
ರಾಹುಲ್ ಗಾಂಧಿ ವಿರುದ್ಧ FIR: ‘ಶುದ್ಧೀಕರಣ’ ವಿವಾದಕ್ಕೆ ಹೊಸ ತಿರುವು
ಆಗಸ್ಟ್ 8ರಂದು ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ದರು. ಅವರ ಕಾರ್ಯಕ್ರಮದ ಬಳಿಕ ಮೈದಾನದಲ್ಲಿ ‘ಶುದ್ಧೀಕರಣ’ ವಿಧಿವಿಧಾನ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.
ಉತ್ತರಾಖಂಡದ ನೈನಿತಾಲ್ ಜಿಲ್ಲೆಯ ಹಲ್ದ್ವಾನಿ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸ್ಥಳೀಯ ರಾಮಲೀಲಾ ಮೈದಾನದಲ್ಲಿ ನಡೆದಿದ್ದ ಎನ್ನಲಾದ ‘ಶುದ್ಧೀಕರಣ’ ವಿಧಾನದ ಕುರಿತು ರಾಹುಲ್ ಗಾಂಧಿ ನೀಡಿದ ಹೇಳಿಕೆಗಳ ಹಿನ್ನೆಲೆಯಲ್ಲಿ ಈ ಪ್ರಕರಣ ದಾಖಲಾಗಿದೆ.
ಹಲ್ದ್ವಾನಿ ಸಿಟಿ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಕುಮಾರ್ ಕಟ್ಯಾಲ್ ಅವರು ಎಫ್‌ಐಆರ್ ದಾಖಲಾಗಿರುವುದನ್ನು ಖಚಿತಪಡಿಸಿದ್ದಾರೆ. ಜವಾಹರ್ ನಗರ ಕಾಲೋನಿ ನಿವಾಸಿ ಅಮಿತ್ ಕುಮಾರ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಈ ಕುರಿತು ಸಮಗ್ರ ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಎಸ್‌ಸಿ ಸಮುದಾಯದ ವ್ಯಕ್ತಿಯಿಂದ ದೂರು
26 ವರ್ಷದ ಅಮಿತ್ ಕುಮಾರ್ ತಾವು ಪರಿಶಿಷ್ಟ ಜಾತಿಯ (ವಾಲ್ಮೀಕಿ) ಸಮುದಾಯಕ್ಕೆ ಸೇರಿದವರು ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ, ಸ್ಥಳೀಯ ‘ಶ್ರೀ ರಾಮ ಸೇನಾ ಧರ್ಮಾರ್ಥ ಸೇವಾ ನ್ಯಾಸ’ ಟ್ರಸ್ಟ್‌ನ ಪದಾಧಿಕಾರಿಯಾಗಿರುವುದಾಗಿ ತಿಳಿಸಿದ್ದಾರೆ. ರಾಹುಲ್ ಗಾಂಧಿ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ, 1989ರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದರ ಜೊತೆಗೆ ವರ್ಗಗಳ ನಡುವೆ ದ್ವೇಷವನ್ನು ಉತ್ತೇಜಿಸುವುದಕ್ಕೆ ಸಂಬಂಧಿಸಿದ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 196 ಮತ್ತು ಧಾರ್ಮಿಕ ಭಾವನೆಗಳಿಗೆ ಸಂಬಂಧಿಸಿದ ಸೆಕ್ಷನ್ 299ರ ಅಡಿಯಲ್ಲೂ ಪ್ರಕರಣ ದಾಖಲಿಸಲಾಗಿದೆ.
ದೂರಿನ ಪ್ರಕಾರ, ಆಗಸ್ಟ್ 29ರಂದು ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಾಹುಲ್ ಗಾಂಧಿ ಈ ಕುರಿತು ಹೇಳಿಕೆ ನೀಡಿದ್ದಾರೆ. ಸ್ಥಳೀಯ ರಾಮಲೀಲಾ ಮೈದಾನದಲ್ಲಿ ನಡೆದ ಸ್ವಚ್ಛತಾ ಕಾರ್ಯ ಮತ್ತು ಹವನವನ್ನು ಯಾವುದೇ ವಾಸ್ತವಾಂಶ ಪರಿಶೀಲನೆ ನಡೆಸದೆ ‘ಅಸ್ಪೃಶ್ಯತೆ’ ಮತ್ತು ಪರಿಶಿಷ್ಟ ಜಾತಿ ಸಮುದಾಯದ ಮೇಲಿನ ದೌರ್ಜನ್ಯ ಎಂದು ರಾಹುಲ್ ಗಾಂಧಿ ಬಣ್ಣಿಸಿದ್ದಾರೆ ಎಂದು ದೂರುದಾರ ಆರೋಪಿಸಿದ್ದಾರೆ.
ಏನಿದು ವಿವಾದ?
ಆಗಸ್ಟ್ 8ರಂದು ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ದರು. ಅವರ ಕಾರ್ಯಕ್ರಮದ ಬಳಿಕ ಮೈದಾನದಲ್ಲಿ ‘ಶುದ್ಧೀಕರಣ’ ವಿಧಿವಿಧಾನ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.
ಈ ವಿಚಾರವಾಗಿ ಆಗಸ್ಟ್ 29ರಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ರಾಹುಲ್ ಗಾಂಧಿ, ಈ ಘಟನೆಗೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ತಕ್ಷಣ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿದ್ದರು. ಖರ್ಗೆ ಅವರನ್ನುದ್ದೇಶಿಸಿ ನಡೆದ ಈ ಘಟನೆ ಕೇವಲ ಅವಮಾನವಲ್ಲ. ದೇಶದಲ್ಲಿ, ಹಿರಿಯ ಗಣ್ಯರನ್ನು ಜಾತಿ ಆಧಾರಿತ ತಾರತಮ್ಯ ಮುಂದುವರಿದಿರುವುದನ್ನು ಇದು ತೋರಿಸುತ್ತದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.
‘ಶುದ್ಧೀಕರಣ’ ನಡೆಸುವುದು ಅಪರಾಧವಾಗಿದ್ದು, ಇದು ಎಸ್‌ಸಿ/ಎಸ್‌ಟಿ ಕಾಯ್ದೆಯ ಉಲ್ಲಂಘನೆಯಾಗಿದೆ. ಆದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಉತ್ತರಾಖಂಡದಲ್ಲಿ ಈ ಶುದ್ಧೀಕರಣ ವಿಧಿವಿಧಾನ ನಡೆಸಿದವರ ವಿರುದ್ಧ ತಕ್ಷಣ ಎಫ್‌ಐಆರ್ ದಾಖಲಿಸಬೇಕು ಎಂದು ಅವರು ಆಗ್ರಹಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ, ಸಂಬಂಧಪಟ್ಟವರ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲು ಸೂಚಿಸಬೇಕು ಎಂದು ರಾಹುಲ್ ಗಾಂಧಿ ಒತ್ತಾಯಿಸಿದ್ದರು.
‘ಶುದ್ಧೀಕರಣ’ ಎಂಬುದು ಮತ್ತೊಂದು ರೀತಿಯ ಅಸ್ಪೃಶ್ಯತೆಯೇ ಆಗಿದೆ. ಅಸ್ಪೃಶ್ಯತೆಯನ್ನು ಕಾನೂನಿನ ಮೂಲಕ ನಿಷೇಧಿಸಲಾಗಿದೆ. ಆದರೂ ಬಿಜೆಪಿ ಸದಸ್ಯರು ಅದನ್ನು ಬಹಿರಂಗವಾಗಿ ಆಚರಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು. ಇಂತಹ ಕೃತ್ಯಗಳ ಮೂಲಕ ದಲಿತರು ‘ಅಶುದ್ಧರು’ ಮತ್ತು ಅವರನ್ನು ಮುಟ್ಟಬಾರದು ಎಂಬ ಸಂದೇಶ ನೀಡಲಾಗುತ್ತಿದೆ ಎಂದು ಅವರು ಟೀಕಿಸಿದ್ದರು.

