
ʼಹಣದುಬ್ಬರದ ಮೋದಿ': ಇಂಧನ ದರ ಏರಿಕೆ ವಿರುದ್ಧ ರಾಹುಲ್ ಗಾಂಧಿ ಕಿಡಿ
ಚುನಾವಣಾ ಪ್ರಚಾರ ಅವಧಿಯಲ್ಲಿ ಇಂಧನ ದರ ಕೃತಕವಾಗಿ ನಿಯಂತ್ರಣದಲ್ಲಿಟ್ಟಿದ್ದ ಸರ್ಕಾರ, ಈಗ ಕಂತುಗಳಲ್ಲಿ ದರ ಏರಿಕೆ ಮಾಡುತ್ತಿದೆ ಎಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ
ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಸರಣಿಯಾಗಿ ಏರಿಕೆ ಮಾಡುತ್ತಿರುವ ಬೆನ್ನಲ್ಲೇ, ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಚುನಾವಣೆ ಮುಗಿಯುತ್ತಿದ್ದಂತೆಯೇ ಇಂಧನ ದರ ಏರಿಕೆ ಮಾಡಿರುವುದು ಜನರ ಜೇಬಿಗೆ ಕತ್ತರಿ ಹಾಕುವ ಕೆಲಸ ಎಂದು ಕಾಂಗ್ರೆಸ್ ಆರೋಪಿಸಿದೆ.
ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಅವರನ್ನು "ಇನ್ಫ್ಲೇಷನ್ ಮ್ಯಾನ್ ಮೋದಿ" (ಹಣದುಬ್ಬರದ ಮನುಷ್ಯ) ಎಂದು ಟೀಕಿಸಿದ್ದಾರೆ. ಇಂಧನ ದರ ಹೆಚ್ಚಳದ ನಿರ್ಧಾರದ ನಂತರ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, ಕೇಂದ್ರ ಸರ್ಕಾರವು ಜನರ ಜೇಬಿನಿಂದ ಹಣವನ್ನು ಗುಪ್ತವಾಗಿ ಲೂಟಿ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
ಚುನಾವಣಾ ಪ್ರಚಾರದ ಅವಧಿಯಲ್ಲಿ ಇಂಧನ ದರಗಳನ್ನು ಕೃತಕವಾಗಿ ನಿಯಂತ್ರಣದಲ್ಲಿಟ್ಟಿದ್ದ ಸರ್ಕಾರ, ಈಗ ಚುನಾವಣೆ ಮುಗಿಯುತ್ತಿದ್ದಂತೆಯೇ ಕಂತುಗಳಲ್ಲಿ ದರ ಏರಿಕೆ ಮಾಡುತ್ತಿದೆ ಎಂದು ರಾಹುಲ್ ಆರೋಪಿಸಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ಇಂಧನ ದರವು ಸುಮಾರು 8 ರೂ.ನಷ್ಟು ಏರಿಕೆಯಾಗಿದೆ. ನಾನು ತಿಂಗಳ ಹಿಂದೆಯೇ ಆರ್ಥಿಕ ಬಿರುಗಾಳಿ ಬರುತ್ತಿದೆ ಎಂದು ಎಚ್ಚರಿಸಿದ್ದೆ. ಆದರೆ ನರೇಂದ್ರ ಮೋದಿ ಅವರು ಆಗ ಚುನಾವಣಾ ಪ್ರಚಾರದಲ್ಲಿದ್ದರು. ಈಗ ಚುನಾವಣೆ ಮುಗಿದಿದೆ, ದರ ಏರಿಕೆಯ ಪರ್ವ ಆರಂಭವಾಗಿದೆ ಎಂದು ಲೇವಡಿ ಮಾಡಿದ್ದಾರೆ.
ಇಂಧನ ದರ ಏರಿಕೆಯ ಅಂಕಿ-ಅಂಶಗಳು
ಕೇಂದ್ರ ಸರ್ಕಾರವು ಸೋಮವಾರ ಪೆಟ್ರೋಲ್ ದರವನ್ನು ಲೀಟರ್‌ಗೆ 2.61 ರೂ. ಮತ್ತು ಡೀಸೆಲ್ ದರವನ್ನು 2.71 ರೂ. ನಷ್ಟು ಹೆಚ್ಚಿಸಿದೆ. ಮೇ 15ರಿಂದೀಚೆಗೆ ಈವರೆಗೆ ಪೆಟ್ರೋಲ್ ದರ ಸುಮಾರು 7.35 ರೂ. ಮತ್ತು ಡೀಸೆಲ್ ದರ 7.53 ರೂ.ನಷ್ಟು ಏರಿಕೆಯಾಗಿದೆ. ಕಳೆದ ಹತ್ತು ದಿನಗಳಲ್ಲಿ ಸರಣಿ ದರ ಏರಿಕೆ ಕಂಡುಬಂದಿದೆ:
ಮೇ 15ರಂದು ಲೀಟರ್‌ಗೆ 3 ರೂ. ಏರಿಕೆ, ಮೇ 19ರಂದು 90 ಪೈಸೆ ಏರಿಕೆ ಮತ್ತು ಮೇ 23ರಂದು ಮತ್ತೆ ದರ ಏರಿಕೆಯಾಗಿದೆ. ಈ ಸರಣಿ ಏರಿಕೆಯು ತೈಲ ಮಾರುಕಟ್ಟೆಯ ಮೇಲಿನ ಅಂತರರಾಷ್ಟ್ರೀಯ ಒತ್ತಡ ಮತ್ತು ಪೂರೈಕೆ ಕೊರತೆಯ ನೆಪದಲ್ಲಿ ನಡೆಯುತ್ತಿದೆ ಎಂಬುದು ಸರ್ಕಾರದ ವಾದವಾದರೆ, ಇದು ಸಂಪೂರ್ಣವಾಗಿ ಜನರ ಮೇಲೆ ಹಾಕಲಾದ 'ಆರ್ಥಿಕ ಹೊರೆ' ಎಂದು ಕಿಡಿಕಾರಿದರು.
ಮಲ್ಲಿಕಾರ್ಜುನ ಖರ್ಗೆ ‘ಇಂಧನ ಲೂಟಿ’ ಆರೋಪ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇಂಧನ ದರ ಏರಿಕೆಯನ್ನು ಇಂಧನ ಲೂಟಿ ಎಂದು ಕರೆದಿದ್ದಾರೆ. ಈ ದೈನಂದಿನ ದರ ಏರಿಕೆಯು ಸಾಮಾನ್ಯ ಜನರ ಬಜೆಟ್ ಮೇಲೆ ನೇರ ಪರಿಣಾಮ ಬೀರುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಖರ್ಗೆ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಇಂಧನ ಲೂಟಿಯ ಈ ದಿನನಿತ್ಯದ ದಾಳಿ ಇನ್ನೂ ನಿಂತಿಲ್ಲ..! ಪ್ರತಿಯೊಂದು ದರ ಏರಿಕೆಯೂ ಸಾಮಾನ್ಯ ಕುಟುಂಬದ ಉಳಿತಾಯದ ಮೇಲೆ ಮತ್ತು ಒಟ್ಟಾರೆ ಆರ್ಥಿಕತೆಯ ಮೇಲೆ ಮಾರಣಾಂತಿಕ ಹೊಡೆತ ನೀಡುತ್ತಿದೆ" ಎಂದು ಬರೆದಿದ್ದಾರೆ. ರೈತರಿಂದ ಹಿಡಿದು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳವರೆಗೆ ಎಲ್ಲ ವರ್ಗದ ಜನರು ಈ ಬಿಜೆಪಿ ಸರ್ಕಾರದ ಲೂಟಿಯಿಂದ ನಲುಗುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇಂಧನ ದರ ಏರಿಕೆಯು ಕೇವಲ ವಾಹನ ಸವಾರರಿಗೆ ಮಾತ್ರ ಹೊರೆಯಲ್ಲ, ಬದಲಾಗಿ ಇದು ಸಾರಿಗೆ ವೆಚ್ಚವನ್ನು ಹೆಚ್ಚಿಸುವುದರಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಗೂ ಕಾರಣವಾಗುತ್ತದೆ. ಇದು ಆರ್ಥಿಕತೆಯ ಮೇಲೆ ಸರಣಿ ಪ್ರಭಾವ ಬೀರಲಿದೆ ಎಂಬುದು ತಜ್ಞರ ಎಚ್ಚರಿಕೆಯಾಗಿದೆ ಎಂದು ಕಿಡಿಕಾರಿದ್ದಾರೆ.

