ಯುವಕರ ಧ್ವನಿಗೆ ಎಲ್ಲ ಪಕ್ಷಗಳೂ ಗೌರವ ನೀಡಬೇಕು: ಲೋಕಸಭೆಯಲ್ಲಿ ರಾಹುಲ್ ಗಾಂಧಿ
x

ಯುವಕರ ಧ್ವನಿಗೆ ಎಲ್ಲ ಪಕ್ಷಗಳೂ ಗೌರವ ನೀಡಬೇಕು: ಲೋಕಸಭೆಯಲ್ಲಿ ರಾಹುಲ್ ಗಾಂಧಿ

ಇದೇ ವೇಳೆ ರಾಹುಲ್ ಗಾಂಧಿ ಬಳಸಿದ "ಮೂರ್ಖರು" ಎಂಬ ಪದವನ್ನು ಆಡಳಿತ ಪಕ್ಷದ ವಿರುದ್ಧದ ಉಲ್ಲೇಖ ಎಂದು ಬಿಜೆಪಿ ಸದಸ್ಯರು ಆಕ್ಷೇಪಿಸಿದರು. ಇದರಿಂದ ಲೋಕಸಭೆಯಲ್ಲಿ ಕೆಲಕಾಲ ಗದ್ದಲ ಉಂಟಾಯಿತು.


Click the Play button to hear this message in audio format

ಪ್ರಶ್ನೆಪತ್ರಿಕೆ ಸೋರಿಕೆ ತಡೆ ಮಸೂದೆ ಕುರಿತ ಲೋಕಸಭೆ ಚರ್ಚೆಯ ವೇಳೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದು, ಯುವಕರ ಧ್ವನಿಯನ್ನು ಎಲ್ಲ ರಾಜಕೀಯ ಪಕ್ಷಗಳೂ ಗೌರವಿಸಬೇಕು ಎಂದು ಕರೆ ನೀಡಿದರು.

ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ದೇಶದಾದ್ಯಂತ ನಡೆದ ವಿದ್ಯಾರ್ಥಿ ಪ್ರತಿಭಟನೆಗಳನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, ಅವು ಕೋಪ, ಹಿಂಸೆ ಅಥವಾ ದ್ವೇಷದ ಅಭಿವ್ಯಕ್ತಿ ಅಲ್ಲ; ಭಾರತದ ಭವಿಷ್ಯವನ್ನು ರೂಪಿಸುವ ಯುವಜನರ ಆಶಯ ಮತ್ತು ಧ್ವನಿಯ ಅಭಿವ್ಯಕ್ತಿ ಎಂದು ಹೇಳಿದರು.

"ದೇಶದ ಭವಿಷ್ಯ ನಮ್ಮ ಬೀದಿಗಳಲ್ಲಿ ತನ್ನ ಧ್ವನಿಯನ್ನು ಎತ್ತಿರುವುದನ್ನು ನೋಡಿ ನನಗೆ ತುಂಬಾ ಸಂತೋಷ ಮತ್ತು ಭರವಸೆ ಮೂಡಿತು. ಅದು ಕೋಪ ಅಥವಾ ಹಿಂಸೆಯಲ್ಲ. ಅದು ಈ ದೇಶದ ಯುವಕರ ಹಾಗೂ ಮುಂದಿನ ಪೀಳಿಗೆಯ ಅಭಿವ್ಯಕ್ತಿಯಾಗಿದೆ" ಎಂದು ಅವರು ಹೇಳಿದರು. ವಿದ್ಯಾರ್ಥಿಗಳ ಆತಂಕ ಮತ್ತು ಬೇಡಿಕೆಗಳನ್ನು ಎಲ್ಲ ರಾಜಕೀಯ ಪಕ್ಷಗಳೂ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ ರಾಹುಲ್ ಗಾಂಧಿ, "ನನ್ನ ಬಿಜೆಪಿಯ ಸ್ನೇಹಿತರು ಸೇರಿದಂತೆ ಎಲ್ಲ ಪಕ್ಷಗಳೂ ಯುವಕರ ಈ ಅಭಿವ್ಯಕ್ತಿಗೆ ಗೌರವ ನೀಡಬೇಕು" ಎಂದು ಹೇಳಿದರು.

'ವಿದ್ಯಾರ್ಥಿಗಳು ಸತ್ಯದ ಹುಡುಕಾಟ ನಡೆಸುತ್ತಾರೆ'

ಚರ್ಚೆ ವೇಳೆ ವಿದ್ಯಾರ್ಥಿಗಳೊಂದಿಗೆ ನಡೆದ ಸಂಭಾಷಣೆಯೊಂದನ್ನು ಪ್ರಸ್ತಾಪಿಸಿದ ರಾಹುಲ್ ಗಾಂಧಿ, "ಒಬ್ಬ ವಿದ್ಯಾರ್ಥಿ ನನಗೆ ಜನರನ್ನು ಎರಡು ವರ್ಗಗಳಾಗಿ ವಿಂಗಡಿಸಿದ್ದ. ಮೊದಲನೆಯವರು ಸ್ಪಾಂಜ್‌ನಂತೆ ಎಲ್ಲವನ್ನೂ ಅರ್ಥಮಾಡಿಕೊಳ್ಳಲು ಮತ್ತು ಕಲಿಯಲು ಹಾತೊರೆಯುವವರು. ಇನ್ನೊಂದು ವರ್ಗ, ಏನು ಹೇಳಿದರೂ ಕೇಳದ ಮೂರ್ಖರು ಎಂದು ಹೇಳಿದ್ದ" ಎಂದು ಹೇಳಿದರು.

ಈ ಹೇಳಿಕೆಯ ವೇಳೆ ರಾಹುಲ್ ಗಾಂಧಿ ಬಳಸಿದ "ಮೂರ್ಖರು" ಎಂಬ ಪದವನ್ನು ಆಡಳಿತ ಪಕ್ಷದ ವಿರುದ್ಧದ ಉಲ್ಲೇಖ ಎಂದು ಬಿಜೆಪಿ ಸದಸ್ಯರು ಆಕ್ಷೇಪಿಸಿದರು. ಇದರಿಂದ ಲೋಕಸಭೆಯಲ್ಲಿ ಕೆಲಕಾಲ ಗದ್ದಲ ಉಂಟಾಯಿತು. ಪ್ರಶ್ನೆಪತ್ರಿಕೆ ಸೋರಿಕೆ ತಡೆ ಮಸೂದೆ ಕುರಿತ ಚರ್ಚೆ ವೇಳೆ ಯುವಕರ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಆಲಿಸಬೇಕು ಹಾಗೂ ವಿದ್ಯಾರ್ಥಿಗಳ ಧ್ವನಿಯನ್ನು ನಿರ್ಲಕ್ಷಿಸಬಾರದು ಎಂದು ರಾಹುಲ್ ಗಾಂಧಿ ಸರ್ಕಾರವನ್ನು ಆಗ್ರಹಿಸಿದರು.

Read More
Next Story