
ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ
"ಶಿಕ್ಷಣ ವ್ಯವಸ್ಥೆ ಒಂದು ಸುಲಿಗೆ ಯಂತ್ರ": ಕೇಂದ್ರ ಸರ್ಕಾರ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ದೇಶದ ಯುವ ಪೀಳಿಗೆಯು ತೀವ್ರ ಮಾನಸಿಕ ನೋವು, ಒತ್ತಡ ಮತ್ತು ಅತೃಪ್ತಿಯಿಂದ ಕಂಗಾಲಾಗಿದೆ. ಸದ್ಯದ ಶಿಕ್ಷಣ ರಚನೆಯು ಮಕ್ಕಳನ್ನು ಮಾನಸಿಕವಾಗಿ ಪುಡಿಮಾಡುತ್ತಿದ್ದು, ಇದು ದೇಶದ ಭವಿಷ್ಯಕ್ಕೆ ಒಳ್ಳೆಯದಲ್ಲ ಎಂದು ರಾಹುಲ್ ಗಾಂಧಿ ತಿಳಿಸಿದರು.
ಭಾರತದ ಸದ್ಯದ ಶಿಕ್ಷಣ ವ್ಯವಸ್ಥೆಯು ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ಬದಲು "ನಿರಾಕರಿಸುವ ವ್ಯವಸ್ಥೆ"ಯಾಗಿ ಮಾರ್ಪಟ್ಟಿದೆ ಎಂದು ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದು ವಿದ್ಯಾರ್ಥಿಗಳು ಮತ್ತು ಮಧ್ಯಮ ವರ್ಗದ ಕುಟುಂಬಗಳ ಮೇಲೆ ಅತಿಯಾದ ಆರ್ಥಿಕ ಹೊರೆ ಹಾಗೂ ಮಾನಸಿಕ ಒತ್ತಡವನ್ನು ಹೇರುತ್ತಿದೆ ಎಂದು ಆರೋಪಿಸಿದ್ದಾರೆ.
‘ಸುಲಿಗೆ ಯಂತ್ರವಾದ ಶಿಕ್ಷಣ ವ್ಯವಸ್ಥೆ’
ದೇಶದ ಪ್ರಮುಖ ಕೋಚಿಂಗ್ ಹಬ್ ಆಗಿರುವ ಕೋಟಾದಲ್ಲಿ ನಡೆದ "ಛತ್ರೋನ್ ಕಿ ಗೂಂಜ್" ಮಹಾ ರ್ಯಾಲಿಯಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, "ಭಾರತದ ಶಿಕ್ಷಣ ವ್ಯವಸ್ಥೆಯು ಇಂದು ಒಂದು ಸುಲಿಗೆ ಯಂತ್ರದಂತಾಗಿದೆ. ಯುವಜನರು ದೊಡ್ಡ ಕನಸು ಕಾಣಲು ಅನುವು ಮಾಡಿಕೊಡುವ ವ್ಯವಸ್ಥೆ ನಮಗೆ ಬೇಕು". ದೇಶದ ಯುವ ಪೀಳಿಗೆಯು ತೀವ್ರ ಮಾನಸಿಕ ನೋವು, ಒತ್ತಡ ಮತ್ತು ಅತೃಪ್ತಿಯಿಂದ ಕಂಗಾಲಾಗಿದೆ. ಸದ್ಯದ ಶಿಕ್ಷಣ ರಚನೆಯು ಮಕ್ಕಳನ್ನು ಮಾನಸಿಕವಾಗಿ ಪುಡಿಮಾಡುತ್ತಿದ್ದು, ಇದು ದೇಶದ ಭವಿಷ್ಯಕ್ಕೆ ಒಳ್ಳೆಯದಲ್ಲ. ಇದು ಕೇವಲ ರಾಜಕೀಯ ಸಭೆಯಲ್ಲ, ಬದಲಿಗೆ ಭವಿಷ್ಯಕ್ಕಾಗಿ ದಿನನಿತ್ಯ ಹೋರಾಡುತ್ತಿರುವ ಮತ್ತು ಸವಾಲುಗಳನ್ನು ಎದುರಿಸುತ್ತಿರುವ ಯುವಜನರ ಧ್ವನಿಯಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಕೋಟಿಗಟ್ಟಲೆ ಹಣದ ದಂಧೆ
ಈ ವ್ಯವಸ್ಥೆಯು ವಿದ್ಯಾರ್ಥಿಗಳನ್ನು ಕೇವಲ ಎಂಜಿನಿಯರಿಂಗ್, ವೈದ್ಯಕೀಯ ಮತ್ತು ನಾಗರಿಕ ಸೇವೆಗಳಂತಹ (UPSC) ಐದು ನಿರ್ದಿಷ್ಟ ವೃತ್ತಿ ಮಾರ್ಗಗಳ ಕಡೆಗೆ ಮಾತ್ರ ಬಲವಂತವಾಗಿ ತಳ್ಳುತ್ತಿದೆ. ಪರ್ಯಾಯ ಆಕಾಂಕ್ಷೆಗಳನ್ನು ಸಂಪೂರ್ಣವಾಗಿ ನಿರುತ್ಸಾಹಗೊಳಿಸಲಾಗುತ್ತಿದೆ. "ಭಾರತವು ಮಕ್ಕಳನ್ನು ಕೇವಲ ಐದು ಕೆಲಸಗಳನ್ನು ಮಾಡಲು ಏಕೆ ಕೇಳುತ್ತಿದೆ? ಏಕೆಂದರೆ, ಈ ಐದು ಮಾರ್ಗಗಳ ಮೂಲಕವೇ ವ್ಯವಸ್ಥೆಯು ದೊಡ್ಡ ಮಟ್ಟದಲ್ಲಿ ಹಣ ಗಳಿಸುತ್ತದೆ" ಎಂದು ಗಂಭೀರ ಆರೋಪ ಮಾಡಿದರು.
ಎಸ್‌ಎಸ್‌ಸಿ, ಯುಪಿಎಸ್‌ಸಿ, ಆರ್‌ಆರ್‌ಬಿ, ಜೆಇಇ ಮತ್ತು ನೀಟ್ ಪರೀಕ್ಷೆಗಳ ವಾಸ್ತವವನ್ನು ಬಿಚ್ಚಿಟ್ಟ ಅವರು, ಲಕ್ಷಾಂತರ ವಿದ್ಯಾರ್ಥಿಗಳು ಕೋಚಿಂಗ್, ಹಾಸ್ಟೆಲ್ ಮತ್ತು ಶಾಲಾ ಶಿಕ್ಷಣಕ್ಕಾಗಿ ಪೋಷಕರ ಜೀವಮಾನದ ಗಳಿಕೆಯನ್ನು ಖರ್ಚು ಮಾಡುತ್ತಿದ್ದಾರೆ. ಆದರೆ ಪರೀಕ್ಷೆಗಳಲ್ಲಿ ಯಶಸ್ಸಿನ ಗ್ಯಾರಂಟಿ ಮಾತ್ರ ಇಲ್ಲದಂತಾಗಿದೆ ಎಂದರು.
ಬಜೆಟ್‌ಗೆ ಸಮಾನವಾದ ವೆಚ್ಚ!
ನೀಟ್ ಪರೀಕ್ಷೆಗೆ ಸುಮಾರು 22 ಲಕ್ಷ ವಿದ್ಯಾರ್ಥಿಗಳು ಹಾಜರಾಗುತ್ತಾರೆ, ಆದರೆ ಆಯ್ಕೆಯಾಗುವುದು ಕೇವಲ 1 ಲಕ್ಷಕ್ಕಿಂತ ಕಡಿಮೆ ಮಂದಿ. ಈ ಪರೀಕ್ಷೆಗಾಗಿ ವಿದ್ಯಾರ್ಥಿಗಳ ಕುಟುಂಬಗಳು ಒಟ್ಟಾಗಿ ಖರ್ಚು ಮಾಡುವ ಮೊತ್ತ ಬರೋಬ್ಬರಿ 1.32 ಲಕ್ಷ ಕೋಟಿ ರೂ. ಇದು ಕೇಂದ್ರ ಶಿಕ್ಷಣ ಸಚಿವಾಲಯದ ಒಟ್ಟು ಬಜೆಟ್ ಹಂಚಿಕೆಗೆ ಸಮಾನವಾಗಿದೆ!. ಎಸ್‌ಎಸ್‌ಸಿ, ಯುಪಿಎಸ್‌ಸಿ, ಆರ್‌ಆರ್‌ಬಿ, ಜೆಇಇ ಮತ್ತು ನೀಟ್ ಪರೀಕ್ಷೆಗಳ ಪರೀಕ್ಷೆಗಳಿಗಾಗಿ ದೇಶದ ಕುಟುಂಬಗಳು ಒಟ್ಟಾಗಿ ಸುಮಾರು 3.5 ಲಕ್ಷ ಕೋಟಿ ರೂ. ವೆಚ್ಚ ಮಾಡುತ್ತಿವೆ. ಈ ಭಾರಿ ಮೊತ್ತವು ಸರ್ಕಾರದ ಶಿಕ್ಷಣ, ಆರೋಗ್ಯ, ಕಾರ್ಮಿಕ ಮತ್ತು ಮಹಿಳಾ ಪ್ರಗತಿಯ ಒಟ್ಟು ವೆಚ್ಚಕ್ಕೆ ಹೋಲಿಸಬಹುದಾಗಿದೆ.
"ಇಷ್ಟೆಲ್ಲಾ ಹೂಡಿಕೆ ಮಾಡಿದ ನಂತರವೂ ವಿದ್ಯಾರ್ಥಿಗಳಿಗೆ ಬಾಗಿಲು ಮುಚ್ಚಲಾಗುತ್ತದೆ. ಪ್ರತಿ ಸಾವಿರ ವಿದ್ಯಾರ್ಥಿಗಳಲ್ಲಿ ಕೆಲವರಿಗೆ ಮಾತ್ರ ಉದ್ಯೋಗ ಸಿಗುತ್ತಿದ್ದು, ಶೇ. 80 ರಷ್ಟು ಎಂಜಿನಿಯರ್‌ಗಳು ನಿರುದ್ಯೋಗಿಗಳಾಗಿದ್ದಾರೆ" ಎಂದು ಬೇಸರ ವ್ಯಕ್ತಪಡಿಸಿದರು.
ರಾಷ್ಟ್ರೀಯ ಶಿಕ್ಷಣ ಅಭಿಯಾನಕ್ಕೆ ಚಾಲನೆ
ವಿದ್ಯಾರ್ಥಿಗಳ ಮೇಲಿನ ಒತ್ತಡ ಕಡಿಮೆ ಮಾಡಲು ಮತ್ತು ಪ್ರಶ್ನೆಪತ್ರಿಕೆ ಸೋರಿಕೆ, ನಿರುದ್ಯೋಗದಂತಹ ಸಮಸ್ಯೆಗಳ ವಿರುದ್ಧ ಹೋರಾಡಲು ಕಾಂಗ್ರೆಸ್ ವತಿಯಿಂದ 'ರಾಷ್ಟ್ರೀಯ ಶಿಕ್ಷಣ ಅಭಿಯಾನ'ವನ್ನು ಹಮ್ಮಿಕೊಳ್ಳಲಾಗುವುದು ಎಂದು ಪಕ್ಷ ಪ್ರಕಟಿಸಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಎನ್‌ಎಸ್‌ಯುಐ ಮತ್ತು ಯುವ ಕಾಂಗ್ರೆಸ್ ದೇಶಾದ್ಯಂತ ಈ ಅಭಿಯಾನ ನಡೆಸಲಿದ್ದು, ಅಲಹಾಬಾದ್, ಪಾಟ್ನಾ ಮತ್ತು ದೆಹಲಿಗಳಲ್ಲಿ ಸಮಾವೇಶಗಳು ನಡೆಯಲಿವೆ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೂ ಈ ವೇಳೆ ಒತ್ತಾಯಿಸಲಾಗುವುದು ಎಂದು ತಿಳಿದುಬಂದಿದೆ.
ವೇದಿಕೆಯ ಮೇಲೆ ನೀಟ್, ಜೆಇಇ ಮತ್ತು ಯುಪಿಎಸ್‌ಸಿ ಆಕಾಂಕ್ಷಿಗಳಾದ ಐದು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ರಾಹುಲ್ ಗಾಂಧಿ, ಅವರ ಸಿದ್ಧತೆ ಮತ್ತು ಪೋಷಕರು ಎದುರಿಸುತ್ತಿರುವ ಆರ್ಥಿಕ ಸವಾಲುಗಳ ಬಗ್ಗೆ ಮಾಹಿತಿ ಪಡೆದರು. ಜೂ. 21 ರ ನೀಟ್ ಮರುಪರೀಕ್ಷೆಯ ಮುನ್ನವೇ ಈ ಕಾರ್ಯಕ್ರಮ ನಡೆದಿರುವುದರಿಂದ ಕೋಟಾದಲ್ಲಿ ರಾಜಕೀಯ ವಲಯದಲ್ಲಿ ತೀವ್ರ ವಾಗ್ದಾಳಿಗಳು ನಡೆದಿವೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಕ್ಷೇತ್ರವಾಗಿರುವ ಕೋಟಾದಲ್ಲಿ ಈ ಸಮಾವೇಶ ನಡೆದಿರುವುದು ರಾಜಕೀಯವಾಗಿ ಭಾರಿ ಮಹತ್ವ ಪಡೆದುಕೊಂಡಿದೆ.

