿಸಲು ವಿಪಕ್ಷಗಳು ಬಳಸುತ್ತಿವೆ. ಇದು ಯುವಕರ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ ಬೆಳವಣಿಗೆ" ಎಂದು ಎಚ್ಚರಿಸಿದರು.

ವಿಪಕ್ಷಗಳ ಕಾರ್ಯಸೂಚಿಯ ಬಗ್ಗೆ ಗಂಭೀರ ಆರೋಪ ಮಾಡಿದ ರಕ್ಷಣಾ ಸಚಿವರು, "ಕೆಲವು ಪ್ರತಿಪಕ್ಷಗಳ ನಾಯಕರು ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ರಾಜಕೀಯ ಬದಲಾವಣೆಗಳಿಂದ ಪ್ರೇರಿತರಾಗಿರುವುದಾಗಿ ಬಹಿರಂಗವಾಗಿ ಒಪ್ಪಿಕೊಳ್ಳುತ್ತಿದ್ದಾರೆ. ಅದೇ ಮಾದರಿಯನ್ನು ಭಾರತದಲ್ಲಿಯೂ ಜಾರಿಗೆ ತಂದು, ಅಸ್ತಿತ್ವದಲ್ಲಿರುವ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದ್ದಾರೆ. ಇವರ ಹೋರಾಟವು ಚುನಾವಣಾ ಸುಧಾರಣೆಗಾಗಿ ಅಥವಾ ಪ್ರಜಾಪ್ರಭುತ್ವದ ಉಳಿವಿನಿಗಾಗಿ ಅಲ್ಲ, ಬದಲಾಗಿ ಅರಾಜಕತೆಯನ್ನು ಸೃಷ್ಟಿಸಿ ಹಿಂಬಾಗಿಲಿನ ಮೂಲಕ ಅಧಿಕಾರ ಹಿಡಿಯುವ ಪ್ರಯತ್ನವಾಗಿದೆ" ಎಂದು ಕಿಡಿಕಾರಿದರು.

ಕಾಂಗ್ರೆಸ್ ಪಕ್ಷದ ಇತಿಹಾಸವನ್ನು ಕರಾಳ ಅಧ್ಯಾಯ ಎಂದು ಹೇಳಿದ ರಾಜನಾಥ್ ಸಿಂಗ್, ದೇಶದ ಪ್ರಜಾಪ್ರಭುತ್ವದ ಮೇಲೆ ಕಾಂಗ್ರೆಸ್ ನಡೆಸಿದ ನಾಲ್ಕು ಪ್ರಮುಖ ದಾಳಿಗಳನ್ನು ನೆನಪಿಸಿಕೊಂಡರು. 1975ರ ತುರ್ತು ಪರಿಸ್ಥಿತಿ- ಇಂದಿರಾ ಗಾಂಧಿಯವರು ಹೇರಿದ ತುರ್ತು ಪರಿಸ್ಥಿತಿಯ ಮೂಲಕ ದೇಶದ ಪ್ರಜಾಪ್ರಭುತ್ವವನ್ನು ಹತ್ತಿಕ್ಕಿದ ಕರಾಳ ಘಟನೆಯನ್ನು ಅವರು ಉಲ್ಲೇಖಿಸಿದರು. 1984ರ ಸಿಖ್ ಹತ್ಯಾಕಾಂಡ - ಕಾಂಗ್ರೆಸ್ ಆಡಳಿತದಲ್ಲಿ ನಡೆದ ದೆಹಲಿಯ ಸಿಖ್ ಹತ್ಯಾಕಾಂಡವು ಮಾನವೀಯತೆಯ ಮೇಲಿನ ದೊಡ್ಡ ಕಳಂಕ ಎಂದು ಟೀಕಿಸಿದರು. 1990ರ ಕರಸೇವಕರ ಹತ್ಯೆ - ರಾಮಭಕ್ತ ಕರಸೇವಕರ ಮೇಲೆ ನಡೆದ ಗುಂಡಿನ ದಾಳಿ ಮತ್ತು ಅವರ ರಕ್ತಪಾತಕ್ಕೆ ಕಾರಣವಾದ ಸರ್ಕಾರಕ್ಕೆ ಕಾಂಗ್ರೆಸ್ ಬೆಂಬಲ ನೀಡಿದ ಕಹಿಸತ್ಯವನ್ನು ಬಿಚ್ಚಿಟ್ಟರು. ಇಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವು ವ್ಯವಸ್ಥಿತವಾಗಿ ಸಾಂವಿಧಾನಿಕ ಸಂಸ್ಥೆಗಳನ್ನು ಮತ್ತು ಮೌಲ್ಯಗಳನ್ನು ದುರ್ಬಲಗೊಳಿಸುವ ಮೂಲಕ ಪ್ರಜಾಪ್ರಭುತ್ವಕ್ಕೆ ಅಪಾಯ ತಂದೊಡ್ಡುತ್ತಿದೆ ಎಂದು ಆರೋಪಿಸಿದರು.

ಸಾಂವಿಧಾನಿಕ ಮಾರ್ಗಗಳ ಉಲ್ಲಂಘನೆ

ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗೆ ಅವಕಾಶವಿದೆ, ಆದರೆ ಅದು ಸಾಂವಿಧಾನಿಕ ಚೌಕಟ್ಟಿನಲ್ಲಿರಬೇಕು. ಆದರೆ ದೆಹಲಿಯಲ್ಲಿ ನಡೆಯುತ್ತಿರುವ ಆಂದೋಲನಗಳು ಅರಾಜಕತೆಯತ್ತ ವಾಲುತ್ತಿರುವುದು ಖಂಡನೀಯ. ಸರ್ಕಾರವನ್ನು ಉರುಳಿಸಲು ಕರೆ ನೀಡುವ ಮೂಲಕ ದೇಶದ ಸಂವಿಧಾನ ಮತ್ತು ಕಾನೂನನ್ನು ಕಡೆಗಣಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಜಕೀಯ ಭಿನ್ನಾಭಿಪ್ರಾಯಗಳು ಪ್ರಜಾಪ್ರಭುತ್ವದ ಭಾಗವಾಗಿದ್ದರೂ, ಅವು ರಾಷ್ಟ್ರದ ಅಖಂಡತೆ ಮತ್ತು ಶಾಂತಿಯನ್ನು ಬಲಿಕೊಡುವ ಮಟ್ಟಿಗೆ ಇರಬಾರದು. ದೇಶದ ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ. ರಾಜಕೀಯ ಲಾಭಕ್ಕಾಗಿ ರಾಷ್ಟ್ರದ ಸುರಕ್ಷತೆ ಮತ್ತು ಸ್ಥಿರತೆಯನ್ನು ಅಲುಗಾಡಿಸುವ ಯಾವುದೇ ಪ್ರಯತ್ನವನ್ನು ಬಿಜೆಪಿ ಸರ್ಕಾರ ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ವಿಪಕ್ಷಗಳು ಸರ್ಕಾರದ ವಿರುದ್ಧ ನಡೆಸುತ್ತಿರುವ ಆಂದೋಲನವನ್ನು ಅಧಿಕಾರಕ್ಕಾಗಿನ ಪಿತೂರಿ ಎಂದು ಬಣ್ಣಿಸುವ ಮೂಲಕ ಬಿಜೆಪಿ ತನ್ನ ಆಕ್ರಮಣಕಾರಿ ನಿಲುವನ್ನು ಪ್ರದರ್ಶಿಸಿದೆ. ದೇಶದ ಶಾಂತಿ ಮತ್ತು ಸಂವಿಧಾನದ ಗೌರವವನ್ನು ಕಾಪಾಡಿಕೊಳ್ಳುವುದು ಎಲ್ಲ ರಾಜಕೀಯ ಪಕ್ಷಗಳ ಜವಾಬ್ದಾರಿಯಾಗಿದೆ ಎಂದು ಹೇಳಿದರು.

Read More
Next Story