
ಸಿಇಸಿ ವಿರುದ್ಧ ಕಿಡಿ, ದೆಹಲಿ ಜೈಲಾಗಿ ಬದಲಾಗಿದೆ : ರಾಹುಲ್ಗಾಂಧಿ ಆಕ್ರೋಶ
ಕೇಂದ್ರ ಸರ್ಕಾರ ಜ್ಞಾನೇಶ್ ಕುಮಾರ್ ಅವರನ್ನು ರಕ್ಷಿಸಲು ಎಷ್ಟು ಪ್ರಯತ್ನಿಸುತ್ತದೆಯೋ, ಅಷ್ಟೇ ವೇಗವಾಗಿ ಆತನ ಹಿಂದಿರುವ ವ್ಯಕ್ತಿಯನ್ನು ತಲುಪುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಅಭೂತಪೂರ್ವವೆನ್ನಬಹುದಾದ ರಾಜಕೀಯ ಬಿಕ್ಕಟ್ಟು ಮತ್ತು ಆಕ್ರೋಶದ ಅಲೆ ಇದೀಗ ದೆಹಲಿಯನ್ನು ಅಲುಗಾಡಿಸುತ್ತಿದೆ. ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆ, ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿನ ಅಕ್ರಮಗಳು ಮತ್ತು ಮುಖ್ಯ ಚುನಾವಣಾ ಆಯುಕ್ತರ ಕಾರ್ಯವೈಖರಿಯ ವಿರುದ್ಧ ವಿರೋಧ ಪಕ್ಷಗಳಒಕ್ಕೂಟ ಇಂಡಿ, ಬೀದಿಗಿಳಿದು ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ, ದೇಶದ ಪ್ರಮುಖ ಪ್ರತಿಪಕ್ಷಗಳ ನಾಯಕರು ಸುಪ್ರೀಂಕೋರ್ಟ್ನತ್ತ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದು, ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ.
ಪ್ರತಿಭಟನೆಗೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಉಳಿಸಿಕೊಳ್ಳಲು ಸರ್ಕಾರ ನಡೆಸುತ್ತಿರುವ ಪ್ರಯತ್ನಗಳ ಬಗ್ಗೆ ಪ್ರಶ್ನಿಸಿದ್ದಾರೆ. "ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜ್ಞಾನೇಶ್ ಕುಮಾರ್ ಅವರನ್ನು ರಕ್ಷಿಸಲು ಎಷ್ಟು ಪ್ರಯತ್ನಿಸುತ್ತದೆಯೋ, ಅಷ್ಟೇ ವೇಗವಾಗಿ ನಾವು ಆತನ ಹಿಂದಿರುವ ಅಸಲಿ ನಿಯಂತ್ರಕರನ್ನು ತಲುಪಲಿದ್ದೇವೆ. ಆರ್ಎಸ್ಎಸ್ ಕಾರ್ಯಕರ್ತರಿಗೆ ಮುಕ್ತ ಸ್ವಾತಂತ್ರ್ಯ ನೀಡಿ, ಯುವ ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ಮಾಡಲು ಪೊಲೀಸರಿಗೆ ಆದೇಶ ನೀಡಲಾಗುತ್ತಿರುವುದರಿಂದ, ಸ್ವತಃ ಭದ್ರತಾ ಸಿಬ್ಬಂದಿಯೇ ಅಸಮಾಧಾನಗೊಂಡಿದ್ದಾರೆ" ಎಂದು ಗಂಭೀರ ಆರೋಪ ಮಾಡಿದ್ದಾರೆ.
ಪೊಲೀಸ್ ಇಲಾಖೆಯ ಶೇ. 50ರಷ್ಟು ಸಿಬ್ಬಂದಿ ನಮ್ಮ ಹೋರಾಟ ನ್ಯಾಯಯುತವಾಗಿದೆ ಎಂದು ನಮ್ಮ ಬೆಂಬಲಕ್ಕೆ ನಿಂತಿದ್ದಾರೆ. ದೇಶದ ಸಾಮಾನ್ಯ ಜನತೆ, ಪೊಲೀಸರು, ಸಿಆರ್ಪಿಎಫ್ ಮತ್ತು ಐಟಿಬಿಪಿ ಯೋಧರು ಒಂದೆಡೆಯಿದ್ದರೆ, ಜ್ಞಾನೇಶ್ ಕುಮಾರ್ ಮತ್ತು ಆಯೋಗದ ಕೆಲವೇ ವ್ಯಕ್ತಿಗಳು ಮತ ಕಳ್ಳತನ ನಡೆಸಿ ದೇಶವನ್ನು ಹೈಜಾಕ್ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಚುನಾವಣಾ ಆಯೋಗವು ಕೈಗೆತ್ತಿಕೊಂಡಿರುವ ಈ ಪ್ರಕ್ರಿಯೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ. ವಿದ್ಯುನ್ಮಾನ ಅಂಚೆ ಮತಪತ್ರ ವ್ಯವಸ್ಥೆಯಲ್ಲಿ ಮತಗಳ ತಿರುಚುವಿಕೆ ನಡೆದಿದೆ ಎಂಬ ಆರೋಪಗಳು ಈ ಪ್ರತಿಭಟನೆಗೆ ಮುಖ್ಯ ಕಾರಣವಾಗಿದೆ ಎಂದು ವಾಗ್ದಾಳಿ ನಡೆಸಿದರು.
ದೆಹಲಿ ಜೈಲಾಗಿ ಬದಲಾಗಿದೆ
ಕಳೆದ ಹಲವು ದಿನಗಳಿಂದ ಮತ ಕಳ್ಳತನದ ವಿರುದ್ಧ ದೆಹಲಿಯಲ್ಲಿ ಶಾಂತಿಯುತ ಪ್ರತಿಭಟನೆಗಳು ನಡೆಯುತ್ತಿವೆ. ಆದರೆ ಸರ್ಕಾರ ಜನಸಾಮಾನ್ಯರನ್ನು ರೈಲು ಮತ್ತು ಬಸ್ಸುಗಳಲ್ಲಿ ತಡೆದು ದೆಹಲಿ ಪ್ರವೇಶಿಸದಂತೆ ತಡೆಯುತ್ತಿದೆ. ರಾಜಧಾನಿಯನ್ನು ಒಂದು ಅಭೇದ್ಯ ಕೋಟೆ ಹಾಗೂ ಜೈಲಿನಂತೆ ಪರಿವರ್ತಿಸಲಾಗಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸಲು ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆಯಲಾಗಿತ್ತು. ಆದರೆ, ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಈ ವಿಚಾರವನ್ನು ನೇರ ಭೇಟಿಯ ಮೂಲಕ ಚರ್ಚಿಸುವ ಬದಲು, ಅಧಿಕೃತ ಕಾನೂನು ಪ್ರಕ್ರಿಯೆಯ ಮೂಲಕ (ಜಂಟಿ ಅರ್ಜಿ ಸಲ್ಲಿಕೆ) ಬರುವಂತೆ ಸೂಚಿಸಿದ್ದಾರೆ. ಇದಕ್ಕೆ ಸ್ಪಂದಿಸಿರುವ ತೃಣಮೂಲ ಕಾಂಗ್ರೆಸ್ನ ಮಮತಾ ಬ್ಯಾನರ್ಜಿ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಸೇರಿದಂತೆ ಇಂಡಿ ಮೈತ್ರಿಕೂಟದ ಪ್ರಮುಖ ನಾಯಕರೆಲ್ಲರೂ ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲು ದೆಹಲಿಯಲ್ಲಿ ಜಮಾಯಿಸಿದ್ದಾರೆ ಎಂದಿದ್ದಾರೆ.
ಪ್ರಜಾಪ್ರಭುತ್ವದ ಮೇಲೆ ಪರಿಣಾಮಗಳೇನು?
ಈ ಘಟನೆಯು ಕೇವಲ ಒಂದು ರಾಜಕೀಯ ಪಕ್ಷದ ಆಕ್ರೋಶವಲ್ಲ. ಇದು ಭಾರತದ ಚುನಾವಣಾ ಆಯೋಗದ ಮೇಲೆ ಜನರಿಗಿರುವ ನಂಬಿಕೆಯನ್ನು ಪ್ರಶ್ನಿಸುವಂತಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ, ಮತದಾನದ ಪ್ರಕ್ರಿಯೆ ಮತ್ತು ಆಯೋಗದ ಸಾಂಸ್ಥಿಕ ಸ್ವಾಯತ್ತತೆ—ಈ ಮೂರೂ ಅಂಶಗಳು ಅಪಾಯದಲ್ಲಿವೆ ಎಂಬ ಸಂದೇಶವನ್ನು ನೀಡಿದ್ದಾರೆ. ರಾಜಕೀಯ ಪಕ್ಷಗಳು ಬೀದಿಗಿಳಿದು ಹೋರಾಡುತ್ತಿರುವುದು ಮತ್ತು ನ್ಯಾಯಾಂಗದ ಮೊರೆ ಹೋಗುತ್ತಿರುವುದು, ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿನ ಬಿಕ್ಕಟ್ಟನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತಿದೆ ಎಂದು ಟೀಕಿಸಿದ್ದಾರೆ.
ಸುಪ್ರೀಂಕೋರ್ಟ್ ಈ ಪ್ರಕರಣವನ್ನು ಹೇಗೆ ಸ್ವೀಕರಿಸುತ್ತದೆ ಮತ್ತು ಚುನಾವಣಾ ಆಯೋಗದ ಮೇಲೆ ಯಾವುದೇ ನಿರ್ಬಂಧಗಳನ್ನು ವಿಧಿಸುತ್ತದೆಯೇ ಎಂಬುದು ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಚುನಾವಣಾ ಆಯೋಗವು ತನ್ನ ಮೇಲಿರುವ ಮತಗಳ್ಳತನದ ಆರೋಪಗಳನ್ನು ನಿವಾರಿಸಲು ಯಾವ ಕ್ರಮಗಳನ್ನು ಕೈಗೊಳ್ಳುತ್ತದೆ ಎಂಬುದು ಮುಖ್ಯ. ವಿರೋಧ ಪಕ್ಷಗಳ ಆಕ್ರೋಶವನ್ನು ತಣಿಸಲು ಅಥವಾ ಅವರ ಆರೋಪಗಳಿಗೆ ಸ್ಪಷ್ಟನೆ ನೀಡಲು ಸರ್ಕಾರ ಯಾವ ಹಂತದವರೆಗೆ ಸಿದ್ಧವಿದೆ ಎಂಬುದು ಕುತೂಹಲಕಾರಿ.

