BJP trying to suppress student rally in Kota; Congress accuses it!
x

ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ

ರಾಜಸ್ಥಾನದ ಕೋಟಾದಲ್ಲಿನ ವಿದ್ಯಾರ್ಥಿ ಸಮಾವೇಶ ಹತ್ತಿಕ್ಕಲು ಬಿಜೆಪಿ ಯತ್ನ; ಕಾಂಗ್ರೆಸ್ ಆರೋಪ!

ರಾಹುಲ್ ಗಾಂಧಿ ಕೋಟಾದಲ್ಲಿ 'ಜೆನ್‌ ಝೀ' ವಿದ್ಯಾರ್ಥಿಗಳನ್ನು ಭೇಟಿಯಾಗುತ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆ ಮೋದಿ ಸರ್ಕಾರಕ್ಕೆ ನಡುಕ ಹುಟ್ಟಿದೆ. ಆಡಳಿತ ಪಕ್ಷದ ನಾಯಕರು ಭಯದಿಂದ ಬೆವರುತ್ತಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿದೆ.


Click the Play button to hear this message in audio format

ರಾಜಸ್ಥಾನದ ಕೋಟಾದಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯಲಿರುವ ಬೃಹತ್ ವಿದ್ಯಾರ್ಥಿ ಸಮಾವೇಶವನ್ನು ಹತ್ತಿಕ್ಕಲು ಅಲ್ಲಿನ ಬಿಜೆಪಿ ಸರ್ಕಾರ ತನ್ನ ಇಡೀ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ. ಕೇಂದ್ರದ ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ "ಸಿಂಹಾಸನ ಕುಸಿಯುತ್ತಿದೆ" ಎಂಬ ಆತಂಕವೇ ಇದಕ್ಕೆ ಕಾರಣ ಎಂದು ಪಕ್ಷ ಲೇವಡಿ ಮಾಡಿದೆ.

ದೇಶಾದ್ಯಂತ ತಲ್ಲಣ ಸೃಷ್ಟಿಸಿರುವ ನೀಟ್-ಯುಜಿ (NEET-UG) ಪತ್ರಿಕೆ ಸೋರಿಕೆ, ಸಿಬಿಎಸ್‌ಇಯ ಆನ್-ಸ್ಕ್ರೀನ್ ಮಾರ್ಕಿಂಗ್ (OSM) ವ್ಯವಸ್ಥೆಯಲ್ಲಿನ ಅಕ್ರಮ ಹಾಗೂ ದೇಶವನ್ನು ಕಾಡುತ್ತಿರುವ ನಿರುದ್ಯೋಗ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಲು ರಾಹುಲ್ ಗಾಂಧಿ ಅವರು ಬುಧವಾರ(ಜೂ.17) ಕೋಟಾದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇದು ಕಾಂಗ್ರೆಸ್ ಹಮ್ಮಿಕೊಂಡಿರುವ ರಾಷ್ಟ್ರವ್ಯಾಪಿ ವಿದ್ಯಾರ್ಥಿ ಆಂದೋಲನದ ಮೊದಲ ಹೆಜ್ಜೆಯಾಗಿದ್ದು, ಮುಂದಿನ ದಿನಗಳಲ್ಲಿ ಪ್ರಯಾಗ್‌ರಾಜ್, ಪಾಟ್ನಾ ಮತ್ತು ದೆಹಲಿಯಲ್ಲೂ ಇಂತಹ ಬೃಹತ್ ಸಮಾವೇಶಗಳು ನಡೆಯಲಿವೆ.

'ಜೆನ್‌ ಝೀ' ಕಂಡು ಮೋದಿ ಸರ್ಕಾರಕ್ಕೆ ನಡುಕ

ನವದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ರಾಗಿಣಿ ನಾಯಕ್, ಕೇಂದ್ರ ಹಾಗೂ ರಾಜಸ್ಥಾನ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. "ರಾಹುಲ್ ಗಾಂಧಿ ಅವರು ಕೋಟಾದಲ್ಲಿ 'ಜೆನ್‌ ಝೀ' ವಿದ್ಯಾರ್ಥಿಗಳನ್ನು ಭೇಟಿಯಾಗುತ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆ ಮೋದಿ ಸರ್ಕಾರಕ್ಕೆ ನಡುಕ ಹುಟ್ಟಿದೆ. ಆಡಳಿತ ಪಕ್ಷದ ನಾಯಕರು ಭಯದಿಂದ ಬೆವರುತ್ತಿದ್ದಾರೆ. ವಿದ್ಯಾರ್ಥಿಗಳ ಆಕ್ರೋಶದ ಧ್ವನಿ ಜಗತ್ತಿಗೆ ಕೇಳಿಸಬಾರದು ಎಂದು ರಾಜಸ್ಥಾನದ ಬಿಜೆಪಿ ಸರ್ಕಾರ ತನ್ನ ಸಂಪೂರ್ಣ ಶಕ್ತಿಯನ್ನು ಬಳಸಿ ಅಡ್ಡಿಪಡಿಸುತ್ತಿದೆ. ಆದರೆ ಸತ್ಯದ ಪರವಾಗಿರುವ ಯುವ ಜನಾಂಗ ರಾಹುಲ್ ಗಾಂಧಿ ಬೆನ್ನಿಗೆ ನಿಂತಿದೆ. ಇದನ್ನು ನೋಡಿಯೇ ನರೇಂದ್ರ ಮೋದಿ ಅವರ ಸಿಂಹಾಸನ ಅಲುಗಾಡುತ್ತಿದೆ," ಎಂದು ರಾಗಿಣಿ ನಾಯಕ್ ಟೀಕಿಸಿದರು.

ಟೆಲಿಗ್ರಾಮ್ ನಿಷೇಧಕ್ಕೆ ಆಕ್ಷೇಪ

ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಈ ಇಡೀ ಹಗರಣದಲ್ಲಿ ಮುಖ ಮುಚ್ಚಿಕೊಂಡು ತಿರುಗುತ್ತಿದ್ದಾರೆ ಹಾಗೂ ಪ್ರಧಾನಿ ಮೋದಿ ಮೌನಕ್ಕೆ ಶರಣಾಗಿದ್ದಾರೆ ಎಂದು ಆರೋಪಿಸಿದ ಅವರು, ಬಿಜೆಪಿ ಮತ್ತು ಎಬಿವಿಪಿ ಯುವ ಘಟಕಗಳು ದೇಶದ ಯುವಕರಿಗೆ ದ್ರೋಹ ಬಗೆದಿವೆ ಎಂದರು. ಕಳೆದ 10 ವರ್ಷಗಳಲ್ಲಿ 89 ಕ್ಕೂ ಹೆಚ್ಚು ಪತ್ರಿಕೆ ಸೋರಿಕೆ ಹಗರಣಗಳು ನಡೆದಿವೆ ಎಂದು ಅವರು ಅಂಕಿ-ಅಂಶ ನೀಡಿದರು.

ಇದೇ ವೇಳೆ, ಜೂ. 21 ರಂದು ನಡೆಯಲಿರುವ ನೀಟ್ ಮರು ಪರೀಕ್ಷೆಗೆ ಮುನ್ನ ಮೆಸೇಜಿಂಗ್ ಆ್ಯಪ್ 'ಟೆಲಿಗ್ರಾಮ್' ನಿಷೇಧಿಸಿರುವುದನ್ನು ಕಾಂಗ್ರೆಸ್ ಖಂಡಿಸಿದೆ. "ಯಾವ ಎನ್‌ಟಿಎ (NTA) ಸಂಸ್ಥೆಯನ್ನು ರದ್ದುಗೊಳಿಸಬೇಕೆಂದು ಲಕ್ಷಾಂತರ ವಿದ್ಯಾರ್ಥಿಗಳು ಬೀದಿಯಲ್ಲಿ ನಿಂತು ಹೋರಾಡುತ್ತಿದ್ದಾರೋ, ಅದೇ ಭ್ರಷ್ಟ ಎನ್‌ಟಿಎ ಶಿಫಾರಸಿನ ಮೇರೆಗೆ ವಿದ್ಯಾರ್ಥಿಗಳು ಓದಿಗೆ ಬಳಸುವ ಟೆಲಿಗ್ರಾಮ್ ಅನ್ನು ನಿಷೇಧಿಸಲಾಗಿದೆ. ಅಂದರೆ, ಕಳ್ಳನನ್ನು ಹಿಡಿಯುವ ಬದಲು ಸಂತ್ರಸ್ತರ ಮನೆಗೆ ಬೀಗ ಹಾಕಿದಂತಿದೆ ಮೋದಿ ಸರ್ಕಾರದ ನೀತಿ," ಎಂದು ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ವಕ್ತಾರರು ಉಲ್ಲೇಖಿಸಿದರು.

ರಾಜಕೀಯ ವಿವಾದದ ಕೇಂದ್ರವಾದ ಕೋಟಾ

ನೀಟ್ ಮರು ಪರೀಕ್ಷೆಗೆ ಕೆಲವೇ ದಿನಗಳು ಬಾಕಿ ಇರುವಾಗ ರಾಜಸ್ಥಾನದ ಪ್ರಮುಖ ಕೋಚಿಂಗ್ ಹಬ್ ಆದ ಕೋಟಾದಲ್ಲಿ ನಡೆಯುತ್ತಿರುವ ಈ ರಾಜಕೀಯ ಜಿದ್ದಾಜಿದ್ದಿ ಭಾರೀ ಸಂಚಲನ ಮೂಡಿಸಿದೆ. ಕಾಂಗ್ರೆಸ್ ಇದನ್ನು ಯುವಕರ ಹಕ್ಕಿನ ಹೋರಾಟ ಎನ್ನುತ್ತಿದ್ದರೆ, ಆಡಳಿತಾರೂಢ ಬಿಜೆಪಿ ಮಾತ್ರ ಇದನ್ನು ರಾಹುಲ್ ಗಾಂಧಿ ಅವರ "ರಾಜಕೀಯ ಪ್ರವಾಸೋದ್ಯಮ" ಎಂದು ವ್ಯಂಗ್ಯವಾಡಿದೆ. ಬುಧವಾರ ಸಂಜೆ ವಿದ್ಯಾರ್ಥಿಗಳೊಂದಿಗೆ ರಾಹುಲ್ ನಡೆಸಲಿರುವ ಸಂವಾದದ ಮೇಲೀಗ ಇಡೀ ದೇಶದ ಕಣ್ಣು ನೆಟ್ಟಿದೆ.

Read More
Next Story